

ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ಜಾಗತಿಕ ದೈತ್ಯ ಕಂಪನಿಯಾಗಿರುವ ಎನ್ವಿಡಿಯಾ (Nvidia) ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಜೆನ್ಸನ್ ಹುವಾಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಬ್ಬರು ಮಹಿಳೆಯರ ಜೊತೆ ವಿವಾಹೇತರ ಸಂಬಂಧಗಳ ಆರೋಪ ಹಾಗೂ ಅದರಿಂದ ಕಂಪನಿಯಲ್ಲಿ ಉಂಟಾದ ನಾಯಕತ್ವದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ನವೆಂಬರ್ 12ರ ಗುರುವಾರ ಪ್ರಕಟವಾದ ಈ ನಿರ್ಧಾರದಿಂದ, 1993ರಲ್ಲಿ ತಾವೇ ಸಹ-ಸ್ಥಾಪಿಸಿದ ಕಂಪನಿಯಲ್ಲಿ 33 ವರ್ಷಗಳ ಕಾಲ ಮುಂದುವರಿದಿದ್ದ ಅವರ ನಾಯಕತ್ವ ಅಂತ್ಯವಾಗಿದೆ ಎಂದು ವರದಿ ತಿಳಿಸಿದೆ. ಎನ್ವಿಡಿಯಾದ ಮುಖ್ಯ ಹಣಕಾಸು ಅಧಿಕಾರಿ (CFO) ಕೋಲೆಟ್ ಕ್ರೆಸ್ ಅವರನ್ನು ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಅವರ ರಾಜೀನಾಮೆಗೆ ಕೆಲವು ದಿನಗಳ ಮೊದಲು, ಚೀನಾದ ಮಹಿಳಾ ಉದ್ಯಮಿಯೊಬ್ಬರ ಜೊತೆಗಿನ ಸಂಬಂಧದ ಕುರಿತು ವರದಿಗಳು ಪ್ರಕಟವಾಗಿದ್ದವು. ಆ ಮಹಿಳೆಗೆ ಬೀಜಿಂಗ್ನೊಂದಿಗೆ ಸಂಪರ್ಕವಿದೆ ಎಂಬ ಅನುಮಾನವನ್ನು ಅಮೆರಿಕದ ಗುಪ್ತಚರ ಅಧಿಕಾರಿಗಳು ವ್ಯಕ್ತಪಡಿಸಿದ್ದರು. ನಂತರ ಹುವಾಂಗ್ ತನ್ನ ಹೆಂಡತಿಗೆ ವಿಶ್ವಾಸದ್ರೋಹ ಮಾಡಿದ್ದೇನೆ ಎಂದು ಒಪ್ಪಿಕೊಂಡ ಕೆಲವು ದಿನಗಳ ನಂತರ ರಾಜೀನಾಮೆ ಬಂದಿದೆ.
ಅಲ್ಲದೆ, ಎನ್ವಿಡಿಯಾದ ಹಿರಿಯ ಅಧಿಕಾರಿಯೊಬ್ಬರೊಂದಿಗೂ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಮತ್ತೊಂದು ಆರೋಪ ಕೇಳಿಬಂದಿತ್ತು. ಈ ಬೆಳವಣಿಗೆಗಳಿಂದ ಎಚ್ಚೆತ್ತ ಕಂಪನಿಯ ಆಡಳಿತ ಮಂಡಳಿ ಸ್ವತಂತ್ರ ತನಿಖೆಗೆ ಆದೇಶಿಸಿತು ಹಾಗೂ ಹುವಾಂಗ್ ಅವರ ಭವಿಷ್ಯದ ನಾಯಕತ್ವದ ಬಗ್ಗೆಯೂ ಚರ್ಚೆ ನಡೆಸಿತ್ತು.
ರಾಜೀನಾಮೆಗೆ ಕಾರಣವೇನು?
ಹುವಾಂಗ್ ಅವರ ಮೊದಲ ಆರೋಪಿತ ಸಂಬಂಧವು ಚೀನಾದ ಮಹಿಳಾ ಉದ್ಯಮಿ ಆಲಿಸ್ ಹುವಾಂಗ್ ಅವರ ಜೊತೆಗಿನದ್ದಾಗಿದೆ. ಅವರು ಸಿಂಗಾಪುರ ಮೂಲದ ಡೇಟಾ ಸೆಂಟರ್ ಕಂಪನಿಯಾದ ಮೆಗಾಸ್ಪೀಡ್ನ ಮಾಜಿ ಕಾರ್ಯನಿರ್ವಾಹಕಿಯಾಗಿದ್ದು, ಆ ಕಂಪನಿ ಎನ್ವಿಡಿಯಾದ ಗ್ರಾಹಕ ಸಂಸ್ಥೆಯೂ ಆಗಿದೆ. ಜೆನ್ಸನ್ ಹುವಾಂಗ್ ಮತ್ತು ಆಲಿಸ್ ಹುವಾಂಗ್ ಒಂದೇ ಅಡ್ಡಹೆಸರು ಹೊಂದಿದ್ದರೂ ಇಬ್ಬರ ನಡುವೆ ಯಾವುದೇ ಕೌಟುಂಬಿಕ ಸಂಬಂಧವಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಅಮೆರಿಕದ ಗುಪ್ತಚರ ಇಲಾಖೆಯ ಮೌಲ್ಯಮಾಪನಗಳನ್ನು ಉಲ್ಲೇಖಿಸಿ ಪ್ರಕಟವಾದ ವರದಿಗಳ ಪ್ರಕಾರ, ಆಲಿಸ್ ಹುವಾಂಗ್ ಅವರಿಗೆ ಚೀನಾ ಸರ್ಕಾರದ ಭದ್ರತಾ ಸಚಿವಾಲಯದ ಜೊತೆ ಸಂಪರ್ಕವಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಚೀನಾದ ಕಂಪನಿಗಳಿಗೆ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಚಿಪ್ಗಳನ್ನು ಮಾರಾಟ ಮಾಡುವ ವಿಚಾರದಲ್ಲಿ ಎನ್ವಿಡಿಯಾ ಮುಖ್ಯಸ್ಥರ ನಿರ್ಧಾರದ ಮೇಲೆ ಪ್ರಭಾವ ಬೀರಲು ಹಾಗೂ ಕಂಪನಿಯ ಮಾಹಿತಿಯನ್ನು ಸಂಗ್ರಹಿಸಲು ಅವರು ಪ್ರಯತ್ನಿಸಿದ್ದರು ಎಂಬ ಶಂಕೆಯನ್ನೂ ಅಮೆರಿಕದ ಗುಪ್ತಚರ ಅಧಿಕಾರಿಗಳು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ವಿಶ್ವದ ಪ್ರಮುಖ ಸೆಮಿಕಂಡಕ್ಟರ್ ಕಂಪನಿಗಳಲ್ಲಿ ಒಂದಾಗಿರುವ ಎನ್ವಿಡಿಯಾದ ಮುಖ್ಯಸ್ಥರಾಗಿರುವ ಹುವಾಂಗ್ ಅವರನ್ನು ವಿದೇಶಿ ಗುಪ್ತಚರ ಸಂಸ್ಥೆಯೊಂದು ಗುರಿಯಾಗಿಸಿಕೊಂಡಿತೇ ಎಂಬ ಆತಂಕ ಇದರಿಂದ ಉಂಟಾಗಿತ್ತು. ಅದರಲ್ಲೂ ಚೀನಾಕ್ಕೆ ಅತ್ಯಾಧುನಿಕ ಚಿಪ್ಗಳ ರಫ್ತಿನ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಈ ಆರೋಪಗಳು ಹೆಚ್ಚಿನ ಮಹತ್ವ ಪಡೆದುಕೊಂಡಿದ್ದವು.
ಈ ವಿವಾದದ ನಡುವೆ ಹುವಾಂಗ್ ಅವರು ಎನ್ವಿಡಿಯಾದ ಉದ್ಯೋಗಿಗಳಿಗೆ ಸಂದೇಶವೊಂದನ್ನು ಕಳುಹಿಸಿ, ತಮ್ಮ ಪತ್ನಿಗೆ ದ್ರೋಹ ಬಗೆದಿರುವುದಾಗಿ ಒಪ್ಪಿಕೊಂಡಿದ್ದರು. ಈ ಕುರಿತು ಕ್ಷಮೆಯಾಚಿಸಿದ್ದ ಅವರು, “ನನ್ನ ಕುಟುಂಬದವರು ಹಾಗೂ ನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ. ನಾನು ನನ್ನ ಪತ್ನಿಗೆ ನಿಷ್ಠೆಯಿಂದ ಇರಲಿಲ್ಲ. ನನ್ನ ನಡೆ ಪತ್ನಿ ಮತ್ತು ಮಕ್ಕಳಿಗೆ ನೋವುಂಟು ಮಾಡಿದೆ. ನಾನು ಮಾಡಿದ್ದಕ್ಕೆ ಯಾವುದೇ ಸಮರ್ಥನೆಯಿಲ್ಲ. ನನ್ನ ಕೃತ್ಯಕ್ಕಾಗಿ ಕ್ಷಮೆ ಕೇಳುತ್ತೇನೆ” ಎಂದು ಹೇಳಿದ್ದರು.
ತಮ್ಮ ಕುಟುಂಬಕ್ಕೆ ದ್ರೋಹ ಬಗೆದಿರುವುದಾಗಿ ಒಪ್ಪಿಕೊಂಡಿದ್ದ ಅವರು, ಒಟ್ಟಾಗಿ ಕಟ್ಟಿಕೊಂಡಿದ್ದ ಬದುಕಿಗೆ ಧಕ್ಕೆ ತಂದಿದ್ದೇನೆ. ನನ್ನ ತಪ್ಪಿನ ಸಂಪೂರ್ಣ ಹೊಣೆಗಾರಿಕೆಯನ್ನು ನಾನೇ ಹೊರುತ್ತೇನೆ. ಕಾಲಕ್ರಮೇಣ ಕುಟುಂಬದ ವಿಶ್ವಾಸವನ್ನು ಮರಳಿ ಗಳಿಸುವ ಆಶಯವಿದೆ ಎಂದು ತಿಳಿಸಿದ್ದರು. ಆದರೆ, ತಮ್ಮ ಸಂದೇಶದಲ್ಲಿ ಆ ಮಹಿಳೆಯ ಹೆಸರನ್ನು ಹುವಾಂಗ್ ಬಹಿರಂಗಪಡಿಸಿರಲಿಲ್ಲ. ಚೀನಾದ ಉದ್ಯಮಿ ಆಲಿಸ್ ಹುವಾಂಗ್ ಅವರ ಜೊತೆಗಿನ ವಿವಾಹೇತರ ಸಂಬಂಧದ ಕುರಿತು ವರದಿಗಳು ಪ್ರಕಟವಾದ ಬೆನ್ನಲ್ಲೇ ಈ ಒಪ್ಪಿಗೆ ಹೊರಬಂದಿತ್ತು.


ಎರಡನೇ ವಿವಾಹೇತರ ಸಂಬಂಧದ ಆರೋಪದಿಂದ ಹೆಚ್ಚಿದ ಒತ್ತಡ
ಚೀನಾದ ಮಹಿಳಾ ಉದ್ಯಮಿ ಜೊತೆಗಿನ ಸಂಬಂಧದ ವಿವಾದದ ಬೆನ್ನಲ್ಲೇ, ಎನ್ವಿಡಿಯಾದ ಮತ್ತೊಬ್ಬ ಹಿರಿಯ ಅಧಿಕಾರಿಯೊಂದಿಗೂ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿತು. ಈ ಕುರಿತು ಮಾಹಿತಿ ಹೊಂದಿರುವ ಐವರು ವ್ಯಕ್ತಿಗಳನ್ನು ಉಲ್ಲೇಖಿಸಿ ವರದಿ ಪ್ರಕಟವಾಗಿದ್ದು, ಅವರು ಹುವಾಂಗ್ ಅವರಿಗೆ ನೇರವಾಗಿ ವರದಿ ಸಲ್ಲಿಸುತ್ತಿದ್ದ ಹಿರಿಯ ಅಧಿಕಾರಿಗಳ ಪೈಕಿ ಒಬ್ಬರಾಗಿದ್ದರು ಎನ್ನಲಾಗಿದೆ. ಮಾರ್ಚ್ನಲ್ಲಿ ಸ್ಯಾನ್ ಜೋಸ್ನಲ್ಲಿ ನಡೆದ ಎನ್ವಿಡಿಯಾ ಸಮ್ಮೇಳನದ ಸಂದರ್ಭದಲ್ಲಿ ಹೋಟೆಲ್ವೊಂದರಲ್ಲಿ ಇಬ್ಬರೂ ಆತ್ಮೀಯವಾಗಿ ವರ್ತಿಸುತ್ತಿರುವುದು ಕಂಡುಬಂದಿತ್ತು ಎಂಬ ಆರೋಪವನ್ನೂ ವರದಿ ಉಲ್ಲೇಖಿಸಿದೆ.
ಈ ಎರಡನೇ ಆರೋಪದ ಕುರಿತು ಎನ್ವಿಡಿಯಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಜೆನ್ಸನ್ ಹುವಾಂಗ್ ಕೂಡ ಈ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಈ ಹೊಸ ಆರೋಪದಿಂದ ಕಂಪನಿಯ ಆಡಳಿತ ಮಂಡಳಿಯ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಯಿತು. ಈಗಾಗಲೇ ಆಲಿಸ್ ಹುವಾಂಗ್ ಅವರ ಜೊತೆಗಿನನ ಸಂಬಂಧದ ಹಿಂದೆ ವಿದೇಶಿ ಗುಪ್ತಚರ ಕಾರ್ಯಾಚರಣೆ ಇರಬಹುದೇ ಎಂಬ ಬಗ್ಗೆ ರಾಷ್ಟ್ರೀಯ ಭದ್ರತಾ ಆತಂಕದ ಕುರಿತು ಮಂಡಳಿ ತನಿಖೆ ನಡೆಸುತ್ತಿತ್ತು. ಆರಂಭದಲ್ಲಿ ಹುವಾಂಗ್ ಮತ್ತು ಅವರ ನಾಯಕತ್ವದ ತಂಡದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದ ಆಡಳಿತ ಮಂಡಳಿಯ ನಿಲುವಿನಲ್ಲಿ ಈ ಬೆಳವಣಿಗೆಗಳಿಂದ ಬದಲಾವಣೆ ಕಂಡುಬಂದಿತ್ತು.
ಎನ್ವಿಡಿಯಾದಿಂದ ಸ್ವತಂತ್ರ ತನಿಖೆ ಆರಂಭ
ನವೆಂಬರ್ 8ರಂದು ಎನ್ವಿಡಿಯಾದ ಆಡಳಿತ ಮಂಡಳಿಯು ಜೆನ್ಸನ್ ಹುವಾಂಗ್ ಅವರನ್ನು ವಿದೇಶಿ ಗುಪ್ತಚರ ಕಾರ್ಯಾಚರಣೆಯೊಂದರಲ್ಲಿ ಗುರಿಯಾಗಿಸಿರಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಸ್ವತಂತ್ರ ತನಿಖೆ ಆರಂಭಿಸಿರುವುದಾಗಿ ಪ್ರಕಟಿಸಿತ್ತು. ಸ್ವತಂತ್ರ ನಿರ್ದೇಶಕರ ಸಮಿತಿಯ ಮೇಲ್ವಿಚಾರಣೆಯಲ್ಲಿ ಈ ತನಿಖೆ ನಡೆಯಲಿದ್ದು, ಹೊರಗಿನ ಕಾನೂನು ಸಲಹೆಗಾರರ ನೆರವನ್ನೂ ಪಡೆಯಲು ನಿರ್ಧರಿಸಲಾಗಿತ್ತು. ರಾಷ್ಟ್ರೀಯ ಭದ್ರತೆ ಅಥವಾ ಎನ್ವಿಡಿಯಾದ ವ್ಯಾಪಾರ ರಹಸ್ಯಗಳಿಗೆ ಧಕ್ಕೆಯಾಗಿದೆ ಎಂಬುದಕ್ಕೆ ಯಾವುದೇ ಕಾರಣ ಕಂಡುಬಂದಿಲ್ಲ ಎಂದು ಕಂಪನಿ ಹೇಳಿದ್ದರೂ, ಲಭ್ಯವಿರುವ ಎಲ್ಲ ಮಾಹಿತಿಗಳನ್ನು ತನಿಖೆ ಪರಿಶೀಲಿಸಲಿದೆ ಎಂದು ತಿಳಿಸಿತ್ತು. ಜೆನ್ಸನ್ ಹುವಾಂಗ್ ಕೂಡ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದರು.
ಈ ವಿವಾದ ಅಮೆರಿಕದ ರಾಜಕೀಯ ವಲಯದಲ್ಲಿಯೂ ಗಮನ ಸೆಳೆದಿತ್ತು. ಚೀನಾದ ಮಹಿಳಾ ಉದ್ಯಮಿ ಜೊತೆಗಿನ ಸಂಬಂಧದ ಆರೋಪದ ಕುರಿತು ಎಫ್ಬಿಐ ತನಿಖೆ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದೇ ವೇಳೆ ಹುವಾಂಗ್ ಅವರನ್ನು ‘ಗೌರವಾನ್ವಿತ ವ್ಯಕ್ತಿ’ ಎಂದು ಬಣ್ಣಿಸಿ ಅವರ ಪರವಾಗಿ ಮಾತನಾಡಿದ್ದರು.
ಆದರೆ, ಬೇಹುಗಾರಿಕೆಯ ಆರೋಪಗಳನ್ನು ಚೀನಾ ತಳ್ಳಿಹಾಕಿತ್ತು. ಇವು ಆಧಾರರಹಿತ ಆರೋಪ, ಮಾನಹಾನಿ ಮತ್ತು ಅಪಪ್ರಚಾರ ಎಂದು ಚೀನಾ ಪ್ರತಿಕ್ರಿಯಿಸಿತ್ತು. ಆಲಿಸ್ ಹುವಾಂಗ್ ಅವರಿಗೆ ಚೀನಾದ ಗುಪ್ತಚರ ಇಲಾಖೆಯೊಂದಿಗೆ ಸಂಪರ್ಕವಿದೆ ಎಂಬ ಆರೋಪಗಳು ಈವರೆಗೆ ಸ್ವತಂತ್ರವಾಗಿ ಸಾಬೀತಾಗಿಲ್ಲ.
ಈ ತನಿಖೆಯಿಂದ ಚೀನಾದೊಂದಿಗಿನ ಎನ್ವಿಡಿಯಾದ ವ್ಯವಹಾರಗಳು, ಅತ್ಯಾಧುನಿಕ ಎಐ ಚಿಪ್ಗಳ ರಫ್ತು ಹಾಗೂ ಕಂಪನಿಯ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆಯ ಬಗ್ಗೆಯೂ ಚರ್ಚೆ ಆರಂಭವಾಗಿತ್ತು. ಇದೇ ವೇಳೆ, ಸಿಂಗಾಪುರ ಮೂಲದ ಮೆಗಾಸ್ಪೀಡ್ ಕಂಪನಿಯು ಅಮೆರಿಕ ಸರ್ಕಾರದೊಂದಿಗೆ ಪಾರದರ್ಶಕವಾಗಿ ಮತ್ತು ಸಹಕಾರದಿಂದ ಕಾರ್ಯನಿರ್ವಹಿಸುವ ಬದ್ಧತೆಯನ್ನು ವ್ಯಕ್ತಪಡಿಸಿತ್ತು.
ಜೆನ್ಸನ್ ಹುವಾಂಗ್ ಸ್ಥಾನಕ್ಕೆ ಕೋಲೆಟ್ ಕ್ರೆಸ್ ನೇಮಕ
ಹುವಾಂಗ್ ಅವರ ರಾಜೀನಾಮೆಯ ಬೆನ್ನಲ್ಲೇ ಎನ್ವಿಡಿಯಾದ ಮುಖ್ಯ ಹಣಕಾಸು ಅಧಿಕಾರಿ (CFO) ಕೋಲೆಟ್ ಕ್ರೆಸ್ ಅವರನ್ನು ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಶಾಶ್ವತ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ಅವರು ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಮುಖ್ಯ ಹಣಕಾಸು ಅಧಿಕಾರಿಯ ಜವಾಬ್ದಾರಿಯನ್ನೂ ಅವರೇ ಮುಂದುವರಿಸಲಿದ್ದಾರೆ.
2013ರ ಸೆಪ್ಟೆಂಬರ್ನಲ್ಲಿ ಎನ್ವಿಡಿಯಾ ಸೇರಿದ್ದ ಕೋಲೆಟ್ ಕ್ರೆಸ್, ಪ್ರಸ್ತುತ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಹಾಗೂ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎನ್ವಿಡಿಯಾ ಸೇರುವ ಮೊದಲು ಸಿಸ್ಕೊ (Cisco) ಮತ್ತು ಮೈಕ್ರೋಸಾಫ್ಟ್ (Microsoft) ಸೇರಿದಂತೆ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಹಿರಿಯ ಹಣಕಾಸು ಹುದ್ದೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸಿಇಒ ಆಯ್ಕೆಗಾಗಿ ಕಂಪನಿಯ ಆಡಳಿತ ಮಂಡಳಿ ಹುಡುಕಾಟ ಆರಂಭಿಸಿದ್ದು, ಆಂತರಿಕ ಹಾಗೂ ಹೊರಗಿನ ಅಭ್ಯರ್ಥಿಗಳನ್ನು ಪರಿಗಣಿಸಲು ನಿರ್ಧರಿಸಿದೆ.
ಇದೇ ಸಂದರ್ಭದಲ್ಲಿ, ದೀರ್ಘಕಾಲದಿಂದ ಆಡಳಿತ ಮಂಡಳಿಯ ಸದಸ್ಯರಾಗಿರುವ ಹಾಗೂ ಸೈನಾಪ್ಸಿಸ್ (Synopsys) ಕಂಪನಿಯ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷ ಹಾರ್ವೆ ಸಿ. ಜೋನ್ಸ್ ಅವರನ್ನು ಎನ್ವಿಡಿಯಾದ ಮೊಟ್ಟಮೊದಲ ಆಡಳಿತ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಜೆನ್ಸನ್ ಹುವಾಂಗ್ ಅವರ ಕೊಡುಗೆಗಳನ್ನು ಆಡಳಿತ ಮಂಡಳಿ ಶ್ಲಾಘಿಸಿದ್ದು, ಅವುಗಳು ಅತ್ಯಂತ ಮಹತ್ವಪೂರ್ಣವಾಗಿವೆ ಎಂದು ಬಣ್ಣಿಸಿದೆ. ಕೋಲೆಟ್ ಕ್ರೆಸ್ ಮತ್ತು ಈಗಿರುವ ನಾಯಕತ್ವದ ತಂಡದ ಅಡಿಯಲ್ಲಿ ಕಂಪನಿಯ ಕಾರ್ಯಾಚರಣೆ, ಗ್ರಾಹಕರಿಗೆ ನೀಡಿರುವ ಬದ್ಧತೆ ಹಾಗೂ ಉತ್ಪನ್ನಗಳ ಅಭಿವೃದ್ಧಿ ಯೋಜನೆಗಳು ಯಾವುದೇ ಅಡಚಣೆಯಿಲ್ಲದೆ ಮುಂದುವರಿಯಲಿವೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದೆ.
33 ವರ್ಷಗಳ ಹಿಂದೆ ಆರಂಭವಾದ ಎನ್ವಿಡಿಯಾ ಪಯಣ
ಜೆನ್ಸನ್ ಹುವಾಂಗ್ ಅವರು ಕ್ರಿಸ್ ಮಲಚೋಸ್ಕಿ ಮತ್ತು ಕರ್ಟಿಸ್ ಪ್ರೀಮ್ ಅವರೊಂದಿಗೆ 1993ರಲ್ಲಿ ಎನ್ವಿಡಿಯಾ ಕಂಪನಿಯನ್ನು ಸ್ಥಾಪಿಸಿದ್ದರು. ಆರಂಭದಲ್ಲಿ ಗ್ರಾಫಿಕ್ಸ್ ಪ್ರೊಸೆಸರ್ಗಳ ತಯಾರಿಕೆಗೆ ಸೀಮಿತವಾಗಿದ್ದ ಕಂಪನಿ, ಕಾಲಕ್ರಮೇಣ ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಅತ್ಯಂತ ಪ್ರಭಾವಿ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ.
ಇಂದು ವಿಶ್ವದಾದ್ಯಂತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಭಿವೃದ್ಧಿಗೆ ಅಗತ್ಯವಿರುವ ಚಿಪ್ಗಳನ್ನು ಪೂರೈಸುವ ಪ್ರಮುಖ ಸಂಸ್ಥೆಯಾಗಿ ಎನ್ವಿಡಿಯಾ ಗುರುತಿಸಿಕೊಂಡಿದೆ. ಜಾಗತಿಕ ಎಐ ಕ್ರಾಂತಿಯಲ್ಲಿ ಕಂಪನಿಯ ಚಿಪ್ಗಳು ಪ್ರಮುಖ ಪಾತ್ರ ವಹಿಸುತ್ತಿವೆ.
ಕಂಪನಿಯ ಸಹ-ಸ್ಥಾಪಕರಾಗಿದ್ದ ಹುವಾಂಗ್ ಅವರ ನಿರ್ಗಮನವು ಮೂರು ದಶಕಗಳಿಗೂ ಹೆಚ್ಚು ಕಾಲ ಅವರ ನಾಯಕತ್ವದ ಜೊತೆ ಗುರುತಿಸಿಕೊಂಡಿದ್ದ ಎನ್ವಿಡಿಯಾದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ.
ನವೆಂಬರ್ 17ರಂದು ಎನ್ವಿಡಿಯಾ ತನ್ನ ಮೂರನೇ ತ್ರೈಮಾಸಿಕ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಲು ಸಿದ್ಧತೆ ನಡೆಸಿದೆ. ಹೀಗಾಗಿ, ಹುವಾಂಗ್ ಅವರ ರಾಜೀನಾಮೆ ಮತ್ತು ಹೊಸ ನಾಯಕತ್ವದ ನೇಮಕವು ಹೂಡಿಕೆದಾರರು ಮಾತ್ರವಲ್ಲದೆ ಜಾಗತಿಕ ತಂತ್ರಜ್ಞಾನ ಉದ್ಯಮದ ಗಮನವನ್ನೂ ಸೆಳೆದಿದೆ.



ನಿಮ್ಮ ಕಾಮೆಂಟ್ ಬರೆಯಿರಿ