ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಬಳ್ಳಾರಿ : ತಿಂಗಳಿಗೆ ₹15 ಸಾವಿರ ಸಂಬಳ ಪಡೆಯುವ ವ್ಯಕ್ತಿಯ ಹೆಸರಲ್ಲಿ ₹350 ಕೋಟಿ ಜಿಎಸ್‌ಟಿ ವಹಿವಾಟು ! ಬೆಚ್ಚಿಬಿದ್ದ ಯುವಕ

ಬಳ್ಳಾರಿ: ಟೊಯೊಟಾ ಕಾರು ಶೋರೂಂನಲ್ಲಿ ಸರ್ವಿಸ್ ಅಡ್ವೈಸರ್ ಆಗಿ ಕೆಲಸ ಮಾಡುತ್ತ ತಿಂಗಳಿಗೆ ಕೇವಲ 15 ಸಾವಿರ ರೂಪಾಯಿ ಸಂಬಳ ಪಡೆಯುವ ಯುವಕನೊಬ್ಬನ ಆಧಾರ್, ಪ್ಯಾನ್, ವಿದ್ಯುತ್‌ ಬಿಲ್‌ ಸೇರಿದಂತೆ ವೈಯಕ್ತಿಕ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು, ಆತನ ಹೆಸರಿನಲ್ಲಿ ಐದೇ ತಿಂಗಳಲ್ಲಿ ಬರೋಬ್ಬರಿ 350 ಕೋಟಿ ರೂಪಾಯಿ ಮೌಲ್ಯದ ಜಿಎಸ್‌ಟಿ (GST) ವಹಿವಾಟು ನಡೆಸಿರುವ ಆರೋಪಿತ ಪ್ರಕರಣ  ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.
ಬಳ್ಳಾರಿಯ ಟೊಯೊಟಾ ಶೋರೂಂನಲ್ಲಿ ಕೆಲಸ ಮಾಡುತ್ತಿರುವ ರೋಷನ್ ಎಂಬ ಯುವಕ ತಾನು ವಂಚನೆಗೆ ಒಳಗಾಗಿರುವುದಾಗಿ ಆರೋಪಿಸಿದ್ದಾನೆ. ಆತನ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ವಿದ್ಯುತ್ ಬಿಲ್‌ಗಳನ್ನು ಬಳಸಿಕೊಂಡು ‘ರೋಷನ್ ಎಂಟರ್‌ಪ್ರೈಸಸ್’ (Roshan Enterprises) ಹೆಸರಿನಲ್ಲಿ ಉದ್ಯಮವೊಂದನ್ನು ನೋಂದಾಯಿಸಲಾಗಿದೆ. ಅದರ ಹೆಸರಿನಲ್ಲಿ ಐದೇ ತಿಂಗಳ ಅವಧಿಯಲ್ಲಿ 350 ಕೋಟಿ ರೂಪಾಯಿ ಮೌಲ್ಯದ ಜಿಎಸ್‌ಟಿ ವಹಿವಾಟು ನಡೆದಿದೆ ಎನ್ನಲಾಗಿದೆ.
ಆದರೆ, ಸಂಸ್ಥೆಯ ನೋಂದಣಿ ಸಂದರ್ಭದಲ್ಲಿ ರೋಷನ್ ಅವರ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸದ ಬದಲಿಗೆ ಬೇರೊಬ್ಬರ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸವನ್ನು ನೀಡಲಾಗಿದೆ. ಹೀಗಾಗಿ, ತನ್ನ ಹೆಸರಿನಲ್ಲಿ ಸಂಸ್ಥೆ ನೋಂದಣಿಯಾಗಿರುವುದು ಅಥವಾ ಕೋಟ್ಯಂತರ ರೂಪಾಯಿ ಮೌಲ್ಯದ ವಹಿವಾಟು ನಡೆಯುತ್ತಿರುವುದು ತನಗೆ ತಿಳಿದಿರಲಿಲ್ಲ ಎಂದು ರೋಷನ್‌ ದೂರಿನಲ್ಲಿ ತಿಳಿಸಿದ್ದಾರೆ.

ಜಿಎಸ್‌ಟಿ ಅಧಿಕಾರಿಗಳ ಮನೆ ಭೇಟಿ ಬಳಿಕ ವಂಚನೆ ಬೆಳಕಿಗೆ
ಜಿಎಸ್‌ಟಿ ಖಾತೆ ಸ್ಥಗಿತಗೊಂಡ ಬಳಿಕ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (Central GST) ಇಲಾಖೆಯ ಅಧಿಕಾರಿಗಳು ರೋಷನ್ ಅವರ ಮನೆಗೆ ಭೇಟಿ ನೀಡಿ ಜಿಎಸ್‌ಟಿ ಖಾತೆಯನ್ನು ಯಾಕೆ ಸ್ಥಗಿತಗೊಳಿಸಿದ್ದೀರಿ ಎಂದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಗುರುವಾರ ರೋಷನ್ ಅವರ ಮನೆಗೆ ಬಂದ ಅಧಿಕಾರಿಗಳು ಜಿಎಸ್‌ಟಿ ಖಾತೆ ಸ್ಥಗಿತಗೊಂಡಿರುವುದಾಗಿ ತಿಳಿಸಿ, ಈ ಕುರಿತು ಕುಟುಂಬದವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ರೋಷನ್ ಅವರ ತಂದೆ ಫಕ್ರುದ್ದೀನ್ ಹಾಗೂ ಕುಟುಂಬದ ಇತರ ಸದಸ್ಯರು ಆತಂಕಕ್ಕೊಳಗಾಗಿದ್ದಾರೆ. ಫಕ್ರುದ್ದೀನ್ ಅವರು ಎಸಿ (ಹವಾನಿಯಂತ್ರಣ) ಗೋದಾಮಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.
ಅಧಿಕಾರಿಗಳ ವಿಚಾರಣೆಯಿಂದ ಗೊಂದಲಕ್ಕೊಳಗಾದ ಕುಟುಂಬದವರು, ತಾವು ಯಾವುದೇ ವ್ಯಾಪಾರ ಅಥವಾ ಉದ್ಯಮ ನಡೆಸುತ್ತಿಲ್ಲ. ಕುಟುಂಬದ ಸದಸ್ಯರೆಲ್ಲರೂ ತಮ್ಮ ತಮ್ಮ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ಈ ವಿಚಾರ ತಿಳಿದ ರೋಷನ್, ಜಿಎಸ್‌ಟಿ ಕಚೇರಿಗೆ ತೆರಳಿ ತಮ್ಮ ಹೆಸರಿನಲ್ಲಿ ನಡೆದಿರುವ ವಹಿವಾಟಿನ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಅಲ್ಲಿನ ಅಧಿಕಾರಿಗಳಿಂದ ದೊರೆತ ಉತ್ತರದಿಂದ ತೃಪ್ತರಾಗದ ಅವರು, ಕುಟುಂಬದವರ ಜೊತೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ಮುಂಡಗೋಡ : ವೃದ್ಧೆಯ ಸಾವಿನ ಪ್ರಕರಣ ಭೇದಿಸಿದ ಪೊಲೀಸರು ; ಕೊಲೆ ಆರೋಪಿಯ ಬಂಧನ

‘ಖಾತೆ ತೆರೆದಿದ್ದೂ ಗೊತ್ತಿಲ್ಲ, ಸ್ಥಗಿತಗೊಂಡಿದ್ದೂ ಗೊತ್ತಿಲ್ಲ’
ತನ್ನ ಹೆಸರಿನಲ್ಲಿ ನಡೆದಿರುವ ವಹಿವಾಟಿನ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ರೋಷನ್, ಜಿಎಸ್‌ಟಿ ನೋಂದಣಿ ಅಥವಾ ವಹಿವಾಟಿನ ಕುರಿತು ಕುಟುಂಬದ ಯಾರಿಗೂ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.
“ಗುರುವಾರ ಅಧಿಕಾರಿಗಳು ನಮ್ಮ ಮನೆಗೆ ಬಂದು ವಿಚಾರಣೆ ನಡೆಸಿದಾಗ ಇದು ನಮಗೆ ತಿಳಿದಿದೆ. ನಾವು ಯಾವುದೇ ವ್ಯಾಪಾರ ಮಾಡುತ್ತಿಲ್ಲ. ನೌಕರಿ ಮೂಲಕ ಜೀವನ ಸಾಗಿಸುತ್ತಿದ್ದೇವೆ ಎಂದು ಹೇಳಿದೆವು. ಬಳಿಕ ಪರಿಶೀಲಿಸಿದಾಗ ನಮ್ಮ ಹೆಸರಿನಲ್ಲಿ 350 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆದಿರುವುದು ಗೊತ್ತಾಯಿತು. ಜಿಎಸ್‌ಟಿ ಖಾತೆ ತೆರೆದಾಗಲೂ, ಸ್ಥಗಿತಗೊಂಡಾಗಲೂ ನಮಗೆ ಯಾವುದೇ ಮಾಹಿತಿ ಅಥವಾ ನೋಟಿಸ್ ಬಂದಿಲ್ಲ. ನಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ವಿದ್ಯುತ್ ಬಿಲ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಬಳಸಿಕೊಳ್ಳಲಾಗಿದೆ. ಆದರೆ, ಖಾತೆಗೆ ಬೇರೆಯವರ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ಜೋಡಿಸಲಾಗಿದೆ. ಇದರಿಂದ ನಮ್ಮ ಕುಟುಂಬ ತೀವ್ರ ಆತಂಕಕ್ಕೆ ಒಳಗಾಗಿದೆ” ಎಂದು ರೋಷನ್ ತಿಳಿಸಿದ್ದಾರೆ.
ಮಗನ ವೈಯಕ್ತಿಕ ದಾಖಲೆಗಳನ್ನು ಬಳಸಿಕೊಂಡು ಇಷ್ಟೊಂದು ದೊಡ್ಡ ಮೊತ್ತದ ವಹಿವಾಟು ನಡೆಸಿರುವವರನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಬೇಕು ಎಂದು ರೋಷನ್ ಅವರ ತಂದೆ ಫಕ್ರುದ್ದೀನ್ ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿ :-   ಶಾಸಕ ಯತ್ನಾಳ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸಲು ಹೈಕೋರ್ಟ್ ನಕಾರ

ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳ ಪಡೆಯುವ ಸಾಮಾನ್ಯ ಉದ್ಯೋಗಿಯೊಬ್ಬನ ಹೆಸರಿನಲ್ಲಿ 350 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಸಲು ಸಾಧ್ಯವಾಗಿದ್ದು ಹೇಗೆ? ಜಿಎಸ್‌ಟಿ ನೋಂದಣಿ ಮಾಡುವಾಗ ದಾಖಲೆಗಳ ಪರಿಶೀಲನೆ ಹೇಗೆ ನಡೆದಿದೆ? ಇಷ್ಟೊಂದು ದೊಡ್ಡ ಮೊತ್ತದ ವಹಿವಾಟು ನಡೆಯುತ್ತಿದ್ದರೂ ಸಂಬಂಧಪಟ್ಟ ವ್ಯಕ್ತಿಗೆ ಯಾವುದೇ ಮಾಹಿತಿ ಅಥವಾ ಸೂಚನೆ ನೀಡದಿರುವುದೇಕೆ? ಎಂದು ಕುಟುಂಬದವರು ಪ್ರಶ್ನಿಸಿದ್ದಾರೆ.
ರೋಷನ್ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರೋಷನ್ ಅವರ ಗುರುತಿನ ದಾಖಲೆಗಳನ್ನು ಬಳಸಿಕೊಂಡು ಜಿಎಸ್‌ಟಿ ವಹಿವಾಟು ನಡೆಸಿರುವವರಾರು, ಇದರ ಹಿಂದಿರುವ ಉದ್ದೇಶವೇನು ಮತ್ತು ಈ ವಹಿವಾಟುಗಳ ಮೂಲಕ ತೆರಿಗೆ ವಂಚನೆ ನಡೆದಿದೆಯೇ ಎಂಬುದನ್ನು ತನಿಖೆಯಲ್ಲಿ ಪರಿಶೀಲಿಸಲಾಗುತ್ತದೆ.
ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳ ಪಡೆಯುವ ಯುವಕನ ಗುರುತಿನ ದಾಖಲೆಗಳನ್ನು ಬಳಸಿಕೊಂಡು ಕೇವಲ ಐದೇ ತಿಂಗಳಲ್ಲಿ 350 ಕೋಟಿ ರೂಪಾಯಿ ಮೌಲ್ಯದ ಜಿಎಸ್‌ಟಿ ವಹಿವಾಟು ನಡೆಸಿರುವ ಆರೋಪ ಬಳ್ಳಾರಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement