ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಡಿಲಿಮಿಟೇಷನ್‌ ಮಸೂದೆ ; ಅಂದು ವಿರೋಧಿಸಿದ್ದ ಸ್ಟಾಲಿನ್‌, ಶರದ್‌ ಪವಾರರನ್ನು ಬಿಜೆಪಿ ಒಪ್ಪಿಸಿದ್ದು ಹೇಗೆ? ಕಾಂಗ್ರೆಸ್‌ ಕಂಗಾಲಾಗಿದ್ದು ಯಾಕೆ ?

ನವದೆಹಲಿ: ಲೋಕಸಭೆಯಲ್ಲಿ ಡಿಲಿಮಿಟೇಶನ್‌ ಮಸೂದೆಗಳನ್ನು ಮಂಡಿಸಿ ಕಳೆದ ಏಪ್ರಿಲ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಎಂಟು ತಿಂಗಳ ರಾಜಕೀಯ ತಂತ್ರಗಾರಿಕೆಯ ಮೂಲಕ ಮಹತ್ವದ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿದೆ.
ಒಂದು ಕಾಲದಲ್ಲಿ ಸರ್ಕಾರದ ಪ್ರಸ್ತಾವಿತ ಡಿಲಿಮಿಟೇಷನ್‌ ಮಸೂದೆಗಳನ್ನು ತೀವ್ರವಾಗಿ ವಿರೋಧಿಸಿ, ಮಸೂದೆಗಳ ಸೋಲಿಗೆ ಕಾರಣವಾಗಿದ್ದ ರಾಜಕೀಯ ಪಕ್ಷಗಳೇ ಈಗ ಸರ್ಕಾರದ ಪರವಾಗಿ ನಿಲ್ಲಲು ಸಿದ್ಧವಾಗಿವೆ. ಡಿಎಂಕೆ ಹಾಗೂ ಮಹಾರಾಷ್ಟ್ರದ ಶರದ್‌ ಪವಾರ್‌ ನೇತೃತ್ವದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ-ಎಸ್‌ಪಿ) ಇದೀಗ ಡಿಲಿಮಿಟೇಷನ್‌ ಪ್ರಕ್ರಿಯೆಗೆ ಬೆಂಬಲ ಘೋಷಿಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಸೋಮವಾರ(ನ.30)ಲೋಕಸಭೆಯ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಮೋದಿ ಸರ್ಕಾರದ ರಾಜಕೀಯ ಆತ್ಮವಿಶ್ವಾಸ ಹಿಂದಿನ ಪರಿಸ್ಥಿತಿಗಿಂತ ಸಂಪೂರ್ಣ ಭಿನ್ನವಾಗಿದ್ದಂತೆ ಕಾಣುತ್ತಿದೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ, ಮತಗಳ್ಳತನದ ಆರೋಪ ಮುಂದಿಟ್ಟುಕೊಂಡು ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ನಡೆಸಿದ ರಾಜಕೀಯ ಅಭಿಯಾನಗಳಿಂದ ಕಳೆದ ಕೆಲವು ತಿಂಗಳುಗಳ ಕಾಲ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಆದರೆ ಈಗ ತನ್ನ ರಾಜಕೀಯ ವಿರೋಧಿಗಳನ್ನೇ ವಿಶ್ವಾಸಕ್ಕೆ ತೆಗೆದುಕೊಂಡು, ಹಿಂದೆ ಅಸಾಧ್ಯವೆಂದು ಭಾವಿಸಲಾಗಿದ್ದ ಮಸೂದೆಗಳ ಅಂಗೀಕಾರಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ. ಇದರ ಮಧ್ಯೆ ಈ ಬೆಳವಣಿಗೆಗಳಿಂದ ಕಂಗಾಲಾಗಿರುವ ಕಾಂಗ್ರೆಸ್‌ ಇಂಡಿಯಾ ಮೈತ್ರಿಕೂಟದ ಓಗ್ಗಟ್ಟನ್ನು ಕಪಾಡಿಕೊಳ್ಳುವ ಉದ್ದೇಶದಿಂದ ಶರದ್‌ ಪವಾರ್‌ ಹಾಗೂ ಎಂ.ಕೆ.ಸ್ಟಾಲಿನ್‌ ಅವರನ್ನು ಮಸೂದೆಗೆ ಬೆಂಬಲಿಸದಂತೆ ಮನವೊಲಿಸಲು ಮುಂದಾಗಿದೆ. ಸಂಸತ್ತಿನ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ, ‘ಕ್ಷೇತ್ರ ಮರುವಿಂಗಡಣಾ ಮಸೂದೆ’ಯ (Delimitation Bill) ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಬೆಂಬಲಿಸದಂತೆ ಮನವೊಲಿಸುವ ಉದ್ದೇಶದಿಂದ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಇಂದು ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ. ಈ ಸಭೆಗಳು ಚೆನ್ನೈನಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರೊಂದಿಗೆ ಹಾಗೂ ಮುಂಬೈನಲ್ಲಿ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರ ಜೊತೆ ನಡೆಯಲಿವೆ. ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯು ವಿಪಕ್ಷಗಳಲ್ಲಿ ಭಿನ್ನಾಭಿಪ್ರಾಯದ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಮತ್ತು ಹಲವಾರು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಈ ಪ್ರಸ್ತಾಪವನ್ನು ವಿರೋಧಿಸುತ್ತಿದ್ದರೆ, ಡಿಎಂಕೆ ಮತ್ತು ಎನ್‌ಸಿಪಿ (ಎಸ್‌ಪಿ) ಪರಿಷ್ಕೃತ ಮಸೂದೆಗೆ ಬೆಂಬಲ ಸೂಚಿಸಿವೆ.
ನವೆಂಬರ್ 30 ರಂದು ಸಂಸತ್ತಿನ ಅಧಿವೇಶನ ಪ್ರಾರಂಭವಾಗಲಿದ್ದು, ಕಾಂಗ್ರೆಸ್ ನಾಯಕತ್ವವು ಪವಾರ್ ಮತ್ತು ಸ್ಟಾಲಿನ್ ಅವರನ್ನು ಭೇಟಿ ಮಾಡುವುದಾಗಿ ಹೇಳಿದ್ದು ಮಹತ್ವದ್ದಾಗಿದೆ. ಇಂಡಿಯಾ ಮೈತ್ರಿಕೂಟದ ಅಂಗಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ಹೊರಹೊಮ್ಮಿದ್ದರೂ ಈ ವಿಷಯದ ಬಗ್ಗೆ ಸಮನ್ವಯವನ್ನು ಕಾಯ್ದುಕೊಳ್ಳಲು ಕಾಂಗ್ರೆಸ್‌ ಕೊನೆಯ ಹಂತದ ಪ್ರಯತ್ನ ನಡೆಸಲು ಮುಂದಾಗಿದೆ.  ಇದಕ್ಕಾಗಿ ಎರಡು ಚಾರ್ಟರ್ಡ್ ವಿಮಾನಗಳನ್ನು ಕಾಯ್ದಿರಿಸಲಾಗಿದೆ ಎಂದು ವರದಿಯಾಗಿದೆ. ಇದರಲ್ಲಿ ಸಂಚರಿಸುವವರಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರ ಹೆಸರುಗಳು ಸೇರಿವೆ. ಇದಕ್ಕಾಗಿ ಎರಡು ಚಾರ್ಟರ್ಡ್ ವಿಮಾನಗಳನ್ನು ಕಾಯ್ದಿರಿಸಲಾಗಿದೆ ಎಂದು ವರದಿಯಾಗಿದೆ. ಇದರಲ್ಲಿ ಸಂಚರಿಸುವವರಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇk ಬ್ಯಾನರ್ಜಿ ಅವರ ಹೆಸರುಗಳು ಸೇರಿವೆ. ಡಿಎಂಕೆ 22 ಲೋಕಸಭಾ ಸದಸ್ಯರು ಹಾಗೂ ಎನ್‌ಸಿಪಿ 8 ಲೋಕಸಭಾ ಸದಸ್ಯರನ್ನು ಹೊಂದಿರುವುದರಿಂದ ಈ ಪಕ್ಷಗಳ ಬೆಂಬಲವು ಮೋದಿ ಸರ್ಕಾರಕ್ಕೆ ಮಹತ್ವದ್ದಾಗಿದೆ.

ಏಪ್ರಿಲ್‌ನಲ್ಲಿ ಲೋಕಸಭೆಯಲ್ಲಿ ಮಂಡನೆಯಾಗಿದ್ದ ಡಿಲಿಮಿಟೇಷನ್‌ಗೆ ಸಂಬಂಧಿಸಿದ ಮಸೂದೆಗಳ ಅಂಗೀಕಾರಕ್ಕೆ ಅಗತ್ಯವಿದ್ದ ಮತಗಳಿಗಿಂತ 54 ಮತಗಳು ಕಡಿಮೆಯಾಗಿ ಅದು ಸೋಲನುಭವಿಸತ್ತು. ಮೋದಿ ಸರ್ಕಾರದ 12 ವರ್ಷಗಳ ಆಡಳಿತದಲ್ಲಿ ಸಂಸತ್ತಿನಲ್ಲಿ ಸರ್ಕಾರದ ಮಸೂದೆಯೊಂದು ಮೊದಲ ಬಾರಿಗೆ ಸೋಲನುಭವಿಸಿದ ಪ್ರಮುಖ ಘಟನೆಯಾಗಿ ಇದು ಗುರುತಿಸಿಕೊಂಡಿತ್ತು. ಆದರೆ ಇದೀಗ ಅಂದು ಮಸೂದೆಯನ್ನು ಸೋಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಪಕ್ಷಗಳೇ ಬೆಂಬಲಕ್ಕೆ ಮುಂದಾಗಿರುವುದು ಬಿಜೆಪಿಯ ರಾಜಕೀಯ ತಂತ್ರಗಾರಿಕೆಯ ಯಶಸ್ಸಿನ ಸಂಕೇತವಾಗಿ ವಿಶ್ಲೇಷಿಸಲಾಗುತ್ತಿದೆ.
ಈ ಎಂಟು ತಿಂಗಳ ಅವಧಿಯಲ್ಲಿ ಬಿಜೆಪಿಯು ಡಿಎಂಕೆ ಮತ್ತು ಶರದ್‌ ಪವಾರ್‌ ಬಣವನ್ನು ಹೇಗೆ ತನ್ನ ಪರವಾಗಿ ಸೆಳೆಯಿತು? ಇದಕ್ಕಾಗಿ ಯಾವ ರಾಜಕೀಯ ಹೊಂದಾಣಿಕೆಗಳು ನಡೆದವು? ಯಾವ ಮಸೂದೆಗಳನ್ನು ಮುಂದೂಡಲಾಯಿತು? ತಮಿಳುನಾಡಿನ ವಿಧಾನಸಭಾ ಚುನಾವಣೆಯ ಫಲಿತಾಂಶ ಈ ರಾಜಕೀಯ ಲೆಕ್ಕಾಚಾರವನ್ನು ಹೇಗೆ ಬದಲಿಸಿತು? ಎಂಬುದೇ ಈಗ ರಾಷ್ಟ್ರ ರಾಜಕಾರಣದ ಕುತೂಹಲಕಾರಿ ವಿಚಾರವಾಗಿದೆ.

ಡಿಎಂಕೆ ಮನವೊಲಿಸಲು ವರ್ಷದ ಹಿಂದೆಯೇ ಆರಂಭವಾಗಿದ್ದ ಮಾತುಕತೆ
ಕೇಂದ್ರ ಸರ್ಕಾರ ಸುಮಾರು ಒಂದು ವರ್ಷದ ಹಿಂದೆಯೇ ಡಿಎಂಕೆ ನಾಯಕರ ಜೊತೆ ಸಂಪರ್ಕ ಸಾಧಿಸಲು ಆರಂಭಿಸಿತ್ತು ಎನ್ನಲಾಗಿದೆ. ಆದರೆ ಆಗ ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದ ಕಾರಣ ಡಿಎಂಕೆ ತನ್ನ ನಿಲುವನ್ನು ಸಡಿಲಿಸಲು ಸಿದ್ಧವಿರಲಿಲ್ಲ. ಡಿಲಿಮಿಟೇಷನ್‌ ಜಾರಿಯಾದರೆ ಲೋಕಸಭೆಯಲ್ಲಿ ತಮಿಳುನಾಡಿನ ಪ್ರಾತಿನಿಧ್ಯಕ್ಕೆ ಧಕ್ಕೆಯಾಗಬಹುದು ಎಂಬ ಆತಂಕವನ್ನು ಡಿಎಂಕೆ ನಿರಂತರವಾಗಿ ವ್ಯಕ್ತಪಡಿಸುತ್ತ ಬಂದಿತ್ತು.
ಈ ಆತಂಕ ನಿವಾರಿಸಲು ಮಧ್ಯವರ್ತಿಗಳ ಮೂಲಕ ಕೇಂದ್ರ ಸರ್ಕಾರ ಡಿಎಂಕೆಗೆ ಭರವಸೆ ನೀಡಿತ್ತು. ಲೋಕಸಭೆಯಲ್ಲಿ ತಮಿಳುನಾಡಿನ ಪ್ರಸ್ತುತ ಪ್ರಾತಿನಿಧ್ಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಿದೆ ಎಂಬ ಸಂದೇಶವನ್ನು ರವಾನಿಸಲಾಗಿತ್ತು. ಏಪ್ರಿಲ್‌ನಲ್ಲಿ ಮಸೂದೆ ಮಂಡನೆಯಾಗುವುದಕ್ಕೂ ಮೊದಲೇ ಈ ಪ್ರಸ್ತಾಪವನ್ನು ಡಿಎಂಕೆ ಮುಂದಿಡಲಾಗಿತ್ತು. ಆದರೆ ಚುನಾವಣೆಯ ಹೊಸ್ತಿಲಲ್ಲಿ ಕೇಂದ್ರ ಸರ್ಕಾರದ ಪರವಾಗಿ ನಿಂತರೆ ರಾಜಕೀಯವಾಗಿ ಬೆಲೆ ತೆರಬೇಕಾಗಬಹುದು ಎಂಬ ಲೆಕ್ಕಾಚಾರದಿಂದ ಡಿಎಂಕೆ ಈ ಪ್ರಸ್ತಾಪವನ್ನು ಒಪ್ಪಿಕೊಳ್ಳಲಿಲ್ಲ.
ಇದಕ್ಕೆ ಪ್ರತಿಯಾಗಿ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಡಿಲಿಮಿಟೇಷನ್‌ ವಿರುದ್ಧ ಬಹಿರಂಗವಾಗಿಯೇ ಹೋರಾಟ ಆರಂಭಿಸಿದ್ದರು. ಫೆಬ್ರವರಿಯಲ್ಲಿ ವಿಧಾನಸಭೆಯಲ್ಲಿ ಡಿಲಿಮಿಟೇಷನ್‌ ವಿರೋಧಿ ನಿರ್ಣಯವನ್ನು ಅಂಗೀಕರಿಸಿದ್ದರು. ಏಪ್ರಿಲ್‌ 16ರಂದು ಕೇಂದ್ರ ಸರ್ಕಾರದ ಮಸೂದೆಯ ಪ್ರತಿಯನ್ನು ಸುಟ್ಟುಹಾಕುವ ಮೂಲಕ ಅದನ್ನು ‘ಕರಾಳ ಕಾನೂನು’ ಎಂದು ಟೀಕಿಸಿದ್ದರು.
ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಏಪ್ರಿಲ್‌ 16 ಮತ್ತು 17ರಂದು ಲೋಕಸಭೆಯಲ್ಲಿ ಮಾತನಾಡಿ, ಎಲ್ಲ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದರು. ಆದರೂ ಡಿಎಂಕೆ ತನ್ನ ವಿರೋಧವನ್ನು ಹಿಂಪಡೆಯಲಿಲ್ಲ. ತಮಿಳುನಾಡಿನ ಪ್ರಸ್ತುತ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುವ ಯಾವುದೇ ಕ್ರಮವನ್ನು ಒಪ್ಪುವುದಿಲ್ಲ ಎಂಬ ನಿಲುವಿನಲ್ಲಿ ಪಕ್ಷ ಅಚಲವಾಗಿತ್ತು.

ವಿಜಯ ರಾಜಕೀಯ ಪ್ರವೇಶದಿಂದ ಬದಲಾದ ತಮಿಳುನಾಡಿನ ಲೆಕ್ಕಾಚಾರ
ಏಪ್ರಿಲ್‌ನಿಂದ ನವೆಂಬರ್‌ವರೆಗೆ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಅತ್ಯಂತ ಮಹತ್ವದ ತಿರುವಾಯಿತು. ಡಿಲಿಮಿಟೇಷನ್‌ ವಿಚಾರದಲ್ಲಿ ಡಿಎಂಕೆ ತನ್ನ ನಿಲುವು ಬದಲಿಸಲು ಈ ಚುನಾವಣೆಯ ಸೋಲು ಪ್ರಮುಖ ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ತನ್ನ ಸಾಂಪ್ರದಾಯಿಕ ಎದುರಾಳಿ ಎಐಎಡಿಎಂಕೆ ವಿರುದ್ಧ ಸೋಲನುಭವಿಸಲಿಲ್ಲ. ಬದಲಿಗೆ ನಟ ವಿಜಯ ಸ್ಥಾಪಿಸಿದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಎದುರು ಹಿನ್ನಡೆ ಅನುಭವಿಸಿತು. ಒಟ್ಟು 234 ಸ್ಥಾನಗಳ ಪೈಕಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಹುಮತಕ್ಕೆ ಅಗತ್ಯವಿದ್ದ ಸಂಖ್ಯೆಗೆ 10 ಸ್ಥಾನಗಳ ಕೊರತೆ ಎದುರಿಸಿತು.
ಇತ್ತ ಡಿಎಂಕೆ ಕೇವಲ 54 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿಯಿತು. ಈ ಸೋಲಿನಿಂದ ಚೇತರಿಸಿಕೊಳ್ಳುವ ಮುನ್ನವೇ ಚುನಾವಣೆಯಲ್ಲಿ ಡಿಎಂಕೆಯ ಮಿತ್ರಪಕ್ಷವಾಗಿದ್ದ ಕಾಂಗ್ರೆಸ್‌ ಮತ್ತೊಂದು ಆಘಾತ ನೀಡಿತು. ಚುನಾವಣೆಯಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಕಾಂಗ್ರೆಸ್‌, ಫಲಿತಾಂಶದ ನಂತರ ಮೈತ್ರಿಯಿಂದ ಹೊರಬಂದು ವಿಜಯ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಲು ನಿರ್ಧರಿಸಿತು. ಇದರೊಂದಿಗೆ ತಮಿಳುನಾಡಿನಲ್ಲಿ 59 ವರ್ಷಗಳ ಬಳಿಕ ಅಧಿಕಾರದ ಪಾಲುದಾರನಾಗುವ ಅವಕಾಶ ಕಾಂಗ್ರೆಸ್‌ಗೆ ದೊರೆಯಿತು. ವಿಜಯ ಸರ್ಕಾರದಲ್ಲಿ ಕಾಂಗ್ರೆಸ್‌ಗೆ ಎರಡು ಸಚಿವ ಸ್ಥಾನಗಳು ಲಭಿಸಿದವು.
ಕಾಂಗ್ರೆಸ್‌ನ ಈ ನಿರ್ಧಾರದಿಂದ ಡಿಎಂಕೆ ತೀವ್ರ ಅಸಮಾಧಾನಗೊಂಡಿತು. ಪರಿಣಾಮವಾಗಿ ಕಾಂಗ್ರೆಸ್‌ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡಿತು. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ (INDIA) ಮೈತ್ರಿಕೂಟದಿಂದಲೂ ದೂರವಾಯಿತು. ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದರಿಂದ ಪ್ರತ್ಯೇಕವಾಗಿ ತನ್ನ ಸಂಸದರಿಗೆ ಆಸನ ವ್ಯವಸ್ಥೆ ಕಲ್ಪಿಸುವಂತೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿತ್ತು.
ಮೇ 7ರಂದು ಡಿಎಂಕೆ ಸಂಸದೀಯ ಪಕ್ಷದ ನಾಯಕಿ ಕನಿಮೋಳಿ ಕರುಣಾನಿಧಿ ಅವರು ಸ್ಪೀಕರ್‌ಗೆ ಪತ್ರ ಬರೆದು, ಕಾಂಗ್ರೆಸ್‌ ಜೊತೆಗಿನ ಮೈತ್ರಿ ಅಂತ್ಯಗೊಂಡಿರುವುದರಿಂದ ಬದಲಾಗಿರುವ ರಾಜಕೀಯ ಪರಿಸ್ಥಿತಿಯನ್ನು ಪರಿಗಣಿಸಿ ಡಿಎಂಕೆ ಸಂಸದರಿಗೆ ಕಾಂಗ್ರೆಸ್‌ ಸಂಸದರಿಂದ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು. ಆ ಮನವಿಗೆ ಅನುಮೋದನೆ ದೊರೆತಿದೆ.
ಡಿಎಂಕೆ ಮತ್ತು ಕಾಂಗ್ರೆಸ್‌ ನಡುವಿನ ಈ ಬಿರುಕು ಬಿಜೆಪಿಗೆ ಹೊಸ ರಾಜಕೀಯ ಅವಕಾಶವನ್ನು ಸೃಷ್ಟಿಸಿತು. ತಮಿಳುನಾಡಿನಲ್ಲಿ ಬಿಜೆಪಿ ಎಐಎಡಿಎಂಕೆ ಜೊತೆ ಮೈತ್ರಿ ಹೊಂದಿದ್ದರೂ, ವಿಜಯ ಅವರ ರಾಜಕೀಯ ಪ್ರವೇಶದ ನಂತರ ರಾಜ್ಯದ ರಾಜಕೀಯ ಸಮೀಕರಣಗಳು ಬದಲಾಗಿವೆ. ಡಿಎಂಕೆ ಕಾಂಗ್ರೆಸ್‌ನಿಂದ ದೂರವಾಗಿರುವುದು ರಾಷ್ಟ್ರಮಟ್ಟದಲ್ಲಿಯೂ ಬಿಜೆಪಿಗೆ ಅನುಕೂಲಕರ ಬೆಳವಣಿಗೆಯಾಗಿದೆ.

ಪ್ರಮುಖ ಸುದ್ದಿ :-   ಇಂಡಿಯಾ ಮೈತ್ರಿಕೂಟಕ್ಕೆ ಶಾಕ್: ಲೋಕಸಭೆ ಅಧಿವೇಶನಕ್ಕೂ ಮುನ್ನ ಡಿಲಿಮಿಟೇಶನ್‌ ಮಸೂದೆಗೆ ಬೆಂಬಲ ಪ್ರಕಟಿಸಿದ ಡಿಎಂಕೆ

ಶರದ್‌ ಪವಾರ್‌ ಬಣದ ಬೆಂಬಲದ ಹಿಂದೆಯೂ ರಾಜಕೀಯ ಲೆಕ್ಕಾಚಾರ
ಡಿಲಿಮಿಟೇಷನ್‌ ವಿಚಾರದಲ್ಲಿ ಸರ್ಕಾರಕ್ಕೆ ಬೆಂಬಲ ನೀಡಿರುವ ಮತ್ತೊಂದು ಪ್ರಮುಖ ಪಕ್ಷವೆಂದರೆ ಶರದ್‌ ಪವಾರ್‌ ನೇತೃತ್ವದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಶರದ್‌ಚಂದ್ರ ಪವಾರ್‌). ಮಹಾರಾಷ್ಟ್ರದಲ್ಲಿ ಎನ್‌ಸಿಪಿಯನ್ನು ವಿಭಜಿಸಿ, ಶರದ್‌ ಪವಾರ್‌ ಅವರ ಅಣ್ಣನ ಮಗ ಅಜಿತ್‌ ಪವಾರ್‌ ಅವರನ್ನು ತಮ್ಮ ಸರ್ಕಾರಕ್ಕೆ ಸೇರಿಸಿಕೊಂಡ ಆರೋಪವನ್ನು ಬಿಜೆಪಿ ಎದುರಿಸುತ್ತಿದೆ. ಆದರೆ ಇದೀಗ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ-ಎಸ್‌ಪಿ ಕೂಡ ಕೇಂದ್ರ ಸರ್ಕಾರದ ಡಿಲಿಮಿಟೇಷನ್‌ ಪ್ರಸ್ತಾಪಕ್ಕೆ ಬೆಂಬಲ ನೀಡಲು ಮುಂದಾಗಿದೆ.
ಏಪ್ರಿಲ್‌ನಿಂದ ನವೆಂಬರ್‌ವರೆಗಿನ ಅವಧಿಯಲ್ಲಿ ಬಿಜೆಪಿಯು ಡಿಎಂಕೆ ಮತ್ತು ಎನ್‌ಸಿಪಿ-ಎಸ್‌ಪಿ ಎರಡೂ ಪಕ್ಷಗಳನ್ನು ತನ್ನತ್ತ ಸೆಳೆಯಲು ಪ್ರಯತ್ನ ನಡೆಸಿತ್ತು. ವಿಶೇಷವಾಗಿ ಜುಲೈನಲ್ಲಿ ನಡೆದ ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಈ ಪ್ರಯತ್ನಗಳು ಹೆಚ್ಚು ವೇಗ ಪಡೆದುಕೊಂಡಿದ್ದವು.
ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಮತ್ತು ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬಣಗಳನ್ನು ಮತ್ತೆ ವಿಲೀನಗೊಳಿಸುವ ಪ್ರಯತ್ನವನ್ನೂ ಬಿಜೆಪಿ ನಡೆಸಿತ್ತು. ವಿಲೀನದ ನಂತರ ಒಗ್ಗೂಡಿದ ಪಕ್ಷವನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವ ಉದ್ದೇಶವಿತ್ತು ಎನ್ನಲಾಗಿದೆ.
ಆದರೆ ಈ ವಿಲೀನ ಪ್ರಯತ್ನಕ್ಕೆ ಅಜಿತ್‌ ಪವಾರ್‌ ಅವರ ಕುಟುಂಬದಿಂದಲೇ ವಿರೋಧ ವ್ಯಕ್ತವಾಯಿತು. ಜನವರಿಯಲ್ಲಿ ಅಜಿತ್‌ ಪವಾರ್‌ ನಿಧನರಾದ ಬಳಿಕ ಅವರ ಪತ್ನಿ ಸುನೇತ್ರಾ ಪವಾರ್‌ ಎನ್‌ಸಿಪಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಪಕ್ಷದ ಎರಡು ಬಣಗಳ ವಿಲೀನಕ್ಕೆ ಅವರು ಒಪ್ಪಿಗೆ ನೀಡಲಿಲ್ಲ. ಬಿಜೆಪಿ ನೇತೃತ್ವದ ಮಹಾಯುತಿ ಮತ್ತು ಎನ್‌ಡಿಎ ಮೈತ್ರಿಕೂಟದ ನಾಯಕರಿಗೆ ತಮ್ಮ ವಿರೋಧವನ್ನು ಸ್ಪಷ್ಟವಾಗಿ ತಿಳಿಸಿದ್ದರು ಎನ್ನಲಾಗಿದೆ. ಆದರೆ ಶರದ್‌ ಪವಾರ್‌ ಬಣ ಪ್ರತ್ಯೇಕ ಪಕ್ಷವಾಗಿಯೇ ಎನ್‌ಡಿಎಗೆ ಸೇರುವುದಕ್ಕೆ ತಮ್ಮ ವಿರೋಧವಿಲ್ಲ ಎಂಬ ನಿಲುವು ವ್ಯಕ್ತಪಡಿಸಿದ್ದರು.ಹೀಗಾಗಿ ವಿಲೀನದ ಪ್ರಯತ್ನ ಕೈಗೂಡದಿದ್ದರೂ ಶರದ್‌ ಪವಾರ್‌ ಅವರೊಂದಿಗೆ ಬಿಜೆಪಿಯ ಮಾತುಕತೆ ಮುಂದುವರಿಯಿತು.

ಮೋದಿ-ಪವಾರ್‌ ಭೇಟಿ, ಸುಪ್ರಿಯಾ ಸುಳೆ ಸಚಿವ ಸ್ಥಾನದ ಚರ್ಚೆ
ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಶರದ್‌ ಪವಾರ್‌ ಅವರು ತಮ್ಮ ಪಕ್ಷದ ಎಲ್ಲ ಎಂಟು ಲೋಕಸಭಾ ಸಂಸದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸತ್‌ ಭವನದಲ್ಲಿ ಭೇಟಿಯಾಗಿದ್ದರು. ಆಗಸ್ಟ್‌ 10ರಂದು ನಡೆದ ಈ ಭೇಟಿಯ ಅಧಿಕೃತ ಉದ್ದೇಶ ಮಹಾರಾಷ್ಟ್ರದ ಬರ ಪರಿಸ್ಥಿತಿ ಕುರಿತು ಚರ್ಚಿಸುವುದಾಗಿತ್ತು. ಆದರೆ ಡಿಲಿಮಿಟೇಷನ್‌ ಮಸೂದೆಗೆ ಬೆಂಬಲ ಪಡೆಯುವ ಕೇಂದ್ರ ಸರ್ಕಾರದ ಪ್ರಯತ್ನದ ಭಾಗವಾಗಿಯೂ ಈ ಭೇಟಿಯನ್ನು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿತ್ತು.
85 ವರ್ಷದ ಶರದ್‌ ಪವಾರ್‌ ನಂತರ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದಾಗ ಪ್ರಧಾನಿ ಮೋದಿ ದೂರವಾಣಿ ಮೂಲಕ ಅವರ ಆರೋಗ್ಯ ವಿಚಾರಿಸಿದ್ದರು. ಈ ಸಂದರ್ಭದಲ್ಲಿ ಪವಾರ್‌ ಅವರು ಇನ್ನು ವಿಶ್ರಾಂತಿ ಪಡೆಯಬೇಕು. ದೇಶದ ಆಡಳಿತಾತ್ಮಕ ವ್ಯವಹಾರಗಳನ್ನು ತಾವು ಮತ್ತು ತಮ್ಮ ಪುತ್ರಿ ಸುಪ್ರಿಯಾ ಸುಳೆ ಒಟ್ಟಾಗಿ ನೋಡಿಕೊಳ್ಳಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದರು ಎಂಬ ಮಾಹಿತಿಯನ್ನು ಪವಾರ್‌ ಅವರ ಆಪ್ತ ಸಹಾಯಕರು ಬಹಿರಂಗಪಡಿಸಿದ್ದರು.
ಈ ಹೇಳಿಕೆಯೂ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿತ್ತು. ಶರದ್‌ ಪವಾರ್‌ ಬಣವನ್ನು ಎನ್‌ಡಿಎಗೆ ಕರೆತರುವ ಪ್ರಯತ್ನ ಹಾಗೂ ಸುಪ್ರಿಯಾ ಸುಳೆ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆಯೊಂದಿಗೆ ಈ ಬೆಳವಣಿಗೆಯನ್ನು ಜೋಡಿಸಿ ನೋಡಲಾಗಿತ್ತು.

ವಿಪಕ್ಷಗಳಿಗೆ ಕಿರಿಕಿರಿ ಉಂಟುಮಾಡಿದ್ದ ಮಸೂದೆಗಳನ್ನು ಮುಂದೂಡಿದ ಸರ್ಕಾರ
ಡಿಎಂಕೆ ಮತ್ತು ಎನ್‌ಸಿಪಿ-ಎಸ್‌ಪಿ ಪಕ್ಷಗಳನ್ನು ಮನವೊಲಿಸುವಲ್ಲಿ ಕೇಂದ್ರ ಸರ್ಕಾರ ಕೇವಲ ಮಾತುಕತೆಗಳನ್ನಷ್ಟೇ ಅವಲಂಬಿಸಿರಲಿಲ್ಲ. ಈ ಎರಡೂ ಪಕ್ಷಗಳಿಗೆ ರಾಜಕೀಯವಾಗಿ ಅಸಮಾಧಾನ ಉಂಟುಮಾಡಿದ್ದ ಕೆಲವು ಮಹತ್ವದ ಮಸೂದೆಗಳ ವಿಚಾರದಲ್ಲಿಯೂ ಸರ್ಕಾರ ತನ್ನ ನಿಲುವನ್ನು ಬದಲಿಸಿತ್ತು ಎಂಬುದು ಈ ರಾಜಕೀಯ ಬೆಳವಣಿಗೆಯ ಮತ್ತೊಂದು ಪ್ರಮುಖ ಅಂಶ.
ಮುಂಗಾರು ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರ ಹಲವು ಪ್ರಮುಖ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯುವ ಉದ್ದೇಶ ಹೊಂದಿತ್ತು. ಅವುಗಳಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ‘ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ’, ಪ್ರಧಾನಿ, ಮುಖ್ಯಮಂತ್ರಿ ಅಥವಾ ಸಚಿವರು 30 ದಿನಗಳ ಕಾಲ ಜೈಲಿನಲ್ಲಿದ್ದರೆ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಅವಕಾಶ ಕಲ್ಪಿಸುವ ಮಸೂದೆ ಹಾಗೂ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ತಿದ್ದುಪಡಿ ಮಸೂದೆ ಪ್ರಮುಖವಾಗಿದ್ದವು.
ವಿಶೇಷವಾಗಿ ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಯು ಸರ್ಕಾರೇತರ ಸಂಸ್ಥೆಗಳ (ಎನ್‌ಜಿಒ) ಹಣಕಾಸಿನ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತವಾಗಿತ್ತು. ಈ ಮಸೂದೆಗೆ ಡಿಎಂಕೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿತ್ತು. ಉಳಿದ ಮಸೂದೆಗಳ ವಿಚಾರದಲ್ಲಿಯೂ ಡಿಎಂಕೆ ಮತ್ತು ಎನ್‌ಸಿಪಿ-ಎಸ್‌ಪಿ ಆಕ್ಷೇಪಗಳನ್ನು ದಾಖಲಿಸಿದ್ದವು.
ಆರಂಭದಲ್ಲಿ ಮೊದಲ ಮೂರು ಮಸೂದೆಗಳ ಕುರಿತು ಪರಿಶೀಲನೆ ನಡೆಸುತ್ತಿದ್ದ ಜಂಟಿ ಸಂಸದೀಯ ಸಮಿತಿಗಳು (ಜೆಪಿಸಿ) ಶೀಘ್ರದಲ್ಲೇ ವರದಿ ಸಲ್ಲಿಸಲಿವೆ. ಹೀಗಾಗಿ ಮುಂಗಾರು ಅಧಿವೇಶನದಲ್ಲೇ ಅವುಗಳನ್ನು ಅಂಗೀಕರಿಸಬಹುದು ಎಂಬ ನಿರೀಕ್ಷೆ ಸರ್ಕಾರಕ್ಕಿತ್ತು. ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಯನ್ನೂ ಇದೇ ಅಧಿವೇಶನದಲ್ಲಿ ಅಂಗೀಕರಿಸಲು ಉದ್ದೇಶಿಸಲಾಗಿತ್ತು.
ಆದರೆ ನಂತರ ಸರ್ಕಾರ ಮಹತ್ವದ ಬದಲಾವಣೆ ಮಾಡಿತು. ಮೊದಲ ಮೂರು ಮಸೂದೆಗಳ ಪರಿಶೀಲನೆ ನಡೆಸುತ್ತಿದ್ದ ಎಲ್ಲ ಜಂಟಿ ಸಂಸದೀಯ ಸಮಿತಿಗಳ ಅವಧಿಯನ್ನು ವಿಸ್ತರಿಸಲಾಯಿತು. ಯಾವುದೇ ಸಮಿತಿಯೂ ವರದಿ ಸಲ್ಲಿಸಲಿಲ್ಲ. ಇತ್ತ ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಯನ್ನೂ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಯಿತು.
ಇದರಿಂದ ಡಿಎಂಕೆ ಮತ್ತು ಎನ್‌ಸಿಪಿ-ಎಸ್‌ಪಿ ಪಕ್ಷಗಳು ವಿರೋಧಿಸುತ್ತಿದ್ದ ಮಸೂದೆಗಳು ತಕ್ಷಣಕ್ಕೆ ಅಂಗೀಕಾರವಾಗುವ ಸಾಧ್ಯತೆ ದೂರವಾಯಿತು.
ಮೂಲಗಳ ಪ್ರಕಾರ, ಇದು ಸರ್ಕಾರ ಮತ್ತು ಈ ಎರಡೂ ಪಕ್ಷಗಳ ನಡುವಿನ ಕೊಡುಕೊಳ್ಳುವಿಕೆಯ ರಾಜಕೀಯ ತಂತ್ರಗಾರಿಕೆಯ ಭಾಗವಾಗಿತ್ತು. ಡಿಲಿಮಿಟೇಷನ್‌ ಮಸೂದೆಗೆ ಬೆಂಬಲ ನೀಡಿದರೆ, ತಮ್ಮ ಪಕ್ಷಗಳು ವಿರೋಧಿಸುತ್ತಿದ್ದ ಇತರ ಮಸೂದೆಗಳ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ರಾಜಕೀಯ ಹೊಂದಾಣಿಕೆ ರೂಪುಗೊಂಡಿತ್ತು ಎನ್ನಲಾಗಿದೆ.
ಡಿಎಂಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿತ್ತು. ಬಿಜೆಪಿಯ ಹಿರಿಯ ಸಚಿವರು ನಿರಂತರವಾಗಿ ಡಿಎಂಕೆ ನಾಯಕರೊಂದಿಗೆ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲ, ತಮ್ಮ ಪಕ್ಷದ ಮಿತ್ರಪಕ್ಷವೊಂದರ ಪರವಾಗಿ ಚೆನ್ನೈಗೆ ಭೇಟಿ ನೀಡಿದ್ದ, ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವ ಪ್ರವೃತ್ತಿಗೆ ಹೆಸರಾಗಿದ್ದ ರಾಜ್ಯ ಸಚಿವರೊಬ್ಬರಿಗೆ ಹಿರಿಯ ಕೇಂದ್ರ ಸಚಿವರು ದೂರವಾಣಿ ಕರೆ ಮಾಡಿ, ಡಿಲಿಮಿಟೇಷನ್‌ ವಿಚಾರದಲ್ಲಿ ಡಿಎಂಕೆ ಬೆಂಬಲದ ಕುರಿತು ಯಾವುದೇ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಹೀಗಾಗಿಯೇ ಕಳೆದ ಎಂಟು ತಿಂಗಳ ಅವಧಿಯಲ್ಲಿ ಬಿಜೆಪಿ ಅಥವಾ ಡಿಎಂಕೆಯ ಯಾವುದೇ ಪ್ರಮುಖ ನಾಯಕರು ಡಿಲಿಮಿಟೇಷನ್‌ ಮಸೂದೆ ಕುರಿತು ತೆರೆಮರೆಯಲ್ಲಿ ಮಾತುಕತೆ ನಡೆಯುತ್ತಿರುವ ಸುಳಿವನ್ನೂ ಸಾರ್ವಜನಿಕವಾಗಿ ನೀಡಿರಲಿಲ್ಲ.

ಪ್ರಮುಖ ಸುದ್ದಿ :-   ಪೌರತ್ವ ಪಡೆಯುವ ಮೊದಲೇ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಹೆಸರಿತ್ತು: ಕೋರ್ಟ್‌ಗೆ ದೆಹಲಿ ಪೊಲೀಸರ ಮಾಹಿತಿ

ಡಿಎಂಕೆಯ ಎರಡು ಪ್ರಮುಖ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ
ಕೊನೆಗೂ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟದ ನಿರ್ಧಾರವು ಈ ರಾಜಕೀಯ ಮಾತುಕತೆಗಳಿಗೆ ಅಂತಿಮ ರೂಪ ನೀಡಿತು. ಡಿಲಿಮಿಟೇಷನ್‌ ವಿಚಾರದಲ್ಲಿ ಡಿಎಂಕೆ ಮುಂದಿಟ್ಟಿದ್ದ ಎರಡು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿತು.
ಮೊದಲನೆಯದಾಗಿ, ಲೋಕಸಭೆಯಲ್ಲಿ ತಮಿಳುನಾಡು ಸೇರಿದಂತೆ ಪ್ರತಿಯೊಂದು ರಾಜ್ಯದ ಪ್ರಸ್ತುತ ಪ್ರಾತಿನಿಧ್ಯದ ಪ್ರಮಾಣವನ್ನು ಹಾಗೆಯೇ ಉಳಿಸಿಕೊಂಡು, ಎಲ್ಲ ರಾಜ್ಯಗಳ ಸ್ಥಾನಗಳನ್ನು ಏಕರೂಪವಾಗಿ ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಯಿತು. ಇದರಿಂದ ಡಿಲಿಮಿಟೇಷನ್‌ ಪ್ರಕ್ರಿಯೆಯ ನಂತರ ತಮಿಳುನಾಡಿನ ಪ್ರಸ್ತುತ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುವುದಿಲ್ಲ ಎಂಬ ಡಿಎಂಕೆಯ ಪ್ರಮುಖ ಆತಂಕವನ್ನು ನಿವಾರಿಸುವ ಪ್ರಯತ್ನ ಮಾಡಲಾಯಿತು.
ಎರಡನೆಯದಾಗಿ, ಈ ರೀತಿ ಹೆಚ್ಚಳಗೊಂಡ ಸ್ಥಾನಗಳ ಸಂಖ್ಯೆಯನ್ನು ಮುಂದಿನ 25 ವರ್ಷಗಳವರೆಗೆ, ಅಂದರೆ 2051ರವರೆಗೆ ಬದಲಾವಣೆ ಮಾಡದಂತೆ ಸ್ಥಗಿತಗೊಳಿಸುವ ಬೇಡಿಕೆಯನ್ನೂ ಸರ್ಕಾರ ಒಪ್ಪಿಕೊಂಡಿತು.
ಈ ಎರಡೂ ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಒಪ್ಪಿಕೊಂಡ ಬಳಿಕ ಡಿಎಂಕೆ ತನ್ನ ಹಿಂದಿನ ನಿಲುವಿನಿಂದ ಹಿಂದೆ ಸರಿದು ಮಸೂದೆಗಳಿಗೆ ಬೆಂಬಲ ನೀಡಲು ನಿರ್ಧರಿಸಿತು.
ಶನಿವಾರ ಚೆನ್ನೈನಲ್ಲಿ ನಡೆದ ಪಕ್ಷದ ಸಂಸದರ ಸಭೆಯ ಬಳಿಕ ಮಾತನಾಡಿದ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌, ಮುಂದಿನ 25 ವರ್ಷಗಳವರೆಗೆ ತಮಿಳುನಾಡಿನ ಸಂಸದೀಯ ಪ್ರಾತಿನಿಧ್ಯವನ್ನು ರಕ್ಷಿಸುವ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪ್ರಕಟಿಸಿದರು.
ಇದು ಡಿಎಂಕೆಯ ಪಾಲಿಗೆ ರಾಜಕೀಯವಾಗಿ ಮಹತ್ವದ ಸಾಧನೆಯಾಗಿದೆ. ಏಪ್ರಿಲ್‌ನಲ್ಲಿ ಕರಾಳ ಕಾನೂನು ಎಂದು ಟೀಕಿಸಿ ಮಸೂದೆಯ ಪ್ರತಿಯನ್ನೇ ಸುಟ್ಟುಹಾಕಿದ್ದ ಪಕ್ಷ, ಇದೀಗ ತನ್ನ ರಾಜ್ಯದ ಪ್ರಾತಿನಿಧ್ಯಕ್ಕೆ ಮಾನ್ಯತೆ ದೊರೆತಿದೆ ಎಂಬ ಕಾರಣ ನೀಡಿ ಅದೇ ಮಸೂದೆಗೆ ಬೆಂಬಲ ನೀಡಲು ಮುಂದಾಗಿದೆ.

ಡಿಎಂಕೆ, ಎನ್‌ಸಿಪಿ ಬಣದ ಬೆಂಬಲದಿಂದ ಬದಲಾಗಲಿದೆಯೇ ರಾಷ್ಟ್ರ ರಾಜಕಾರಣ?
ಡಿಲಿಮಿಟೇಷನ್‌ ಮಸೂದೆಗೆ ಡಿಎಂಕೆ ಮತ್ತು ಎನ್‌ಸಿಪಿ-ಎಸ್‌ಪಿ ಬೆಂಬಲ ನೀಡಿರುವುದು ಕೇವಲ ಸಂಸತ್ತಿನ ಸಂಖ್ಯಾಬಲದ ಬದಲಾವಣೆಯಾಗಿ ಮಾತ್ರ ಉಳಿಯುವ ಸಾಧ್ಯತೆಯಿಲ್ಲ. ಇದು ತಮಿಳುನಾಡು ಮತ್ತು ಮಹಾರಾಷ್ಟ್ರದ ರಾಜಕೀಯದಲ್ಲಿಯೂ ದೂರಗಾಮಿ ಪರಿಣಾಮಗಳನ್ನು ಉಂಟುಮಾಡಬಹುದು.
ತಮಿಳುನಾಡಿನಲ್ಲಿ ಬಿಜೆಪಿ ಬಹುಕಾಲದಿಂದ ಡಿಎಂಕೆಯ ರಾಜಕೀಯ ಎದುರಾಳಿಯಾಗಿರುವ ಎಐಎಡಿಎಂಕೆ ಜೊತೆ ಮೈತ್ರಿ ಹೊಂದಿದೆ. ಆದರೆ ವಿಜಯ ಅವರ ಟಿವಿಕೆ ಚುನಾವಣೆಯಲ್ಲಿ ಸಾಧಿಸಿದ ಯಶಸ್ಸು ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಿಸಿದೆ. ಕಾಂಗ್ರೆಸ್‌ ಡಿಎಂಕೆಯಿಂದ ದೂರವಾಗಿರುವುದು, ಡಿಎಂಕೆಯು ಇಂಡಿಯಾ ಮೈತ್ರಿಕೂಟದಿಂದ ಹೊರಬಂದಿರುವುದು ಹಾಗೂ ಡಿಲಿಮಿಟೇಷನ್‌ ವಿಚಾರದಲ್ಲಿ ಕೇಂದ್ರ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಹೊಸ ರಾಜಕೀಯ ಸಮೀಕರಣಗಳಿಗೆ ದಾರಿ ಮಾಡಿಕೊಟ್ಟಿದೆ.
ಇದರಿಂದ ಬಿಜೆಪಿ, ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಸಂಬಂಧಗಳು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿವೆ ಎಂಬ ಕುತೂಹಲ ಮೂಡಿದೆ. ವಿಜಯ ಅವರ ರಾಜಕೀಯ ಪ್ರಭಾವದ ಹಿನ್ನೆಲೆಯಲ್ಲಿ ಈ ಮೂರು ಪಕ್ಷಗಳ ನಡುವಿನ ಸ್ಪರ್ಧೆಯೂ ಹೊಸ ಆಯಾಮ ಪಡೆಯಬಹುದು.
ಮಹಾರಾಷ್ಟ್ರದಲ್ಲಿಯೂ ಶರದ್‌ ಪವಾರ್‌ ಬಣ ಎನ್‌ಡಿಎಗೆ ಸೇರ್ಪಡೆಯಾದರೆ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದೊಳಗಿನ ರಾಜಕೀಯ ಸಮೀಕರಣಗಳು ಬದಲಾಗಬಹುದು. ಈಗಾಗಲೇ ಬಿಜೆಪಿ, ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಸೇರಿ ಮಹಾಯುತಿ ಮೈತ್ರಿಕೂಟವನ್ನು ರಚಿಸಿಕೊಂಡಿವೆ. ಇಂತಹ ಸಂದರ್ಭದಲ್ಲಿ ಶರದ್‌ ಪವಾರ್‌ ಬಣವೂ ಎನ್‌ಡಿಎ ಜೊತೆ ಕೈಜೋಡಿಸಿದರೆ ಮಹಾರಾಷ್ಟ್ರದ ರಾಜಕೀಯದಲ್ಲಿ ಹೊಸ ಸಮೀಕರಣವೂ ಆಗಬಹುದು.
ಇದರ ಮತ್ತೊಂದು ಪರಿಣಾಮವೆಂದರೆ ರಾಷ್ಟ್ರಮಟ್ಟದ ಪ್ರತಿಪಕ್ಷಗಳ ಒಗ್ಗಟ್ಟಿಗೆ ಮತ್ತಷ್ಟು ಧಕ್ಕೆಯಾಗುವ ಸಾಧ್ಯತೆ. ಈಗಾಗಲೇ ಕಾಂಗ್ರೆಸ್‌ನಿಂದ ದೂರವಾಗಿರುವ ಡಿಎಂಕೆ ಹಾಗೂ ಕೇಂದ್ರ ಸರ್ಕಾರದ ಮಸೂದೆಗೆ ಬೆಂಬಲ ನೀಡುತ್ತಿರುವ ಶರದ್‌ ಪವಾರ್‌ ಬಣದ ನಡೆ ಇಂಡಿಯಾ ಮೈತ್ರಿಕೂಟದ ರಾಜಕೀಯ ಬಲಾಬಲದ ಮೇಲೂ ಪರಿಣಾಮ ಬೀರಬಹುದು.

ಸಂಖ್ಯಾಬಲದ ಗೆಲುವಷ್ಟೇ ಅಲ್ಲ, ರಾಜಕೀಯ ವಿರೋಧಿಗಳನ್ನು ಪ್ರತ್ಯೇಕಿಸುವ ತಂತ್ರವೂ ಹೌದೇ?
ಏಪ್ರಿಲ್‌ನಲ್ಲಿ ಲೋಕಸಭೆಯಲ್ಲಿ 54 ಮತಗಳ ಕೊರತೆಯಿಂದ ಹಿನ್ನಡೆ ಅನುಭವಿಸಿದ್ದ ಮೋದಿ ಸರ್ಕಾರ, ಕೇವಲ ಎಂಟು ತಿಂಗಳ ಅವಧಿಯಲ್ಲಿ ತನ್ನ ವಿರುದ್ಧ ನಿಂತಿದ್ದ ಪಕ್ಷಗಳನ್ನೇ ಬೆಂಬಲಕ್ಕೆ ಕರೆತರುವಲ್ಲಿ ಯಶಸ್ವಿಯಾಗಿರುವುದು ಗಮನಾರ್ಹ. ಈ ಬೆಳವಣಿಗೆಯಲ್ಲಿ ತಮಿಳುನಾಡಿನ ಚುನಾವಣಾ ಸೋಲು, ಕಾಂಗ್ರೆಸ್‌-ಡಿಎಂಕೆ ಮೈತ್ರಿ ಕಡಿತ, ಶರದ್‌ ಪವಾರ್‌ ಬಣದೊಂದಿಗಿನ ಮಾತುಕತೆ, ಕೆಲವು ವಿವಾದಾತ್ಮಕ ಮಸೂದೆಗಳನ್ನು ಮುಂದೂಡುವ ನಿರ್ಧಾರ ಹಾಗೂ ರಾಜ್ಯಗಳ ಪ್ರಾತಿನಿಧ್ಯದ ಕುರಿತು ನೀಡಿದ ಭರವಸೆಗಳು ಪ್ರಮುಖ ಪಾತ್ರ ವಹಿಸಿವೆ.
ಇದನ್ನು ಕೇಂದ್ರ ಸರ್ಕಾರದ ರಾಜಕೀಯ ಸಂಧಾನದ ಯಶಸ್ಸು ಎಂದು ನೋಡಬಹುದಾದರೆ, ಪ್ರತಿಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಳಸಿಕೊಂಡು ಅವುಗಳ ಒಗ್ಗಟ್ಟನ್ನು ದುರ್ಬಲಗೊಳಿಸಿದ ಬಿಜೆಪಿಯ ತಂತ್ರಗಾರಿಕೆ ಎಂದೂ ವಿಶ್ಲೇಷಿಸಬಹುದು.
ಒಂದು ಕಾಲದಲ್ಲಿ ಮೋದಿ ಸರ್ಕಾರದ ಮಸೂದೆಯನ್ನು ಸೋಲಿಸಲು ಒಂದಾಗಿದ್ದ ಪಕ್ಷಗಳೇ ಈಗ ಸರ್ಕಾರದ ಬೆಂಬಲಕ್ಕೆ ನಿಂತಿರುವುದು ರಾಷ್ಟ್ರ ರಾಜಕಾರಣದ ಬದಲಾಗುತ್ತಿರುವ ವಾಸ್ತವವನ್ನು ತೋರಿಸುತ್ತದೆ. ಆದರೆ ಈ ಬೆಂಬಲ ಕೇವಲ ಡಿಲಿಮಿಟೇಷನ್‌ ಮಸೂದೆಗೆ ಸೀಮಿತವಾಗಲಿದೆಯೇ ಅಥವಾ ಮುಂದಿನ ದಿನಗಳಲ್ಲಿ ಎನ್‌ಡಿಎಯ ರಾಜಕೀಯ ವಿಸ್ತರಣೆಗೆ ದಾರಿಯಾಗಲಿದೆಯೇ ಎಂಬುದು ಕುತೂಹಲಕಾರಿ ಪ್ರಶ್ನೆ.
ಸಂಸತ್ತಿನಲ್ಲಿ ಸೋಲಿನಿಂದ ಆರಂಭವಾದ ಈ ರಾಜಕೀಯ ಕಥನ ಇದೀಗ ಬಿ ಡಿಎಂಕೆ ಮತ್ತು ಶರದ್‌ ಪವಾರ್‌ ಬಣದ ಬೆಂಬಲದಿಂದ ಮಸೂದೆಗಳ ಅಂಗೀಕಾರದ ಹಾದಿ ಸುಗಮವಾಗುವುದಷ್ಟೇ ಅಲ್ಲದೆ, ಪ್ರತಿಪಕ್ಷಗಳ ಒಗ್ಗಟ್ಟಿನ ಮೇಲೂ ಹೊಸ ಸವಾಲು ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸೋಮವಾರದ ವಿಶೇಷ ಅಧಿವೇಶನದಲ್ಲಿ ಈ ರಾಜಕೀಯ ತಂತ್ರಗಾರಿಕೆಯ ಅಂತಿಮ ಫಲಿತಾಂಶ ಏನಾಗಲಿದೆ ಎಂಬುದರತ್ತ ಈಗ ಎಲ್ಲರ ಗಮನ ನೆಟ್ಟಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement