ಹಾದಿ ಹತ್ಯೆಯ ವಿರುದ್ಧ ನಡೆದ ಪ್ರತಿಭಟನೆ ವೇಳೆ ಬಾಂಗ್ಲಾದೇಶದ ಮತ್ತೊಬ್ಬ ವಿದ್ಯಾರ್ಥಿ ನಾಯಕನ ತಲೆಗೆ ಗುಂಡೇಟು

ಢಾಕಾ/ಖುಲ್ನಾ: ಬಾಂಗ್ಲಾದೇಶದಲ್ಲಿ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆಯ ಬೆನ್ನಲ್ಲೇ ಸೋಮವಾರ ಖುಲ್ನಾದಲ್ಲಿ ನ್ಯಾಷನಲ್ ಸಿಟಿಜನ್ಸ್ ಪಾರ್ಟಿಯ (NCP) ಹಿರಿಯ ಕಾರ್ಮಿಕ ಮುಖಂಡರೊಬ್ಬರ ಮೇಲೆ ಗುಂಡಿನ ದಾಳಿ ನಡೆದಿದೆ. ಈ ತಿಂಗಳಲ್ಲೇ ನಡೆದ ಎರಡನೇ ಹೈ-ಪ್ರೊಫೈಲ್ ಶೂಟೌಟ್ ಇದಾಗಿದ್ದು, ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ನ್ಯಾಷನಲ್ ಸಿಟಿಜನ್ಸ್ ಪಾರ್ಟಿಯ (NCP) ಕಾರ್ಮಿಕ ಘಟಕದ ಕೇಂದ್ರ ನಾಯಕ ಮೊಹಮ್ಮದ್ ಮುತ್ತಲಿಬ್ ಸಿಕ್ದರ್ (42) ಅವರ ಮೇಲೆ ಖುಲ್ನಾದ ಸೋನಾದಂಗ ಪ್ರದೇಶದ ಮನೆಯೊಂದರಲ್ಲಿ ಮಧ್ಯಾಹ್ನ 12:15 ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ಸಿಕ್ದರ್ ಅವರ ತಲೆಗೆ ಗುಂಡು ತಗುಲಿದ್ದು, ಆರಂಭದಲ್ಲಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿತ್ತು. ಆದರೆ, ಗುಂಡು ತಲೆಬುರುಡೆಯನ್ನು ಸವರಿಕೊಂಡು ಹೋಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಳೆದ ಡಿಸೆಂಬರ್ 12 ರಂದು ಖ್ಯಾತ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಅವರನ್ನು ಢಾಕಾದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯಲಾಯಿತಾದರೂ, ಡಿಸೆಂಬರ್ 18 ರಂದು ಅವರು ಮೃತಪಟ್ಟಿದ್ದರು. ಹಾದಿ ಅವರು 2024ರ ವಿದ್ಯಾರ್ಥಿ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಇಂಕಿಲಾಬ್ ಮಂಚ ಅಥವಾ ಕ್ರಾಂತಿಯ ವೇದಿಕೆಯ ವಕ್ತಾರರಾಗಿ ಸೇವೆ ಸಲ್ಲಿಸಿದರು. ಫೆಬ್ರವರಿ 2026 ರಲ್ಲಿ ನಡೆಯಲಿರುವ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೋಯ್‌ನಗರದ ಢಾಕಾ-8 ಕ್ಷೇತ್ರದಿಂದ ಸ್ಪರ್ಧಿಸಲು ಅವರು ಸಿದ್ಧತೆ ನಡೆಸುತ್ತಿದ್ದರು.
ಹಾದಿ ಅವರ ಸಾವಿನ ನಂತರ ಬಾಂಗ್ಲಾದೇಶದಾದ್ಯಂತ ಭಾರಿ ಪ್ರತಿಭಟನೆಗಳು ಭುಗಿಲೆದ್ದಿವೆ. ಢಾಕಾದ ಶಾಬಾಗ್ ಸೇರಿದಂತೆ ಹಲವು ನಗರಗಳಲ್ಲಿ ಜನರು ಬೀದಿಗಿಳಿದು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಈ ನಡುವೆ ಕಾರ್ಮಿಕ ಮುಖಂಡ ಸಿಕ್ದರ್ ಅವರ ಮೇಲಿನ ದಾಳಿ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಫೆಬ್ರವರಿ 2026 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಈ ಸರಣಿ ಹಿಂಸಾಚಾರಗಳು ತೀವ್ರ ಆತಂಕ ಮೂಡಿಸಿವೆ.

ಪ್ರಮುಖ ಸುದ್ದಿ :-   ಸ್ಪೇಸ್ ಎಕ್ಸ್ ಷೇರುಗಳ ದಾಖಲೆ ಜಿಗಿತ: ವಿಶ್ವದ ಮೊದಲ 'ಟ್ರಿಲಿಯನೇರ್' (ಲಕ್ಷ ಕೋಟಿ ಡಾಲರ್ ಒಡೆಯ)ಆದ ಎಲೋನ್ ಮಸ್ಕ್ !

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement