ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಭಾರತಕ್ಕೆ ಮತ್ತೊಂದು ಚಂಡಮಾರುತದ ಭೀತಿ: ನ.16ರ ವೇಳೆಗೆ ರೂಪುಗೊಳ್ಳುವ ಸಾಧ್ಯತೆ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಎದುರಾಗಿದ್ದು, ಮುಂದಿನ 24ರಿಂದ 48 ಗಂಟೆಗಳಲ್ಲಿ ವಾಯುಭಾರ ಕುಸಿತ ತೀವ್ರಗೊಂಡು ‘ಅಕ್ವಾನ್’ (Akvan) ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಸದ್ಯ ಗುರುತಿಸಲ್ಪಟ್ಟಿರುವ ವಾಯುಭಾರ ಕುಸಿತವು ಮೊದಲು ತೀವ್ರ ವಾಯುಭಾರ ಕುಸಿತವಾಗಿ, ಬಳಿಕ ನವೆಂಬರ್ 16ರ ಸಂಜೆ ವೇಳೆಗೆ ಚಂಡಮಾರುತವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ ಎಂದು ಐಎಂಡಿ ಹೇಳಿದೆ.
ಶನಿವಾರದ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಈ ಹವಾಮಾನ ವ್ಯವಸ್ಥೆಯು ಉತ್ತರ-ವಾಯವ್ಯ ದಿಕ್ಕಿನತ್ತ ಚಲಿಸಲಿದ್ದು, ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಈ ಚಂಡಮಾರುತಕ್ಕೆ ಇರಾನ್ ಸೂಚಿಸಿರುವ ‘ಅಕ್ವಾನ್’ ಎಂಬ ಹೆಸರನ್ನು ಇಡಲಾಗುತ್ತದೆ.
ಚಂಡಮಾರುತದ ಪ್ರಭಾವದಿಂದ ಬಂಗಾಳಕೊಲ್ಲಿ, ಅಂಡಮಾನ್ ಸಮುದ್ರ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ವ್ಯಾಪ್ತಿಯಲ್ಲಿ ಬಲವಾದ ಗಾಳಿ ಬೀಸುವ ಜೊತೆಗೆ ಸಮುದ್ರದಲ್ಲಿ ಭಾರಿ ಅಲೆಗಳು ಏಳುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಸೇರಿದಂತೆ ಸಮುದ್ರದಲ್ಲಿ ಸಂಚರಿಸುವವರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಗಂಟೆಗೆ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ
ಶನಿವಾರ ಬೆಳಿಗ್ಗೆ 5:30ರ ವೇಳೆಗೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರದೇಶ ಸ್ಪಷ್ಟವಾಗಿ ಗುರುತಿಸಲ್ಪಟ್ಟಿತ್ತು. ಇದರ ಪ್ರಭಾವದಿಂದ ಅಂಡಮಾನ್ ಸಮುದ್ರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಬಂಗಾಳಕೊಲ್ಲಿಯ ವಿಸ್ತಾರವಾದ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 60 ಕಿ.ಮೀ. ತಲುಪಬಹುದು. ನವೆಂಬರ್ 17ರಿಂದ ಗಾಳಿಯ ವೇಗ ಮತ್ತಷ್ಟು ಹೆಚ್ಚಾಗಿ ಗಂಟೆಗೆ 80 ಕಿ.ಮೀ. ತಲುಪುವ ಸಾಧ್ಯತೆಯಿದ್ದು, ಮುಂದಿನ ಎರಡು ದಿನಗಳ ಕಾಲ ಇದೇ ರೀತಿಯ ತೀವ್ರತೆ ಮುಂದುವರಿಯಬಹುದು ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಸಮುದ್ರದಲ್ಲಿ ಪ್ರತಿಕೂಲ ಹವಾಮಾನ ಹಾಗೂ ಬಿರುಗಾಳಿಯ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯನ್ನು ಪರಿಗಣಿಸಿ, ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿರುವ ಮೀನುಗಾರರು ನವೆಂಬರ್ 15ರೊಳಗೆ ದಡಕ್ಕೆ ಮರಳುವಂತೆ ಸೂಚಿಸಲಾಗಿದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳದಂತೆಯೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಮುಂದಿನ ಕೆಲವು ದಿನಗಳಲ್ಲಿ ಈ ಹವಾಮಾನ ವ್ಯವಸ್ಥೆ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿರುವುದರಿಂದ, ಅದರ ಚಲನವಲನ ಮತ್ತು ತೀವ್ರತೆಯನ್ನು ಅಧಿಕಾರಿಗಳು ನಿರಂತರವಾಗಿ ಗಮನಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಬಾಳೆ ಗೊನೆಗಳಲ್ಲಿ ಮಾದಕವಸ್ತು ಸಾಗಾಟ ; ಕೇರಳದ ಪ್ರಶಸ್ತಿ ವಿಜೇತ ಯುವ ರೈತನ ಬಂಧನ

ಬಂಗಾಳಕೊಲ್ಲಿಯಲ್ಲಿ ಮೂರನೇ ಚಂಡಮಾರುತ
ಕಳೆದ ಕೆಲವು ವಾರಗಳಲ್ಲಿ ಬಂಗಾಳಕೊಲ್ಲಿ ಪ್ರದೇಶದಲ್ಲಿ ರೂಪುಗೊಳ್ಳುತ್ತಿರುವ ಮೂರನೇ ಪ್ರಮುಖ ಚಂಡಮಾರು ಇದಾಗಲಿದೆ. ಇದಕ್ಕೂ ಮೊದಲು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಅರ್ನಬ್ (Arnab) ಹಾಗೂ ಮುರಸು (Murasu) ಚಂಡಮಾರುತಗಳು ಈ ಪ್ರದೇಶದ ಮೇಲೆ ರೂಪುಗೊಂಡಿದ್ದವು. ಆಂಧ್ರಪ್ರದೇಶ ಹಾಗೂ ನೆರೆಯ ಪ್ರದೇಶಗಳಲ್ಲಿ ಈ ಚಂಡಮಾರುತಗಳಿಂದ ಬಲವಾದ ಗಾಳಿ ಮತ್ತು ಭಾರಿ ಮಳೆಯಾಗಿತ್ತು.
ಅಕ್ಟೋಬರ್ 28ರಂದು ಅರ್ನಬ್ ಚಂಡಮಾರುತವು ಅತ್ಯಂತ ತೀವ್ರ ಚಂಡಮಾರುತವಾಗಿ ನರಸಾಪುರದ ಸಮೀಪ ಆಂಧ್ರಪ್ರದೇಶದ ಕರಾವಳಿಯನ್ನು ದಾಟಿತ್ತು. ಆ ಸಂದರ್ಭದಲ್ಲಿ ಗಂಟೆಗೆ 125ರಿಂದ 135 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದು, ಗಾಳಿಯ ಹೊಡೆತದ ವೇಗ ಗಂಟೆಗೆ 150 ಕಿ.ಮೀ.ವರೆಗೂ ತಲುಪಿತ್ತು. ಈ ಚಂಡಮಾರುತದ ಪರಿಣಾಮ ಕನಿಷ್ಠ ಆರು ಮಂದಿ ಮೃತಪಟ್ಟಿದ್ದರು.
ಇದಾದ ಬಳಿಕ ನವೆಂಬರ್ 3ರ ಬೆಳಿಗ್ಗೆ ಮುರಸು ಚಂಡಮಾರುತವು ತೀವ್ರ ಚಂಡಮಾರುತದ ಸ್ವರೂಪದಲ್ಲಿ ಒಂಗೋಲ್ ಸಮೀಪ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ದಾಟಿತ್ತು. ಭೂಭಾಗ ಪ್ರವೇಶಿಸುವ ಸಂದರ್ಭದಲ್ಲಿ ಗಂಟೆಗೆ 100ರಿಂದ 110 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದು, ಗಾಳಿಯ ಹೊಡೆತದ ವೇಗ ಗಂಟೆಗೆ 120 ಕಿ.ಮೀ. ತಲುಪಿತ್ತು.
ಇದೀಗ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಹವಾಮಾನ ವ್ಯವಸ್ಥೆ ಬಲಗೊಳ್ಳುತ್ತಿರುವುದರಿಂದ ಭಾರತೀಯ ಹವಾಮಾನ ಇಲಾಖೆ ಅದರ ಚಲನವಲನ ಹಾಗೂ ತೀವ್ರತೆಯ ಮೇಲೆ ನಿಕಟ ನಿಗಾ ಇರಿಸಿದೆ. ನವೆಂಬರ್ 16ರ ವೇಳೆಗೆ ಅಕ್ವಾನ್ ಚಂಡಮಾರುತವಾಗಿ ರೂಪುಗೊಳ್ಳುವ ನಿರೀಕ್ಷೆಯಿದ್ದು, ನಂತರದ ದಿನಗಳಲ್ಲಿ ಗಂಟೆಗೆ 80 ಕಿ.ಮೀ. ವೇಗದ ಗಾಳಿ ಹಾಗೂ ಸಮುದ್ರದ ಪ್ರಕ್ಷುಬ್ಧ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಹಾಗೂ ಕರಾವಳಿ ಪ್ರದೇಶದ ಜನರು ಹವಾಮಾನ ಇಲಾಖೆಯ ಮುನ್ಸೂಚನೆ ಮತ್ತು ಎಚ್ಚರಿಕೆಗಳನ್ನು ಗಮನಿಸುವುದು ಅಗತ್ಯವಾಗಿದೆ.

ಪ್ರಮುಖ ಸುದ್ದಿ :-   ಅಮಿತಾಬ್ ಬಚ್ಚನ್ ಜುಹು ಬಂಗಲೆ 'ಜಲ್ಸಾ' ಈಗ ಕುಟುಂಬದ ಆಸ್ತಿ ವಿವಾದದ ಕೇಂದ್ರ ; ವರದಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement