ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ರಾಜಸ್ಥಾನ ಪಂಚಾಯತ್‌ ಸಮಿತಿ, ಜಿಲ್ಲಾ ಪರಿಷತ್‌ ಚುನಾವಣೆ : ಬಿಜೆಪಿಗೆ ಶಾಕ್‌ ನೀಡಿದ ಗ್ರಾಮೀಣ ಮತದಾರ; ಕಾಂಗ್ರೆಸ್ಸಿಗೆ ಭಾರೀ ಮುನ್ನಡೆ

ಜೈಪುರ: ಬಿಜೆಪಿ ಆಡಳಿತವಿರುವ ರಾಜಸ್ಥಾನದಲ್ಲಿ ನಡೆದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಗಮನಾರ್ಹ ಸಾಧನೆ ಮಾಡಿದೆ. ಪಂಚಾಯತ್‌ ಸಮಿತಿ ಹಾಗೂ ಜಿಲ್ಲಾ ಪರಿಷತ್‌ ಚುನಾವಣೆಗಳ ಫಲಿತಾಂಶದಲ್ಲಿ ಕಾಂಗ್ರೆಸ್‌ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದೆ.
ಶುಕ್ರವಾರ ಸಂಜೆಯವರೆಗೆ ಪ್ರಕಟವಾದ ಫಲಿತಾಂಶಗಳ ಪ್ರಕಾರ, ಪಂಚಾಯತ್‌ ಸಮಿತಿಯ 3,700ಕ್ಕೂ ಅಧಿಕ ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದುಕೊಂಡಿದ್ದರೆ, ಆಡಳಿತಾರೂಢ ಬಿಜೆಪಿಯ ಗೆಲುವಿನ ಸಂಖ್ಯೆ 2,200ಕ್ಕಿಂತ ಕಡಿಮೆಯಿದೆ. ಜಿಲ್ಲಾ ಪರಿಷತ್‌ ಚುನಾವಣೆಯಲ್ಲೂ ಕಾಂಗ್ರೆಸ್‌ 599 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 301 ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ವರದಿಗಳು ತಿಳಿಸಿವೆ.
ರಾಜ್ಯದ ಒಟ್ಟು 41 ಜಿಲ್ಲೆಗಳ ಪೈಕಿ 37 ಜಿಲ್ಲೆಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯಲ್ಲಿ, ಒಟ್ಟು 7,543 ಪಂಚಾಯತ್‌ ಸಮಿತಿ ಸ್ಥಾನಗಳ ಪೈಕಿ 7,393 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಅದೇ ರೀತಿ 1,275 ಜಿಲ್ಲಾ ಪರಿಷತ್‌ ಸ್ಥಾನಗಳ ಪೈಕಿ 981 ಸ್ಥಾನಗಳ ಫಲಿತಾಂಶ ಹೊರಬಿದ್ದಿದೆ. ಕೋಟಾ, ಬಾರನ್‌, ಕರೌಲಿ ಮತ್ತು ಶ್ರೀಗಂಗಾನಗರ ಜಿಲ್ಲೆಗಳ ಮತ ಎಣಿಕೆಯನ್ನು ಡಿಸೆಂಬರ್‌ 17ಕ್ಕೆ ಮುಂದೂಡಲಾಗಿದೆ. ಈ ಜಿಲ್ಲೆಗಳಲ್ಲಿನ ಹಾಲಿ ಸ್ಥಳೀಯ ಸಂಸ್ಥೆಗಳ ಐದು ವರ್ಷಗಳ ಅಧಿಕಾರಾವಧಿ ಮುಂದಿನ ತಿಂಗಳು ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಮತ ಎಣಿಕೆಯನ್ನು ಮುಂದೂಡಲಾಗಿದೆ.

ಪಂಚಾಯತ್‌ ಸಮಿತಿ ಚುನಾವಣೆಯಲ್ಲಿ 37 ಜಿಲ್ಲೆಗಳ ಪೈಕಿ ಕಾಂಗ್ರೆಸ್‌ 33 ಜಿಲ್ಲೆಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯು ಅಜ್ಮೇರ್‌, ಬಾಲೋತ್ರಾ, ಸಲೂಂಬರ್‌ ಮತ್ತು ಉದಯಪುರ ಜಿಲ್ಲೆಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಜಿಲ್ಲಾ ಪರಿಷತ್‌ ಚುನಾವಣೆಯಲ್ಲೂ ಕಾಂಗ್ರೆಸ್‌ 24 ಜಿಲ್ಲೆಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಆರು ಜಿಲ್ಲೆಗಳಲ್ಲಿ ಮುನ್ನಡೆ ಪಡೆದಿದೆ.
ಇತರ ಪಕ್ಷಗಳ ಪೈಕಿ ಹನುಮಾನ್‌ ಬೇನಿವಾಲ್‌ ನೇತೃತ್ವದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ) 496 ಪಂಚಾಯತ್‌ ಸಮಿತಿ ಸ್ಥಾನಗಳನ್ನು ಗೆದ್ದಿದೆ. ಈ ಪಕ್ಷ ಈ ಹಿಂದೆ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟ ಎರಡರೊಂದಿಗೂ ಮೈತ್ರಿ ಮಾಡಿಕೊಂಡಿತ್ತು. ಭಾರತ್‌ ಆದಿವಾಸಿ ಪಾರ್ಟಿ (ಬಿಎಪಿ) 276, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 60, ಸಿಪಿಐ(ಎಂ) 50 ಮತ್ತು ಆಮ್‌ ಆದ್ಮಿ ಪಕ್ಷ ಎರಡು ಸ್ಥಾನಗಳನ್ನು ಗೆದ್ದಿವೆ. ಪಕ್ಷೇತರ ಅಭ್ಯರ್ಥಿಗಳು ಒಟ್ಟು 627 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಸಚಿವರ ಕಚೇರಿ ಬಳಿ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ದಾವೂದ್ ಇಬ್ರಾಹಿಂ ಆಪ್ತ ಎನ್‌ಕೌಂಟರ್‌ನಲ್ಲಿ ಹತ

ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶಕ್ಕೆ ತದ್ವಿರುದ್ಧ ಗ್ರಾಮೀಣ ತೀರ್ಪು
ರಾಜಸ್ಥಾನದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಕ್ಕೆ ಹೋಲಿಸಿದರೆ, ಇದೀಗ ಗ್ರಾಮೀಣ ಪ್ರದೇಶದ ಮತದಾರರು ನೀಡಿರುವ ತೀರ್ಪು ವಿಭಿನ್ನವಾಗಿದೆ. ಸೆಪ್ಟೆಂಬರ್‌ನಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 10 ಮಹಾನಗರ ಪಾಲಿಕೆಗಳ ಪೈಕಿ ಒಂಬತ್ತು ಕಡೆ ಮೇಯರ್‌ ಸ್ಥಾನವನ್ನು ಗೆದ್ದುಕೊಂಡಿತ್ತು. ಅಲ್ಲದೆ, ಒಟ್ಟು 204 ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಗಳನ್ನು ರಚಿಸಿತ್ತು. ಕಾಂಗ್ರೆಸ್‌ 96 ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಆಡಳಿತ ಮಂಡಳಿ ರಚಿಸುವಲ್ಲಿ ಯಶಸ್ವಿಯಾಗಿತ್ತು.
ಇದರ ನಡುವೆ, ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಭಜನ್‌ಲಾಲ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಪೂರ್ಣಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಮಹತ್ವ ಪಡೆದುಕೊಂಡಿದೆ.
2020ರ ಡಿಸೆಂಬರ್‌ನಲ್ಲಿ ನಡೆದ ಹಿಂದಿನ ಪಂಚಾಯತ್‌ ರಾಜ್‌ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಆಗ 21 ಜಿಲ್ಲೆಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 1,989 ಪಂಚಾಯತ್‌ ಸಮಿತಿ ಸ್ಥಾನಗಳನ್ನು ಗೆದ್ದಿದ್ದರೆ, ಅಂದಿನ ಆಡಳಿತಾರೂಢ ಕಾಂಗ್ರೆಸ್‌ 1,852 ಸ್ಥಾನಗಳನ್ನು ಪಡೆದುಕೊಂಡಿತ್ತು.

ಪ್ರಮುಖ ಸುದ್ದಿ :-   ಮಹಿಳಾ ಇನ್‌ಫ್ಲುಯೆನ್ಸರ್‌ ಮನೆಗೆ ನುಗ್ಗಿ ತನ್ನನ್ನು ಮದುವೆಯಾಗುವಂತೆ ಹಠ ಹಿಡಿದ ಅಭಿಮಾನಿ ; ಥಳಿಸಿದ ಕುಟುಂಬ ; ವ್ಯಕ್ತಿ ಸಾವು

ಜನಾದೇಶ ಒಪ್ಪಿಕೊಂಡ ಬಿಜೆಪಿ; ಆಂತರಿಕ ಪರಿಶೀಲನೆಗೆ ನಿರ್ಧಾರ
ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್‌ ರಾಥೋಡ್‌, ಜನರು ನೀಡಿರುವ ತೀರ್ಪನ್ನು ಪಕ್ಷ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ. ಮುಂದಿನ ರಾಜಕೀಯ ಕಾರ್ಯತಂತ್ರ ರೂಪಿಸುವ ಮೊದಲು ಚುನಾವಣಾ ಫಲಿತಾಂಶದ ಕುರಿತು ಆಂತರಿಕ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ದೇಶದಲ್ಲಿ ಚುನಾವಣೆಗಳನ್ನು ಅಕ್ರಮವಾಗಿ ನಿಯಂತ್ರಿಸಲಾಗುತ್ತಿದೆ ಎಂಬ ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಕೂಡ ರಾಥೋಡ್‌ ಟೀಕಿಸಿದ್ದಾರೆ.
“ಈಗ ಕಾಂಗ್ರೆಸ್‌ ಇವಿಎಂಗಳಲ್ಲಿ ಯಾವುದೇ ರೀತಿಯ ತಿರುಚುವಿಕೆ ಸಾಧ್ಯವಿಲ್ಲ, ಮತಗಳ ಕಳ್ಳತನ ನಡೆಯುವುದಿಲ್ಲ ಮತ್ತು ಚುನಾವಣಾ ಆಯೋಗವು ಬಾಹ್ಯ ಒತ್ತಡದ ಅಡಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು” ಎಂದು ರಾಥೋಡ್‌ ಹೇಳಿದ್ದಾರೆ.
ಇದೇ ವೇಳೆ, ಬಿಜೆಪಿಯ ವಕ್ತಾರ ರಾಮಲಾಲ ಶರ್ಮಾ ಕೂಡ ಚುನಾವಣೆಯಲ್ಲಿ ಪಕ್ಷದ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಫಲಿತಾಂಶಗಳ ಕುರಿತು ಪರಿಶೀಲನೆ ನಡೆಸಿ, ಪಕ್ಷದ ಲೋಪದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement