ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಮಹಿಳಾ ಇನ್‌ಫ್ಲುಯೆನ್ಸರ್‌ ಮನೆಗೆ ನುಗ್ಗಿ ತನ್ನನ್ನು ಮದುವೆಯಾಗುವಂತೆ ಹಠ ಹಿಡಿದ ಅಭಿಮಾನಿ ; ಥಳಿಸಿದ ಕುಟುಂಬ ; ವ್ಯಕ್ತಿ ಸಾವು

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾಗಿದ್ದ ಮಹಿಳಾ ಇನ್‌ಫ್ಲುಯೆನ್ಸರ್‌ ಒಬ್ಬರನ್ನು ಮದುವೆಯಾಗಲೇಬೇಕು ಎಂದು ಒತ್ತಾಯಿಸಿ ಆಕೆಯ ಮನೆಗೆ ಬಲವಂತವಾಗಿ ನುಗ್ಗಿದ ಯುವಕನೊಬ್ಬ ಆಕೆಯ ಕುಟುಂಬಸ್ಥರು ಹಾಗೂ ನೆರೆಮನೆಯವರ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು, ವಾರದ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧ ಮಹಿಳಾ ಇನ್‌ಫ್ಲುಯೆನ್ಸರ್‌ ತಂದೆ ಹಾಗೂ ನೆರೆಮನೆಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚೆನ್ನೈನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಗಾಜಿಪುರ ಮೂಲದ ಅಭಿನವ್ ಎಂಬಾತ ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ನವೆಂಬರ್ 7ರಂದು ದೆಹಲಿಯ ಪೂರ್ವ ಭಾಗದ ಮಧು ವಿಹಾರದಲ್ಲಿರುವ ಮಹಿಳಾ ಇನ್‌ಫ್ಲುಯೆನ್ಸರ್‌ ಅವರ ಮನೆಗೆ ಆತ ಬಲವಂತವಾಗಿ ನುಗ್ಗಿದ್ದ. ಆ ಸಂದರ್ಭದಲ್ಲಿ ಮಹಿಳೆ ಮನೆಯಲ್ಲಿಯೇ ಇದ್ದರು. ತನ್ನನ್ನು ಮದುವೆಯಾಗಬೇಕು ಎಂದು ಅವರನ್ನು ಆತ ಒತ್ತಾಯಿಸಿದ್ದ ಎನ್ನಲಾಗಿದೆ.
ಮರುದಿನ ದಾಖಲಾದ ಎಫ್‌ಐಆರ್‌ನಲ್ಲಿ, ಅಭಿನವ್ ಮದ್ಯದ ಅಮಲಿನಲ್ಲಿದ್ದ ಎಂದು ಉಲ್ಲೇಖಿಸಲಾಗಿದೆ. ಆತನ ವರ್ತನೆಯಿಂದ ಆಕ್ರೋಶಗೊಂಡ ಮಹಿಳೆಯ ಕುಟುಂಬದ ಸದಸ್ಯರು ಹಾಗೂ ಕೆಲ ನೆರೆಮನೆಯವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ರಾಜಸ್ಥಾನ ಪಂಚಾಯತ್‌ ಸಮಿತಿ, ಜಿಲ್ಲಾ ಪರಿಷತ್‌ ಚುನಾವಣೆ : ಬಿಜೆಪಿಗೆ ಶಾಕ್‌ ನೀಡಿದ ಗ್ರಾಮೀಣ ಮತದಾರ; ಕಾಂಗ್ರೆಸ್ಸಿಗೆ ಭಾರೀ ಮುನ್ನಡೆ

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಆತನ ಬೆನ್ನು ಹಾಗೂ ಬಲಗಾಲಿನ ಭಾಗದಲ್ಲಿ ಗಂಭೀರ ಗಾಯಗಳಾಗಿರುವುದನ್ನು ಗಮನಿಸಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಒಂದು ವಾರ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ನವೆಂಬರ್ 15ರಂದು ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಅಭಿನವ್, ಮಹಿಳಾ ಇನ್‌ಫ್ಲುಯೆನ್ಸರ್‌ ಅವರಸಾಮಾಜಿಕ ಜಾಲತಾಣದ ಖಾತೆಗಳನ್ನು ನಿರಂತರವಾಗಿ ಅನುಸರಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಆಕೆಯ ಇನ್‌ಸ್ಟಾಗ್ರಾಂನಲ್ಲಿ ಪ್ರಕಟವಾಗುತ್ತಿದ್ದ ವಿಡಿಯೊಗಳನ್ನು ನಿಯಮಿತವಾಗಿ ವೀಕ್ಷಿಸುತ್ತಿದ್ದ ಆತ, ಕ್ರಮೇಣ ಆಕೆಯ ಬಗ್ಗೆ ಏಕಮುಖ ಪ್ರೀತಿಯನ್ನು ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಅಭಿಮಾನಿ ಎಂಬ ನೆಪದಲ್ಲಿ ಕೆಲವು ತಿಂಗಳ ಹಿಂದೆಯೂ ಆತ ಆಕೆಯ ಮನೆಗೆ ಭೇಟಿ ನೀಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಮಹಿಳಾ ಇನ್‌ಫ್ಲುಯೆನ್ಸರ್‌ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಆರು ಲಕ್ಷಕ್ಕೂ ಅಧಿಕ ಫಾಲೊವರ್ಸ್‌ ಇದ್ದಾರೆ. ಆಕೆ ಪ್ರಕಟಿಸುವ ಪ್ರತಿಯೊಂದು ರೀಲ್ಸ್‌ಗೂ ಲಕ್ಷಾಂತರ ವೀಕ್ಷಣೆಗಳು ದೊರೆಯುತ್ತವೆ. ಇತ್ತೀಚಿನ ದಿನಗಳಲ್ಲಿ ತನ್ನ ಮದುವೆ ನಿಶ್ಚಿತಾರ್ಥದ ವಿಡಿಯೊಗಳು ಹಾಗೂ ಮುಂಬರುವ ಮದುವೆಗೆ ಸಂಬಂಧಿಸಿದ ವಿಷಯಗಳನ್ನು ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಪ್ರಮುಖ ಸುದ್ದಿ :-   40 ವರ್ಷ ಒಂಟಿಯಾಗಿ ಬದುಕಿ ಮೃತಪಟ್ಟ ಮಹಿಳೆ..ಪುತ್ರಿಯರಿಗಾಗಿ ಹುಡುಕಾಟ..ಅಮ್ಮನ ವಿದಾಯಕ್ಕೆ ಯಾರೂ ಇಲ್ಲ : ಕಣ್ಣೀರು ತರಿಸುವ ಮರಣದ ಪ್ರಕಟಣೆ

ಆದರೆ, ಆಕೆಯ ಮದುವೆ ಬೇರೊಬ್ಬ ಯುವಕನೊಂದಿಗೆ ನಿಶ್ಚಯವಾಗಿರುವ ವಿಚಾರ ಅಭಿನವ್‌ಗೆ ಅಸಮಾಧಾನ ಉಂಟುಮಾಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಗೆ ಅಭಿನವ್ ಯಾರು ಎಂಬುದೇ ತಿಳಿದಿರಲಿಲ್ಲ. ಆಕೆಯ ಪರಿಚಯವೂ ಇಲ್ಲದಿದ್ದರೂ ಆಕೆ ತನ್ನನ್ನು ಮದುವೆಯಾಗಬೇಕೆಂದು ಹಠ ಹಿಡಿದು ಮನೆಗೆ ನುಗ್ಗಿದ್ದ ಎನ್ನಲಾಗಿದೆ.
ಅಭಿನವ್ ಮೃತಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಕೊಲೆ ಉದ್ದೇಶವಿಲ್ಲದ ಹತ್ಯೆ (Culpable Homicide) ಪ್ರಕರಣವಾಗಿ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಮಹಿಳಾ ಇನ್‌ಫ್ಲುಯೆನ್ಸರ್‌ ತಂದೆ ಹಾಗೂ ನೆರೆಮನೆಯ ವ್ಯಕ್ತಿಯನ್ನು ಬಂಧಿಸಲಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಹಲ್ಲೆಯಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಗುರುತಿಸಿ ಬಂಧಿಸುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಪ್ರಕರಣದ ಇತರೆ ಆಯಾಮಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement