

ಮಂಡ್ಯ: ಆರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಕೊಲೆಯಾಗಿದ್ದಾರೆ ಎಂದು ಭಾವಿಸಿ ವ್ಯಕ್ತಿಯೊಬ್ಬನನ್ನು ಬಂಧಿಸಿ ಜೈಲಿಗಟ್ಟಿದ್ದ ಪ್ರಕರಣಕ್ಕೆ ಈಗ ಅನಿರೀಕ್ಷಿತ ತಿರುವು ಸಿಕ್ಕಿದೆ. ಕೊಲೆಯಾಗಿದ್ದಾರೆ ಎಂದು ಭಾವಿಸಲಾಗಿದ್ದ 35 ವರ್ಷದ ಮಹಿಳೆ ಜೀವಂತವಾಗಿ ಪತ್ತೆಯಾಗಿದ್ದು, ಆಕೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಸುಮಾರು ಎರಡೂವರೆ ವರ್ಷ ಜೈಲಿನಲ್ಲಿ ಕಳೆದಿದ್ದ ವ್ಯಕ್ತಿಗೆ ಇದೀಗ ನಿರಾಳತೆ ಸಿಕ್ಕಿದೆ.
2019ರ ಜೂನ್‌ನಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರದಿಂದ ನಾಪತ್ತೆಯಾಗಿದ್ದ ಮಂಜು ಎನ್. ಎಂಬ ಮಹಿಳೆ ಬುಧವಾರ ನಾಗಮಂಗಲ ತಾಲೂಕಿನ ಮೈಗೋನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದಾರೆ. ಅವರು ಚಾಮರಾಜನಗರ ಮೂಲದ ನಾಗೇಂದ್ರ ಎಂಬವರನ್ನು ಮದುವೆಯಾಗಿ ಅಲ್ಲಿ ವಾಸವಾಗಿದ್ದರು. ಮಂಜು ಅವರು ನಾಪತ್ತೆಯಾದ ಪ್ರಕರಣದಲ್ಲಿ ಅವರನ್ನು ಕೊಲೆ ಮಾಡಿರುವ ಆರೋಪ ಎದುರಿಸಿ ರಾಜೇಶ ಎಂ.ಆರ್. ಅವರಿಗೆ ಈ ಬೆಳವಣಿಗೆ ದೊಡ್ಡ ನಿರಾಳತೆ ತಂದಿದೆ.
ಮಂಜು ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ, ಕುಟುಂಬದವರು ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿದ್ದರಿಂದ ಅವರು ಮನೆಯಿಂದ ಹೊರಹೋಗಿದ್ದರು. ಬಳಿಕ ನಾಗೇಂದ್ರ ಅವರನ್ನು ಮದುವೆಯಾಗಿ, ಸುಮಾರು ಒಂದು ವರ್ಷ ತಮಿಳುನಾಡಿನಲ್ಲಿ ವಾಸವಾಗಿದ್ದರು. ನಂತರ ನಾಗಮಂಗಲ ತಾಲೂಕಿನ ಮೈಗೋನಹಳ್ಳಿಯಲ್ಲಿ ನೆಲೆಸಿದ್ದರು.
ತಮಗೆ ರಾಜೇಶ ಎಂಬ ವ್ಯಕ್ತಿಯ ಪರಿಚಯವೇ ಇಲ್ಲ ಎಂದು ಮಂಜು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣದ ನೈಜ ಸಂಗತಿಗಳನ್ನು ತಿಳಿಸಲು ಯಾವುದೇ ಅಧಿಕಾರಿಗಳ ಮುಂದೆ ಹೇಳಿಕೆ ನೀಡಲು ಸಿದ್ಧರಿರುವುದಾಗಿಯೂ ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ಆಕಸ್ಮಿಕ ಭೇಟಿ ತಂದ ಫಜೀತಿ
ಪಾಂಡವಪುರದ ಹಿರೋಡೆ ಬೀದಿಯ ನಾಗರಾಜು ಅವರ ಪುತ್ರಿ ಮಂಜು ಅವರಿಗೆ 2019ರಲ್ಲಿ ಶ್ರೀರಂಗಪಟ್ಟಣ ತಾಲೂಕಿನ ವ್ಯಕ್ತಿಯೊಬ್ಬರ ಜೊತೆ ವಿವಾಹವಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಮಂಜು, ಚಿಕಿತ್ಸೆ ಪಡೆಯಲು 2019ರ ಮೇ ತಿಂಗಳಲ್ಲಿ ತಂದೆಯ ಮನೆಗೆ ಮರಳಿದ್ದರು. ಜೂನ್ 23ರ ರಾತ್ರಿ ತಂದೆ ನಾಗರಾಜು ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಂಜು ಮನೆಯಿಂದ ನಾಪತ್ತೆಯಾಗಿದ್ದರು. ಈ ಕುರಿತು ನಾಗರಾಜು ಜುಲೈ 3ರಂದು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ, ಪಾಂಡವಪುರ ಬಸ್ ನಿಲ್ದಾಣದಲ್ಲಿ ರಾಜೇಶ ಅವರ ಮೊಬೈಲ್ ಫೋನ್‌ನಿಂದ ಮಂಜು ಕೊನೆಯ ಬಾರಿ ಕರೆ ಮಾಡಿರುವುದು ತಿಳಿದುಬಂದಿತ್ತು. ನಾಪತ್ತೆಗೂ ಮುನ್ನ ಮಹಿಳೆ ಪಾಂಡವಪುರ ಬಸ್ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಸಿಕ್ಕಿದ್ದ ರಾಜೇಶ ಎಂಬವರ ಮೊಬೈಲ್‌ನಿಂದ ಕೊನೆಯ ಕರೆ ಮಾಡಿದ್ದಳು. ಈ ಕರೆಯನ್ನು ಆಧಾರವಾಗಿಟ್ಟುಕೊಂಡ ಪೊಲೀಸರು, ರಾಜೇಶ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಆದರೆ, ಮಂಜು ನಾಪತ್ತೆಯಾಗಿ ಸುಮಾರು ಎರಡು ವರ್ಷ ಕಳೆದ ಬಳಿಕ, ಅಂದರೆ 2021ರಲ್ಲಿ ನಾಗರಾಜು ಮತ್ತೊಂದು ದೂರು ದಾಖಲಿಸಿದ್ದರು. ತಮ್ಮ ಪುತ್ರಿಯನ್ನು 2019ರ ಜುಲೈ 23ರಂದು ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗೆ ತಳ್ಳಿ ರಾಜೇಶ ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಇದರ ಬೆನ್ನಲ್ಲೇ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿದ ಪೊಲೀಸರು ರಾಜೇಶ ಅವರನ್ನು ಬಂಧಿಸಿದ್ದರು. ಸುಮಾರು ಎರಡೂವರೆ ವರ್ಷ ಜೈಲಿನಲ್ಲಿದ್ದ ರಾಜೇಶ, 2024ರ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.


ಇದೀಗ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿದೆ. ರಾಜೇಶ ಪರ ವಕೀಲ ನಟೇಶ ಅವರಿಗೆ ಸಿಕ್ಕ ಖಚಿತ ಮಾಹಿತಿಯ ಆಧಾರದ ಮೇಲೆ ಮಹಿಳೆಯನ್ನು ಪತ್ತೆ ಹಚ್ಚಲಾಗಿದೆ. ಅವರನ್ನು ಬಿಂಡಿಗನವಿಲೆ ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಈಗ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಮಹಿಳೆಯನ್ನು ಪತ್ತೆಹಚ್ಚಿದ ಬಳಿಕ ರಾಜೇಶ ಮತ್ತು ಅವರ ಕುಟುಂಬದವರು ಈಗ ನಿರಾಳರಾಗಿದ್ದಾರೆ.
ತಾವು ಮಾಡದ ಕೊಲೆ ಪ್ರಕರಣವನ್ನು ಒಪ್ಪಿಕೊಳ್ಳುವಂತೆ ಪೊಲೀಸರು ತೀವ್ರ ಹಿಂಸೆ ನೀಡಿದ್ದರು ಎಂದು ರಾಜೇಶ ಆರೋಪಿಸಿದ್ದಾರೆ. ವಿಚಾರಣೆ ವೇಳೆ ತಮ್ಮ ಮೇಲೆ ಹಿಂಸೆ ಮಾಡಲಾಗಿತ್ತು, ತಪ್ಪೊಪ್ಪಿಗೆ ನೀಡದಿದ್ದರೆ ಕುಟುಂಬದ ಸದಸ್ಯರನ್ನು ಬಂಧಿಸುವುದಾಗಿ ಪೊಲೀಸರು ಬೆದರಿಕೆ ಹಾಕಿದ್ದರು ಎಂದು ಅವರು ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಂಡ್ಯ ಎಸ್ಪಿ ಡಾ. ಶೋಭರಾಣಿ, ಮಹಿಳೆ ಪತ್ತೆಯಾಗಿದ್ದು, ಅವರ ಹೇಳಿಕೆ ಪಡೆದು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಹಿಂದಿನ ತನಿಖೆಯಲ್ಲಿನ ಲೋಪಗಳ ಕುರಿತು ಡಿವೈಎಸ್ಪಿ ನೇತೃತ್ವದಲ್ಲಿ ವಿಚಾರಣೆಗೆ ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅ



ನಿಮ್ಮ ಕಾಮೆಂಟ್ ಬರೆಯಿರಿ