

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರು ಅಥವಾ ಫೋಟೊ ಇರುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಇನ್ಸ್ಟಾಗ್ರಾಂ ಸ್ವಯಂಚಾಲಿತವಾಗಿ ನಿರ್ಬಂಧಿಸುತ್ತಿದೆ ಎಂದು ಆರೋಪಿಸಿ ಯೂಥ್ ಕಾಂಗ್ರೆಸ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.
ರಾಹುಲ್ ಗಾಂಧಿ ಅವರ ಹೆಸರು ಉಲ್ಲೇಖಿಸಿರುವ ಅಥವಾ ಅವರ ಫೋಟೊಗಳನ್ನು ಒಳಗೊಂಡಿರುವ ಕಾರಣಕ್ಕಾಗಿಯೇ ಕಾಂಗ್ರೆಸ್ ಕಾರ್ಯಕರ್ತರು ಹಂಚಿಕೊಳ್ಳುವ ಪೋಸ್ಟ್ಗಳನ್ನು ಭಾರತದಲ್ಲಿ ವೀಕ್ಷಿಸಲು ಸಾಧ್ಯವಾಗದಂತೆ ನಿರ್ಬಂಧಿಸಲಾಗುತ್ತಿದೆ ಎಂದು ಅದು ಆರೋಪಿಸಿದೆ.
ಯೂಥ್ ಕಾಂಗ್ರೆಸ್ನ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಮನು ಜೈನ್ ಅವರು ಮೆಟಾ ಪ್ಲಾಟ್ಫಾರ್ಮ್ಸ್ ವಿರುದ್ಧ ಈ ಅರ್ಜಿ ಸಲ್ಲಿಸಿದ್ದಾರೆ. ಯೂಥ್ ಕಾಂಗ್ರೆಸ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯ ನಿರ್ವಹಣೆಯ ಜವಾಬ್ದಾರಿಯೂ ಮೆಟಾ ಸಂಸ್ಥೆಯ ವ್ಯಾಪ್ತಿಯಲ್ಲಿದೆ. ಸೆಪ್ಟೆಂಬರ್ 29ರಿಂದ ನವೆಂಬರ್ 23ರವರೆಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಬಂದಿರುವ ಹಲವು ಸೂಚನೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸೂಚನೆಗಳಲ್ಲಿ, ಕಾರ್ಯಕರ್ತರು ಪ್ರಕಟಿಸಿದ್ದ ಪೋಸ್ಟ್ಗಳನ್ನು ಭಾರತದಲ್ಲಿ ವೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು.
ರಾಹುಲ್ ಗಾಂಧಿ ಹೆಸರು, ಫೋಟೊಗಳೇ ಪೋಸ್ಟ್ ನಿರ್ಬಂಧಕ್ಕೆ ಕಾರಣವೇ ಎಂದು ಪ್ರಶ್ನೆ
ಕಾಂಗ್ರೆಸ್ ಕಾರ್ಯಕರ್ತರು ಹಂಚಿಕೊಂಡಿದ್ದ ಹಲವು ಬಗೆಯ ಪೋಸ್ಟ್ಗಳನ್ನು ಇನ್ಸ್ಟಾಗ್ರಾಂ ನಿರ್ಬಂಧಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಿರುವ ಮದುವೆಯ ಆಮಂತ್ರಣ ಪತ್ರಿಕೆ, ಪಕ್ಷದ ಕಾರ್ಯಕರ್ತರಿಗೆ ಸಲ್ಲಿಸಿದ ಜನ್ಮದಿನದ ಶುಭಾಶಯಗಳು, ಮಾಜಿ ಪ್ರಧಾನಿಯೊಬ್ಬರಿಗೆ ಸಲ್ಲಿಸಿದ ಶ್ರದ್ಧಾಂಜಲಿ, ರಾಹುಲ್ ಗಾಂಧಿ ಅವರ ಜೊತೆ ಕಾರ್ಯಕರ್ತರು ತೆಗೆಸಿಕೊಂಡಿದ್ದ ಛಾಯಾಚಿತ್ರಗಳು ಹಾಗೂ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಅವರು ಮಾಡಿದ ಭಾಷಣಕ್ಕೆ ಸಂಬಂಧಿಸಿದ ಪೋಸ್ಟ್ಗಳು ಕೂಡ ನಿರ್ಬಂಧಕ್ಕೆ ಒಳಗಾಗಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಎಲ್ಲ ಪೋಸ್ಟ್ಗಳಲ್ಲಿ ಒಂದು ಸಾಮಾನ್ಯ ಅಂಶವಿದೆ. ಅವುಗಳಲ್ಲಿ ರಾಹುಲ್ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು ಅಥವಾ ಅವರ ಛಾಯಾಚಿತ್ರಗಳನ್ನು ಬಳಸಲಾಗಿತ್ತು. ಹೀಗಾಗಿ, ರಾಹುಲ್ ಗಾಂಧಿ ಅವರ ಹೆಸರು ಮತ್ತು ಫೋಟೊಗಳನ್ನು ಪ್ರಮುಖ ಪದಗಳಾಗಿ (ಕೀವರ್ಡ್ಗಳು) ಗುರುತಿಸಿ, ಅಂತಹ ಪೋಸ್ಟ್ಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುವ ವ್ಯವಸ್ಥೆಯನ್ನು ಇನ್ಸ್ಟಾಗ್ರಾಂ ಹೊಂದಿರಬಹುದು ಎಂಬುದು ಅರ್ಜಿದಾರರ ಆರೋಪವಾಗಿದೆ.
ಪೋಸ್ಟ್ಗಳನ್ನು ನಿರ್ಬಂಧಿಸುವ ಸಂದರ್ಭದಲ್ಲಿ ಮೆಟಾ ಯಾವುದೇ ಅಧಿಕೃತ ಆದೇಶ, ನೋಟಿಸ್ ಅಥವಾ ಸ್ಪಷ್ಟನೆ ನೀಡಿಲ್ಲ ಎಂದು ಮನು ಜೈನ್ ಆರೋಪಿಸಿದ್ದಾರೆ. ಕೆಲವು ಪೋಸ್ಟ್ಗಳನ್ನು ಪ್ರಕಟಿಸಿದ ಹಲವು ತಿಂಗಳುಗಳ ನಂತರ ನಿರ್ಬಂಧಿಸಿರುವುದನ್ನೂ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಚಿಕಾಗೊ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣಕ್ಕೆ ಸಂಬಂಧಿಸಿದ ಪೋಸ್ಟ್ವೊಂದನ್ನು ನಿರ್ಬಂಧಿಸಿದ ದಿನವೇ ಮತ್ತೆ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ಆಕ್ಷೇಪಾರ್ಹ ಅಂಶವಿಲ್ಲದ ಇಂತಹ ಪೋಸ್ಟ್ಗಳನ್ನು ಆರಂಭದಲ್ಲಿ ಯಾವ ಕಾರಣಕ್ಕಾಗಿ ನಿರ್ಬಂಧಿಸಲಾಯಿತು ಮತ್ತು ಅವುಗಳನ್ನು ಗುರುತಿಸಲು ಯಾವ ನಿಯಮಗಳು ಅಥವಾ ನಿರ್ದಿಷ್ಟ ಸೂಚನೆಗಳನ್ನು ಬಳಸಲಾಗಿದೆ ಎಂಬುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಕೆಲವು ವಿಷಯಗಳನ್ನು (content) ಅವು ಪ್ರಕಟಗೊಂಡ ಹಲವು ತಿಂಗಳುಗಳ ನಂತರ ನಿರ್ಬಂಧಿಸಲಾಗಿದೆ ಎಂಬುದನ್ನೂ ಅರ್ಜಿಯಲ್ಲಿ ಹೇಳಿದ್ದಾರೆ.
ಇಂತಹ ವಿಷಯಗಳನ್ನು ಏಕೆ ನಿರ್ಬಂಧಿಸಲಾಯಿತು ಮತ್ತು ಯಾವ ನಿರ್ದಿಷ್ಟ ನಿಯಮಗಳು ಅಥವಾ ಸೂಚನೆಗಳನ್ನು ಆಧರಿಸಿ ಇವುಗಳನ್ನು ಗುರುತಿಸಲಾಯಿತು ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಈ ನಿರ್ಬಂಧಿಸುವ ವ್ಯವಸ್ಥೆಯು ಕಾನೂನಿನ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿರುವ ಅಧಿಕಾರ ವ್ಯಾಪ್ತಿಯನ್ನೂ ಮೀರಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಇಂತಹ ನಿರ್ಬಂಧಗಳು ನಾಗರಿಕರ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ ಉಂಟುಮಾಡುತ್ತವೆ ಎಂದೂ ಆಕ್ಷೇಪಿಸಿದೆ.
ಈ ಹಿನ್ನೆಲೆಯಲ್ಲಿ ಯೂಥ್ ಕಾಂಗ್ರೆಸ್, ಕೇಂದ್ರ ಸರ್ಕಾರ ಮತ್ತು ಮೆಟಾ ಸಂಸ್ಥೆಯಿಂದ ಸ್ಪಷ್ಟನೆ ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ರಾಹುಲ್ ಗಾಂಧಿ ಅವರಿಗೆ ಸಂಬಂಧಿಸಿದ ಪೋಸ್ಟ್ಗಳನ್ನು ನಿರ್ಬಂಧಿಸಲು ಹೊರಡಿಸಿರುವ ಆದೇಶಗಳು ಯಾವುವು ಎಂಬುದನ್ನು ಬಹಿರಂಗಪಡಿಸಬೇಕು. ಅಲ್ಲದೆ, ಅಂತಹ ಪೋಸ್ಟ್ಗಳನ್ನು ಗುರುತಿಸಿ ನಿರ್ಬಂಧಿಸಲು ಬಳಸಿರುವ ನಿರ್ದಿಷ್ಟ ಕೀವರ್ಡ್ಗಳು ಯಾವುವು ಎಂಬ ಮಾಹಿತಿಯನ್ನೂ ಒದಗಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.





ನಿಮ್ಮ ಕಾಮೆಂಟ್ ಬರೆಯಿರಿ