

ಶಿರಸಿ: ಹಿಂದೂ ಸಮಾಜದ ಜಾಗೃತಿ ಸಮಾವೇಶದ ಹಿನ್ನೆಲೆಯಲ್ಲಿ ಶಿರಸಿಯ ರಾಘವೇಂದ್ರ ಮಠದ ಆವರಣದಲ್ಲಿ ನವೆಂಬರ್ 25ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಕೊನೆಯ ದಿನವಾದ ನ.27ರಂದು ಬೆಳಿಗ್ಗೆ 10 ಗಂಟೆಗೆ ಬೃಹತ್ ಹಿಂದೂ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶಕ್ಕೆ ಸುಮಾರು 15 ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ.
ಲೋಕಕಲ್ಯಾಣದ ಸಂಕಲ್ಪದೊಂದಿಗೆ ನಡೆಯಲಿರುವ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ವಿಷ್ಣುಯಾಗ, ವಿಷ್ಣು ಸಹಸ್ರನಾಮ ಪಾರಾಯಣ, ನವಗ್ರಹ ಹೋಮ ಸೇರಿದಂತೆ ಹಲವು ವೈದಿಕ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿವೆ.
ನ.27ರಂದು ಧರ್ಮ, ಸಂಸ್ಕೃತಿ ಹಾಗೂ ಪರಂಪರೆಯ ಕುರಿತು ಜಾಗೃತಿ ಮೂಡಿಸುವ ಆಶಯದೊಂದಿಗೆ ಬೃಹತ್ ಹಿಂದೂ ಸಮಾವೇಶ ಸಮಾವೇಶ ಆಯೋಜಿಸಲಾಗಿದೆ. ಅಂದು (ಶುಕ್ರವಾರ) ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಬೃಹತ್ ಹಿಂದೂ ಜಾಗೃತಿ ಸಮಾವೇಶಕ್ಕೆ ಕೊಲ್ಲಾಪುರದ ಶ್ರೀಕ್ಷೇತ್ರ ಸಿದ್ಧಗಿರಿ ಮಹಾಸಂಸ್ಥಾನದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹಾಗೂ ಸಿದ್ದಾಪುರದ ಶ್ರೀಕ್ಷೇತ್ರ ಚೈತನ್ಯ ರಾಜಾರಾಮ ಆಶ್ರಮದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಬೆಂಗಳೂರಿನ ಖ್ಯಾತ ಉದ್ಯಮಿ ಡಾ. ಎಚ್.ಎನ್. ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ರಾಘವೇಂದ್ರ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅಧ್ಯಕ್ಷತೆ ವಹಿಸಲಿದ್ದಾರೆ.
ನ.25ರಂದು ಗಣಪತಿ ಹೋಮದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ವಿಷ್ಣುಯಾಗವೂ ಆರಂಭವಾಗಿದೆ. ನ.26ರಂದು ಬೆಳಿಗ್ಗೆ ವಿಷ್ಣುಯಾಗ ಹಾಗೂ ನವಗ್ರಹ ಹೋಮ ನೆರವೇರಲಿದ್ದು, ಸಂಜೆ ಪೂಜ್ಯಾಯ ರಾಘವೇಂದ್ರಾಯ ಮಂತ್ರದ 10,008 ಜಪ, ರಥೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ.
ನ.27ರಂದು ಬೆಳಿಗ್ಗೆ ವಿಷ್ಣುಯಾಗ, ನಾಗಹೋಮ ಹಾಗೂ ಪೂಜ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಪೂರ್ಣಾಹುತಿ ನಡೆಯಲಿದೆ. ಬಳಿಕ ಬೃಹತ್ ಹಿಂದೂ ಜಾಗೃತಿ ಸಮಾವೇಶ ನಡೆಯಲಿದ್ದು, , ಮಧ್ಯಾಹ್ನ 12:30ರಿಂದ 2.30ರವರೆಗೆ ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದ ಹಿನ್ನೆಲೆಯಲ್ಲಿ ಸುಮಾರು 10 ಸಾವಿರ ಜನರಿಗೆ ಅನ್ನಪ್ರಸಾದ ವಿತರಿಸುವ ಉದ್ದೇಶದಿಂದ ಸಿದ್ಧತೆ ಕೈಗೊಳ್ಳಲಾಗಿದೆ.
ನ.27ರಂದು ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಖ್ಯಾತ ಕೊಳಲುವಾದಕ ಅಮಿತ್ ನಾಡಿಗ್ ಹಾಗೂ ಅವರ ತಂಡದಿಂದ ‘ಅಮೃತ ರಂಗ ಸಂಗೀತ’ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಹಾಡು, ನೃತ್ಯ ಹಾಗೂ ವಿವಿಧ ವಾದ್ಯಮೇಳಗಳ ಸಂಗಮದೊಂದಿಗೆ ಈ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.





ನಿಮ್ಮ ಕಾಮೆಂಟ್ ಬರೆಯಿರಿ