ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಎನ್‌ಡಿಎ ಸರ್ಕಾರಕ್ಕೆ ‘ಮ್ಯಾಚ್ 22’-‘ಕ್ಯಾಚ್-22’ : ಡಿಲಿಮಿಟೇಷನ್ ಮಸೂದೆಗೆ ಡಿಎಂಕೆ ನಿಲುವೇ ನಿರ್ಣಾಯಕ ; ಹೀಗಿದೆ ಲೆಕ್ಕಾಚಾರ

ನವದೆಹಲಿ : ಸೋಮವಾರದಿಂದ ಮತ್ತೆ ಆರಂಭವಾಗಲಿರುವ ಸಂಸತ್ತಿನ ಅಧಿವೇಶನದಲ್ಲಿ, ಲೋಕಸಭೆಯ ಒಟ್ಟು ಸದಸ್ಯಬಲವನ್ನು ಪ್ರಸ್ತುತ 543ರಿಂದ 850ಕ್ಕೆ ಹೆಚ್ಚಿಸುವ  ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮತ್ತೆ ಮಂಡಿಸುವ ನಿರೀಕ್ಷೆಯಿದೆ. ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಮೂಲಕ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಈ ಪ್ರಸ್ತಾವನೆ ಏಪ್ರಿಲ್‌ನಲ್ಲಿ ಸಂಸತ್ತಿನಲ್ಲಿ ಸೋಲು ಕಂಡಿತ್ತು.
ಸಂವಿಧಾನದ 131ನೇ ತಿದ್ದುಪಡಿ ಮಸೂದೆ–2026ರ ಮೂಲಕ ಲೋಕಸಭಾ ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸುವುದರ ಜೊತೆಗೆ, ಪ್ರತಿ ರಾಜ್ಯಕ್ಕೆ ಹಂಚಿಕೆಯಾಗಿರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನೂ ಪರಿಷ್ಕರಿಸಲು ಉದ್ದೇಶಿಸಲಾಗಿದೆ. 2029ರ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಮುನ್ನ ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೊಳಿಸುವುದು ಈ ಪ್ರಸ್ತಾವನೆಯ ಉದ್ದೇಶವೆಂದು ತಿಳಿಸಲಾಗಿದೆ.
ಇದರೊಂದಿಗೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ನಿಯಮಗಳನ್ನು ಒಳಗೊಂಡ ಪೂರಕ ಮಸೂದೆಗಳನ್ನೂ ಮಂಡಿಸುವ ನಿರೀಕ್ಷೆಯಿದೆ.
ಕ್ಷೇತ್ರ ಮರುವಿಂಗಡಣೆ ಎಂದರೇನು?
ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಎಂದರೆ ಜನಸಂಖ್ಯೆಯನ್ನು ಸಾಮಾನ್ಯವಾಗಿ ಆಧಾರವಾಗಿಟ್ಟುಕೊಂಡು ಚುನಾವಣಾ ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸುವುದು ಹಾಗೂ ವಿವಿಧ ರಾಜ್ಯಗಳಿಗೆ ಹಂಚಿಕೆಯಾಗಿರುವ ಸಂಸತ್ ಸ್ಥಾನಗಳ ಸಂಖ್ಯೆಯನ್ನು ಪರಿಷ್ಕರಿಸುವ ಪ್ರಕ್ರಿಯೆಯಾಗಿದೆ. ಪ್ರಸ್ತಾವಿತ ಮಸೂದೆಯ ಪ್ರಕಾರ, ಲೋಕಸಭೆಯ ಗರಿಷ್ಠ ಸದಸ್ಯಬಲವನ್ನು ಪ್ರಸ್ತುತ 543ರಿಂದ 850ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ.
ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಮಸೂದೆಯ ಸುತ್ತ ನಡೆಯುತ್ತಿರುವ ರಾಜಕೀಯ ಲೆಕ್ಕಾಚಾರದಲ್ಲಿ ವಿಪಕ್ಷಗಳ ಒಟ್ಟು ಬಲಕ್ಕಿಂತಲೂ ಕೆಲವೇ ಸಂಸದರ ಮತಗಳು ನಿರ್ಣಾಯಕವಾಗುವ ಸಾಧ್ಯತೆಯಿದೆ. ಯಾರು ಮಸೂದೆಯ ಪರವಾಗಿ ಮತ ಚಲಾಯಿಸುತ್ತಾರೆ, ಯಾರು ವಿರೋಧಿಸುತ್ತಾರೆ, ಯಾರು ಮತದಾನದಿಂದ ದೂರ ಉಳಿಯುತ್ತಾರೆ ಅಥವಾ ಪಕ್ಷ ಬದಲಿಸಿ ಆಡಳಿತ ಮೈತ್ರಿಕೂಟದ ಪರ ನಿಲ್ಲುತ್ತಾರೆ ಎಂಬುದರ ಮೇಲೆ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಮಸೂದೆಯ ಭವಿಷ್ಯ ನಿರ್ಧಾರವಾಗಲಿದೆ.
ಪ್ರಸ್ತುತ ಲೋಕಸಭೆಯ ಪಕ್ಷವಾರು ಬಲಾಬಲವನ್ನು ಆಧರಿಸಿ ಲೆಕ್ಕ ಹಾಕಿದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ತನ್ನ ಬೇಕಾದ ಸಂಖ್ಯೆಗೆ ಹತ್ತಿರದಲ್ಲಿದೆ. ಆದರೂ ಒಂದಷ್ಟು ವಿಪಕ್ಷಗಳ ಮತಗಳು ಅದಕ್ಕೆ ಬೇಕಾಗುತ್ತದೆ. ಈ ಲೆಕ್ಕಾಚಾರದಲ್ಲಿ ಡಿಎಂಕೆಯ 22 ಸಂಸದರು ಅತ್ಯಂತ ನಿರ್ಣಾಯಕ ಸ್ಥಾನದಲ್ಲಿದ್ದಾರೆ.
ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಮೂರನೇ ಎರಡರಷ್ಟು ಬಹುಮತ ಅಗತ್ಯವಿರುವುದರಿಂದ ಸಂಸದರ ಸಂಖ್ಯಾಬಲಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಲೋಕಸಭೆಯ ಒಟ್ಟು 543 ಸ್ಥಾನಗಳ ಪೈಕಿ ಮೂರು ಸ್ಥಾನಗಳು ಖಾಲಿ ಇವೆ. ಲೋಕಸಭಾಧ್ಯಕ್ಷರು ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲ. ಅಮೃತಪಾಲ್ ಸಿಂಗ್ ಮತ್ತು ಎಂಜಿನಿಯರ್ ರಶೀದ್ ಎಂಬ ಇಬ್ಬರು ಸಂಸದರು ಜೈಲಿನಲ್ಲಿದ್ದಾರೆ. ಮುಂಗಾರು ಅಧಿವೇಶನದ ಮುಂದುವರಿದ ಭಾಗದಲ್ಲಿಯೂ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಅಮಾನತು ಮುಂದುವರಿದಿದೆ. ಹೀಗಾಗಿ ಮತದಾನಕ್ಕೆ ಲಭ್ಯವಿರುವ ಲೋಕಸಭೆಯ ಪರಿಣಾಮಕಾರಿ ಸದಸ್ಯಬಲ 536 ಆಗುತ್ತದೆ. ಇದರ ಮೂರನೇ ಎರಡರಷ್ಟು ಬಹುಮತದ ಮಿತಿ 357 ಮತಗಳಾಗಿವೆ.
ಎನ್‌ಡಿಎ ಹಾಲಿ ಬಲ 331  
ಲೋಕಸಭಾಧ್ಯಕ್ಷರನ್ನು ಹೊರತುಪಡಿಸಿದರೆ ಬಿಜೆಪಿಯ ಸಂಸದರ ಸಂಖ್ಯೆ 240. ಇದರೊಂದಿಗೆ ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳು ಹಾಗೂ ಬೆಂಬಲ ನೀಡುತ್ತಿರುವ ಪಕ್ಷಗಳ ಸಂಸದರ ಸಂಖ್ಯೆಯನ್ನು ಸೇರಿಸಿದರೆ ಆಡಳಿತ ಮೈತ್ರಿಕೂಟದ ಒಟ್ಟು ಬಲ 331 ಆಗುತ್ತದೆ.
ತೆಲುಗು ದೇಶಂ ಪಕ್ಷ-16, ಜನತಾ ದಳ (ಯುನೈಟೆಡ್)-12, ಏಕನಾಥ ಶಿಂಧೆ ನೇತೃತ್ವದ ಶಿವಸೇನೆ-13, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್)-5, ಹಿಂದೂಸ್ತಾನಿ ಅವಾಮ್ ಮೋರ್ಚಾ (ಸೆಕ್ಯುಲರ್)-1, ಜನತಾ ದಳ (ಸೆಕ್ಯುಲರ್)-2, ಎನ್‌ಸಿಪಿ-1, ಅಪ್ನಾ ದಳ್ (ಸೋನಿಲಾಲ್)-1, ಶಿರೋಮಣಿ ಅಕಾಲಿದಳ-1, ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣ-20, ರಾಷ್ಟ್ರೀಯ ಲೋಕದಳ-2, ಜನಸೇನಾ ಪಕ್ಷ-2, ಅಸ್ಸಾಂ ಗಣ ಪರಿಷತ್‌-1, ಎಜೆಎಸ್‌ಯು ಪಕ್ಷ-1 ಹಾಗೂ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ- ಎನ್‌ಡಿಎಗೆ ಬೆಂಬಲ ನೀಡುವ ಬಣದಲ್ಲಿದ್ದಾರೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್‌ಚಂದ್ರ ಪವಾರ್)(8)  ಹಾಗೂ  ವೈಎಸ್‌ಆರ್ ಕಾಂಗ್ರೆಸ್ ಪಕ್ಷ(4 ಸಂಸದರು)ವು ಈ ಮಸೂದೆಗೆ ಬೆಂಬಲ ನೀಡುವುದಾಗಿ ಪ್ರಕಟಿಸಿದ್ದಾರೆ.
ಇನ್ನೊಂದೆಡೆ, ವಿರೋಧ ಪಕ್ಷಗಳ ಬಣದ ಒಟ್ಟು ಸಂಸದಬಲ 200 ಆಗಿದೆ. ಕಾಂಗ್ರೆಸ್‌-98, ಸಮಾಜವಾದಿ ಪಕ್ಷ-37, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಬಣ-7, ಡಿಎಂಕೆ-22, ಸಿಪಿಐ (ಎಂ)-4, ಆರ್‌ಜೆಡಿ-4, ಆಮ್ ಆದ್ಮಿ ಪಕ್ಷ-3, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌-3, ಜೆಎಂಎಂ-3, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ)-3,  ಸಿಪಿಐ-2, ಸಿಪಿಐ (ಎಂಎಲ್)-2, ಎಐಎಂಐಎಂ-1, ವಿಸಿಕೆ-2, ಆಜಾದ್ ಸಮಾಜ ಪಕ್ಷ-1, ನ್ಯಾಷನಲ್ ಕಾನ್ಫರೆನ್ಸ್‌-1, ಕೇರಳ ಕಾಂಗ್ರೆಸ್‌-1, ಎಂಡಿಎಂಕೆ-1, ಆರ್‌ಎಲ್‌ಪಿ-1, ಭಾರತ್ ಆದಿವಾಸಿ ಪಕ್ಷ-1, ಆರ್‌ಎಸ್‌ಪಿ-1, ಪಪ್ಪು ಯಾದವ್ ಹಾಗೂ ವಿಶಾಲ್ ಪಾಟೀಲ್ ತಲಾ ಒಬ್ಬರು ವಿಪಕ್ಷಗಳ ಬಣದಲ್ಲಿದ್ದಾರೆ.
ಇನ್ನು ನಾಲ್ವರು ಸಂಸದರು ಯಾವುದೇ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿಲ್ಲ. ಜೋರಂ ಪೀಪಲ್ಸ್ ಮೂವ್‌ಮೆಂಟ್ ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಪಕ್ಷಗಳ ತಲಾ ಒಬ್ಬರು ಹಾಗೂ ಪಕ್ಷೇತರರಾದ ಮೊಹಮದ್ ಹನೀಫಾ ಮತ್ತು ಉಮೇಶ್‌ಭಾಯಿ ಬಾಬುಭಾಯಿ ಪಟೇಲ್ ಈ ನಾಲ್ವರು ಯಾವುದೇ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿಲ್ಲ.
ಈ ನಾಲ್ವರೂ ಸಂಸದರು ಎನ್‌ಡಿಎ ಪರವಾಗಿ ಮತ ಚಲಾಯಿಸಿದರೆ, ಪ್ರಸ್ತುತ 331 ಇರುವ ಆಡಳಿತ ಮೈತ್ರಿಕೂಟದ ಬಲ 335ಕ್ಕೆ ಏರಿಕೆಯಾಗಲಿದೆ. ಆದರೂ, ಮೂರನೇ ಎರಡರಷ್ಟು ಬಹುಮತಕ್ಕೆ ಅಗತ್ಯವಿರುವ 357 ಮತಗಳ ಗುರಿ ತಲುಪಲು ಇನ್ನೂ 22 ಮತಗಳ ಕೊರತೆ ಉಳಿಯಲಿದೆ. ಹೀಗಾಗಿ, ನಾಲ್ವರು ಪಕ್ಷೇತರ ಹಾಗೂ ಮೈತ್ರಿಕೂಟದ ಹೊರಗಿನ ಸಂಸದರ ಬೆಂಬಲ ದೊರೆತರೂ, ಡಿಲಿಮಿಟೇಷನ್ ಮಸೂದೆಯ ಭವಿಷ್ಯ ಡಿಎಂಕೆಯ 22 ಸಂಸದರು ಮತ್ತು ಎಷ್ಟು ವಿಪಕ್ಷಗಳು ಮತದಾನದಲ್ಲಿ ಪಾಲ್ಗೊಳ್ಳುತ್ತವೆ ಅಥವಾ ಮತದಾನದಿಂದ ದೂರ ಉಳಿಯುತ್ತವೆಯೇ ಎಂಬುದರ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಡಿಎಂಕೆಯ 22 ಸಂಸದರು ಮತ್ತು ಮತದಾನದಿಂದ ದೂರ ಉಳಿಯುವ ರಾಜಕೀಯ ಲೆಕ್ಕಾಚಾರ
ಡಿಎಂಕೆಯ 22 ಸಂಸದರು ಮಸೂದೆಯ ಪರ ಅಥವಾ ವಿರುದ್ಧ ಮತ ಚಲಾಯಿಸುವ ಮೂಲಕ ಮಾತ್ರವಲ್ಲದೆ, ಮತದಾನದಿಂದ ದೂರ ಉಳಿಯುವ ಮೂಲಕವೂ ನಿರ್ಣಾಯಕ ಪಾತ್ರ ವಹಿಸಬಲ್ಲರು. ಏಕೆಂದರೆ, ಸಂವಿಧಾನ ತಿದ್ದುಪಡಿ ಮಸೂದೆಗೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು ಲೆಕ್ಕ ಹಾಕುವಾಗ ಮತದಾನದಿಂದ ದೂರ ಉಳಿಯುವ ಸದಸ್ಯರನ್ನು ಪರಿಣಾಮಕಾರಿ ಸಂಖ್ಯಾಬಲದಿಂದ ಹೊರಗಿಡಲಾಗುತ್ತದೆ. ಇದರಿಂದ ಬಹುಮತಕ್ಕೆ ಅಗತ್ಯವಿರುವ ಮತಗಳ ಸಂಖ್ಯೆಯೂ ಕಡಿಮೆಯಾಗುತ್ತದೆ.
ಈ ಹಿನ್ನೆಲೆಯಲ್ಲಿ ಮೂರು ಪ್ರಮುಖ ಸಾಧ್ಯತೆಗಳು
ಮೊದಲ ಸಾಧ್ಯತೆ: ಡಿಎಂಕೆ ಎನ್‌ಡಿಎ ಪರ ನಿಂತರೆ
ನಾಲ್ವರು ಮೈತ್ರಿಕೂಟದ ಹೊರಗಿನ ಸಂಸದರು ಎನ್‌ಡಿಎ ಪರವಾಗಿ ಮತ ಚಲಾಯಿಸಿದರೆ ಆಡಳಿತ ಮೈತ್ರಿಕೂಟದ ಬಲ 335 ಆಗುತ್ತದೆ. ಇದರೊಂದಿಗೆ ಡಿಎಂಕೆಯ 22 ಸಂಸದರೂ ಮಸೂದೆಯನ್ನು ಬೆಂಬಲಿಸಿ ಮತ ಚಲಾಯಿಸಿದರೆ ಎನ್‌ಡಿಎಯ ಒಟ್ಟು ಮತಗಳ ಸಂಖ್ಯೆ 357ಕ್ಕೆ ತಲುಪುತ್ತದೆ. 357 ಎಂಬುದು 536ರ ಪರಿಣಾಮಕಾರಿ ಸದಸ್ಯಬಲದ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತಕ್ಕೆ ಅಗತ್ಯವಿರುವ ನಿಖರ ಸಂಖ್ಯೆಯಾಗಿದೆ. ಅಂದರೆ, ಈ ಸನ್ನಿವೇಶದಲ್ಲಿ ಎನ್‌ಡಿಎಗೆ ಮಸೂದೆ ಅಂಗೀಕಾರಗೊಳಿಸಲು ಅಗತ್ಯವಿರುವ ಬಹುಮತ ದೊರೆಯುತ್ತದೆ.
ಎರಡನೇ ಸಾಧ್ಯತೆ: ಡಿಎಂಕೆ ಮತ್ತು ನಾಲ್ವರು ಸಂಸದರು ಮತದಾನದಿಂದ ದೂರ ಉಳಿದರೆ
ಡಿಎಂಕೆಯ 22 ಸಂಸದರು ಮಸೂದೆಯನ್ನು ವಿರೋಧಿಸಿ ಮತ ಚಲಾಯಿಸುವ ಬದಲು ಮತದಾನದಿಂದ ದೂರ ಉಳಿದರೆ, ನಾಲ್ವರು ಮೈತ್ರಿಕೂಟದ ಹೊರಗಿನ ಸಂಸದರೂ ಮತದಾನಕ್ಕೆ ಗೈರಾದರೆ ಒಟ್ಟು 26 ಮಂದಿ ಮತದಾನದಿಂದ ದೂರ ಉಳಿದಂತಾಗುತ್ತದೆ. ಇದರಿಂದ ಲೋಕಸಭೆಯ ಪರಿಣಾಮಕಾರಿ ಸದಸ್ಯಬಲ 536ರಿಂದ 510ಕ್ಕೆ ಇಳಿಯುತ್ತದೆ. ಆಗ ಮೂರನೇ ಎರಡರಷ್ಟು ಬಹುಮತಕ್ಕೆ ಅಗತ್ಯವಿರುವ ಮತಗಳ ಸಂಖ್ಯೆ 340ಕ್ಕೆ ಇಳಿಕೆಯಾಗುತ್ತದೆ. ನಾಲ್ವರು ಸಂಸದರ ಬೆಂಬಲದೊಂದಿಗೆ ಎನ್‌ಡಿಎಯ ಬಲ 335 ಆಗಿರುವುದರಿಂದ, ಈ ಸನ್ನಿವೇಶದಲ್ಲಿ ಮಸೂದೆ ಅಂಗೀಕಾರವಾಗಲು ಆಡಳಿತ ಮೈತ್ರಿಕೂಟಕ್ಕೆ ಇನ್ನೂ ಐದು ಹೆಚ್ಚುವರಿ ಮತಗಳ ಅಗತ್ಯವಿರುತ್ತದೆ.
ಮೂರನೇ ಸಾಧ್ಯತೆ: ಡಿಎಂಕೆ, ತೃಣಮೂಲ ಕಾಂಗ್ರೆಸ್ ಬಣ ಮತ್ತು ನಾಲ್ವರು ಸಂಸದರು ಗೈರಾದರೆ
ಎನ್‌ಡಿಎಗೆ ಅತ್ಯಂತ ಅನುಕೂಲಕರವಾಗುವ ಲೆಕ್ಕಾಚಾರ ಮೂರನೇ ಸಾಧ್ಯತೆಯಲ್ಲಿದೆ. ಡಿಎಂಕೆಯ 22 ಸಂಸದರು, ಈ ಲೆಕ್ಕಾಚಾರದಲ್ಲಿ ಎಂಟು ಸದಸ್ಯರಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಬಣ ಹಾಗೂ ಮೈತ್ರಿಕೂಟದ ಹೊರಗಿನ ನಾಲ್ವರು ಸಂಸದರು ಮತದಾನದಿಂದ ದೂರ ಉಳಿದರೆ ಒಟ್ಟು 34 ಮಂದಿ ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲ.
ಇದರಿಂದ ಪರಿಣಾಮಕಾರಿ ಸದಸ್ಯಬಲ 536ರಿಂದ 502ಕ್ಕೆ ಇಳಿಕೆಯಾಗುತ್ತದೆ. ಆಗ ಮೂರನೇ ಎರಡರಷ್ಟು ಬಹುಮತಕ್ಕೆ ಅಗತ್ಯವಿರುವ ಮತಗಳ ಸಂಖ್ಯೆ 335ಕ್ಕೆ ತಗ್ಗುತ್ತದೆ. ಗಮನಾರ್ಹ ಸಂಗತಿಯೆಂದರೆ, ನಾಲ್ವರು ಹೊರಗಿನ ಸಂಸದರ ಬೆಂಬಲದೊಂದಿಗೆ ಎನ್‌ಡಿಎ ಹೊಂದಿರುವ 335 ಮತಗಳ ಸಂಖ್ಯೆಯೇ ಆಗ ಬಹುಮತಕ್ಕೆ ಸಾಕಾಗುತ್ತದೆ. ಹೀಗಾಗಿ, ವಿರೋಧ ಪಕ್ಷಗಳ ಕೆಲವು ಪ್ರಮುಖ ಸದಸ್ಯರು ಮಸೂದೆಯನ್ನು ವಿರೋಧಿಸಿ ಮತ ಚಲಾಯಿಸುವ ಬದಲು ಮತದಾನದಿಂದ ದೂರ ಉಳಿದರೆ, ಎನ್‌ಡಿಎಗೆ ಅಗತ್ಯವಿರುವ ಬಹುಮತದ ಗುರಿಯನ್ನು ತಲುಪುವುದು ಸುಲಭವಾಗಬಹುದು.
ಆಡಳಿತ ಮೈತ್ರಿಕೂಟಕ್ಕೆ ಅತ್ಯಂತ ಅನುಕೂಲಕರ ಮಾರ್ಗವೆಂದರೆ, ಮೈತ್ರಿಕೂಟದ ಹೊರಗಿನ ನಾಲ್ವರು ಸಂಸದರ ಬೆಂಬಲ ಪಡೆಯುವುದರ ಜೊತೆಗೆ ಮಸೂದೆಯನ್ನು ವಿರೋಧಿಸುವ ಸಾಧ್ಯತೆಯಿರುವ ಕೆಲವು ಪಕ್ಷಗಳ ಸಂಸದರು ಮತದಾನದಿಂದ ದೂರ ಉಳಿಯುವಂತೆ ಮಾಡುವುದು. ಇದರಿಂದ ವಿರೋಧ ಪಕ್ಷಗಳ ಸಂಪೂರ್ಣ ಬೆಂಬಲವನ್ನು ತನ್ನತ್ತ ಸೆಳೆಯುವ ಅಗತ್ಯವಿಲ್ಲದೆ ಬಹುಮತದ ಗುರಿಯನ್ನು ತಲುಪುವ ಅವಕಾಶ ಸಿಗುತ್ತದೆ.
ಆದರೆ, ಇದೆಲ್ಲವೂ ಕೇವಲ ಸಂಖ್ಯೆಗಳ ಲೆಕ್ಕಾಚಾರಕ್ಕೆ ಸೀಮಿತವಾಗಿಲ್ಲ. ಆಯಾ ಪಕ್ಷಗಳ ಸಂಸದರು ತಮ್ಮ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆಯೇ, ಎಷ್ಟು ಮಂದಿ ಮತದಾನಕ್ಕೆ ಹಾಜರಾಗುತ್ತಾರೆ, ಯಾರು ಮತ ಚಲಾಯಿಸಲು ಅರ್ಹರಾಗಿರುತ್ತಾರೆ ಹಾಗೂ ಅಮಾನತುಗೊಂಡಿರುವ ಸಂಸದರ ಮೇಲಿನ ನಿರ್ಬಂಧ ಮುಂದುವರಿಯುತ್ತದೆಯೇ ಎಂಬ ಅಂಶಗಳೂ ಅಂತಿಮ ಫಲಿತಾಂಶದ ಮೇಲೆ ಪರಿಣಾಮ ಬೀರಲಿವೆ.
ಡಿಎಂಕೆಯ 22 ಸಂಸದರನ್ನು ತನ್ನತ್ತ ಸೆಳೆಯುವುದು ಅಥವಾ ಅವರು ಮತದಾನದಿಂದ ದೂರ ಉಳಿಯುವಂತೆ ಮಾಡುವುದೇ ಎನ್‌ಡಿಎಗೆ ದೊಡ್ಡ ಸವಾಲಾಗಿದೆ. ಕ್ಷೇತ್ರ ಮರುವಿಂಗಡಣೆಯಂತಹ ಸೂಕ್ಷ್ಮ ರಾಜಕೀಯ ವಿಷಯದಲ್ಲಿ ದಕ್ಷಿಣ ಭಾರತದ ಪ್ರಮುಖ ಪಕ್ಷವಾಗಿರುವ ಡಿಎಂಕೆಯನ್ನು ತನ್ನ ಪರ ಮಾಡಿಕೊಳ್ಳಲು ಪ್ರಯತ್ನಿಸುವುದು ರಾಜಕೀಯವಾಗಿ ದೊಡ್ಡ ಬೆಲೆ ತೆರಬೇಕಾದ ಸನ್ನಿವೇಶವನ್ನು ಸೃಷ್ಟಿಸಬಹುದು. ಅದೇ ವೇಳೆ, ಡಿಎಂಕೆಯ ಬೆಂಬಲ ಅಥವಾ ತಟಸ್ಥ ನಿಲುವು ಇಲ್ಲದೆ ಮಸೂದೆ ಅಂಗೀಕಾರಗೊಳಿಸುವುದು ಸಂಖ್ಯಾಬಲದ ದೃಷ್ಟಿಯಿಂದಲೂ ಕಷ್ಟಕರವಾಗಲಿದೆ.
ಒಟ್ಟಿನಲ್ಲಿ, ಡಿಲಿಮಿಟೇಷನ್ ಮಸೂದೆಯ ವಿಚಾರದಲ್ಲಿ ಡಿಎಂಕೆಯ 22 ಸಂಸದರು ಎನ್‌ಡಿಎ ಪಾಲಿಗೆ ದೊಡ್ಡ ಸವಾಲಾಗಿದ್ದಾರೆ. ಈ 22 ಸಂಸದರು ಆಡಳಿತ ಮೈತ್ರಿಕೂಟದ ಪರ ನಿಲ್ಲುತ್ತಾರೆಯೇ, ವಿರೋಧ ಪಕ್ಷಗಳೊಂದಿಗೇ ಉಳಿಯುತ್ತಾರೆಯೇ ಅಥವಾ ಮತದಾನದಿಂದ ದೂರ ಉಳಿಯುತ್ತಾರೆಯೇ ಎಂಬುದೇ ಈಗಿನ ರಾಜಕೀಯ ಲೆಕ್ಕಾಚಾರದ ಕೇಂದ್ರಬಿಂದುವಾಗಿದೆ.
ಕಳೆದ ಏಪ್ರಿಲ್ 17ರಂದು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮತದಾನಕ್ಕೆ ಹಾಕಲಾಗಿತ್ತು. ಈ ವೇಳೆ ಮಸೂದೆಯ ಪರವಾಗಿ 298 ಮತಗಳು ಬಿದ್ದರೆ, ವಿರುದ್ಧವಾಗಿ 230 ಮತಗಳು ಚಲಾವಣೆಯಾದವು. ಒಟ್ಟು 528 ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು. ಮಸೂದೆ ಅಂಗೀಕಾರವಾಗಲು ಸರ್ಕಾರಕ್ಕೆ 352 ಮತಗಳ ಅಗತ್ಯವಿತ್ತು. ಆದರೆ, ಅಗತ್ಯ ಬಹುಮತಕ್ಕಿಂತ 54 ಮತಗಳು ಕಡಿಮೆ ಬಿದ್ದಿದ್ದರಿಂದ ಮಸೂದೆ ಅಂಗೀಕಾರವಾಗಿರಲಿಲ್ಲ.
ವಿರೋಧ ಪಕ್ಷಗಳ ಪಾಲಿಗೂ ಇದು ಒಗ್ಗಟ್ಟಿನ ಪರೀಕ್ಷೆಯಾಗಿದೆ. ತಂತ್ರಗಾರಿಕೆಯ ಭಾಗವಾಗಿ ಕೆಲವು ಪಕ್ಷಗಳು ಮತದಾನದಿಂದ ದೂರ ಉಳಿಯುವ ಮೂಲಕ ವಿರೋಧ ಪಕ್ಷಗಳ ಒಗ್ಗಟ್ಟನ್ನು ದುರ್ಬಲಗೊಳಿಸುತ್ತವೆಯೇ ಅಥವಾ ಡಿಎಂಕೆಯ 22 ಸಂಸದರು ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಮಸೂದೆಯನ್ನು ವಿರೋಧಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ. ಲೋಕಸಭೆಯಲ್ಲಿನ ಈ 22 ಮತಗಳೇ ಡಿಲಿಮಿಟೇಷನ್ ಮಸೂದೆಯ ಭವಿಷ್ಯ ನಿರ್ಧರಿಸುವ ನಿರ್ಣಾಯಕ ಅಂಶವಾಗುವ ಸಾಧ್ಯತೆಯಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement