ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಶಿರಸಿ : ನಾಲ್ವರು ಪತ್ರಕರ್ತರಿಗೆ ಪತ್ರಿಕಾ ಮಂಡಳಿ ಪ್ರಶಸ್ತಿ ಪ್ರದಾನ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರದಲ್ಲಿರುವ ಜಿಲ್ಲಾ ಪತ್ರಿಕಾ ಭವನದಲ್ಲಿ  ಸೋಮವಾರ ಆಯೋಜಿಸಿದ್ದ ಪತ್ರಿಕಾ ಭವನದ ಮೇಲಂತಸ್ತಿನ ಕಟ್ಟಡ ಉದ್ಘಾಟನೆ ಹಾಗೂ 2026ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಪತ್ರಿಕಾ ಮಂಡಳಿಯಿಂದ ಕೊಡಮಾಡುವ ನಾಲ್ಕು ಪ್ರಶಸ್ತಿಗಳನ್ನು ಪ್ರದಾನ ಮಾಲಾಯಿತು.
ರಾಜ್ಯಮಟ್ಟದ ಮಾಧ್ಯಮ ರತ್ನ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಎಚ್.ಆರ್. ಶ್ರೀಶ ಅವರಿಗೆ, ಡಾ. ಯು. ಚಿತ್ತರಂಜನ್ ಪ್ರಶಸ್ತಿಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಜಿ.ಯು. ಭಟ್ ಹೊನ್ನಾವರ ಅವರಿಗೆ, ಕೆ. ಶ್ಯಾಮರಾವ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ನರಸಿಂಹ ಸಾತೊಡ್ಡಿ ಅವರಿಗೆ  ಹಾಗೂ ಜಿ.ಎಸ್. ಹೆಗಡೆ, ಅಜ್ಜೀಬಳ ಪ್ರಶಸ್ತಿಯನ್ನು ವರದಿಗಾರ ಮಂಜುನಾಥ ಈರಗೊಪ್ಪ ಅವರಿಗೆ ಪ್ರದಾನ ಮಾಡಲಾಯತು.
ರಾಜ್ಯಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಎಚ್.ಆರ್. ಶ್ರೀಶ ಅವರು, ಪತ್ರಿಕೋದ್ಯಮ ತನ್ನ ಮೂಲಭೂತ ಆಶಯಗಳನ್ನು ಕಳೆದುಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಣದಿಂದಲೇ ಎಲ್ಲವನ್ನೂ ಸಾಧಿಸಬಹುದು ಎಂಬ ಮನೋಭಾವ ಬೆಳೆಯುತ್ತಿದೆ.  ಕಾರ್ಯಾಂಗ ಮತ್ತು ಶಾಸಕಾಂಗವೂ ತನ್ನ ಪಾವಿತ್ರ್ಯ ಕಳೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ. ಪೆನ್ನು ಚಿಕ್ಕದಾಗಿದ್ದರೂ ಅದಕ್ಕೆ ಸಮಾಜಕ್ಕೆ ದಿಕ್ಕು ತೋರಿಸುವ ಶಕ್ತಿ ಹೊಂದಿದೆ. ಅದಕ್ಕಾಗಿಯೇ ಜನರು ನಮ್ಮತ್ತ ನೋಡುತ್ತಾರೆ. ನಾವು ಅದಕ್ಕೆ ತಕ್ಕಂತೆಯೇ ನಡೆದುಕೊಳ್ಳಬೇಕು. ಹಪಾವಿತ್ರ್ಯವನ್ನು ಕಾಪಾಡಿಕೊಂಡು ಮುಂದಕ್ಕೆ ಸಾಗಬೇಕು ಎಂದರು. ಯುವ ಪತ್ರಕರ್ತರಿಗೆ ಬರಹದ ಮೌಲ್ಯ ಮತ್ತು ಅದರ ಜವಾಬ್ದಾರಿಯ ಬಗ್ಗೆ ಅರಿವು ಇರಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಮಾತನಾಡಿ, ರಾಜಕೀಯ ಮತ್ತು ಮಾಧ್ಯಮ ಕ್ಷೇತ್ರಗಳೆರಡೂ ಸಾರ್ವಜನಿಕ ಬದುಕಿನೊಂದಿಗೆ ನೇರ ಸಂಬಂಧ ಹೊಂದಿವೆ. ಸಾರ್ವಜನಿಕ ಜೀವನದಲ್ಲಿರುವವರು ಟೀಕೆಗಳನ್ನು ಸಹಿಸಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು. ಟೀಕೆಗಳು ನಮಗೆ ದಿಕ್ಕು ತೋರುವಂತತೆ ಇರುವುದರಿಂದ ಅದು ನಮಗೆ ಆದರ್ಶವಾಗಬೇಕು ಹಾಗೂ ತಿದ್ದಿಕೊಳ್ಳಲು ಪ್ರೇರಣೆಯಾಗಬೇಕು ಎಂದರು.
ಒಂದು ಕಾಲದಲ್ಲಿ ಮಾಧ್ಯಮ ಕ್ಷೇತ್ರದ ಪೆನ್ನಿನ ಹರಿತಕ್ಕೆ ವಿಶೇಷ ಶಕ್ತಿಯಿತ್ತು. ಖಾದ್ರಿ ಶಾಮಣ್ಣನವರು ರಾಮಕೃಷ್ಣ ಹೆಗಡೆಯವರ ಸ್ನೇಹಿತರಾಗಿದ್ದರೂ ವಾಸ್ತವಿಕ ನೆಲೆಗಟ್ಟಿನಲ್ಲಿ ಟೀಕಿಸುವುದನ್ನು ಎಂದಿಗೂ ಬಿಟ್ಟಿರಲಿಲ್ಲ. ಸತ್ಯವನ್ನು ನಿರ್ಭೀತಿಯಿಂದ ಪ್ರತಿಪಾದಿಸುವ ಪತ್ರಿಕಾಧರ್ಮ ಅವರಲ್ಲಿತ್ತು. ಆದರೆ ಈಗಿನ ದಿನಮಾನಗಳಲ್ಲಿ ಅದರ ಹರಿತ ಕಡಿಮೆಯಾಗಿದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಹಿಂದೆ ಸಾರ್ವಜನಿಕ ಜೀವನದಲ್ಲಿ ನಡೆದ ಹಗರಣಗಳು ಸಚಿವರ ರಾಜೀನಾಮೆಗೆ ಕಾರಣವಾಗುತ್ತಿದ್ದವು. ಆದರೆ ಇಂದು ಈ ಬಗ್ಗೆ ವರದಿಯಾದರೂ ಈ ಬಗ್ಗೆ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಪತ್ರಿಕಾ ಭವನದ ಮೇಲಂತಸ್ತಿನ ಕಟ್ಟಡ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಎಚ್ಚರಿಸುವ ಕೆಲಸ ಮಾಧ್ಯಮಗಳಿಂದ ಆಗಬೇಕು. ಅರ್ಥಪೂರ್ಣವಾಗಿ ಪತ್ರಿಕಾರಂಗ ಮುನ್ನಡೆಯಬೇಕು. ಇಂದಿನ ಪತ್ರಿಕಾರಂಗದ ಪೆನ್ನು ಮೊಂಡಾಗದೇ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
 ಡಾ. ಯು. ಚಿತ್ತರಂಜನ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜಿ.ಯು. ಭಟ್ ಹೊನ್ನಾವರ ಹಾಗೂ ಕೆ. ಶ್ಯಾಮರಾವ್ ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತ ನರಸಿಂಹ ಸಾತೊಡ್ಡಿ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಹಾಗೂ ಭಟ್ಕಳ ಅರ್ಬನ್ ಕೋ-ಆಪ್ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸುಭಾಶ ಎಂ. ಶೆಟ್ಟಿ  ಮಾತನಾಡಿದರು. ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪತ್ರಿಕಾ ಮಂಡಳಿ ಕಾರ್ಯದರ್ಶಿ ಪ್ರದೀಪ ಶೆಟ್ಟಿ ವೇದಿಕೆಯಲ್ಲಿದ್ದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement