ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಚುನಾವಣೆಗಳು ಅಕ್ರಮವಾಗಿದ್ದರೆ ನೀವ್ಯಾಕೆ ಬಹಿಷ್ಕರಿಸಬಾರದು? ಚಿಕಾಗೋ ವಿವಿಯ ಸಂವಾದದಲ್ಲಿ ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಏನ್‌ ಉತ್ತರ ಕೊಟ್ರು ?

ನ್ಯೂಯಾರ್ಕ್‌: ಭಾರತದಲ್ಲಿ ಚುನಾವಣೆಗಳು ಅಕ್ರಮವಾಗಿ ನಡೆಯುತ್ತಿವೆ ಎಂಬ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು, ಚುನಾವಣೆಯಲ್ಲಿ ಸ್ಪರ್ಧಿಸುವುದನ್ನೇ ಏಕೆ ಬಹಿಷ್ಕರಿಸಬಾರದು ಎಂಬ ಪ್ರಶ್ನೆಗೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಉತ್ತರಿಸಿದ್ದು, ಚುನಾವಣೆ ಬಹಿಷ್ಕರಿಸುವುದರಿಂದ ಭಾರತೀಯ ಪ್ರಜಾಪ್ರಭುತ್ವವೇ ಅಂತ್ಯಗೊಂಡಂತಾಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ 2014ರ ಲೋಕಸಭಾ ಚುನಾವಣೆಯಲ್ಲೂ ಏನೋ ತಪ್ಪಾಗಿದೆ ಎಂಬ ನಂಬಿಕೆ ನಮಗಿತ್ತು ಎಂದು ಅವರು ಹೊಸ ಆರೋಪ ಮಾಡಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಚಿಕಾಗೊ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪ್ರೇಕ್ಷಕರೊಬ್ಬರು ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಸೇರಿದಂತೆ ಭಾರತದ ಮತದಾರರ ಪಟ್ಟಿಗಳ ಪರಿಷ್ಕರಣೆ ಪ್ರಕ್ರಿಯೆ ಮತ್ತು ಚುನಾವಣಾ ಅಕ್ರಮಗಳ ಆರೋಪಗಳ ಕುರಿತು ಪ್ರಶ್ನೆ ಎತ್ತಿದರು. ಭಾರತದಲ್ಲಿ ಚುನಾವಣೆಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ನಂಬಿದ್ದರೆ, ಚುನಾವಣಾ ಪ್ರಕ್ರಿಯೆ ಸರಿಯಾಗುವವರೆಗೆ ರಾಹುಲ್ ಗಾಂಧಿ ಅವರಂತಹ ನಾಯಕರು ಚುನಾವಣೆಗಳಿಂದ ದೂರ ಉಳಿಯುವ ಬಗ್ಗೆ ಯೋಚಿಸಬಾರದೇ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ”ನಾನು ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಸೂಕ್ಷ್ಮ ಸಂಗತಿಗಳನ್ನು ವಿವರಿಸುತ್ತೇನೆ” ಎಂದು ಹೇಳಿ, 2014ರ ಲೋಕಸಭಾ ಚುನಾವಣೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದರು.
”2014ರ ಚುನಾವಣೆಯಲ್ಲೇ ಏನೋ ತಪ್ಪಾಗಿದೆ ಎಂಬ ನಂಬಿಕೆ ನಮಗಿತ್ತು. ಏಕೆಂದರೆ, ಆಗಿನ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರಗಳು ರಾಜಕೀಯವಾಗಿ ವಿವರಿಸಲಾಗದಷ್ಟು ಅಸಹಜವಾಗಿದ್ದವು. ಆದರೆ, ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲದ ಕಾರಣ ರಾಜಕೀಯವಾಗಿ ಈ ಬಗ್ಗೆ ಏನನ್ನೂ ಹೇಳಲು ಸಾಧ್ಯವಾಗಿರಲಿಲ್ಲ” ಎಂದು ಹೇಳಿದರು. ”ನಂತರ ನನಗೆ ಪುರಾವೆಗಳು ಸಿಕ್ಕಾಗ, ಅವುಗಳನ್ನು ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಮುಂದಿಟ್ಟು ವಿವರಿಸಿದ್ದೆ. ಆದರೆ, ‘ದಯವಿಟ್ಟು ಈ ವಿಚಾರವನ್ನು ಬಹಿರಂಗವಾಗಿ ಹೇಳಬೇಡಿ’ ಎಂದು ಅವರು ನನಗೆ ತಿಳಿಸಿದ್ದರು” ಎಂದು ರಾಹುಲ್ ಗಾಂಧಿ ಹೇಳಿದರು.
ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯನ್ನು ಬ್ರೇಕ್‌ ಮಾಡಲು ಬಯಸುವುದಿಲ್ಲ
ಚುನಾವಣೆಗಳನ್ನು ಬಹಿಷ್ಕರಿಸುವುದರಿಂದ ಆಗಬಹುದಾದ ಪರಿಣಾಮಗಳ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಭಾರತೀಯ ಪ್ರಜಾಪ್ರಭುತ್ವ ನಮಗೆ ಪವಿತ್ರವಾದುದು. ಹಾಗಾಗಿ, ಅದಕ್ಕೆ ಸಮಸ್ಯೆಯಿದೆ ಎಂದು ಹೇಳಲು ಕೂಡ ಶೇ.100, 200 ಅಥವಾ 300ರಷ್ಟು ಖಚಿತವಾದ ಪುರಾವೆಗಳು ಬೇಕಾಗುತ್ತವೆ ಎಂದರು. ಆದರೆ, ತಾವು ಹೇಳುತ್ತಿರುವ ಪುರಾವೆಗಳು ಯಾವುವು ಎಂಬುದನ್ನು ಅವರು ವಿವರಿಸಲಿಲ್ಲ.
”ನಾವು ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದರೆ, ನಮ್ಮ ಪಕ್ಷದ ಕಾರ್ಯಕರ್ತರ ಗತಿಯೇನು? ಚುನಾವಣೆಯಲ್ಲಿ ಸ್ಪರ್ಧಿಸಬೇಡಿ ಎಂದು ನಮ್ಮ ಕಾರ್ಯಕರ್ತರಿಗೆ ಹೇಳಲು ಸಾಧ್ಯವೇ? ನಾವು ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಕ್ಷಣವೇ ಭಾರತೀಯ ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸಿದಂತಾಗುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ನಾವು ಕೊನೆಗೊಳಿಸಲು ಬಯಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
”ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಜನರ ಮುಂದೆ ಬಹಿರಂಗಪಡಿಸುವುದು ಮತ್ತು ವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಿದೆ ಎಂಬುದನ್ನು ಭಾರತದ ಜನರಿಗೆ ಮನವರಿಕೆಯಾಗುವವರೆಗೆ ಎಲ್ಲ ನೋವು, ಹಿನ್ನಡೆಗಳನ್ನು ಸಹಿಸಿಕೊಳ್ಳುವುದು ನಮ್ಮ ಕಾರ್ಯತಂತ್ರವಾಗಿದೆ” ಎಂದು ಹೇಳಿದರು.
ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರವಾದ ಚಿಕಾಗೊ ಪ್ರಾಜೆಕ್ಟ್ ಆನ್ ಸೆಕ್ಯುರಿಟಿ ಆ್ಯಂಡ್ ಥ್ರೆಟ್ಸ್ (ಸಿಪಿಒಎಸ್‌ಟಿ) ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ರಾಜಕೀಯ ವಿಜ್ಞಾನಿ ರಾಬರ್ಟ್ ಪೇಪ್ ಸಂವಾದವನ್ನು ನಿರ್ವಹಿಸಿದರು.
”ಪ್ರತಿಪಕ್ಷಗಳು ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರೆ, ಭಾರತೀಯ ಜನರ ದೃಷ್ಟಿಯಲ್ಲಿ ಆ ಚುನಾವಣಾ ಪ್ರಕ್ರಿಯೆಯೇ ಅನಧಿಕೃತವೆಂಬ ಭಾವನೆ ಮೂಡುತ್ತದೆ. ಅಂತಹ ಸ್ಥಿತಿಯನ್ನು ನಾವು ಬಯಸುವುದಿಲ್ಲ. ಈ ನಿಲುವಿನಿಂದಾಗಿ ಕಾಂಗ್ರೆಸ್ ಮಾತ್ರವಲ್ಲದೆ ಇಡೀ ಪ್ರತಿಪಕ್ಷಗಳು ಸಾಕಷ್ಟು ನೋವು ಅನುಭವಿಸಿವೆ. ಆದರೂ ನಾವು ಉದ್ದೇಶಪೂರ್ವಕವಾಗಿಯೇ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿಲ್ಲ” ಎಂದು ರಾಹುಲ್ ಗಾಂಧಿ ವಿವರಿಸಿದರು.
ಚುನಾವಣಾ ಆಯೋಗದೊಳಗಿನಿಂದಲೇ ಮಾಹಿತಿ ಸಿಗುತ್ತಿದೆ ಎಂದ ರಾಹುಲ್
ಇದೇ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿಯೊಂದಿಗೆ ಚುನಾವಣಾ ಆಯೋಗ ಶಾಮೀಲಾಗಿದೆ ಎಂಬ ತಮ್ಮ ಹಿಂದಿನ ಆರೋಪವನ್ನೂ ರಾಹುಲ್ ಗಾಂಧಿ ಪುನರುಚ್ಚರಿಸಿದರು.”ನಾನು ನಿಮ್ಮ ಮುಂದೆ ನೇರವಾಗಿ ಹೇಳುತ್ತೇನೆ. ಚುನಾವಣಾ ಆಯೋಗದೊಳಗಿನಿಂದಲೇ ಈಗ ನಮಗೆ ಮಾಹಿತಿ ಸಿಗುತ್ತಿದೆ. ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳೇ ನಮ್ಮೊಂದಿಗೆ ಮಾತನಾಡುತ್ತಿದ್ದು, ‘ಇನ್ನು ಮುಂದೆ ನಮ್ಮಿಂದ ಇದನ್ನು ಮುಂದುವರಿಸಲು ಸಾಧ್ಯವಿಲ್ಲ’ ಎಂದು ಹೇಳುತ್ತಿದ್ದಾರೆ. ಹಾಗಾಗಿ, ಈ ವ್ಯವಸ್ಥೆ ಯಾವಾಗ ಕುಸಿಯುತ್ತದೆ ಎಂಬುದಷ್ಟೇ ಈಗಿರುವ ಪ್ರಶ್ನೆ” ಎಂದು ಅವರು ಹೇಳಿದರು.
ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತಂತೆ ನಂತರ ಕೇಳಲಾದ ಮತ್ತೊಂದು ಪ್ರಶ್ನೆಗೂ ಉತ್ತರಿಸಿದ ರಾಹುಲ್ ಗಾಂಧಿ, ಬಿಜೆಪಿಯ ಹಿರಿಯ ಸಚಿವರೂ ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡರು. ”ಬಿಜೆಪಿಯ ಹಿರಿಯ ಸಚಿವರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರು ನಮಗೆ ಮಾಹಿತಿಗಳನ್ನು ನೀಡುತ್ತಿದ್ದಾರೆ” ಎಂದು ಅವರು ತಿಳಿಸಿದರು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುತ್ತೇವೆ
ಭಾರತೀಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತನಾಡಿದ ರಾಹುಲ್ ಗಾಂಧಿ, ”ಭಾರತೀಯತೆಯ ಪ್ರಮುಖ ಅಂಶವೆಂದರೆ ನಮ್ಮ ಜನರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಸಾಮರ್ಥ್ಯ. ಅದೇ ರೀತಿ, ಅಮೆರಿಕದ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಅಮೆರಿಕನ್ ಅಸ್ಮಿತೆಯ ಪ್ರಮುಖ ಭಾಗವಾಗಿದೆ. ಭಾರತದ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ರಕ್ಷಿಸುತ್ತೇವೆ” ಎಂದು ಹೇಳಿದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement