

ನವದೆಹಲಿ: ದೇಶದ ಜನಪ್ರಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಉತ್ಪಾದನಾ ಸಂಸ್ಥೆ ಬಿಸ್ಲೆರಿ ಇಂಟರ್ನ್ಯಾಷನಲ್ಗೆ ಸಂಕಷ್ಟ ಎದುರಾಗಿದೆ. ಕಂಪನಿಯ ಕುಡಿಯುವ ನೀರಿನ ಮಾದರಿಯ ಪ್ರಯೋಗಾಲಯ ಪರೀಕ್ಷೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಬ್ರೋಮೇಟ್ ಅಂಶ ಹಾಗೂ ಪಾಲಿನ್ಯೂಕ್ಲಿಯರ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್ಗಳು (ಪಿಎಎಚ್ಗಳು) ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅನುಮತಿ ನೀಡಿದೆ.
ದೇಶದಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿರುವ ಹಲವು ಆಹಾರ ಉತ್ಪಾದನಾ ಸಂಸ್ಥೆಗಳ ವಿರುದ್ಧ ಎಫ್ಎಸ್ಎಸ್ಎಐ ಕೈಗೊಂಡಿರುವ ಸರಣಿ ಕ್ರಮಗಳ ಭಾಗವಾಗಿ ಈ ಬೆಳವಣಿಗೆ ನಡೆದಿದೆ. ಇದರೊಂದಿಗೆ ಕೆಲವು ಉತ್ಪನ್ನಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಲು ಆದೇಶಿಸಲಾಗಿದೆ. ಕೆಲವು ಸಂಸ್ಥೆಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದ್ದು, ಇನ್ನು ಕೆಲವು ಕಂಪನಿಗಳ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಲಾಗಿದೆ.
ಬಿಸ್ಲೆರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್(Bisleri International Pvt. Ltd)ನ ಆವರಣದಿಂದ ಪ್ಯಾಕೇಜ್ಡ್ ಕುಡಿಯುವ ನೀರಿನ (ಖನಿಜಯುಕ್ತ ನೀರನ್ನು ಹೊರತುಪಡಿಸಿದ) ಮಾದರಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಮೊದಲ ಹಂತದ ಪರೀಕ್ಷೆಯಲ್ಲಿ ನೀರಿನಲ್ಲಿ ಬ್ರೋಮೇಟ್ ಅಂಶ ನಿಗದಿಪಡಿಸಿದ ಮಿತಿಯನ್ನು ಮೀರಿರುವುದು ಪತ್ತೆಯಾಗಿತ್ತು. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ನೀರಿನ ಮಾದರಿಯನ್ನು ಅಸುರಕ್ಷಿತ ಎಂದು ಘೋಷಿಸಲಾಗಿತ್ತು.
ಈ ವರದಿಯನ್ನು ಪ್ರಶ್ನಿಸಿ ಕಂಪನಿ ಮೇಲ್ಮನವಿ ಸಲ್ಲಿಸಿತ್ತು. ಅದರಂತೆ ನೀರಿನ ಮಾದರಿಯನ್ನು ಹೆಚ್ಚಿನ ಪರಿಶೀಲನೆಗಾಗಿ ಉಲ್ಲೇಖಿತ ಆಹಾರ ಪ್ರಯೋಗಾಲಯಕ್ಕೆ (ರೆಫರಲ್ ಫುಡ್ ಲ್ಯಾಬೊರೇಟರಿ) ಕಳುಹಿಸಲಾಗಿತ್ತು. ಆದರೆ, ಎರಡನೇ ಹಂತದ ಪರೀಕ್ಷೆಯಲ್ಲೂ ನೀರು ಅಸುರಕ್ಷಿತ ಎಂಬುದು ದೃಢಪಟ್ಟಿದೆ. ಈ ಪರೀಕ್ಷೆಯಲ್ಲಿ ಪಾಲಿನ್ಯೂಕ್ಲಿಯರ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್ಗಳು (ಪಿಎಎಚ್ಗಳು) ಪತ್ತೆಯಾಗಿರುವುದಾಗಿ ಪ್ರಯೋಗಾಲಯ ವರದಿ ತಿಳಿಸಿದೆ.


ಈ ಕುರಿತು ಪ್ರಕಟಣೆ ಹೊರಡಿಸಿರುವ ಎಫ್ಎಸ್ಎಸ್ಎಐ, ಬಿಸ್ಲೆರಿ ಕಂಪನಿಯ ಆವರಣದಿಂದ ಸಂಗ್ರಹಿಸಿದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯಲ್ಲಿ ಬ್ರೋಮೇಟ್ ಅಂಶ ನಿಗದಿತ ಮಿತಿಗಿಂತ ಹೆಚ್ಚಿರುವುದು ಮೊದಲ ಪರೀಕ್ಷೆಯಲ್ಲಿ ಕಂಡುಬಂದಿತ್ತು. ಮೇಲ್ಮನವಿಯ ಬಳಿಕ ಉಲ್ಲೇಖಿತ ಪ್ರಯೋಗಾಲಯ ನಡೆಸಿದ ಮರುಪರೀಕ್ಷೆಯಲ್ಲೂ ಪಿಎಎಚ್ಗಳು ಪತ್ತೆಯಾಗಿದ್ದು, ನೀರನ್ನು ಅಸುರಕ್ಷಿತ ಎಂದು ಘೋಷಿಸಲಾಗಿದೆ. ಪ್ರಯೋಗಾಲಯದ ವರದಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಅಸುರಕ್ಷಿತ ಆಹಾರಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯನ್ನು ದೃಢಪಡಿಸಿವೆ. ಹೀಗಾಗಿ ಬಿಸ್ಲೆರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಇದೇ ಕಾಯ್ದೆಯಡಿ ಮೊಕದ್ದಮೆ ಹೂಡಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ