ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ನ್ಯಾಯಾಲಯದ ಹೊರಗೆ ಭೀಕರ ದಾಳಿ: ಕೊಲೆ ಆರೋಪಿಯ ಕೈ ಕತ್ತರಿಸಿ, ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು

ಪುಣೆ: ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದ ಕೊಲೆ ಆರೋಪಿಯ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿ, ಗುಂಡು ಹಾರಿಸಲು ಯತ್ನಿಸಿರುವ ಘಟನೆ ಬುಧವಾರ ಮಧ್ಯಾಹ್ನ ಪುಣೆಯ ಶಿವಾಜಿನಗರ ನ್ಯಾಯಾಲಯದ ಆವರಣದ ಹೊರಭಾಗದಲ್ಲಿ ನಡೆದಿದೆ. ಹಲ್ಲೆಯ ವೇಳೆ ಆರೋಪಿಯ ಒಂದು ಕೈಯನ್ನೇ ಕತ್ತರಿಸಿರುವ ದುಷ್ಕರ್ಮಿಗಳು, ಬಳಿಕ ಸ್ಕೂಟರ್‌ಗಳಲ್ಲಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಮೇಲೆದ್ದು ನಿಲ್ಲಲೂ ಸಾಧ್ಯವಾಗದೆ ಒದ್ದಾಡುತ್ತಿದ್ದ ದೃಶ್ಯಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.
ಪೊಲೀಸರ ಪ್ರಕಾರ ಮಂದಾರ ಕಿವ್ಡೆ (Mandar Kivde) ಹಲ್ಲೆಗೊಳಗಾದ ವ್ಯಕ್ತಿ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ನ್ಯಾಯಾಲಯದ ಆವರಣದ ಹೊರಭಾಗದಲ್ಲಿ ಮಂದಾರ ಕಿವ್ಡೆ ಮೇಲೆ ಮಚ್ಚಿನಿಂದ ಪದೇಪದೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಬಳಿಕ ಇಬ್ಬರು ಸ್ಕೂಟರ್‌ಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕಿವ್ಡೆ ಮೇಲೆದ್ದು ನಡೆಯಲು ಪ್ರಯತ್ನಿಸುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.
ಇನ್ನೊಂದು ವಿಡಿಯೊದಲ್ಲಿ ಕಿವ್ಡೆ ರಸ್ತೆಬದಿಯ ಫುಟ್‌ಪಾತ್ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಹಾಗೂ ಅವರ ಒಂದು ಕೈ ಕತ್ತರಿಸಲ್ಪಟ್ಟಿರುವುದು ಕಂಡುಬಂದಿದೆ. ಘಟನೆಯ ಬಳಿಕ ಸ್ಥಳೀಯರು ಗಾಯಾಳುವಿನ ಸುತ್ತ ಜಮಾಯಿಸಿದ್ದಾರೆ.
ಪುಣೆ ನಗರ ಪೊಲೀಸರ ಪ್ರಕಾರ, ಬುಧವಾರ ಮಧ್ಯಾಹ್ನ ಸುಮಾರು 1:15ರ ವೇಳೆಗೆ ಈ ದಾಳಿ ನಡೆದಿದೆ. ಹಲವು ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಕಿವ್ಡೆ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ಎರಡು ಬಂದೂಕುಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಪ್ರಮುಖ ಸುದ್ದಿ :-   ಭಾರತದಲ್ಲಿ ಚಿನ್ನದ ಆಮದು ಶೇ. 40ರಷ್ಟು ಕುಸಿತ, ದರವೂ ಕುಸಿತ ; ಮೋದಿ ಮನವಿಗೆ ಜನರು ಸ್ಪಂದಿಸಿದ್ದು ಕಾರಣ ?

ದಾಳಿಕೋರರ ಬಂಧನಕ್ಕೆ ಪೊಲೀಸರ ವಿಶೇಷ ತಂಡ ರಚನೆ
ಘಟನೆಗೆ ಸಂಬಂಧಿಸಿದಂತೆ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಗೌಹರ್ ಹಸನ್ ಪ್ರತಿಕ್ರಿಯಿಸಿ, ದಾಳಿಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ಅಪರಾಧ ವಿಭಾಗ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಳಿಯಲ್ಲಿ ನಾಲ್ಕರಿಂದ ಐದು ಮಂದಿ ಭಾಗಿಯಾಗಿರುವ ಶಂಕೆಯಿದೆ. ಆದರೆ ನಿಖರವಾಗಿ ಎಷ್ಟು ಮಂದಿ ದಾಳಿ ನಡೆಸಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಜಂಟಿ ಪೊಲೀಸ್ ಆಯುಕ್ತ ಸಂಜಯ ದರಾಡೆ ಮಾತನಾಡಿ, ನ್ಯಾಯಾಲಯದ ಕಾರ್ಯಕಲಾಪಗಳು ನಡೆಯುತ್ತಿದ್ದ ಸಮಯದಲ್ಲೇ ಈ ಹಲ್ಲೆ ನಡೆದಿದೆ. ಮಂದಾರ ಮೇಲೆ ದಾಳಿ ನಡೆದ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೂವರಿಂದ ನಾಲ್ವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ದಾಳಿಕೋರರನ್ನು ಪತ್ತೆಹಚ್ಚಿ ಬಂಧಿಸುವುದು ಹಾಗೂ ಪ್ರಕರಣದ ತನಿಖೆ ನಡೆಸಲು ಎಂಟರಿಂದ ಹತ್ತು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಸರಕುಗಳ ಮೇಲೆ ಶೇ. 25ರ ಸುಂಕಕ್ಕೆ ಅಮೆರಿಕ ಪ್ರಸ್ತಾವನೆ ; ವ್ಯಾಪಾರ ಒಪ್ಪಂದವಾದರೆ ಸುಂಕ ಇಳಿಕೆ : ಚೀನಾ ಮೇಲೆ...?

2025ರ ಕೊಲೆ ಪ್ರಕರಣದ ಸೇಡಿಗಾಗಿ ದಾಳಿ ನಡೆದಿದೆಯೇ?
ಮಂದಾರ ಕಿವ್ಡೆ ವಿರುದ್ಧ 2025ರಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಇತ್ತೀಚೆಗಷ್ಟೇ ಈತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗಾಗಿ, ಈತನ ಮೇಲಿನ ಈ ಭೀಕರ ದಾಳಿಗೂ ಕಳೆದ ವರ್ಷದ ಕೊಲೆ ಪ್ರಕರಣಕ್ಕೂ ಸಂಬಂಧವಿದೆಯೇ ಅಥವಾ ಬೇರೆ ಯಾವುದಾದರೂ ಕಾರಣಕ್ಕಾಗಿ ಹಲ್ಲೆ ನಡೆಸಲಾಗಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದಲ್ಲದೆ, ದಾಳಿಯ ವೇಳೆ ನಿಜವಾಗಿಯೂ ಗುಂಡು ಹಾರಿಸಲಾಗಿದೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಗಾಯಾಳುವಿನ ದೇಹದಲ್ಲಿರುವ ಗಾಯಗಳ ಸ್ವರೂಪ ಹಾಗೂ ಘಟನಾ ಸ್ಥಳದಲ್ಲಿ ವಶಪಡಿಸಿಕೊಂಡಿರುವ ಆಯುಧಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸುವ ಮೂಲಕ ಗುಂಡಿನ ದಾಳಿ ನಡೆದಿರುವ ಬಗ್ಗೆ ಸ್ಪಷ್ಟತೆ ಪಡೆಯಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement