ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ರಸ್ತೆಬದಿಯಲ್ಲಿದ್ದ 7 ಹಸಿದ ನಾಯಿ ಮರಿಗಳಿಗೆ ಹಾಲುಣಿಸಿದ ಗೋವು: ವಿಡಿಯೋ ವೈರಲ್‌

ಪ್ರಕೃತಿಯಲ್ಲಿ ಪ್ರೀತಿ, ಕರುಣೆ ಮತ್ತು ಮಮತೆಗೆ ಯಾವುದೇ ಗಡಿ-ಮಿತಿಗಳಿಲ್ಲ ಎಂಬುದಕ್ಕೆ ಸಾಕ್ಷಿಯಾಗುವ ಅಪರೂಪದ ಮನಮಿಡಿಯುವ ವಿಡಿಯೊವೊಂದು ಇತ್ತೀಚೆಗೆ ಗಮನ ಸೆಳೆದಿದೆ. ಸಾಮಾನ್ಯವಾಗಿ ಹಸು ತನ್ನ ಕರುಗಳಿಗೆ ಹಾಲುಣಿಸುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ತಾಯಿ ಹಸು ತನ್ನದಲ್ಲದ ಅನೇಕ ಪುಟ್ಟ ನಾಯಿಮರಿಗಳಿಗೆ ಪ್ರೀತಿಯಿಂದ ಹಾಲುಣಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ.
ತನ್ನ ಬಳಿ ಹಾಲು ಕುಡಿಯಲು ಬಂದ 7 ಪುಟ್ಟ ನಾಯಿಮರಿಗಳನ್ನು ದೂರ ಓಡಿಸುವ ಬದಲು, ತಾಯಿ ಹಸು ಅತ್ಯಂತ ಶಾಂತವಾಗಿ ನಿಂತು ಅವುಗಳಿಗೆ ಸುರಕ್ಷಿತವಾಗಿ ಹಾಲು ಕುಡಿಯಲು ಅವಕಾಶ ಮಾಡಿಕೊಟ್ಟಿದೆ. ಹಸುವಿನ ಕೆಚ್ಚಲಿನಿಂದ ಹಾಲು ಕುಡಿಯುತ್ತಿದ್ದ ಪುಟ್ಟ ನಾಯಿಮರಿಗಳಿಗೆ ಅದು ಕೇವಲ ಆಹಾರವನ್ನಷ್ಟೇ ನೀಡಿಲ್ಲ; ತಾಯಿಯ ಮಡಿಲಿನ ಬೆಚ್ಚನೆಯ ಸಾಂತ್ವನ ಮತ್ತು ರಕ್ಷಣೆಯ ಭಾವನೆಯನ್ನೂ ಒದಗಿಸಿದೆ.

ತನ್ನದಲ್ಲದ ಹಾಗೂ ತನ್ನ ಪ್ರಭೇದಕ್ಕೆ ಸೇರದ ಮರಿಗಳೆಂಬ ಭೇದವಿಲ್ಲದೆ, ಅವುಗಳ ಹಸಿವು ನೀಗಿಸಲು ಅನುವು ಮಾಡಿಕೊಟ್ಟ ಹಸುವಿನ ಈ ಮಮತೆಯ ನಡವಳಿಕೆ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ತಾಯ್ತನದ ಸಹಜ ಕರುಣೆ ಮತ್ತು ಮಮತೆಯ ಪ್ರವೃತ್ತಿ ಮೂಕಪ್ರಾಣಿಗಳಲ್ಲೂ ಎಷ್ಟು ಗಾಢವಾಗಿರುತ್ತದೆ ಎಂಬುದನ್ನು ಈ ದೃಶ್ಯ ಮನವರಿಕೆ ಮಾಡಿಕೊಟ್ಟಿದೆ.
ಈ ಅಪರೂಪದ ಕ್ಷಣದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರ ಮನಗೆದ್ದಿದೆ. ಪ್ರಾಣಿ ಪ್ರಪಂಚದಲ್ಲಿ ಸಾಮಾನ್ಯವಾಗಿ ನಿರೀಕ್ಷಿಸದ ಜೀವಿಗಳ ನಡುವೆಯೂ ಪ್ರೀತಿ ಮತ್ತು ಕಾಳಜಿಯ ಬಾಂಧವ್ಯ ಮೂಡಬಹುದು ಎಂಬುದನ್ನು ಈ ದೃಶ್ಯ ಸಾರುತ್ತಿದೆ.

ಈ ವಿಡಿಯೋ ರಾಜಸ್ಥಾನದ್ದಾಗಿರಬಹುದು ಎಂದು ಹೇಳಲಾಗುತ್ತಿದೆ. ವಿಡಿಯೋದ ಹಿನ್ನೆಲೆಯಲ್ಲಿ ಕಾಣಿಸುವ ಗೋಡೆ ಮತ್ತು ಅಂಗಡಿಗಳ ಬೋರ್ಡ್‌ಗಳ ಹೆಸರುಗಳ ಆಧಾರದ ಮೇಲೆ ಈ ಘಟನೆ ರಾಜಸ್ಥಾನದ ಫಲೋದಿ ಜಿಲ್ಲೆಯದು ಎನ್ನಲಾಗುತ್ತಿದೆ. ಸ್ಥಳ ಯಾವುದೇ ಇರಲಿ ಈ ಪುಟ್ಟ ವಿಡಿಯೋ ಮಾತ್ರ ಮಾನವೀಯತೆ ಮತ್ತು ಮಾತೃಪ್ರೇಮದ ಪಾಠವನ್ನು ಇಡೀ ಜಗತ್ತಿಗೇ ಸಾರಿದೆ. ಹಸಿದ ಮರಿಗಳ ಹೊಟ್ಟೆ ತುಂಬಿಸಿದ ಆ ಪುಣ್ಯವಂತ ಗೋಮಾತೆಯ ವಾತ್ಸಲ್ಯಕ್ಕೆ ಇಡೀ ಸಾಮಾಜಿಕ ಜಾಲತಾಣವೇ ತಲೆಬಾಗಿ ನಮಿಸುತ್ತಿದೆ.
ಪ್ರಕೃತಿಯ ಮಡಿಲಿನಲ್ಲಿ ಇಂತಹ ಅನಿರೀಕ್ಷಿತ ಕ್ಷಣಗಳೇ ಜೀವಿಗಳ ನಡುವಿನ ಮಮತೆಯ ನಿಜವಾದ ಅರ್ಥವನ್ನು ಜಗತ್ತಿಗೆ ಪರಿಚಯಿಸುತ್ತವೆ ಎಂಬುದಕ್ಕೆ ಈ ತಾಯಿ ಹಸು ಮತ್ತು ಪುಟ್ಟ ನಾಯಿಮರಿಗಳ ಅಪರೂಪದ ದೃಶ್ಯವೇ ಸಾಕ್ಷಿ.

ಪ್ರಮುಖ ಸುದ್ದಿ :-   ಸಹೋದರ ಜಗನ್ಮೋಹನ ರೆಡ್ಡಿ ಯಲಹಂಕದ ನಿವಾಸಕ್ಕೆ ತೆರಳದಂತೆ ಆಂಧ್ರಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ಶರ್ಮಿಳಾಗೆ ಪೊಲೀಸರ ತಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement