ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಮಕ್ಕಳ ಆಟದ ನೋಟು ನೀಡಿ ವ್ಯಾಪಾರಿಗೆ 40 ಲಕ್ಷ ರೂ. ವಂಚನೆ ; ಪ್ರತಿತಂತ್ರದಿಂದ ವಂಚಕರನ್ನೇ ಖೆಡ್ಡಾಕ್ಕೆ ಬೀಳಿಸಿದ ವ್ಯಾಪಾರಿ ಕುಟುಂಬ !

ಅಸಲಿ ನೋಟುಗಳಂತೆಯೇ ಕಾಣುವ ಹಣದ ಕಂತೆಗಳು… ಬ್ಯಾಂಕ್‌ಗಳಲ್ಲಿ ಹಣವನ್ನು ಪ್ಯಾಕ್ ಮಾಡಲು ಬಳಸುವ ಪಟ್ಟಿಗಳಿಂದಲೇ ಸುತ್ತಿ ಸಿದ್ಧಪಡಿಸಿದ್ದ ನೋಟಿನ ಬಂಡಲ್‌ಗಳು… ಆದರೆ ಆ ಕಂತೆಗಳ ಒಳಗೆ ಇದ್ದದ್ದು ಮಾತ್ರ ಮಕ್ಕಳ ಆಟವಾಡಲು ಬಳಸುವ ನಕಲಿ ನೋಟುಗಳು! ಇಂತಹ ತಂತ್ರ ಬಳಸಿ ಗುಜರಾತ್‌ನ ಮಸಾಲೆ ವ್ಯಾಪಾರಿಯೊಬ್ಬರಿಗೆ ಬರೋಬ್ಬರಿ 40 ಲಕ್ಷ ರೂ. ವಂಚನೆ ಮಾಡಿದ ಘಟನೆ ನಡೆದಿದೆ. ಕಡಿಮೆ ಕಮಿಷನ್‌ಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಗದು ಹಣ ತಲುಪಿಸುವುದಾಗಿ ನಂಬಿಸಿ, ನಕಲಿ ಅಂಗಡಿಯಾ (ನಗದು ಸಾಗಣೆ) ಸಂಸ್ಥೆಯೊಂದರ ಹೆಸರಿನಲ್ಲಿ ವ್ಯಾಪಾರಿಗೆ ಈ ವಂಚನೆ ನಡೆಸಲಾಗಿದೆ.
ಬ್ಯಾಂಕ್‌ನಿಂದಲೇ ಪ್ಯಾಕ್ ಮಾಡಿದಂತೆ ಕಾಣುವ ನೋಟುಗಳ ಕಂತೆಗಳನ್ನು ನೀಡಿ ವ್ಯಾಪಾರಿಗಳಿಂದ ಅಸಲಿ ಹಣವನ್ನು ಪಡೆದುಕೊಂಡಿದ್ದ ವಂಚಕರಿಗೆ, ಕೊನೆಗೆ ವ್ಯಾಪಾರಿ ಕುಟುಂಬವೇ ತಿರುಮಂತ್ರ ಪ್ರಯೋಗಿಸಿದೆ. 40 ಲಕ್ಷ ರೂ. ಕಳೆದುಕೊಂಡರೂ ಸುಮ್ಮನೆ ಕೂರದ ಕುಟುಂಬ, ಅದೇ ವಂಚಕರನ್ನು ಮತ್ತೊಂದು ವ್ಯವಹಾರದ ಆಮಿಷವೊಡ್ಡಿ ಖೆಡ್ಡಾಕ್ಕೆ ಕೆಡಹಿದೆ. 10 ಲಕ್ಷ ರೂ. ವರ್ಗಾವಣೆ ಮಾಡುವ ನೆಪದಲ್ಲಿ ಬೇರೊಬ್ಬರ ಹೆಸರಿನಲ್ಲಿ ಅದೇ ವಂಚಕರನ್ನು ಸಂಪರ್ಕಿಸಿದ ಕುಟುಂಬವು ನಂತರ ಪೊಲೀಸರ ನೆರವಿನಿಂದ ಬಲೆ ಬೀಸಿದೆ. ಕಾರ್ಯಾಚರಣೆಯಲ್ಲಿ ಅಹಮದಾಬಾದ್‌ನಲ್ಲಿ ಇಬ್ಬರು ಆರೋಪಿಗಳು ಹಾಗೂ ಕರ್ನಾಟಕದಲ್ಲಿ ಹಣ ಸ್ವೀಕರಿಸಲು ಕಾಯುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೂಗಲ್ ಮೂಲಕ ಪ್ರಚಾರ ಮಾಡಿಕೊಂಡಿದ್ದ ನಕಲಿ ಸಂಸ್ಥೆ
ದೆಹಲಿ ಮೂಲದ ವ್ಯಕ್ತಿಗಳು ನಡೆಸುತ್ತಿದ್ದ ಈ ವಂಚಕ ಜಾಲವು ‘ಅಂಗಡಿಯಾ’ ಎಂಬ ಹೆಸರಿನಲ್ಲಿ ಕಾಲ್ಪನಿಕ ಸಂಸ್ಥೆಯೊಂದನ್ನು ಸೃಷ್ಟಿಸಿತ್ತು. ಗೂಗಲ್ ಮೂಲಕ ಕಡಿಮೆ ವೆಚ್ಚದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಗದು ಹಣ ವರ್ಗಾವಣೆ ಸೇವೆ ಒದಗಿಸುವುದಾಗಿ ಅದು ಆನ್‌ಲೈನ್‌ನಲ್ಲಿ ಪ್ರಚಾರ ಮಾಡುತ್ತಿತ್ತು. ಸಾಮಾನ್ಯವಾಗಿ ಇಂತಹ ಹಣ ವರ್ಗಾವಣೆ ಸೇವೆಗಳಿಗೆ ಹೆಚ್ಚಿನ ಕಮಿಷನ್ ಪಾವತಿಸಬೇಕಾಗಿರುವುದರಿಂದ, ಕಡಿಮೆ ಶುಲ್ಕದಲ್ಲಿ ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವುದಾಗಿ ನೀಡಿದ್ದ ಆಮಿಷಕ್ಕೆ ವ್ಯಾಪಾರಿ ಕುಟುಂಬ ಮರುಳಾಗಿತ್ತು.
ನಾಗಪುರದಿಂದ ಗುಜರಾತ್‌ನ ಉಂಜಾಕ್ಕೆ 40 ಲಕ್ಷ ರೂ. ವರ್ಗಾಯಿಸುವ ಉದ್ದೇಶದಿಂದ ಬಿಬಿ ಟ್ರೇಡರ್ಸ್ ಸಂಸ್ಥೆಯ ಕುಟುಂಬ ಸದಸ್ಯರು ನವೆಂಬರ್ 16ರಂದು ಈ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಮಾತುಕತೆಯಂತೆ ಮರುದಿನವೇ ಇಬ್ಬರು ಕೊರಿಯರ್‌ಗಳು ಉಂಜಾದ ಶಾಕ್ ಮಾರ್ಕೆಟ್ ಸಮೀಪ ವ್ಯಾಪಾರಿಯ ಸಂಬಂಧಿಕರನ್ನು ಭೇಟಿಯಾಗಿದ್ದಾರೆ. ಹಾಗೂ ಅವರಿಗೆ ಎಂಟು ಕಂತೆಗಳಿದ್ದ ಒಂದು ಚೀಲವನ್ನು ಅವರಿಗೆ ಹಸ್ತಾಂತರಿಸಿದ್ದಾರೆ.
ಪ್ರತಿಯೊಂದು ಕಂತೆಯನ್ನೂ ಬ್ಯಾಂಕ್‌ಗಳಲ್ಲಿ ಹಣವನ್ನು ಸುತ್ತಿಡಲು ಬಳಸುವ ಪಟ್ಟಿಗಳಿಂದ ಬಿಗಿಯಾಗಿ ಕಟ್ಟಲಾಗಿತ್ತು. ಅಷ್ಟೇ ಅಲ್ಲ, ಪ್ರತಿ ಕಂತೆಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಅಸಲಿ ನೋಟುಗಳನ್ನೂ ಇರಿಸಲಾಗಿತ್ತು. ಹೀಗಾಗಿ ಹಣದ ಕಂತೆಗಳನ್ನು ನೋಡಿದಾಗ ಅವು ಸಂಪೂರ್ಣ ಅಸಲಿಯೇ ಎಂಬ ಭಾವನೆ ಮೂಡುವಂತಿತ್ತು. ವಂಚಕರು ಎಷ್ಟು ವ್ಯವಸ್ಥಿತವಾಗಿ ಈ ನಕಲಿ ನೋಟುಗಳ ಕಂತೆಗಳನ್ನು ಸಿದ್ಧಪಡಿಸಿದ್ದರು ಎಂದರೆ, ಮೇಲ್ನೋಟಕ್ಕೆ ಅವುಗಳನ್ನು ಅನುಮಾನಿಸುವುದಕ್ಕೂ ಸಾಧ್ಯವಿರಲಿಲ್ಲ.

ಇದನ್ನು ನಂಬಿದ ಉಂಜಾದ ವ್ಯಾಪಾರಿ ಕುಟುಂಬ, ನಾಗಪುರದಲ್ಲಿದ್ದ ತಮಗೆ ಹಣಕೊಡಬೇಕಾದ ವ್ಯಕ್ತಿಗೆ ಹಣ ತಲುಪಿರುವುದಾಗಿ ಮಾಹಿತಿ ನೀಡಿದೆ. ನಂತರ ನಾಗಪುರದ ವ್ಯಕ್ತಿಯು ವಂಚಕರ ಗುಂಪಿನ ಸ್ಥಳೀಯ ವ್ಯಕ್ತಿಗೆ 40 ಲಕ್ಷ ರೂ. ನಗದು ಹಣವನ್ನು ಹಸ್ತಾಂತರಿಸಿದ್ದಾರೆ. ಹೀಗೆ ಒಂದೆಡೆ ನಕಲಿ ನೋಟುಗಳ ಕಂತೆಗಳನ್ನು ಕೊಟ್ಟು, ಮತ್ತೊಂದೆಡೆ ಅಸಲಿ ಹಣವನ್ನು ಪಡೆದು ವಂಚಿಸಲಾಗಿತ್ತು.
ಆದರೆ, ಹಣದ ಕಂತೆಗಳ ಮೇಲಿದ್ದ ಪಟ್ಟಿಗಳನ್ನು ತೆಗೆದು ಒಳಗಿನ ನೋಟುಗಳನ್ನು ಪರಿಶೀಲಿಸಿದಾಗ ಅಸಲಿ ಬಣ್ಣ ಬಯಲಾಗಿದೆ. ಅಸಲಿ ನೋಟುಗಳ ನಡುವೆ ಮಕ್ಕಳ ಆಟದ ನೋಟುಗಳನ್ನು ತುಂಬಿಸಲಾಗಿತ್ತು. ಹೊರಭಾಗದಲ್ಲಿ ಅಸಲಿ ನೋಟುಗಳನ್ನು ಇಟ್ಟು, ಒಳಭಾಗದಲ್ಲಿ ನಕಲಿ ನೋಟುಗಳನ್ನು ಜೋಡಿಸುವ ಮೂಲಕ ವಂಚಕರು ವ್ಯಾಪಾರಿಗಳ ಕಣ್ಣಿಗೆ ಮಣ್ಣೆರಚಿದ್ದರು. 40 ಲಕ್ಷ ರೂ.ಗಳನ್ನು ಕಳೆದುಕೊಂಡಿರುವುದು ಗೊತ್ತಾಗುತ್ತಿದ್ದಂತೆಯೇ ಕುಟುಂಬಕ್ಕೆ ಆಘಾತ ಉಂಟಾಯಿತು.

ಪ್ರಮುಖ ಸುದ್ದಿ :-   ಬಿಜೆಪಿ ಸೇರಿದ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ; ರಾಷ್ಟ್ರೀಯ ಒಬಿಸಿ ಮೋರ್ಚಾದಲ್ಲಿ ವಿಶೇಷ ಆಹ್ವಾನಿತರಾಗಿ ನೇಮಕ

ವಂಚಕರಿಗೇ ಬಲೆ ಬೀಸಿದ ವ್ಯಾಪಾರಿ ಕುಟುಂಬ
40 ಲಕ್ಷ ರೂ. ಕಳೆದುಕೊಂಡ ಕುಟುಂಬವು ವಂಚಕರನ್ನು ಸುಮ್ಮನೆ ಬಿಡಲು ಸಿದ್ಧವಿರಲಿಲ್ಲ. ಹಣ ಕಳೆದುಕೊಂಡು ಕೈಚೆಲ್ಲಿ ಕೂರುವ ಬದಲು, ವಂಚಕರದ್ದೇ ತಂತ್ರವನ್ನು ಬಳಸಿ ಅವರನ್ನೇ ಬಲೆಗೆ ಬೀಳಿಸಲು ನಿರ್ಧರಿಸಿತು. ಇದಕ್ಕಾಗಿ ಕುಟುಂಬದ ಸದಸ್ಯರು ಹೊಸ ಗ್ರಾಹಕರಂತೆ ನಟಿಸಿ, ಅದೇ ನಕಲಿ ಅಂಗಡಿಯಾ ಸಂಸ್ಥೆಯನ್ನು ಮತ್ತೆ ಸಂಪರ್ಕಿಸಿದರು.
ಈ ಬಾರಿ ಅಹಮದಾಬಾದ್‌ನಿಂದ ಕರ್ನಾಟಕಕ್ಕೆ 10 ಲಕ್ಷ ರೂ. ನಗದು ಹಣ ವರ್ಗಾವಣೆ ಮಾಡಬೇಕಿದೆ ಎಂದು ಅವರು ವಂಚಕರ ಗುಂಪಿಗೆ ತಿಳಿಸಿದ್ದಾರೆ. ಮತ್ತೊಂದು ದೊಡ್ಡ ಮೊತ್ತದ ವ್ಯವಹಾರ ಸಿಗುತ್ತಿದೆ ಎಂಬ ಆಸೆಯಿಂದ ವಂಚಕರೂ ಇದಕ್ಕೆ ತಕ್ಷಣ ಒಪ್ಪಿಕೊಂಡಿದ್ದಾರೆ. 24 ಗಂಟೆಗಳ ಒಳಗಾಗಿ ಹಣ ತಲುಪಿಸುವುದಾಗಿ ಭರವಸೆ ನೀಡಿದ್ದಾರೆ.
ಈ ನಡುವೆ ನವೆಂಬರ್ 19ರ ರಾತ್ರಿ ಕುಟುಂಬದವರು ಅಹಮದಾಬಾದ್‌ನ ಘಾಟ್‌ಲೋಡಿಯಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ.ಜೆ. ಪಾಂಡ್ಯ ಅವರನ್ನು ಸಂಪರ್ಕಿಸಿ, ತಮಗೆ ನಡೆದಿರುವ ವಂಚನೆಯ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ವಂಚಕರನ್ನು ಹೇಗಾದರೂ ಮಾಡಿ ಹಿಡಿಯಲೇಬೇಕೆಂದು ನಿರ್ಧರಿಸಿದ್ದ ಕುಟುಂಬದ ಯೋಜನೆಗೆ ಪೊಲೀಸರು ಸಹಕರಿಸಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅಹಮದಾಬಾದ್‌ನ ಪರಾಸ್‌ನಗರ ಪೆಟ್ರೋಲ್ ಪಂಪ್ ಸಮೀಪ ಹೊಂಚು ಹಾಕಿ ಕುಳಿತಿದ್ದಾರೆ. ಸ್ವಲ್ಪ ಸಮಯದ ಬಳಿಕ ಇಬ್ಬರು ಹಣದ ಕಂತೆಗಳನ್ನು ಹಿಡಿದುಕೊಂಡು ಸ್ಥಳಕ್ಕೆ ಬಂದಿದ್ದಾರೆ. ಅವರು ಹಣದ ಕಂತೆಗಳನ್ನು ತೋರಿಸುತ್ತಿದ್ದಂತೆಯೇ ಸುತ್ತುವರಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಇದೇ ವೇಳೆ, ವಂಚಕರು ಇಲ್ಲಿ ನೀಡಿದ ಹಣದ ಬದಲಿಗೆ ಅಷ್ಟೇ ಮೊತ್ತದ ಹಣ ಸ್ವೀಕರಿಸಲು ಕರ್ನಾಟಕದಲ್ಲಿ ಕಾಯುತ್ತಿದ್ದ ಮೂರನೇ ಆರೋಪಿಯನ್ನೂ ಸ್ಥಳೀಯ ಪೊಲೀಸರ ನೆರವಿನಿಂದ ಏಕಕಾಲದಲ್ಲಿ ವಶಕ್ಕೆ ಪಡೆಯಲಾಗಿದೆ.
ಹೀಗೆ 40 ಲಕ್ಷ ರೂ. ಕಳೆದುಕೊಂಡಿದ್ದ ವ್ಯಾಪಾರಿ ಕುಟುಂಬ, ಅದೇ ವಂಚಕರಿಗೆ ಮತ್ತೊಂದು ವ್ಯವಹಾರದ ಆಮಿಷವೊಡ್ಡಿ ಪೊಲೀಸರ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ.

ದೆಹಲಿ ಮೂಲದ ಪ್ರಮುಖ ಆರೋಪಿಗಳಿಂದ ವಂಚಕ ಜಾಲದ ನಿರ್ವಹಣೆ
ಈ ವಂಚನೆಯ ಹಿಂದೆ ದೆಹಲಿ ಮೂಲದ ಪ್ರಮುಖ ಆರೋಪಿಗಳಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಹಮದಾಬಾದ್‌ನಲ್ಲಿ ಬಂಧಿತರಾದವರನ್ನು ದೆಹಲಿಯ 23 ವರ್ಷದ ರಾಹುಲ್ ಸಿಂಗ್ ಠಾಕೂರ್ ಮತ್ತು ರಾಜಸ್ಥಾನದ ಬಿಕಾನೇರ್ ಮೂಲದ 30 ವರ್ಷದ ಮಲಚಂದ್ ಶರ್ಮಾ ಎಂದು ಗುರುತಿಸಲಾಗಿದೆ. ಇವರ ಬಳಿ 500 ರೂ. ಮುಖಬೆಲೆಯ 1,666 ನಕಲಿ ನೋಟುಗಳಿದ್ದ 17 ಕಂತೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ನೋಟುಗಳ ಮೇಲೆ ‘ಇಂಡಿಯನ್ ಎಂಟರ್‌ಟೈನ್‌ಮೆಂಟ್ ಬ್ಯಾಂಕ್’ ಮತ್ತು ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ ಎಂಬ ಹೆಸರುಗಳನ್ನು ಮುದ್ರಿಸಲಾಗಿತ್ತು. ಮಕ್ಕಳ ಆಟಕ್ಕೆ ಬಳಸುವ ನೋಟುಗಳನ್ನೇ ಬಳಸಿಕೊಂಡು ಇಷ್ಟೊಂದು ದೊಡ್ಡ ಮೊತ್ತದ ವಂಚನೆ ನಡೆಸಿರುವುದು ಪ್ರಕರಣದ ವಿಶೇಷವಾಗಿದೆ.
ಪ್ರಕರಣದ ಕುರಿತು ಮಾಹಿತಿ ನೀಡಿರುವ ಉಸ್ತುವಾರಿ ಎಸಿಪಿ ಎ.ವಿ. ಪರ್ಮಾರ್ ಅವರ ಪ್ರಕಾರ, ಈ ಜಾಲದಲ್ಲಿ ಕೆಲಸ ಮಾಡುತ್ತಿದ್ದ ಕೆಳಹಂತದ ವ್ಯಕ್ತಿಗಳು ರೈಲುಗಳಲ್ಲಿ ವಿವಿಧ ರಾಜ್ಯಗಳಿಗೆ ಪ್ರಯಾಣಿಸಿ ನಕಲಿ ನೋಟುಗಳ ಕಂತೆಗಳನ್ನು ತಲುಪಿಸುತ್ತಿದ್ದರು. ಪ್ರತಿ ಬಾರಿ ಈ ಕೆಲಸಕ್ಕೆ ಅವರಿಗೆ 5,000 ರೂ. ಕಮಿಷನ್ ನೀಡಲಾಗುತ್ತಿತ್ತು. ಆದರೆ, ನೈಜ ಹಣವನ್ನು ಪಡೆದುಕೊಳ್ಳುತ್ತಿದ್ದ ದೆಹಲಿ ಮೂಲದ ಪ್ರಮುಖ ಆರೋಪಿಗಳು ದೊಡ್ಡ ಮೊತ್ತದ ಹಣವನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು.
ಅಂದರೆ, ರೈಲುಗಳಲ್ಲಿ ಪ್ರಯಾಣಿಸಿ ನಕಲಿ ನೋಟುಗಳ ಕಂತೆಗಳನ್ನು ತಲುಪಿಸುವವರು ಕೇವಲ ಕಮಿಷನ್‌ಗೆ ಕೆಲಸ ಮಾಡುತ್ತಿದ್ದರೆ, ಅವರ ಹಿಂದಿರುವ ಪ್ರಮುಖ ಆರೋಪಿಗಳು ಇಡೀ ವಂಚಕ ಜಾಲವನ್ನು ನಿಯಂತ್ರಿಸಿ ಹೆಚ್ಚು ಹಣವನ್ನು ದೋಚುತ್ತಿದ್ದರು.
ಮೂವರು ಆರೋಪಿಗಳು ಪೊಲೀಸರ ವಶಕ್ಕೆ; ಮೂವರಿಗಾಗಿ ಶೋಧ
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಈಗಾಗಲೇ ಪೊಲೀಸರ ವಶದಲ್ಲಿದ್ದಾರೆ. ಕರ್ನಾಟಕದಲ್ಲಿ ಬಂಧಿಸಲಾದ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಅಹಮದಾಬಾದ್‌ಗೆ ಕರೆತರಲಾಗುತ್ತಿದೆ. ಈ ವಂಚಕ ಜಾಲದ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಜಾಲದಲ್ಲಿ ಪ್ರಮುಖ ಪಾತ್ರ ವಹಿಸಿರುವ ಗಜಾನನ ಶರ್ಮಾ, ಧನರಾಜ ಮತ್ತು ವರುಣ್‌ ಎಂಬ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ದೆಹಲಿ ಮೂಲದ ಪ್ರಮುಖ ಆರೋಪಿಗಳು ಕುಳಿತುಕೊಂಡೇ ದೇಶದ ವಿವಿಧ ಭಾಗಗಳಲ್ಲಿ ಈ ವಂಚಕ ಜಾಲವನ್ನು ನಿರ್ವಹಿಸುತ್ತಿರುವ ಶಂಕೆಯಿದೆ. ಹೀಗಾಗಿ, ಈ ಜಾಲದ ಹಿಂದಿರುವ ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚುವುದರ ಜೊತೆಗೆ, ದೇಶದ ಇತರ ಭಾಗಗಳಲ್ಲಿಯೂ ಇದೇ ಮಾದರಿಯಲ್ಲಿ ಎಷ್ಟು ಮಂದಿ ವ್ಯಾಪಾರಿಗಳಿಗೆ ವಂಚಿಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಒಟ್ಟಿನಲ್ಲಿ, ಮಕ್ಕಳ ಆಟದ ನೋಟುಗಳನ್ನೇ ಅಸಲಿ ಹಣದಂತೆ ಬಿಂಬಿಸಿ 40 ಲಕ್ಷ ರೂ. ಲಪಟಾಯಿಸಿದ್ದ ವಂಚಕರಿಗೆ, ಹಣ ಕಳೆದುಕೊಂಡ ವ್ಯಾಪಾರಿ ಕುಟುಂಬವೇ ತಿರುಗೇಟು ನೀಡಿದೆ. ವಂಚನೆಗೆ ಒಳಗಾದವರು ಎದೆಗುಂದದೆ ತೋರಿದ ಸಮಯಪ್ರಜ್ಞೆ ಮತ್ತು ಪೊಲೀಸರ ಕಾರ್ಯಾಚರಣೆಯಿಂದ ವಂಚಕರ ಜಾಲದ ಮೂವರು ಸದಸ್ಯರು ಬಲೆಗೆ ಬಿದ್ದಿದ್ದಾರೆ.
ನಂಬಿಕೆ ಮೂಡಿಸುವ ಮಾತುಗಳನ್ನು ನಂಬಿ ಹಣದ ವಹಿವಾಟು ನಡೆಸಿದರೆ ಕ್ಷಣಾರ್ಧದಲ್ಲಿ ಲಕ್ಷಾಂತರ ರೂಪಾಯಿ ಕಳೆದಕೊಳ್ಳಬೇಕಾಗಬಹುದು, ಹೀಗಾಗಿ ಈ ಬಗ್ಗೆ ಸಾರ್ವಜನಿಕರು ಜಾಗ್ರತೆ ವಹಿಸಬೇಕಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಒಬಿಸಿ ಮೋರ್ಚಾಕ್ಕೆ ರಾಷ್ಟ್ರೀಯ ಪದಾಧಿಕಾರಿಗಳ ನೇಮಕ: ಕರ್ನಾಟಕದ ಪ್ರಮೋದ ಮಧ್ವರಾಜಗೆ ಮಹತ್ವದ ಹೊಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement