ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಕೃಷಿ ಭೂಮಿ ವಿವಾದ ; ತಂದೆ-ಮಗನ ಕೊಲೆ

ವಿಜಯಪುರ:  ಕೃಷಿ ಜಮೀನಿನ ವಿವಾದ ವಿಕೋಪಕ್ಕೆ ತಿರುಗಿ ನಂತರ ನಡೆದ ಭೀಕರ ಹೊಡೆದಾಟದಲ್ಲಿ ತಂದೆ ಮತ್ತು ಮಗ ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡ ಘಟನೆ ಶುಕ್ರವಾರ ಜಿಲ್ಲೆಯ ತಡಲಗಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಹನುಮಂತ ಸಾಲವಾಡಗಿ ಮತ್ತು ಅವರ ಪುತ್ರ ಮಂಜುನಾಥ ಸಾಲವಾಡಗಿ ಎಂದು ಗುರುತಿಸಲಾಗಿದೆ.
ವಿವಾದಿತ ಜಮೀನಿನಲ್ಲಿ ಬೆಳೆದಿದ್ದ ಕಬ್ಬನ್ನು ಕಟಾವು ಮಾಡಲು ಶುಕ್ರವಾರ ಬೆಳಿಗ್ಗೆ ಹನುಮಂತ ಮತ್ತು ಅವರ ಪುತ್ರ ಮಂಜುನಾಥ ತೆರಳಿದ್ದರು. ಈ ವೇಳೆ ಜಮೀನಿನ ಮಾಲೀಕತ್ವದ ವಿಚಾರ ಮುಂದಿಟ್ಟುಕೊಂಡು ಮೇಟಿ ಕುಟುಂಬದ ಸದಸ್ಯರು ಕಬ್ಬು ಕಟಾವು ಮಾಡಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ, ಕೊನೆಗೆ ಅದು ಹಿಂಸಾತ್ಮಕ ಘರ್ಷಣೆಗೆ ತಿರುಗಿ ಇಬ್ಬರ ಕೊಲೆಯಲ್ಲಿ ಪರ್ಯಾವಸನಗೊಂಡಿದೆ.

ತಡಲಗಿ ಗ್ರಾಮದಲ್ಲಿ ಹನುಮವ್ವ ಮೇಟಿ ಎಂಬವರ ಹೆಸರಿನಲ್ಲಿರುವ ಸುಮಾರು ಎಂಟು ಎಕರೆ ಜಮೀನಿಗೆ ಸಂಬಂಧಿಸಿದಂತೆ ಅವರ ಸಂಬಂಧಿಕರ ತಕರಾರು ಇತ್ತು. ಹನುಮವ್ವ ಮೇಟಿ ಕಳೆದ ಮೂರು ವರ್ಷಗಳಿಂದ ಈ ಜಮೀನನ್ನು ಕೃಷಿ ಮಾಡಲು ಹನುಮಂತ ಹಾಗೂ ಅವರ ಪುತ್ರ ಮಂಜುನಾಥ ಸಾಲೋಟಗಿ ಅವರಿಗೆ ನೀಡಿದ್ದರು. ಹನುಮವ್ವ ಮೇಟಿ ಅವರ ಸಂಬಂಧಿಕರು ಈ ಜಮೀನಿನ ಮೇಲೆ ತಮ್ಮ ಹಕ್ಕಿದೆ ಎಂದು ಪ್ರತಿಪಾದಿಸುತ್ತಿದ್ದರು. ಹನುಮವ್ವ ಅವರಿಗೆ ಕಾನೂನುಬದ್ಧ ವಾರಸುದಾರರು ಯಾರೂ ಇಲ್ಲ. ಹೀಗಾಗಿ ಜಮೀನು ತಮಗೆ ಸೇರಬೇಕು ಎಂಬುದು ಅವರ ವಾದವಾಗಿತ್ತು.
ಆದರೆ, ಹನುಮವ್ವ ಅವರು ಕಳೆದ ಮೂರು ವರ್ಷಗಳಿಂದ ಈ ಜಮೀನನ್ನು ಹನುಮಂತ ಸಾಲವಾಡಗಿ ಮತ್ತು ಅವರ ಪುತ್ರ ಮಂಜುನಾಥ ಅವರಿಗೆ ಕೃಷಿ ಮಾಡುವುದಕ್ಕಾಗಿ ಗುತ್ತಿಗೆ ನೀಡಿದ್ದರಿಂದ ತಂದೆ-ಮಗ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆದಿದ್ದರು. ಇದೀಗ ಕಟಾವಿಗೆ ಸಿದ್ಧವಾಗಿದ್ದ ಕಬ್ಬನ್ನೂ ಬೆಳೆಸಿದ್ದರು.

ಪ್ರಮುಖ ಸುದ್ದಿ :-   ಮೈಸೂರು : ಕಾರ್ಯಕ್ರಮದಲ್ಲಿ ಅಸ್ವಸ್ಥಗೊಂಡ 70 ವರ್ಷದ ವೃದ್ಧೆಗೆ ಜ್ಯೂಸ್ ಕೊಟ್ಟು ಉಪಚಾರ ಮಾಡಿದ ಪ್ರಧಾನಿ ಮೋದಿ

ಬೆಳೆ ಕಟಾವಿಗೆ ಆಕ್ಷೇಪ; ಕಲ್ಲು, ಕಟ್ಟಿಗೆಗಳಿಂದ ಪರಸ್ಪರ ಹಲ್ಲೆ
ಶುಕ್ರವಾರ ಬೆಳಿಗ್ಗೆ ಕಬ್ಬು ಕಟಾವು ಮಾಡಲು ತಂದೆ-ಮಗ ಜಮೀನಿಗೆ ಬಂದಾಗ, ಜಮೀನು ತಮಗೆ ಸೇರಿದ್ದು ಎಂದು ಪ್ರತಿಪಾದಿಸಿದ ಮೇಟಿ ಕುಟುಂಬದವರು ಕಟಾವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಹನುಮಂತ ಮತ್ತು ಮಂಜುನಾಥ ಅವರು, ಕಳೆದ ಮೂರು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು, ಬೆಳೆ ಬೆಳೆಯಲು ಸಾಕಷ್ಟು ಹಣ ಖರ್ಚು ಮಾಡಿದ್ದೇವೆ ಎಂದು ಹೇಳಿದ್ದಾರೆ. ಹೀಗಾಗಿ ಬೆಳೆ ಕಟಾವು ಮಾಡಲು ಅವಕಾಶ ನೀಡಬೇಕು ಅಥವಾ ಕೃಷಿಗಾಗಿ ತಾವು ಮಾಡಿದ ಖರ್ಚನ್ನು ಪರಿಹಾರವಾಗಿ ನೀಡಬೇಕು ಎಂದು ತಂದೆ-ಮಗ ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಅದು ತೀವ್ರಗೊಂಡು ಘರ್ಷಣೆಗೆ ಕಾರಣವಾಗಿದೆ. ಈ ವೇಳೆ ಕೃಷಿ ಜಮೀನಿನ ಸುತ್ತಮುತ್ತ ಹಾಗೂ ಸಮೀಪದ ಮನೆಗಳ ಬಳಿ ಬಿದ್ದಿದ್ದ ಕಲ್ಲುಗಳು ಮತ್ತು ಮರದ ಕಟ್ಟಿಗೆಗಳನ್ನು ಕೈಗೆತ್ತಿಕೊಂಡ ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದಾರೆ. ಘರ್ಷಣೆಯಲ್ಲಿ ಹನುಮಂತ ಮತ್ತು ಮಂಜುನಾಥ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಇಬ್ಬರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಘಟನೆಯಲ್ಲಿ ಇತರ ಮೂವರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಒಟ್ಟು 12 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು  ಪೊಲೀಸರು ತಿಳಿಸಿದ್ದಾರೆ.
ಕೃಷಿ ಜಮೀನಿನ ಮಾಲೀಕತ್ವದ ವಿವಾದ ಮತ್ತು ಬೆಳೆ ಕಟಾವಿನ ವಿಚಾರವಾಗಿ ಆರಂಭವಾದ ಗಲಾಟೆ ಕೊನೆಗೆ ತಂದೆ-ಮಗನ ಸಾವಿನಲ್ಲಿ ಅಂತ್ಯಗೊಂಡಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಮೈಸೂರಿನಲ್ಲಿ ಭಾರತದ ಮೊದಲ 8ಕೆ ಎಲ್‌ಇಡಿ ಡೋಮ್ ತಾರಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ ; ಏನಿದರ ವಿಶೇಷತೆ ?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement