ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಕಾಂಗ್ರೆಸ್-ಎಸ್‌ಪಿ ಬಿಕ್ಕಟ್ಟು ಇನ್ನಷ್ಟು ತೀವ್ರ ; ಅಖಿಲೇಶ ನೀಡುವ ಸ್ಥಾನಗಳಿಗೆ ಕಾಂಗ್ರೆಸ್‌ ಭಿಕ್ಷೆ ಬೇಡುವ ಪಕ್ಷವಲ್ಲ : ಇಮ್ರಾನ್‌ ಮಸೂದ್‌ ಕಿಡಿ

ನವದೆಹಲಿ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಡುವಿನ ಸ್ಥಾನ ಹಂಚಿಕೆ ಮಾತುಕತೆಗೆ ಮತ್ತೊಂದು ಹಿನ್ನಡೆ ಎದುರಾಗಿದೆ. ಮಾತುಕತೆ ಇನ್ನೂ ಪ್ರಗತಿಯಲ್ಲಿರುವಾಗಲೇ ಸಮಾಜವಾದಿ ಪಕ್ಷ ಐವರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿರುವುದಕ್ಕೆ ಕಾಂಗ್ರೆಸ್‌ ಸಂಸದ ಇಮ್ರಾನ್‌ ಮಸೂದ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಪಕ್ಷವು ಅಖಿಲೇಶ ಯಾದವ್‌ ನೀಡುವ ಸ್ಥಾನಗಳಿಗಾಗಿ ಕಾಯುತ್ತಿರುವ ಭಿಕ್ಷುಕರಲ್ಲ ಎಂದು ಹೇಳುವ ಮೂಲಕ ಎಸ್‌ಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈತ್ರಿ ಮಾತುಕತೆ ನಡೆಯುತ್ತಿರುವಾಗಲೇ ಎಸ್‌ಪಿ ಏಕಪಕ್ಷೀಯವಾಗಿ ಅಭ್ಯರ್ಥಿಗಳ ಘೋಷಣೆ ಮಾಡುತ್ತಿರುವುದನ್ನು ಪ್ರಶ್ನಿಸಿರುವ ಅವರು, ಬಿಜೆಪಿ ವಿರುದ್ಧ ರಾಜಕೀಯ ಹೋರಾಟ ನಡೆಸಬೇಕೋ ಅಥವಾ ಕಾಂಗ್ರೆಸ್‌ ವಿರುದ್ಧವೇ ಹೋರಾಡಬೇಕೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಗಳು ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಂಡಿಯಾ (INDIA) ಮೈತ್ರಿಕೂಟದ ಎರಡು ಪ್ರಮುಖ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಬಹಿರಂಗಪಡಿಸಿವೆ.
ಎಸ್‌ಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕಾಂಗ್ರೆಸ್‌ನಲ್ಲಿ ಅಸಮಾಧಾನ
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ತನ್ನ ಮೊದಲ ಪಟ್ಟಿಯಲ್ಲಿ ಐವರು ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ. ಸಹರಾನ್‌ಪುರ, ಶಾಮ್ಲಿ, ಅಮ್ರೋಹಾ ಮತ್ತು ಲಲಿತ್‌ಪುರ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಕಾಂಗ್ರೆಸ್‌ ಜೊತೆ ಸ್ಥಾನ ಹಂಚಿಕೆ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಪ್ರಕಟಣೆ ಹೊರಬಿದ್ದಿರುವುದು ಕಾಂಗ್ರೆಸ್‌ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ವಿಶೇಷವಾಗಿ ಸಹರಾನ್‌ಪುರ ಜಿಲ್ಲೆಯ ಬೆಹಟ್‌ ಮತ್ತು ಸಹರಾನ್‌ಪುರ ಗ್ರಾಮೀಣ ಕ್ಷೇತ್ರಗಳಿಗೆ ಎಸ್‌ಪಿ ಅಭ್ಯರ್ಥಿಗಳನ್ನು ಘೋಷಿಸಿರುವುದು ಕಾಂಗ್ರೆಸ್‌ ನಾಯಕರನ್ನು ಕೆರಳಿಸಿದೆ. ಈ ಎರಡೂ ಕ್ಷೇತ್ರಗಳನ್ನು ಮೈತ್ರಿಯಲ್ಲಿ ಕಾಂಗ್ರೆಸ್‌ ತನ್ನ ಪಾಲಿಗೆ ಕೇಳಲು ಉದ್ದೇಶಿಸಿತ್ತು ಎನ್ನಲಾಗಿದೆ.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಇಮ್ರಾನ್‌ ಮಸೂದ್‌ ಅವರು ಸಹರಾನ್‌ಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ತಮ್ಮ ಅಸಮಾಧಾನವನ್ನು ಮತ್ತಷ್ಟು ವ್ಯಕ್ತಪಡಿಸಿದ ಇಮ್ರಾನ್‌ ಮಸೂದ್‌, ಕಾಂಗ್ರೆಸ್‌ ಯಾವುದೇ ಸ್ಥಾನಗಳನ್ನು ಬೇಡಿಲ್ಲ ಅಥವಾ ಮತ್ತೊಂದು ಮೈತ್ರಿಪಕ್ಷದ ನಿರ್ಧಾರಗಳನ್ನು ಒಪ್ಪಿಕೊಳ್ಳುವುದಾಗಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ನನಗೆ ಇದ್ಯಾವುದೂ ಅರ್ಥವಾಗುತ್ತಿಲ್ಲ. ಇದು ನನ್ನ ಗ್ರಹಿಕೆಗೆ ಮೀರಿದ ಸಂಗತಿ. ಈ ಬಗ್ಗೆ ನಮ್ಮ ಪಕ್ಷವೇ ನಿರ್ಧಾರ ಕೈಗೊಳ್ಳಬೇಕು. ನಾವೇನು ಭಿಕ್ಷುಕರೇ? ನಮ್ಮನ್ನು ಹೀಗೆ ನಡೆಸಿಕೊಳ್ಳುತ್ತೀರಾ? ನಾವು ನಿಮ್ಮ ಬಳಿ ಸ್ಥಾನಗಳನ್ನೇ ಕೇಳಿಲ್ಲ. ಆದರೆ ನೀವೇ 26 ಸ್ಥಾನಗಳನ್ನು ಘೋಷಿಸಿದ್ದೀರಿ. ಎಲ್ಲವನ್ನೂ ನೀವೇ ನಿರ್ಧರಿಸಿ, ಉಳಿದವರಿಗೆ ನಿರ್ದೇಶನ ನೀಡುವುದೇ ನಿಮ್ಮ ಕಾರ್ಯವೈಖರಿಯಾಗಿದ್ದರೆ, ಸ್ವಾಭಿಮಾನ ಹೊಂದಿರುವ ನನ್ನಂತಹ ವ್ಯಕ್ತಿಗೆ ಇಂತಹ ನಡೆ ಅರ್ಥವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಅಂತಿಮವಾಗಿ ಈ ವಿಚಾರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಮಸೂದ್‌ ತಿಳಿಸಿದ್ದಾರೆ. “ನಾನು ಕಾಂಗ್ರೆಸ್‌ ಪಕ್ಷಕ್ಕೆ ಬದ್ಧನಾಗಿದ್ದೇನೆ. ಪಕ್ಷದ ಅಧಿಕೃತ ಹೇಳಿಕೆ ನಾಯಕತ್ವದೊಂದಿಗೆ ಚರ್ಚಿಸಿದ ಬಳಿಕ ಹೊರಬರಲಿದೆ. ಆದರೆ ಎಸ್‌ಪಿ ಮಾಡುತ್ತಿರುವುದು ಸರಿಯಲ್ಲ. ಪಕ್ಷ ನನ್ನ ಮೇಲೆ ಒಂದು ಉದ್ದೇಶದಿಂದ ವಿಶ್ವಾಸವಿಟ್ಟಿದೆ. ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುವುದು ಮತ್ತು ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿಸುವುದು ನನ್ನ ಜವಾಬ್ದಾರಿ” ಎಂದಿದ್ದಾರೆ.
ನಾವು ಯಾವಾಗ 26 ಸ್ಥಾನಗಳನ್ನು ಕೇಳಿದ್ದೆವು?
ಕಾಂಗ್ರೆಸ್‌ ಎಂದಿಗೂ ಸಮಾಜವಾದಿ ಪಕ್ಷದ ಬಳಿ 26 ಸ್ಥಾನಗಳನ್ನು ಕೇಳಿರಲಿಲ್ಲ ಎಂದು ಹೇಳಿರುವ ಮಸೂದ್‌, ಕಾಂಗ್ರೆಸ್‌ಗೆ 26 ಸ್ಥಾನಗಳನ್ನು ನೀಡಿದ್ದೇವೆ ಎಂಬ ರೀತಿಯಲ್ಲಿ ಎಸ್‌ಪಿ ವರ್ತಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ಥಾನ ಹಂಚಿಕೆ ಮಾತುಕತೆ ನಡೆಯುತ್ತಿರುವ ರೀತಿಯ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ. ದೆಹಲಿಯಲ್ಲಿ ಎರಡೂ ಪಕ್ಷಗಳ ನಡುವೆ ಸಭೆಗಳು ನಡೆಯುತ್ತಿದ್ದರೂ, ಅಭ್ಯರ್ಥಿಗಳ ಪಟ್ಟಿಯ ಮಾಹಿತಿಯನ್ನು ಕಾಂಗ್ರೆಸ್‌ ನಾಯಕರು ಪತ್ರಕರ್ತರಿಂದ ತಿಳಿದುಕೊಳ್ಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 ಹೋರಾಟ ಬಿಜೆಪಿಯ ವಿರುದ್ಧವೋ, ಕಾಂಗ್ರೆಸ್‌ ವಿರುದ್ಧವೋ?
ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಸ್ತಾಪಿಸಿದ ಮಸೂದ್‌, ಪಕ್ಷದ ನಾಯಕತ್ವ ನೀಡುವ ಸೂಚನೆಗಳನ್ನು ಕಾರ್ಯಕರ್ತರು ಪಾಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
“ರಾಹುಲ್‌ ಗಾಂಧಿ ಬರುತ್ತಾರೆ, ಪ್ರಿಯಾಂಕಾ ಗಾಂಧಿ ಬರುತ್ತಾರೆ. ನಮ್ಮ ನಾಯಕತ್ವ ಯಾವ ಸೂಚನೆ ನೀಡುತ್ತದೆಯೋ ಅದನ್ನು ನಾವು ಪಾಲಿಸಬೇಕು. ಎಸ್‌ಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿರುವುದರಿಂದ ನಮಗೇನೂ ವ್ಯತ್ಯಾಸವಾಗುವುದಿಲ್ಲ. ಆದರೆ ರಾಜಕೀಯ ಹೋರಾಟ ಬಿಜೆಪಿಯ ವಿರುದ್ಧವೋ ಅಥವಾ ಕಾಂಗ್ರೆಸ್‌ ವಿರುದ್ಧವೋ ಎಂಬುದನ್ನು ಖಂಡಿತವಾಗಿಯೂ ನಿರ್ಧರಿಸಬೇಕು” ಎಂದು ಹೇಳಿದ್ದಾರೆ.
ಎಸ್‌ಪಿ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರೆ ಮೈತ್ರಿ ಮಾತುಕತೆ ಮುಂದುವರಿಸುವುದರ ಉದ್ದೇಶವೇನು ಎಂದು ಪ್ರಶ್ನಿಸಿರುವ ಅವರು, “ನೀವು ಹೀಗೆ ನಡೆದುಕೊಳ್ಳುತ್ತಿದ್ದರೆ ಅದನ್ನು ಮೈತ್ರಿ ಎನ್ನಲು ಸಾಧ್ಯವೇ? ನಾವು ಮುಂದೆ ಏನು ಮಾಡಬೇಕು ಎಂಬುದನ್ನು ನಮ್ಮ ಪಕ್ಷದ ನಾಯಕತ್ವ ನಿರ್ಧರಿಸಲಿದೆ. ಒಂದು ಕಡೆ ಒಂದು ಮಾತು ಹೇಳುತ್ತೀರಿ, ಮತ್ತೊಂದೆಡೆ ಸಂಪೂರ್ಣ ಭಿನ್ನವಾಗಿ ನಡೆದುಕೊಳ್ಳುತ್ತೀರಿ. ಈ ಬಗ್ಗೆ ನಮ್ಮ ಪಕ್ಷವೇ ನಿರ್ಧಾರ ಕೈಗೊಳ್ಳಬೇಕು. ಅಖಿಲೇಶ್‌ ಜಿ ಏನು ಮಾಡುತ್ತಾರೆ, ಏನು ಮಾಡುವುದಿಲ್ಲ ಎಂಬುದು ನನಗೆ ದೊಡ್ಡ ವಿಚಾರವಲ್ಲ. ನಾನು ನನ್ನ ಪಕ್ಷಕ್ಕೆ ಬದ್ಧನಾಗಿದ್ದೇನೆ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದನ್ನು ಪಾಲಿಸುತ್ತೇನೆ” ಎಂದಿದ್ದಾರೆ.
ಅಗತ್ಯವಿರುವ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಸ್ಪರ್ಧಿಸಲಿದೆ
ಅಗತ್ಯವಿರುವ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದಿರುವ ಅವರು, ಮೈತ್ರಿ ಮಾತುಕತೆ ನಡೆಯುತ್ತಿರುವಾಗಲೇ ಏಕಪಕ್ಷೀಯವಾಗಿ ಅಭ್ಯರ್ಥಿಗಳನ್ನು ಘೋಷಿಸುವುದು ಎಸ್‌ಪಿಗೆ ಮೈತ್ರಿಯ ಬಗ್ಗೆ ನಿಜವಾಗಿಯೂ ಬದ್ಧತೆ ಇದೆಯೇ ಎಂಬ ಪ್ರಶ್ನೆಯನ್ನು ಎತ್ತುತ್ತದೆ ಎಂದು ಹೇಳಿದ್ದಾರೆ.
 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ಅಭ್ಯರ್ಥಿಗಳ ಘೋಷಣೆ ಮತ್ತು ಸ್ಥಾನ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷದ ನಡುವೆ ಉಂಟಾಗಿರುವ ಈ ಭಿನ್ನಾಭಿಪ್ರಾಯ ಮುಂದಿನ ದಿನಗಳಲ್ಲಿ ಇಂಡಿಯಾ ಮೈತ್ರಿಕೂಟದ ರಾಜಕೀಯ ಸಮೀಕರಣದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement