

ಬೆಂಗಳೂರು: ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ಅವರು ಯಲಹಂಕದಲ್ಲಿರುವ ವಿವಾದಿತ ಕುಟುಂಬದ ಬಂಗಲೆಗೆ ಭೇಟಿ ನೀಡಲು ತೆರಳುತ್ತಿದ್ದಾಗ ಬೆಂಗಳೂರು ಪೊಲೀಸರು ತಡೆದಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಪೊಲೀಸರು ಅವರನ್ನು ತಡೆದು, ಬಂಗಲೆಯತ್ತ ತೆರಳಲು ಅವಕಾಶ ನೀಡಲಿಲ್ಲ. ಈ ಬಂಗಲೆಯಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಅವರ ಕುಟುಂಬ ವಾಸಿಸುತ್ತಿದೆ ಎನ್ನಲಾಗಿದೆ.
ಶರ್ಮಿಳಾ ಅವರ ಜೊತೆ ತಾಯಿ ವೈ.ಎಸ್. ವಿಜಯಮ್ಮ ಹಾಗೂ ಕುಟುಂಬದ ಇತರ ಸದಸ್ಯರೂ ಇದ್ದರು ಎಂದು ವರದಿಯಾಗಿದೆ. ನವೆಂಬರ್ 21ರಂದು ದೇವನಹಳ್ಳಿ ನ್ಯಾಯಾಲಯ ಹೊರಡಿಸಿರುವ ಮಧ್ಯಂತರ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ನ್ಯಾಯಾಲಯದ ಆದೇಶವು ಶರ್ಮಿಳಾ ಮತ್ತು ಅವರ ಪ್ರತಿನಿಧಿಗಳು ವಿವಾದಿತ ಆಸ್ತಿಯನ್ನು ಪ್ರವೇಶಿಸುವುದನ್ನು ಅಥವಾ ಆಸ್ತಿಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿರ್ಬಂಧಿಸಿದೆ.
ಕುಟುಂಬದೊಳಗಿನ ಆಸ್ತಿ ಹಕ್ಕಿಗೆ ಸಂಬಂಧಿಸಿದ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಶರ್ಮಿಳಾ ಅವರ ಪುತ್ರಿಯ ವಿವಾಹ ನವೆಂಬರ್ 25ರಂದು ನಡೆಯಲಿದ್ದು, ಅದಕ್ಕೆ ಸಂಬಂಧಿಸಿದ ಸಿದ್ಧತೆಗಳೂ ಕುಟುಂಬದೊಳಗಿನ ಭಿನ್ನಾಭಿಪ್ರಾಯಕ್ಕೆ ಮತ್ತಷ್ಟು ಕಾರಣವಾಗಿವೆ. ಆರಂಭದಲ್ಲಿ ಬೆಂಗಳೂರಿನಲ್ಲಿರುವ ಕುಟುಂಬದ ನಿವಾಸದಲ್ಲೇ ವಿವಾಹ ಸಮಾರಂಭ ನಡೆಸಲು ಯೋಜಿಸಲಾಗಿತ್ತು. ಆದರೆ, ನಂತರ ವಿವಾಹ ಕಾರ್ಯಕ್ರಮವನ್ನು ಹೈದರಾಬಾದ್‌ಗೆ ಸ್ಥಳಾಂತರಿಸಲಾಗಿದೆ.
ಹೀಗೆ ಆಸ್ತಿ ಹಕ್ಕಿನ ವಿವಾದ ಹಾಗೂ ಪುತ್ರಿಯ ವಿವಾಹದ ಸಿದ್ಧತೆಗಳ ನಡುವೆ ಸಹೋದರ ಜಗನ್‌ಮೋಹನ್ ರೆಡ್ಡಿ ಮತ್ತು ಶರ್ಮಿಳಾ ನಡುವಿನ ಕುಟುಂಬ ಕಲಹ ಮತ್ತೊಂದು ಹಂತ ತಲುಪಿದೆ.





ನಿಮ್ಮ ಕಾಮೆಂಟ್ ಬರೆಯಿರಿ