

ನವದೆಹಲಿ: ರಾಜಕೀಯದಲ್ಲಿ ಕಾಲಚಕ್ರ ಮತ್ತೆ ತಿರುಗಿದೆ ಎನ್ನುವುದಕ್ಕೆ ಸೋನಿಯಾ ಗಾಂಧಿ ಅವರ ಇತ್ತೀಚಿನ ರಾಜಕೀಯ ನಡೆಗಿಂತ ಉತ್ತಮ ಉದಾಹರಣೆ ಬೇಕಿಲ್ಲ. 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಯಾವುದೇ ಬೆಲೆ ತೆತ್ತಾದರೂ ಸೋಲಿಸಲೇಬೇಕು ಎಂಬ ದೃಢ ನಿರ್ಧಾರಕ್ಕೆ ಬಂದಿದ್ದ ಸೋನಿಯಾ ಗಾಂಧಿ, ಅದಕ್ಕಾಗಿ ತನಗೆ ಪರಿಚಯವೇ ಇಲ್ಲದ ಹಲವು ರಾಜಕೀಯ ಪಕ್ಷಗಳು ಮತ್ತು ನಾಯಕರ ಕಚೇರಿಯ ಬಾಗಿಲು ತಟ್ಟಿದ್ದರು. ಅಷ್ಟೇ ಅಲ್ಲ, ರಾಜಕೀಯವಾಗಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದ ನಾಯಕರೊಂದಿಗೂ ಮಾತುಕತೆಗೆ ಮುಂದಾಗಿದ್ದರು. ಆಗ ಅವರ ಮುಂದಿದ್ದ ಏಕೈಕ ದೊಡ್ಡ ಗುರಿ ವಾಜಪೇಯಿ ಸರ್ಕಾರವನ್ನು ಅಧಿಕಾರದಿಂದ ದೂರ ಇಡುವುದು ಮಾತ್ರ. ಆ ಗುರಿ ಸಾಧನೆಗಾಗಿ ಯಾವುದೇ ರಾಜಕೀಯ ಹೊಂದಾಣಿಕೆಯನ್ನು ಅವರು ನಿರಾಕರಿಸಿರಲಿಲ್ಲ.
ತಮ್ಮ ಆತ್ಮಕಥನದಲ್ಲಿಯೂ ಸೋನಿಯಾ ಗಾಂಧಿ ಈ ರಾಜಕೀಯ ಪಯಣದ ಕೆಲವು ಕಠಿಣ ಕ್ಷಣಗಳನ್ನು ದಾಖಲಿಸಿದ್ದಾರೆ. ಅದರಲ್ಲೂ ತಮಿಳುನಾಡಿನ ಆಗಿನ ಪ್ರಭಾವಿ ರಾಜಕೀಯ ಶಕ್ತಿಯಾಗಿದ್ದ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷದ ನಾಯಕ ಎಂ. ಕರುಣಾನಿಧಿ ಅವರನ್ನು ಸಂಪರ್ಕಿಸುವ ನಿರ್ಧಾರ ಅತ್ಯಂತ ಕಠಿಣವಾಗಿತ್ತು ಎಂದು ಅವರು ಸ್ಮರಿಸಿಕೊಂಡಿದ್ದಾರೆ.
ಮಾಜಿ ಪ್ರಧಾನಿ ರಾಜೀವ ಗಾಂಧಿ ಹತ್ಯೆಯ ನಂತರದ ಬೆಳವಣಿಗೆಗಳಲ್ಲಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಡಿಎಂಕೆ ಪಕ್ಷ ಸಾಕಷ್ಟು ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಆ ಪಕ್ಷದ ಮೇಲೆ ಇತ್ತು. ಹೀಗಾಗಿ, ರಾಜೀವ ಗಾಂಧಿ ಹತ್ಯೆಯ ನಂತರ ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಅಂತರ ಕಾಯ್ದುಕೊಂಡಿದ್ದ ಕರುಣಾನಿಧಿ ಅವರಿಗೆ ಮೈತ್ರಿಗಾಗಿ ಕರೆ ಮಾಡುವುದು ಸೋನಿಯಾ ಪಾಲಿಗೆ ಸಾಮಾನ್ಯ ರಾಜಕೀಯ ಮಾತುಕತೆಯಾಗಿರಲಿಲ್ಲ.
ಡಿಎಂಕೆ ಪಕ್ಷವನ್ನು ಮೈತ್ರಿಕೂಟಕ್ಕೆ ಕರೆತರುವುದು ಅತ್ಯಗತ್ಯ ಎಂದು ಸಲಹೆ ನೀಡಿದಾಗಲೂ ಸೋನಿಯಾ ಗಾಂಧಿ ಆರಂಭದಲ್ಲಿ ಹಿಂಜರಿದಿದ್ದರು. ಆದರೆ, ತಮಿಳುನಾಡಿನಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿದ್ದ ಡಿಎಂಕೆ ಬೆಂಬಲವಿಲ್ಲದೆ ಬಿಜೆಪಿ ವಿರುದ್ಧದ ಹೋರಾಟಕ್ಕೆ ಪೂರ್ಣ ಬಲ ಸಿಗುವುದಿಲ್ಲ ಎಂಬ ವಾಸ್ತವವನ್ನು ಅವರು ಅರಿತಿದ್ದರು.
ಕೊನೆಗೂ ಧೈರ್ಯ ಮಾಡಿ ಕರುಣಾನಿಧಿ ಅವರಿಗೆ ದೂರವಾಣಿ ಕರೆ ಮಾಡಿದ ಸೋನಿಯಾ ಗಾಂಧಿ, ಅವರನ್ನು ‘ಸರ್’ ಎಂದು ಸಂಬೋಧಿಸಿದ್ದರು. ರಾಜೀವ ಗಾಂಧಿ ಹತ್ಯೆಯ ನಂತರ ತಮ್ಮ ವಿರುದ್ಧ ಸೋನಿಯಾ ಸಾರ್ವಜನಿಕವಾಗಿ ಮಾಡಿದ್ದ ಟೀಕೆಗಳ ಹಿನ್ನೆಲೆಯಲ್ಲಿ ಕರುಣಾನಿಧಿ ಈ ಕರೆಯಿಂದ ಅಚ್ಚರಿಗೊಂಡಿದ್ದರು ಎಂದು ಈ ಘಟನೆಯ ಬಗ್ಗೆ ತಿಳಿದಿರುವವರು ಹೇಳುತ್ತಾರೆ.
ಆದರೆ, ಮಾತುಕತೆಯ ವೇಳೆ ಸೋನಿಯಾ ಗಾಂಧಿ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದರು. ಬಿಜೆಪಿ ಸರ್ಕಾರವನ್ನು ಸೋಲಿಸಲೇಬೇಕು, ಅದಕ್ಕಾಗಿ ನಿಮ್ಮ ಬೆಂಬಲ ಬೇಕು ಎಂದು ಮನವಿ ಮಾಡಿದ್ದರು. ಹೀಗಾಗಿ, ಹಳೆಯ ರಾಜಕೀಯ ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕರುಣಾನಿಧಿ ಮೈತ್ರಿಗೆ ಒಪ್ಪಿಗೆ ಸೂಚಿಸಿದರು. ನಂತರ ಅವರು ಯುಪಿಎ (ಯುನೈಟೆಡ್ ಪ್ರೋಗ್ರೆಸಿವ್ ಅಲಯನ್ಸ್) ಮೈತ್ರಿಕೂಟದಲ್ಲಿ ಸೋನಿಯಾ ಗಾಂಧಿ ಅವರ ಅತ್ಯಂತ ಪ್ರಬಲ ರಾಜಕೀಯ ಮಿತ್ರರಲ್ಲಿ ಒಬ್ಬರಾದರು. ಬಿಹಾರದ ಲಾಲು ಪ್ರಸಾದ ಯಾದವ್ ಅವರೊಂದಿಗೆ ಕರುಣಾನಿಧಿ ಕೂಡ ಯುಪಿಎ ಮೈತ್ರಿಕೂಟದ ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮಿದ್ದರು.
ಸೋನಿಯಾ ಗಾಂಧಿ ಮತ್ತು ಕರುಣಾನಿಧಿ ನಡುವಿನ ಸಂಬಂಧ ಕೇವಲ ಚುನಾವಣಾ ಲಾಭಕ್ಕಾಗಿ ಮಾಡಿಕೊಂಡಿದ್ದ ರಾಜಕೀಯ ಒಪ್ಪಂದವಾಗಿರಲಿಲ್ಲ. ಮೈತ್ರಿಕೂಟದೊಳಗೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಾಗಲೂ ಅದನ್ನು ಉಳಿಸಿಕೊಳ್ಳಲು ಸೋನಿಯಾ ಪ್ರಯತ್ನಿಸಿದ್ದರು.
2009ರಲ್ಲಿ ಪ್ರಧಾನಿ ಮನಮೋಹನ ಸಿಂಗ್ ಮತ್ತು ಕರುಣಾನಿಧಿ ನಡುವೆ ಕೇಂದ್ರ ಸಚಿವ ಸಂಪುಟಕ್ಕೆ ಎ. ರಾಜಾ ಹಾಗೂ ಟಿ.ಆರ್. ಬಾಲು ಅವರನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಇಬ್ಬರು ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಉಂಟಾದ ತಕರಾರು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದರಿಂದ ಅಸಮಾಧಾನಗೊಂಡ ಕರುಣಾನಿಧಿ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆಯುವ ಬೆದರಿಕೆ ಹಾಕಿದ್ದರು.
ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಮಧ್ಯಪ್ರವೇಶಿಸಿದ್ದರು. ಕರುಣಾನಿಧಿ ಅವರ ನಿಲುವಿಗೆ ಬೆಂಬಲವಾಗಿ ನಿಂತ ಅವರು, ಎ. ರಾಜಾ ಮತ್ತು ಟಿ.ಆರ್. ಬಾಲು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಒಪ್ಪಿಸಿದ್ದರು. ಮೈತ್ರಿಕೂಟದಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಉಳಿಸಿಕೊಳ್ಳುವುದು ಮುಖ್ಯ ಎಂಬುದನ್ನು ಸೋನಿಯಾ ಅರಿತಿದ್ದರು. ಹೀಗಾಗಿ, ಮೈತ್ರಿಯೊಳಗಿನ ಸಂಘರ್ಷವನ್ನು ಮಾತುಕತೆ ಮತ್ತು ಹೊಂದಾಣಿಕೆಯ ಮೂಲಕ ಬಗೆಹರಿಸಲು ಪ್ರಯತ್ನಿಸಿದ್ದರು.
ಮತ್ತೆ ಅದೇ ಡಿಎಂಕೆ ಬಾಗಿಲಿಗೆ ಬಂದ ಸೋನಿಯಾ: ಆದರೆ ಈ ಬಾರಿ ಮಗನಿಗಾಗಿ!
ಸುಮಾರು ಎರಡು ದಶಕಗಳ ನಂತರ ಸೋನಿಯಾ ಗಾಂಧಿ ಮತ್ತೆ ಅಂತಹದ್ದೇ ರಾಜಕೀಯ ಸನ್ನಿವೇಶವನ್ನು ಎದುರಿಸುವಂತಾಗಿದೆ. 2004ರಲ್ಲಿ ವಾಜಪೇಯಿ ಸರ್ಕಾರವನ್ನು ಸೋಲಿಸಲು ಕರುಣಾನಿಧಿ ಅವರೊಂದಿಗೆ ಕೈಜೋಡಿಸುವ ಅನಿವಾರ್ಯತೆ ಎದುರಾಗಿದ್ದರೆ, ಈಗ ಬಿಜೆಪಿ ವಿರುದ್ಧದ ರಾಜಕೀಯ ಹೋರಾಟದಲ್ಲಿ ಡಿಎಂಕೆ ಜತೆಗಿನ ಸಂಬಂಧವನ್ನು ಉಳಿಸಿಕೊಳ್ಳುವ ಅಗತ್ಯ ಎದುರಾಗಿದೆ.
ಆದರೆ, ಈ ಎರಡು ಸಂದರ್ಭಗಳ ನಡುವೆ ಒಂದು ಪ್ರಮುಖ ವ್ಯತ್ಯಾಸವಿದೆ. 2004ರಲ್ಲಿ ಸೋನಿಯಾ ಗಾಂಧಿ ಅವರ ಸ್ವಂತ ರಾಜಕೀಯ ಹೋರಾಟವಾಗಿತ್ತು. ಈಗ ನಡೆಯುತ್ತಿರುವುದು ಅವರ ಮಗ ರಾಹುಲ್ ಗಾಂಧಿ ಅವರ ರಾಜಕೀಯ ಹೋರಾಟ.
ಇತ್ತೀಚೆಗೆ ರಾಹುಲ್ ಗಾಂಧಿ ಅವರು ಡಿಎಂಕೆ ಜತೆಗಿನ ಮೈತ್ರಿಯನ್ನು ಕೈಬಿಟ್ಟು, ನಟ ವಿಜಯ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದೊಂದಿಗೆ ಕೈಜೋಡಿಸಲು ಒಪ್ಪಿಕೊಂಡಾಗ ಕಾಂಗ್ರೆಸ್ ರಾಜಕೀಯ ವಲಯದಲ್ಲಿ ಅದನ್ನು ಮಹತ್ವದ ರಾಜಕೀಯ ನಡೆ ಎಂದು ಬಣ್ಣಿಸಲಾಗಿತ್ತು. ಸಾಂಪ್ರದಾಯಿಕ ಮೈತ್ರಿ ಲೆಕ್ಕಾಚಾರಗಳನ್ನು ಮೀರಿ ಹೊಸ ರಾಜಕೀಯ ಆಯ್ಕೆಗಳನ್ನು ಮಾಡಿಕೊಳ್ಳುವ ಮೂಲಕ ಬಿಜೆಪಿಯನ್ನು ಎದುರಿಸಲು ರಾಹುಲ್ ಸಿದ್ಧರಾಗಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅವರಲ್ಲಿ ರಾಜಕೀಯ ಪ್ರಬುದ್ಧತೆ ಹೆಚ್ಚುತ್ತಿದೆ, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ಬಂದಿದೆ ಎಂಬ ವಿಶ್ಲೇಷಣೆಗಳೂ ಕೇಳಿಬಂದಿದ್ದವು.
ಆದರೆ, ಆ ನಿರ್ಧಾರ ಕಾಂಗ್ರೆಸ್ಗೆ ರಾಜಕೀಯವಾಗಿ ಸಾಕಷ್ಟು ಬೆಲೆ ತೆರುವಂತೆ ಮಾಡಿತು. ಸಂಸತ್ತಿನಲ್ಲಿ ಗಣನೀಯ ಪ್ರಾತಿನಿಧ್ಯ ಹೊಂದಿದ್ದ ಡಿಎಂಕೆ ಪಕ್ಷದೊಂದಿಗಿನ ಮೈತ್ರಿಯನ್ನು ಕಾಂಗ್ರೆಸ್ ಕೈಬಿಟ್ಟಿತು. ಅದರ ಬದಲಿಗೆ ಹೊಸ ರಾಜಕೀಯ ಪಾಲುದಾರನಾಗಿದ್ದ ಟಿವಿಕೆ ಜತೆ ಕೈಜೋಡಿಸಿತು. ಈ ಹೊಸ ಮೈತ್ರಿಯಿಂದ ಕಾಂಗ್ರೆಸ್ಗೆ ಎರಡು ಸಚಿವ ಸ್ಥಾನಗಳು ದೊರೆತರೂ ಸಂಸತ್ತಿನಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ಕಡಿಮೆಯಾಯಿತು ಎಂಬುದು ರಾಜಕೀಯ ಪಂಡಿತರು ಹೇಳುವ ಮಾತು.
ರಾಹುಲ್ ಗಾಂಧಿ ಮತ್ತು ಅವರ ನಿರ್ಧಾರವನ್ನು ಬೆಂಬಲಿಸಿದ್ದವರು, ಕೆಲವೇ ದಿನಗಳಲ್ಲಿ ಮತ್ತೆ ಡಿಎಂಕೆ ಪಕ್ಷದ ಅಗತ್ಯ ಎದುರಾಗಬಹುದು ಎಂದು ಊಹಿಸಿರಲಿಲ್ಲ. ಆದರೆ, ಈಗ ಅದೇ ಡಿಎಂಕೆ ಮತ್ತೊಮ್ಮೆ ಅನಿವಾರ್ಯ ಹಾಗೂ ಅತ್ಯಗತ್ಯದ ರಾಜಕೀಯ ಮಿತ್ರನಾಗಿ ಕಾಣಿಸಿಕೊಳ್ಳುತ್ತಿದೆ.


ಚೆನ್ನೈ ಭೇಟಿಯಲ್ಲಿ ಕಾಣಿಸಿಕೊಂಡ ರಾಜಕೀಯ ಅಂತರ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ನಡುವಿನ ಭೇಟಿಯ ಸನ್ನಿವೇಶವೂ ಹಲವು ರಾಜಕೀಯ ಸಂದೇಶಗಳನ್ನು ರವಾನಿಸಿತ್ತು. ಸಭೆಯಲ್ಲಿ ಸೋನಿಯಾ ಗಾಂಧಿ ಅವರು ಎಂ.ಕೆ. ಸ್ಟಾಲಿನ್ ಅವರ ಪಕ್ಕದಲ್ಲಿ ಕುಳಿತುಕೊಳ್ಳಲಿಲ್ಲ. ಆ ಸ್ಥಾನವನ್ನು ತಮ್ಮ ಮಗ ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟಿದ್ದರು. ಆದರೆ, ಸಭೆಯಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಬೆಳವಣಿಗೆಯನ್ನೂ ಅವರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ದಶಕಗಳ ರಾಜಕೀಯ ಅನುಭವ ಹೊಂದಿರುವ ಸೋನಿಯಾ ಗಾಂಧಿಗೆ ಈ ಮಾತುಕತೆಯ ಮಹತ್ವ ಚೆನ್ನಾಗಿ ಅರ್ಥವಾಗಿರಬೇಕು. ರಾಹುಲ್ ಗಾಂಧಿ ಮತ್ತು ಸ್ಟಾಲಿನ್ ಪರಸ್ಪರರನ್ನು ಸಹೋದರರೆಂದು ಸಂಬೋಧಿಸಿಕೊಂಡರೂ, ಅವರ ನಡುವಿನ ಮಾತುಕತೆಯಲ್ಲಿ ನಿಜವಾದ ಆತ್ಮೀಯತೆ ಅಥವಾ ರಾಜಕೀಯ ಹೊಂದಾಣಿಕೆ ಮರಳಿ ಸ್ಥಾಪನೆಯಾಗಿದೆ ಎಂಬ ಸ್ಪಷ್ಟ ಲಕ್ಷಣಗಳು ಕಾಣಿಸಲಿಲ್ಲ. ಡಿಎಂಕೆ ಕೂಡ ತನ್ನ ನಿಲುವಿನಿಂದ ಹಿಂದೆ ಸರಿಯುವ ಮನಸ್ಥಿತಿಯಲ್ಲಿರಲಿಲ್ಲ ಎಂಬುದು ಈ ಭೇಟಿಯ ರಾಜಕೀಯ ಸಂದೇಶವಾಗಿತ್ತು.
ಗಮನಿಸಬೇಕಾದ ಅಂಶವೆಂದರೆ, ರಾಜಕೀಯ ಸಂಬಂಧಗಳನ್ನು ಹದಗೆಡಿಸುವುದು ಸುಲಭ. ಆದರೆ, ಅವುಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು ಅಷ್ಟು ಸುಲಭವಲ್ಲ. ಅದರಲ್ಲೂ ದೀರ್ಘಕಾಲದ ಮೈತ್ರಿ ಸಂಬಂಧವನ್ನು ಮುರಿದುಕೊಂಡ ಬಳಿಕ ಮತ್ತೆ ಅದೇ ಪಕ್ಷದ ಬೆಂಬಲ ಬಯಸುವುದು ರಾಜಕೀಯವಾಗಿ ಸವಾಲಿನ ಕೆಲಸ.
ಸೋನಿಯಾ ರಾಜಕೀಯ ಪಾಠವನ್ನು ರಾಹುಲ್ ಮರೆತಿದ್ದಾರೆಯೇ?
ಈ ಬೆಳವಣಿಗೆ ರಾಹುಲ್ ಗಾಂಧಿ ಅವರ ರಾಜಕೀಯ ಶೈಲಿಯ ಬಗ್ಗೆಯೂ ದೊಡ್ಡ ಪ್ರಶ್ನೆಯನ್ನು ಎತ್ತಿದೆ. ಸೋನಿಯಾ ಗಾಂಧಿ 2004ರಲ್ಲಿ ಒಂದು ದೊಡ್ಡ ರಾಜಕೀಯ ಗುರಿ ಸಾಧಿಸಬೇಕಾದರೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು ಎಂಬುದನ್ನು ಅರ್ಥಮಾಡಿಕೊಂಡಿದ್ದರು. ಆದರೆ, ಅದಕ್ಕಿಂತಲೂ ಮುಖ್ಯವಾಗಿ ರಾಜಕೀಯ ಸೇತುವೆಗಳನ್ನು ಮತ್ತೆಂದೂ ದಾಟಲಾಗದಷ್ಟು ಹಾಳುಮಾಡಬಾರದು ಎಂಬ ಎಚ್ಚರಿಕೆಯನ್ನೂ ಹೊಂದಿದ್ದರು.
ವಿವಿಧ ಸೈದ್ಧಾಂತಿಕ ನಿಲುವುಗಳನ್ನು ಹೊಂದಿರುವ ಪಕ್ಷಗಳೊಂದಿಗೆ ಸಂಬಂಧ ಉಳಿಸಿಕೊಳ್ಳುವ ಸಾಮರ್ಥ್ಯ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯಶೈಲಿಯ ಪ್ರಮುಖ ಲಕ್ಷಣವಾಗಿತ್ತು. ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿಯೂ ಅವರು ಮಮತಾ ಬ್ಯಾನರ್ಜಿ ಅವರೊಂದಿಗೆ ಸಂಪೂರ್ಣವಾಗಿ ಬಾಗಿಲು ಮುಚ್ಚಿರಲಿಲ್ಲ.
ಎಡಪಕ್ಷಗಳ ಬೆಂಬಲ ಪಡೆಯುವ ಸೋನಿಯಾ ಗಾಂಧಿ ಅವರ ನಿರ್ಧಾರದಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೀವ್ರ ಅಸಮಾಧಾನಗೊಂಡಿತ್ತು. ಆದರೂ, ಮಮತಾ ಬ್ಯಾನರ್ಜಿ ಅವರೊಂದಿಗಿನ ರಾಜಕೀಯ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಳ್ಳುವ ಕೆಲಸಕ್ಕೆ ಸೋನಿಯಾ ಮುಂದಾಗಿರಲಿಲ್ಲ. ಭವಿಷ್ಯದಲ್ಲಿ ಮತ್ತೆ ಮಾತುಕತೆಗೆ ಅವಕಾಶ ಉಳಿಯುವಂತೆ ರಾಜಕೀಯ ಸಂಬಂಧವನ್ನು ಕಾಯ್ದುಕೊಂಡಿದ್ದರು.
ಇದರ ಪರಿಣಾಮವಾಗಿ ಇಂದಿಗೂ ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿ ಅವರೊಂದಿಗೆ ಒಂದು ರೀತಿಯ ಆತ್ಮೀಯತೆ ಮತ್ತು ಗೌರವದ ಸಂಬಂಧವನ್ನು ಹೊಂದಿದ್ದಾರೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ರಾಹುಲ್ ಗಾಂಧಿ ಅವರ ರಾಜಕೀಯ ಕಾರ್ಯಶೈಲಿ ಹೆಚ್ಚು ದ್ವಂದ್ವಾತ್ಮಕವಾಗಿದೆ ಎಂಬ ಟೀಕೆಗಳಿವೆ. ಅಲ್ಲದೆ, ಅವರ ನಿರ್ಧಾರವು ತಕ್ಷಣದ ಪರಿಸ್ಥಿತಿಯನ್ನಷ್ಟೇ ನೋಡುತ್ತದೆ ಎಂದು ಹಲವರು ಹೇಳುತ್ತಾರೆ. ಅಲ್ಲದೆ, ಅವರ ನಿಲುವು ಕೆಲವೊಮ್ಮೆ ಹಠಮಾರಿ ಮತ್ತು ಸಂಘರ್ಷದ ರೂಪ ಪಡೆದುಕೊಳ್ಳುತ್ತದೆ. ರಾಜಕೀಯದಲ್ಲಿ ಎಲ್ಲವನ್ನೂ ಇದಮಿತ್ತಂ ಎಂಬಂತೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎರಡು ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಮಾತುಕತೆಗೆ ಅವಕಾಶವಿರಬೇಕು. ರಾಜಕೀಯ ಸಂಧಾನ ಎಂದರೆ ಸಂಪೂರ್ಣವಾಗಿ ಶರಣಾಗುವುದು ಎಂದಲ್ಲ. ಸಮಾತುಕತೆಯ ಬಾಗಿಲು ಸದಾ ತೆರೆದಿರುವುದು ಎಂದರ್ಥ. ಈ ಪಾಠವನ್ನು ಸೋನಿಯಾ ಗಾಂಧಿ 2004ರಲ್ಲಿಯೇ ಕಲಿತಿದ್ದರು. ಆದರೆ, ರಾಹುಲ್ ಗಾಂಧಿ ಅದನ್ನು ಗಮನಿಸದೆ ಹೋದರೇ ಎಂಬ ಪ್ರಶ್ನೆ ಈಗ ಎದುರಾಗಿದೆ. ಯಾಕೆಂದರೆ ಇಂಡಿಯಾ ಬ್ಲಾಕ್ನಲ್ಲಿದ್ದರೂ ಒಂದೊಂದೇ ಮಿತ್ರಪಕ್ಷಗಳು ಕಾಂಗ್ರೆಸ್ನಿಂದ ದೂರವಾಗುತ್ತಿರುವ ಬೆಳವಣಿಗೆಗಳನ್ನು ಕಂಡುಬರುತ್ತಿವೆ.
ಡಿಲಿಮಿಟೇಷನ್ ಮಸೂದೆ ; ಕಾಂಗ್ರೆಸ್ಗೆ ಮೈತ್ರಿ ರಾಜಕೀಯಕ್ಕೇ ಸವಾಲು!
ಕಾಂಗ್ರೆಸ್ ಪಕ್ಷಕ್ಕೆ ಈ ಬೆಳವಣಿಗೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಮಸೂದೆಯನ್ನು ವಿರೋಧಿಸುವ ವಿಚಾರದಲ್ಲಿ ಕಾಂಗ್ರೆಸ್ ಈಗ ತನ್ನ ರಾಜಕೀಯ ಶಕ್ತಿಯನ್ನು ಪ್ರದರ್ಶಿಸಬೇಕಾದ ಸವಾಲಿನಲ್ಲಿದೆ. ಪ್ರತಿಪಕ್ಷಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು, ಅವುಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸುವುದು ಮತ್ತು ಒಟ್ಟಾಗಿ ಹೋರಾಟ ನಡೆಸುವ ಕಾಂಗ್ರೆಸ್ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಅಂದರೆ ರಾಹುಲ್ ಗಾಂಧಿಯ ಮಾತುಕತೆಯ ಅಥವಾ ಮನವರಿಕೆಯ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಮೈತ್ರಿ ರಾಜಕೀಯದ ಕಾರ್ಯಶೈಲಿ ಮತ್ತೆ ಚರ್ಚೆಗೆ ಬಂದಿದೆ. ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟು ಅತ್ಯಗತ್ಯ ಎಂದು ಕಾಂಗ್ರೆಸ್ ಪ್ರತಿಪಾದಿಸುತ್ತಿರುವಾಗ, ತನ್ನದೇ ಮೈತ್ರಿಕೂಟದ ಪ್ರಮುಖ ಪಕ್ಷಗಳೊಂದಿಗೆ ಸಂಬಂಧವನ್ನು ಕಾಂಗ್ರೆಸ್ ಹೇಗೆ ನಿರ್ವಹಿಸುತ್ತಿದೆ ಎಂಬುದು ಮುಖ್ಯವಾಗುತ್ತದೆ.
ಡಿಎಂಕೆ, ಎನ್ಸಿಪಿ ಸೇರಿದಂತೆ ಪ್ರಾದೇಶಿಕ ಪಕ್ಷಗಳೊಂದಿಗೆ ಕಾಂಗ್ರೆಸ್ ಹೊಂದಿರುವ ಸಂಬಂಧಗಳು ಪ್ರತಿಪಕ್ಷಗಳ ಒಗ್ಗಟ್ಟಿನ ದೃಷ್ಟಿಯಿಂದ ನಿರ್ಣಾಯಕವಾಗಿವೆ. ಪ್ರಾದೇಶಿಕ ಪಕ್ಷಗಳ ರಾಜಕೀಯ ಪ್ರಾಮುಖ್ಯತೆಯನ್ನು ಕಡೆಗಣಿಸಿ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟು ಕಟ್ಟುವುದು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳೊಂದಿಗೆ ಮಾತುಕತೆ, ಹೊಂದಾಣಿಕೆ ಮತ್ತು ಪರಸ್ಪರ ಗೌರವದ ರಾಜಕೀಯ ಅಗತ್ಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ವಿಪರ್ಯಾಸವೆಂದರೆ, ಸಕ್ರಿಯ ರಾಜಕೀಯದಿಂದ ಬಹುತೇಕ ಹಿಂದೆ ಸರಿದಿರುವ ಸೋನಿಯಾ ಗಾಂಧಿ ಅವರು ಮತ್ತೊಮ್ಮೆ ಕಾಂಗ್ರೆಸ್ನ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಪ್ರವೇಶಿಸಬೇಕಾದ ಪರಿಸ್ಥಿತಿ ಎದುರಾಗಿದೆ. ರಾಹುಲ್ ಗಾಂಧಿ ಅವರ ರಾಜಕೀಯ ನಿರ್ಧಾರಗಳು ಮತ್ತು ನಾಯಕತ್ವದ ಆಯ್ಕೆಗಳ ಬಗ್ಗೆ ಪ್ರಶ್ನೆಗಳು ಎದ್ದಾಗಲೆಲ್ಲ ಅದರ ಪರಿಣಾಮ ಸೋನಿಯಾ ಗಾಂಧಿ ಅವರ ಮೇಲೂ ಬೀಳುತ್ತಿದೆ.
ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಉದ್ದೇಶದಿಂದ ತಮ್ಮ ರಾಜಕೀಯ ಬದುಕಿನ ಅತ್ಯಂತ ಕಠಿಣ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದ ಸೋನಿಯಾ ಅವರಿಗೆ ಈಗಿನ ಪರಿಸ್ಥಿತಿ ಖಂಡಿತವಾಗಿಯೂ ಅಸಾಮಾನ್ಯ ಸಂಗತಿಯಾಗಿದೆ.
ಅಂದು ಸೋನಿಯಾ ಗಾಂಧಿ ಅವರ ರಾಜಕೀಯ ದೂರದೃಷ್ಟಿಯ ಭಾಗವಾಗಿದ್ದ ಮೈತ್ರಿ ತಂತ್ರಗಾರಿಕೆ, ಇಂದು ರಾಹುಲ್ ಗಾಂಧಿ ಅವರ ರಾಜಕೀಯ ನಡೆಗಳಿಂದ ಪ್ರಶ್ನೆಗೊಳಗಾಗುತ್ತಿದೆ ಎಂಬುದು ಈ ಬೆಳವಣಿಗೆಯಲ್ಲಿನ ಪ್ರಮುಖ ವ್ಯಂಗ್ಯ.
2004ರಲ್ಲಿ ವಾಜಪೇಯಿ ಸರ್ಕಾರವನ್ನು ಸೋಲಿಸುವ ಉದ್ದೇಶದಿಂದ ಸೋನಿಯಾ ಗಾಂಧಿ ರೂಪಿಸಿದ್ದ ಮೈತ್ರಿ ರಾಜಕೀಯದ ತಂತ್ರಗಾರಿಕೆ ಕಾಂಗ್ರೆಸ್ಗೆ ಅಧಿಕಾರದ ಹಾದಿ ತೆರೆದಿತ್ತು. ಆದರೆ, 2026ರಲ್ಲಿ ಅವರ ಮಗ ತೆಗೆದುಕೊಂಡ ನಿರ್ಧಾರದಿಂದ ಅಧಿಕಾರ ಪಡೆಯಲು ಬೇಕಾದ ಮಿತ್ರ ಪಕ್ಷಗಳ ಬೆಂಬಲ ದೂರವಾದಂತೆ ಕಾಣಿಸುತ್ತಿದೆ.
ರಾಜಕೀಯ ಸೇತುವೆಗಳನ್ನು ಸುಟ್ಟುಹಾಕಬಾರದು ಎಂಬುದನ್ನು ಸೋನಿಯಾ ಗಾಂಧಿ ತಮ್ಮ ಅನುಭವದಿಂದ ಕಲಿತಿದ್ದರು. ಆದರೆ, ಅವರು ಕಲಿತ ಆ ಪಾಠವನ್ನು ರಾಹುಲ್ ಗಾಂಧಿ ತಮ್ಮ ರಾಜಕೀಯ ನಿರ್ಧಾರಗಳಲ್ಲಿ ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದಾರೆ ಎಂಬುದು ಈಗಿನ ಬೆಳವಣಿಗೆಗಳು ಮುಂದಿಟ್ಟಿರುವ ದೊಡ್ಡ ಪ್ರಶ್ನೆ.



ನಿಮ್ಮ ಕಾಮೆಂಟ್ ಬರೆಯಿರಿ