

ನವದೆಹಲಿ: ಬಿಜೆಪಿಯ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೋರ್ಚಾಕ್ಕೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ರಾಷ್ಟ್ರೀಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ ಹೊಸಬರಿಗೆ ಜವಾಬ್ದಾರಿ ವಹಿಸಲಾಗಿದೆ. ಈ ನೇಮಕಾತಿಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರು ಘೋಷಿಸಿದ್ದು, ಪಕ್ಷದ ಕೇಂದ್ರ ಕಚೇರಿ ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.
ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಅವರು ಶನಿವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಒಬಿಸಿ (ಇತರೆ ಹಿಂದುಳಿದ ವರ್ಗಗಳ) ಮೋರ್ಚಾದ ನೂತನ ಕಾರ್ಯಕಾರಿ ಸಮಿತಿಗೆ ಅವರನ್ನು ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಬಿಜೆಪಿ ತನ್ನ ಒಬಿಸಿ ಮೋರ್ಚಾದ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಉತ್ತರ ಪ್ರದೇಶದ ರಾಜ್ಯಸಭಾ ಸದಸ್ಯ ಅಮರಪಾಲ್ ಮೌರ್ಯ ಅವರು ಚಹಲ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಅಮರ ಪಾಲ ಮೌರ್ಯ ಅವರ ಸಹಿ ಇರುವ ಪಟ್ಟಿಯಲ್ಲಿ, ಒಡಿಶಾದ ಪ್ರಾಧ್ಯಾಪಕ ಅದ್ವೈತ ಚರಣ ಗಡನಾಯಕ ಮತ್ತು ಉತ್ತರ ಪ್ರದೇಶದ ವಕೀಲೆ ಸೀಮಾ ಸಮೃದ್ಧಿ ಕುಶ್ವಾಹ ಅವರ ಹೆಸರುಗಳೂ ರಾಷ್ಟ್ರೀಯ ಕಾರ್ಯಕಾರಿಣಿಗೆ ವಿಶೇಷ ಆಹ್ವಾನಿತರಾಗಿ ಸೇರಿವೆ.
ನೂತನ ನೇಮಕಾತಿಯಲ್ಲಿ ಕರ್ನಾಟಕದ ಮಾಜಿ ಸಚಿವ ಪ್ರಮೋದ ಮಧ್ವರಾಜ್ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಇವರ ಜೊತೆ ದೆಹಲಿಯ ಗಜೇಂದ್ರ ಯಾದವ್ ಮತ್ತು ಛತ್ತೀಸ್ಗಢದ ಲಲಿತ್ ಚಂದ್ರಾಕರ್ ಅವರನ್ನೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.
ರಾಷ್ಟ್ರೀಯ ಉಪಾಧ್ಯಕ್ಷರಾಗಿ ಅಸ್ಸಾಂನ ಜೋಗೇನ್ ಮೋಹನ, ಒಡಿಶಾದ ಮಮತಾ ಮೊಹಾಂತ, ಉತ್ತರ ಪ್ರದೇಶದ ಸಂಗಮ್ ಲಾಲ ಗುಪ್ತಾ, ಮಹಾರಾಷ್ಟ್ರದ ಬಬನ್ರಾವ್ ರಾವ್ಜಿ ಚೌಧರಿ, ದೆಹಲಿಯ ಸತ್ ಪ್ರಕಾಶ ರಾಣಾ, ಬಿಹಾರದ ಅರ್ಜುನ ಸಹಾನಿ ಹಾಗೂ ಉತ್ತರ ಪ್ರದೇಶದ ಸಂಗೀತಾ ಬಲವಂತ ಬಿಂದ್ ಅವರನ್ನು ನೇಮಕ ಮಾಡಲಾಗಿದೆ.
ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಗುಜರಾತಿನ ದಶರಥಜಿ ಠಾಕೋರ್, ತಮಿಳುನಾಡಿನ ಟಿ. ವರದರಾಜನ್, ಜಾರ್ಖಂಡದ ಸಂಜೀವಕುಮಾರ ಅಲಿಯಾಸ್ ಬಬ್ಲು ಭಗತ್, ಹರಿಯಾಣದ ಸರಿತಾ ಜಾಂಗಿಡ್, ತೆಲಂಗಾಣದ ಕಾಡಗಂಚಿ ರಮೇಶ, ಮಧ್ಯಪ್ರದೇಶದ ವೈಭವ ಪನ್ವಾರ್ ಹಾಗೂ ಬಿಹಾರದ ಭೀಮಕುಮಾರ ಸಾಹು ಅವರನ್ನು ನೇಮಕ ಮಾಡಲಾಗಿದೆ.


ಉತ್ತರ ಪ್ರದೇಶದ ರಾಧೇಶ್ಯಾಮ ಯಾದವ್ ಅವರಿಗೆ ರಾಷ್ಟ್ರೀಯ ಖಜಾಂಚಿ ಹುದ್ದೆ ನೀಡಲಾಗಿದೆ. ದೆಹಲಿಯ ಸಂಜಯಕುಮಾರ ಗುರ್ಜರ್ ಅವರನ್ನು ರಾಷ್ಟ್ರೀಯ ಕಚೇರಿ ಕಾರ್ಯದರ್ಶಿಯಾಗಿ ಹಾಗೂ ಡಾ. ಅರುಣ ಯಾದವ್ ಅವರನ್ನು ಸಹ ಕಚೇರಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಬಿಹಾರದ ಅಜಯ ಗುಪ್ತಾ ಅವರಿಗೆ ಮಾಧ್ಯಮ ಸಂಯೋಜಕರ ಜವಾಬ್ದಾರಿ ವಹಿಸಲಾಗಿದೆ. ದೆಹಲಿಯ ಪರೀಕ್ಷಿತ ದಾಗರ್ ಅವರು ಸಾಮಾಜಿಕ ಮಾಧ್ಯಮ ತಂಡದ ಸಂಯೋಜಕರಾಗಿ ಕಾರ್ಯನಿರ್ವಹಿಸಲಿದ್ದು, ಮಧ್ಯಪ್ರದೇಶದ ಪ್ರದೀಪ ಮಹೌರ್ ಸೋನಿ ಅವರನ್ನು ಸಹ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.
ನೀತಿ ಮತ್ತು ಸಂಶೋಧನಾ ವಿಭಾಗದ ರಾಷ್ಟ್ರೀಯ ಸಂಯೋಜಕರಾಗಿ ದೆಹಲಿಯ ಪ್ರೊ. ಪಂಕಜ ಚೌಧರಿ ಅವರನ್ನು ನೇಮಕ ಮಾಡಲಾಗಿದೆ. ಒಡಿಶಾದ ಆಶುತೋಷ ಬೆಹೆರಾ ಹಾಗೂ ಉತ್ತರ ಪ್ರದೇಶದ ರಾಹುಲ್ ಯಾದವ್ ಅವರನ್ನು ಈ ವಿಭಾಗದ ಸಹ ಸಂಯೋಜಕರನ್ನಾಗಿ ನೇಮಿಸಲಾಗಿದೆ.
ಇದೇ ವೇಳೆ, ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರ ಆರಂಭಿಕ ಪಟ್ಟಿಯನ್ನೂ ಪಕ್ಷ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಂಜೀವ ರಂಗಯ್ಯ, ಆಂಧ್ರಪ್ರದೇಶದ ಶ್ರೀನಿವಾಸ ರಾವ್ ಕಾಂಟುಬುಕ್ತ, ಬಿಹಾರದ ರಾಜೀವ ರಂಜನ್ ಅಲಿಯಾಸ್ ವಿಶಾಲ ಯಾದವ್ ಹಾಗೂ ಚಂಡೀಗಢದ ಸಂಜೀವ ವರ್ಮಾ ಸೇರಿದಂತೆ ವಿವಿಧ ರಾಜ್ಯಗಳ ಮುಖಂಡರಿಗೆ ಸ್ಥಾನ ನೀಡಲಾಗಿದೆ.
ಒಬಿಸಿ ಮೋರ್ಚಾದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ಈ ಹೊಸ ಪದಾಧಿಕಾರಿಗಳ ನೇಮಕಾತಿ ಪ್ರಕಟಿಸಿದ್ದು, ವಿವಿಧ ರಾಜ್ಯಗಳ ಮುಖಂಡರಿಗೆ ರಾಷ್ಟ್ರೀಯ ಮಟ್ಟದಲ್ಲಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದೆ.



ನಿಮ್ಮ ಕಾಮೆಂಟ್ ಬರೆಯಿರಿ