ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಉತ್ತರ ಪ್ರದೇಶ ಚುನಾವಣೆ : ಕಾಂಗ್ರೆಸ್ ಕೇಳಿದ್ದ 2 ಕ್ಷೇತ್ರಗಳೂ ಸೇರಿ 5 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ ಸಮಾಜವಾದಿ ಪಕ್ಷ !

ಲಕ್ನೋ : 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್‌ಪಿ) ತನ್ನ ಐವರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಸಹರಾನ್‌ಪುರ, ಶಾಮ್ಲಿ, ಅಮ್ರೋಹಾ ಮತ್ತು ಲಲಿತಪುರ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಮತ್ತೊಂದೆಡೆ, ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಕ್ಷೇತ್ರ ಹಂಚಿಕೆ ಕುರಿತು ನಡೆಯುತ್ತಿರುವ ಮಾತುಕತೆಯಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿದಿವೆ. ಈ ಬೆಳವಣಿಗೆಯ ನಡುವೆಯೇ ಸಮಾಜವಾದಿ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಸಮಾಜವಾದಿ ಪಕ್ಷ ಪ್ರಕಟಿಸಿರುವ ಪಟ್ಟಿಯ ಪ್ರಕಾರ, ಸಹರಾನ್‌ಪುರ ಜಿಲ್ಲೆಯ ಬೆಹಟ್ ಕ್ಷೇತ್ರದಿಂದ ಉಮರ್ ಅಲಿ ಖಾನ್, ಸಹರಾನ್‌ಪುರ ಕ್ಷೇತ್ರದಿಂದ ಆಶು ಮಲಿಕ್, ಶಾಮ್ಲಿ ಜಿಲ್ಲೆಯ ಕೈರಾನಾ ಕ್ಷೇತ್ರದಿಂದ ನಾಹಿದ್ ಹಸನ್, ಅಮ್ರೋಹಾ ಕ್ಷೇತ್ರದಿಂದ ಮೆಹಬೂಬ್ ಅಲಿ ಹಾಗೂ ಲಲಿತ್‌ಪುರ ಕ್ಷೇತ್ರದಿಂದ ಜ್ಯೋತಿ ಲೋಧಿ ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಐದು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ಆರಂಭಿಕ ಹಂತದ ಸೀಟು ಹಂಚಿಕೆ ಮಾತುಕತೆಯ ಸಂದರ್ಭದಲ್ಲಿ ತಮಗೆ ನೀಡುವಂತೆ ಬೇಡಿಕೆ ಇಟ್ಟಿತ್ತು ಎಂದು ಮೂಲಗಳು ತಿಳಿಸಿವೆ.

ವರದಿಯ ಪ್ರಕಾರ, ಸಹರಾನ್‌ಪುರ ಮತ್ತು ಬೆಹಟ್ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಹಕ್ಕು ಮಂಡಿಸಿತ್ತು. ಆದರೆ, ಈ ಎರಡೂ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಈಗಾಗಲೇ ಹಾಲಿ ಶಾಸಕರನ್ನೇ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಸೀಟು ಹಂಚಿಕೆ ಮಾತುಕತೆಯಲ್ಲಿ ಎಷ್ಟು ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ನೀಡಬೇಕು ಎಂಬ ವಿಚಾರದಲ್ಲಿ ಒಮ್ಮತ ಮೂಡದಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಅಖಿಲೇಶ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಮೈತ್ರಿ ಪಾಲುದಾರ ಕಾಂಗ್ರೆಸ್‌ಗೆ 26 ಕ್ಷೇತ್ರಗಳನ್ನು ನೀಡುವ ಪ್ರಸ್ತಾಪ ಮುಂದಿಟ್ಟಿದೆ ಎನ್ನಲಾಗಿದೆ. ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಎರಡೂ ಪಕ್ಷಗಳ ಪ್ರದರ್ಶನವನ್ನು ಮುಖ್ಯವಾಗಿ ಆಧಾರವಾಗಿಟ್ಟುಕೊಂಡು ಈ ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆದರೆ, ಕಾಂಗ್ರೆಸ್ ಕನಿಷ್ಠ 60 ಎ-ಗ್ರೇಡ್ ಕ್ಷೇತ್ರಗಳನ್ನು ತಮಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದೆ. ಚುನಾವಣಾ ದೃಷ್ಟಿಯಿಂದ ಅನುಕೂಲಕರವಾಗಿರುವ ಕ್ಷೇತ್ರಗಳನ್ನು ಎ-ಗ್ರೇಡ್ ಕ್ಷೇತ್ರಗಳೆಂದು ಕಾಂಗ್ರೆಸ್ ಪರಿಗಣಿಸಿದೆ. ಅಲ್ಲದೆ, ಕನಿಷ್ಠ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕೆಂಬ ತನ್ನ ಬೇಡಿಕೆಯಿಂದ ಹಿಂದೆ ಸರಿಯಲು ಕಾಂಗ್ರೆಸ್ ಸಿದ್ಧವಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಾತುಕತೆ ಆರಂಭವಾಗುವುದಕ್ಕೂ ಮುನ್ನ ಕಾಂಗ್ರೆಸ್ ಮೂಲಗಳು ಸೂಚಿಸಿದ್ದ ಸಂಖ್ಯೆಗೆ ಹೋಲಿಸಿದರೆ ಸಮಾಜವಾದಿ ಪಕ್ಷದ 26 ಕ್ಷೇತ್ರಗಳ ಪ್ರಸ್ತಾಪ ಬಹಳ ಕಡಿಮೆಯಾಗಿದೆ. ಕಾಂಗ್ರೆಸ್ ಸುಮಾರು 130 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಿ, ಆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದೆ. ಆದರೆ, ಸಮಾಜವಾದಿ ಪಕ್ಷ ಪ್ರತಿಯೊಂದು ಕ್ಷೇತ್ರದ ಚುನಾವಣಾ ಸಾಮರ್ಥ್ಯ ಮತ್ತು ಹಿಂದಿನ ಫಲಿತಾಂಶಗಳನ್ನು ಪರಿಶೀಲಿಸಿದ ನಂತರವೇ ಕ್ಷೇತ್ರ ಹಂಚಿಕೆ ಮಾಡಬೇಕು ಎಂಬ ನಿಲುವು ಹೊಂದಿದೆ.

ಪ್ರಮುಖ ಸುದ್ದಿ :-   ತಿರುಪ್ಪರಂಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ದೀಪ ಬೆಳಗದ ವಿಚಾರ ; ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ಸರ್ಕಾರ ಕ್ಷಮೆಯಾಚನೆ

ಸೀಟು ಹಂಚಿಕೆ ಮಾತುಕತೆ ಸೋಮವಾರ ದೆಹಲಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಪ್ರಮೋದ ತಿವಾರಿ ಅವರ ನಿವಾಸದಲ್ಲಿ ಆರಂಭವಾಗಿತ್ತು. 2027ರ ವಿಧಾನಸಭಾ ಚುನಾವಣೆಗೆ ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳೊಂದಿಗೆ ಕ್ಷೇತ್ರ ಹಂಚಿಕೆ ಕುರಿತು ಮಾತುಕತೆ ನಡೆಸಲು ಸಮಾಜವಾದಿ ಪಕ್ಷ ಸಮಿತಿಯೊಂದನ್ನು ರಚಿಸಿದ ಬೆನ್ನಲ್ಲೇ ಈ ಸಭೆ ನಡೆದಿತ್ತು.
ಮೊದಲ ಸಭೆಯಲ್ಲಿ ಎರಡೂ ಪಕ್ಷಗಳು ಮುಂಬರುವ ವಿಧಾನಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ಒಪ್ಪಿಗೆ ಸೂಚಿಸಿದ್ದವು. ಮುಂದಿನ ಎರಡರಿಂದ ನಾಲ್ಕು ದಿನಗಳೊಳಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದವು.
ಮೊದಲ ಸುತ್ತಿನ ಮಾತುಕತೆ ಸುಮಾರು 20 ನಿಮಿಷಗಳ ಕಾಲ ನಡೆದಿತ್ತು. ಎರಡೂ ಪಕ್ಷಗಳ ನಾಯಕರು ಸಕಾರಾತ್ಮಕ ಮನೋಭಾವದೊಂದಿಗೆ ಸಭೆಗೆ ಆಗಮಿಸಿದ್ದು, ಒಮ್ಮತಕ್ಕೆ ಬರಲು ಸಿದ್ಧರಿದ್ದ ಕಾರಣ ಸಭೆ ಅಲ್ಪಾವಧಿಯಲ್ಲೇ ಮುಕ್ತಾಯಗೊಂಡಿತು ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದರು. ಬಳಿಕ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮಗೋಪಾಲ ಯಾದವ್ ಕೂಡ ಸಭೆ ಸೌಹಾರ್ದಯುತವಾಗಿ ನಡೆದಿರುವುದಾಗಿ ಹೇಳಿದ್ದರು. ಎರಡೂ ಪಕ್ಷಗಳು ಪರಸ್ಪರ ತಮ್ಮ ಅಭಿಪ್ರಾಯಗಳನ್ನು ಆಲಿಸಿದ್ದು, ಶೀಘ್ರದಲ್ಲೇ ಮೈತ್ರಿ ಒಪ್ಪಂದ ಅಂತಿಮಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

ಪ್ರಮುಖ ಸುದ್ದಿ :-   ಭಾರತದಲ್ಲಿ ಚಿನ್ನದ ಆಮದು ಶೇ. 40ರಷ್ಟು ಕುಸಿತ, ದರವೂ ಕುಸಿತ ; ಮೋದಿ ಮನವಿಗೆ ಜನರು ಸ್ಪಂದಿಸಿದ್ದು ಕಾರಣ ?

ಮಂಗಳವಾರ ಎರಡನೇ ಸುತ್ತಿನ ಮಾತುಕತೆ ನಡೆದಿದ್ದು, ಎರಡೂ ಪಕ್ಷಗಳ ನಾಯಕರು ಪ್ರತ್ಯೇಕ ವಿಧಾನಸಭಾ ಕ್ಷೇತ್ರಗಳ ಹಂಚಿಕೆ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಆದರೆ, ಈ ಸಭೆಯಲ್ಲಿಯೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಇನ್ನೂ ಎರಡು ಸುತ್ತಿನ ಮಾತುಕತೆಗಳು ನಡೆಯುವ ನಿರೀಕ್ಷೆಯಿದೆ.
ಒಂದೆಡೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಾಯಕರು ಮೈತ್ರಿ ಮುಂದುವರಿಸುವ ಹಾಗೂ ಸೀಟು ಹಂಚಿಕೆ ಒಪ್ಪಂದಕ್ಕೆ ಬರುವ ಪ್ರಯತ್ನದಲ್ಲಿದ್ದರೆ, ಮತ್ತೊಂದೆಡೆ ಸಮಾಜವಾದಿ ಪಕ್ಷ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿರುವುದು ಕ್ಷೇತ್ರ ಹಂಚಿಕೆ ಕುರಿತ ಚರ್ಚೆಗೆ ಹೊಸ ಆಯಾಮ ನೀಡಿದೆ. ವಿಶೇಷವಾಗಿ ಕಾಂಗ್ರೆಸ್ ಬೇಡಿಕೆ ಇಟ್ಟಿದ್ದ ಸಹರಾನ್‌ಪುರ ಮತ್ತು ಬೆಹಟ್ ಕ್ಷೇತ್ರಗಳಿಗೂ ಸಮಾಜವಾದಿ ಪಕ್ಷ ಅಭ್ಯರ್ಥಿಗಳನ್ನು ಘೋಷಿಸಿರುವುದು ಎರಡೂ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಮುನ್ನೆಲೆಗೆ ತಂದಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement