ಚೆನ್ನೈ: ಇತ್ತೀಚಿನ ಚುನಾವಣಾ ಸೋಲಿನ ಬೆನ್ನಲ್ಲೇ ತೀವ್ರ ಆಂತರಿಕ ಕಲಹಕ್ಕೆ ಸಿಲುಕಿರುವ ಎಐಎಡಿಎಂಕೆಗೆ (AIADMK) ಸೋಮವಾರ ಮತ್ತೊಂದು ಭಾರಿ ಆಘಾತ ಎದುರಾಗಿದೆ. ಪಕ್ಷದ ಮೂವರು ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತದನಂತರ ಮುಖ್ಯಮಂತ್ರಿ ವಿಜಯ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಶಾಸಕರಾದ ಮರಗತಂ ಕುಮಾರವೇಲು, ಜಯಕುಮಾರ ಮತ್ತು ಸತ್ಯಭಾಮಾ ಅವರೇ ರಾಜೀನಾಮೆ ನೀಡಿದ ಜನಪ್ರತಿನಿಧಿಗಳು. ಇವರು ತಮ್ಮ ರಾಜೀನಾಮೆ ಪತ್ರವನ್ನು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ ಅವರಿಗೆ ಸಲ್ಲಿಸಿದ್ದು, ಸ್ಪೀಕರ್ ಅವರು ಈ ರಾಜೀನಾಮೆಗಳನ್ನು ಅಂಗೀಕರಿಸಿದ್ದಾರೆ.
ಹಿರಿಯ ನಾಯಕ ಸಿ.ವಿ. ಷಣ್ಮುಗಂ ನೇತೃತ್ವದ 30 ಎಐಎಡಿಎಂಕೆ ಶಾಸಕರು ಸಿಎಂ ವಿಜಯ ಅವರ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಕೇವಲ ಎರಡು ವಾರಗಳಲ್ಲೇ ಈ ಬೆಳವಣಿಗೆ ನಡೆದಿದೆ. ಈಗ ರಾಜೀನಾಮೆ ನೀಡಿರುವ ಈ ಮೂವರು ಶಾಸಕರು ಎಡಪ್ಪಾಡಿ ಪಳನಿಸ್ವಾಮಿ (EPS) ನೇತೃತ್ವದ ಪಕ್ಷದ ವಿರುದ್ಧ ದಂಗೆ ಎದ್ದಿದ್ದ ಇದೇ ರೆಬೆಲ್ ಬಣದ ಭಾಗವಾಗಿದ್ದರು ಎಂಬುದು ಗಮನಾರ್ಹ.
ಮರಗತಂ ಕುಮಾರವೇಲು ಅವರು ಚೆನ್ನೈ ಸಮೀಪದ ಮಧುರಾಂತಕಂ ಕ್ಷೇತ್ರದಿಂದ ಎಐಎಡಿಎಂಕೆ ಟಿಕೆಟ್‌ನಲ್ಲಿ ಗೆದ್ದಿದ್ದರು. ಸತ್ಯಭಾಮಾ ಅವರು ಪಶ್ಚಿಮ ತಮಿಳುನಾಡಿನ ಕೊಂಗು ವಲಯದ, ಎಐಎಡಿಎಂಕೆಯ ಸಾಂಪ್ರದಾಯಿಕ ಕೋಟೆಯಾದ ಧಾರಾಪುರಂ ಕ್ಷೇತ್ರದ ಶಾಸಕರಾಗಿದ್ದರು.
ಹಾಗೂ ಜಯಕುಮಾರ ಅವರು ಕೊಂಗು ವಲಯದ ಪೆರುಂದುರೈ ಕ್ಷೇತ್ರದ ಶಾಸಕರಾಗಿದ್ದರು.
ತಮ್ಮ ರಾಜೀನಾಮೆ ಸಲ್ಲಿಕೆಯ ಬೆನ್ನಲ್ಲೇ ಈ ಮೂವರು ಶಾಸಕರು ಟಿವಿಕೆ ಸಚಿವ ಆದವ್ ಅರ್ಜುನ ಅವರನ್ನು ಅವರ ಕೊಠಡಿಯಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ. ಕಳೆದ ಮೇ 13 ರಂದು ನಡೆದಿದ್ದ ವಿಶ್ವಾಸಮತ ಯಾಚನೆಯ ವೇಳೆ ಪಕ್ಷದ ವಿಪ್ ಉಲ್ಲಂಘಿಸಿ, ವಿಜಯ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದ 25 ಬಂಡಾಯ ಶಾಸಕರಲ್ಲಿ ಈ ಮೂವರೂ ಸೇರಿದ್ದರು.
ಪಳನಿಸ್ವಾಮಿ ಕ್ಯಾಂಪ್‌ಗೆ ಮರಳಿದ ಐವರು; ಬದಲಾದ ಬಲ
ಇದೇ ವೇಳೆ ಬಂಡಾಯವೆದ್ದಿದ್ದ ಎಐಎಡಿಎಂಕೆ ಶಾಸಕರಲ್ಲಿ ಐವರು ಶಾಸಕರು ತಮ್ಮ ನಿಲುವನ್ನು ಬದಲಿಸಿ, ಮತ್ತೆ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಅವರ ಕ್ಯಾಂಪ್‌ಗೆ ಮರಳಿದ್ದಾರೆ. ಆರ್ಕಾಟ್ ಕ್ಷೇತ್ರದ ಶಾಸಕ ಎಸ್.ಎಂ. ಸುಕುಮಾರ ಸೇರಿದಂತೆ ಐವರು ಶಾಸಕರು ಮರಳಿ ಎಡಪ್ಪಾಡಿ ಪಳನಿಸ್ವಾಮಿ ಬಣ ಸೇರಿಕೊಂಡಿರುವುದರಿಂದ, ವಿಧಾನಸಭೆಯಲ್ಲಿ ಪಳನಿಸ್ವಾಮಿ ಅವರನ್ನು ಬೆಂಬಲಿಸುವ ಶಾಸಕರ ಸಂಖ್ಯೆ ಈಗ 27 ಕ್ಕೆ ಏರಿಕೆಯಾಗಿದೆ.
ಮೂವರು ಶಾಸಕರ ರಾಜೀನಾಮೆ ಮತ್ತು ಐವರು ಶಾಸಕರು ಮರಳಿ ಮಾತೃ ಪಕ್ಷಕ್ಕೆ ಬಂದಿರುವುದರಿಂದ, ಸಿ.ವಿ. ಷಣ್ಮುಗಂ ನೇತೃತ್ವದ ಬಂಡಾಯ ಬಣದ ಸಂಖ್ಯಾಬಲವು ಆರಂಭದಲ್ಲಿದ್ದ 25 ರಿಂದ ಈಗ 17 ಕ್ಕೆ ಕುಸಿದಿದೆ.
ತಮಿಳುನಾಡು ವಿಧಾನಸಭೆಯ ಪ್ರಸ್ತುತ ಚಿತ್ರಣ
ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಒಟ್ಟು 47 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇತ್ತ ನಟ ವಿಜಯ ಅವರ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ನಂಬರ್ ತಲುಪಲು ವಿಫಲವಾಗಿತ್ತು. ಆನಂತರ ಕಾಂಗ್ರೆಸ್, ಐಯುಎಂಎಲ್, ವಿಸಿಕೆ ಮತ್ತು ಎಡಪಕ್ಷಗಳ ಬೆಂಬಲದೊಂದಿಗೆ ಟಿವಿಕೆ ಸರ್ಕಾರ ರಚಿಸಿತು. ಬಳಿಕ ಎಐಎಡಿಎಂಕೆಯ ರೆಬೆಲ್ ಶಾಸಕರು ಕೂಡ ಆಡಳಿತಾರೂಢ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ವಿಸ್ತರಿಸಿದ್ದರು.
ಬಂಡಾಯದ ನಡುವೆಯೇ, ರೆಬೆಲ್ ಬಣದಲ್ಲಿದ್ದ ಹಿರಿಯ ನಾಯಕ ಎಸ್.ಪಿ. ವೇಲುಮಣಿ ಅವರು ಶುಕ್ರವಾರ ಹೊಸ ಟ್ವಿಸ್ಟ್ ನೀಡಿದ್ದಾರೆ.
“ನಮಗೆ ಪಕ್ಷವನ್ನು ಒಡೆಯುವ ಯಾವುದೇ ಉದ್ದೇಶವಿಲ್ಲ. ಎಡಪ್ಪಾಡಿ ಪಳನಿಸ್ವಾಮಿ ಅವರೇ ನಮ್ಮ ಎಂದಿನ ನಾಯಕ. ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ‘ಅಮ್ಮಾ ಆಡಳಿತ’ವನ್ನು ಮತ್ತೆ ತಮಿಳುನಾಡಿನಲ್ಲಿ ಮರುಸ್ಥಾಪಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು” ಎಂದು ಹೇಳಿದ್ದಾರೆ.
ಜೊತೆಗೆ, ಇತ್ತೀಚೆಗೆ ನಡೆದ ಮುಖ್ಯಮಂತ್ರಿ ವಿಜಯ ಅವರ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಬಂಡಾಯ ಎಐಎಡಿಎಂಕೆ ಶಾಸಕರಿಗೆ ಯಾವುದೇ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ವೇಲುಮಣಿ, “ಹೊಸ ಸರ್ಕಾರದಲ್ಲಿ ಯಾವುದೇ ಹುದ್ದೆಗಳನ್ನು ಪಡೆಯಲು ನಾನಾಗಲಿ ಅಥವಾ ಷಣ್ಮುಗಂ ಅವರಾಗಲಿ ಎಂದಿಗೂ ಆಸೆ ಪಟ್ಟಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ