ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಜಾತಿಭೇದ ಮರೆತು ಸಂಘಟಿತರಾಗಿ: ಶಿರಸಿಯ ಹಿಂದೂ ಜಾಗೃತಿ ಸಮಾವೇಶದಲ್ಲಿ ಕಾಡಸಿದ್ದೇಶ್ವರ ಸ್ವಾಮೀಜಿ

ಶಿರಸಿ: ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಸಮರ್ಪಕ ಅರಿವಿಲ್ಲದೆ ಇಲ್ಲಸಲ್ಲದ ಟೀಕೆ ಮಾಡುವುದು ಸರಿಯಲ್ಲ. ನಮ್ಮ ಪರಂಪರೆ ಹಾಗೂ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಅದರ ನೈಜ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಹಿಂದೂ ಸಮಾಜದಲ್ಲಿರುವ ಜಾತಿಭೇದ, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪರಸ್ಪರ ಪ್ರೀತಿ ಮತ್ತು ಒಗ್ಗಟ್ಟಿನಿಂದ ಮುಂದೆಸಾಗಬೇಕು ಎಂದು ಕೊಲ್ಲಾಪುರದ ಕನ್ಹೇರಿಮಠದ ಆದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕರೆ ನೀಡಿದರು.
ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಗರದ ರಾಘವೇಂದ್ರ ಮಠದ ಆವರಣದಲ್ಲಿ ವಿಷ್ಣುಯಾಗ ಮತ್ತು ಬೃಹತ್ ಹಿಂದೂ ಜಾಗೃತಿ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ, ಜಾಗೃತಿ ಸಂದೇಶ ನೀಡಿದರು. ನಮ್ಮ ಸಂಪ್ರದಾಯ, ಆಚರಣೆ, ನೀತಿಯನ್ನು ನಮಗೆ ಅನಿಸಿದಂತೆ ರೂಢಿಸಿಕೊಂಡು ಅನುಸರಿಸೋಣ, ಆದರೆ ಪರಸ್ಪರರನ್ನು ದೂಷಿಸಿಕೊಳ್ಳುವುದು ಸರಿಯಲ್ಲ ಎಂದರು.
ಭಾರತವು ಹಲವು ಭಾಷೆ, ಜನಜಾತಿಗಳು, ಸಂಸ್ಕೃತಿಗಳು ಸೇರಿದಂತೆ ಹಲವು ವೈವಿಧ್ಯತೆಗಳನ್ನು ಹೊಂದಿದ್ದರೂ ವಿವಿಧತೆಯಲ್ಲಿ ಏಕತೆ ಕಾಪಾಡಿಕೊಂಡು ಬಂದಿದ್ದು ವಿಶೇಷವಾಗಿದೆ. ಹಿಂದೂ ಸಮಾಜ ತನ್ನಲ್ಲಿರುವ ಸಾಮರ್ಥ್ಯವನ್ನು ಅರಿತು ಸಂಘಟಿತವಾಗಿ ಮುನ್ನಡೆಯಬೇಕು. ಧರ್ಮದ ಮೂಲತತ್ವಗಳಾದ ವೇದ, ಆಗಮ, ಕರ್ಮಸಿದ್ಧಾಂತ ಮೊದಲಾದವುಗಳ ಮಹತ್ವವನ್ನು ಅರಿತುಕೊಂಡು ಅದರ ಬಗ್ಗೆ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ನೀಡಬೇಕು. ಗೋವನ್ನು ತಾಯಿಯ ಸ್ಥಾನದಲ್ಲಿ ಕಾಣುವ ಸಂಸ್ಕೃತಿ ನಮ್ಮದು. ಗೋಮಾತೆ ಕೇವಲ ಧಾರ್ಮಿಕ ಶ್ರದ್ಧೆಯ ಸಂಕೇತವಲ್ಲ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರಬಿಂದುವಾಗಿದೆ ಎಂದರು.

ಜಾತಿಭೇದ ಮತ್ತು ಅಸ್ಪೃಶ್ಯತೆ  ದೂರವಾಗಬೇಕು. ಪ್ರತಿಯೊಬ್ಬರಿಗೂ ಮತ್ತೊಬ್ಬರಿಗೆ ಗೌರವ ನೀಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾ ಕಾರ್ಯಗಳನ್ನು ಟೀಕಿಸುವವರು ಅದರ ಕಾರ್ಯಕ್ಷೇತ್ರಕ್ಕೆ ಭೇಟಿ ನೀಡಿ ವಾಸ್ತವ ತಿಳಿದುಕೊಳ್ಳಬೇಕು. ಮತಾಂತರ, ಅಕ್ರಮ ವಲಸೆ ಹಾಗೂ ವಕ್ಫ್ ಆಸ್ತಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಸಮಾಜ ಜಾಗೃತವಾಗಿರಬೇಕು ಎಂದು ಹೇಳಿದರು. ಸಂಕಷ್ಟ ಬಂದಾಗ ಮಾತ್ರ ಎಚ್ಚೆತ್ತುಕೊಳ್ಳುವ ಬದಲು ಮೊದಲಿನಿಂದಲೇ ಸಮಾಜದ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದರು.
ಅಧ್ಯಯನ ಮಾಡದೇ ಟೀಕೆ…
ಸಿದ್ದಾಪುರದ ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂದೂ ಸನಾತನ ಧರ್ಮ ಜಗತ್ತಿನ ಅತ್ಯಂತ ಶ್ರೇಷ್ಠವಾದ ಧರ್ಮವಾಗಿದೆ. ಆದರೆ ಅದರ ಆಳವಾದ ತತ್ವಗಳು ನಮಗೇ ಸಂಪೂರ್ಣವಾಗಿ ಪರಿಚಯವಿಲ್ಲ. ಭಗವದ್ಗೀತೆ ಮತ್ತು ಉಪನಿಷತ್ತುಗಳು ಸಾರುವ ವಿಚಾರಗಳನ್ನು ಅರಿತುಕೊಳ್ಳುವ ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವಾಗಬೇಕು. ಸನಾತನ ಧರ್ಮದ ಕುರಿತು ಟೀಕೆ ಮಾಡುವವರು ಅದರ ಮೂಲ ಗ್ರಂಥಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಿರುವುದಿಲ್ಲ. ಪ್ರಾಮಾಣಿಕವಾಗಿ ಅಧ್ಯಯನ ಮಾಡಿದವರಿಗೆ ಅದರ ತತ್ವಗಳ ಆಳ ಮತ್ತು ಮಹತ್ವ ಅರಿವಾಗುತ್ತದೆ ಎಂದರು. ಸನಾತನ ಧರ್ಮದ ತತ್ವಗಳು ಕೇವಲ ಮಾತುಗಳಿಗೆ ಸೀಮಿತವಾಗದೆ ಆಚರಣೆಯಲ್ಲಿ ಬರಬೇಕು.

ಪ್ರಮುಖ ಸುದ್ದಿ :-   ಪಶ್ಚಿಮ ಬಂಗಾಳ: ಟಿಎಂಸಿ ಬಂಡಾಯ ಬಣಕ್ಕೆ ಹಿನ್ನಡೆ; ವಿಪಕ್ಷ ನಾಯಕ, ಮುಖ್ಯ ಸಚೇತಕರ ನೇಮಕ ರದ್ದುಪಡಿಸಿದ ಹೈಕೋರ್ಟ್

ಉದ್ಯಮಿ ಡಾ.ಎಚ್.ಎಸ್.ಶೆಟ್ಟಿ ಮಾತನಾಡಿ, ಹಿಂದೂಗಳ ಧರ್ಮಾಚರಣೆ ವಿವಿಧ ಆಯಾಮಗಳಲ್ಲಿ ನಡೆಯುತ್ತವೆ. ಹಿಂದೂ ಧರ್ಮದ ಬಗ್ಗೆ ಬೇರೆಬೇರೆ ರೀತಿಯ ವ್ಯಾಖ್ಯಾನ ಮಾಡುತ್ತಾರೆ. ಅದರಲ್ಲೂಕೆಲವು ದೇಶಗಳಲ್ಲಿ ಕೆಟ್ಟ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಹೀಗಾಗಿ ನಮ್ಮ ಆಚರಣೆಯ ಮಹತ್ವವನ್ನು ಜಗತ್ತಿಗೆ ತೋರಿಸಬೇಕು ಎಂದರು.
ಜಾತಿವಾದ ಮತ್ತು ಅಸ್ಪೃಶ್ಯತೆಯನ್ನು ತೊಡೆದುಹಾಕಿ ಸಮಾನತೆ ಮತ್ತು ಸಹೋದರತ್ವ ಬೆಳೆಸಬೇಕು. ಮಕ್ಕಳಿಗೆ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಪರಿಚಯ ಮಾಡಿಸುವುದರ ಜತೆಗೆ ಕೃಷಿ ಹಾಗೂ ಶ್ರಮ ಸಂಸ್ಕೃತಿಗೂ ಆದ್ಯತೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳು 625 ಎಕರೆ ಪ್ರದೇಶದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳ ಜತೆಗೆ ಕೃಷಿ ಮತ್ತು ಗೋಸಾಕಣೆ ನಡೆಸುತ್ತಿದ್ದಾರೆ. ಸುಮಾರು 1,500 ದೇಶಿ ಹಸುಗಳನ್ನು ಸಾಕುತ್ತಿದ್ದಾರೆ. ಪ್ರವೀಣ ಸರಸ್ವತಿ ಅವಧೂತರು ಹಾಗೂ ಬ್ರಹ್ಮಾನಂದ ಭಾರತಿ ಸ್ವಾಮೀಜಿಗಳು ಸನಾತನ ಧರ್ಮದ ಉಳಿವು ಮತ್ತು ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಇಂತಹ ಧಾರ್ಮಿಕ ನಾಯಕರ ಮಾರ್ಗದರ್ಶನದಲ್ಲಿ ಧರ್ಮದ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಪ್ರಮುಖ ಸುದ್ದಿ :-   ಇಂದು ಶಿರಸಿಯಲ್ಲಿ ಬೃಹತ್‌ ಹಿಂದೂ ಜಾಗೃತಿ ಸಮಾವೇಶ

ಎಪಿಎಂಸಿ ಮಾಜಿ ಅಧ್ಯಕ್ಷ ಸುನೀಲ ನಾಯ್ಕ ಮಳಲಗಾಂವ ಹಾಗೂ ಗೋರಕ್ಷಕ ತಂಡದ ರವಿ ಗೌಳಿ ಅವರನ್ನು ಶ್ರೀಗಳು ಸನ್ಮಾನಿಸಿದರು.
ರಾಘವೇಂದ್ರ ಸೇವಾ ಸಮಿತಿ ಕಾರ್ಯದರ್ಶಿ ಪ್ರೊ. ಕೆ.ವಿ. ಭಟ್ಟ ಸ್ವಾಗತಿಸಿದರು. ಗೌರಿ ಮಹಿಳಾ ಭಜನಾ ಮಂಡಳಿಯವರು ಪ್ರಾರ್ಥಿಸಿದರು. ಸುಧೀರ ಬೆಂಗ್ರೆ ವಂದೇ ಮಾತರಂ ಗೀತೆ ಹಾಡಿದರು. ಅವನಿ ಶ್ಲೋಕ ಪ್ರಸ್ತುತಪಡಿಸಿದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಕಳೆದ ಮೂರು ದಿನಗಳಿಂದ ಕುಮಾರ ಭಟ್ಟ ಕೊಳಗಿಬೀಸ್ ಅವರ ನೇತೃತ್ವದಲ್ಲಿ ವಿಷ್ಣುಯಾಗ, ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ನವಗ್ರಹ ಹೋಮ ನಡೆದಿದ್ದು ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶುಕ್ರವಾರ ಪೂರ್ಣಾಹುತಿ ನಡೆಯಿತು. ಮಧ್ಯಾಹ್ನ ಸಹಸ್ರಾರು ಜನರು ಪ್ರಸಾದ ಭೋಜನ ಸ್ವೀಕರಿಸಿದರು.
ಬೆಂಗಳೂರಿನ ಹೆಸರಾಂತ ಕಲಾವಿದ ಅಮಿತ್ ನಾಡಿಗ್ ಮತ್ತು ಸಂಗಡಿಗರಿಂದ ಹಾಡು, ನೃತ್ಯ ಹಾಗೂ ವಾದ್ಯಮೇಳಗಳನ್ನೊಳಗೊಂಡ ಅಮೃತ ರಂಗ ಸಂಗೀತ ಕಾರ್ಯಕ್ರಮ ನಡೆಯಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement