ವೀಡಿಯೊ…: ಸ್ಥಳೀಯರ ಅಸಾಧಾರಣ ಸಾಹಸ, ಭೋರ್ಗರೆವ ಪ್ರವಾಹದಲ್ಲಿ ಸಿಲುಕಿದ ಕಾರಿನಿಂದ ಮಹಿಳೆಯ ರಕ್ಷಣೆ | ವೀಕ್ಷಿಸಿ

ಹರಿಯಾಣದ ಪಂಚಕುಲದ ಘಗ್ಗರ್ ನದಿಯಲ್ಲಿ ದಿಢೀರ್‌ ಪ್ರವಾಹದಿಂದ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಏರಿದ ನಂತರ ಸ್ಥಳೀಯರು ಅಸಾಧಾರಣ ಸಾಹಸ ಮಾಡಿ ಅಬ್ಬರದಿಂದ ಬೊಬ್ಬಿರಿವ ನೀರಿನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಸಾಹಸದ ವೀಡಿಯೊ ಈಗ ವೈರಲ್‌ ಆಗಿದೆ.
ವರದಿಗಳ ಪ್ರಕಾರ, ಮುಂಗಾರು ಉತ್ತರದ ರಾಜ್ಯಗಳಲ್ಲಿ ಆರಂಭವಾಗಿದ್ದು ಇದು ಹರಿಯಾಣದಲ್ಲಿಯೂ ತೊಂದರೆಯನ್ನುಂಟುಮಾಡಿದೆ, ಇದೇ ವೇಳೆ ಘಗ್ಗರ್‌ ನದಿಯಲ್ಲಿಯೂ ದಿಢೀರ್‌ ಪ್ರವಾಹ ಉಂಟಾಗಿದೆ. ಘಗ್ಗರ್ ನದಿಯ ದಡದಲ್ಲಿ ಕಾರನ್ನು ನಿಲ್ಲಿಸಿ ಮಹಿಳೆ ದೇವಸ್ಥಾನಕ್ಕೆ ಹೋಗಿದ್ದಳು. ಅವಳು ತನ್ನ ತಾಯಿಯೊಂದಿಗೆ ಬಂದಿದ್ದಳು. ದೇವಸ್ಥಾನದಿಂದ ವಾಪಸ್‌ ಆಗುವಾಗ ಕಾರಿನಲ್ಲಿ ಕುಳಿತುಕೊಳ್ಳುವಷ್ಟರಲ್ಲಿ ನದಿಯಲ್ಲಿ ದಿಢೀರ್‌ ನೀರಿನ ಮಟ್ಟ ಏರಿ ಸೆಳೆತಕ್ಕೆ ಕಾರು ಸಿಲುಕಿಕೊಂಡಿದೆ.
ನೀರಿನ ಮಟ್ಟವು ಹಠಾತ್ ಏರಿಕೆಯಾದ ನಂತರ ಭೀಕರ ಪ್ರವಾಹವು ಉಲ್ಬಣಗೊಂಡು ಕಾರು ಆ ಪ್ರವಾಹದಲ್ಲಿ ಸಿಲುಕಿ ಕೊಚ್ಚಿ ಹೋಯಿತು. ಆದರೆ ಮಧ್ಯದಲ್ಲಿದ್ದ ಕಂಬಕ್ಕೆ ಢಿಕ್ಕಿ ಹೊಡೆದ ಕಾರಿ ಅಲ್ಲಿ ಸಿಲುಕಿಕೊಂಡಿತು. ನೀರಿನ ರಭಸಕ್ಕೆ ಕಂಬಕ್ಕೆ ಅಪ್ಪಳಿಸಿದ ಕಾರು ಇಳಿಜಾರಿನಲ್ಲಿ ಸಿಲುಕಿಕೊಂಡಾಗ ಸಮೀಪದಲ್ಲೇ ಇದ್ದ ಸ್ಥಳೀಯರು ಕೂಡಲೇ ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ರಕ್ಷಣಾ ತಂಡಗಳು ತಲುಪಿದಾಗ, ಕೆರಳಿದ ಅಬ್ಬರದ ನೀರಿನ ಪ್ರವಾಹದ ಮಧ್ಯದಲ್ಲಿ ಕಾರಿನೊಳಗೆ ಸಿಲುಕಿಕೊಂಡಿದ್ದ ಮಹಿಳೆಯನ್ನು ತಲುಪಲು ಮೆಟ್ಟಿಲುಗಳು ಸಹಾಯ ಮಾಡುವುದಿಲ್ಲ ಎಂದು ಕಂಡುಕೊಂಡರು.

ಪ್ರಮುಖ ಸುದ್ದಿ :-   ರಾಜಕೀಯದಿಂದ ಮತ್ತೆ ನಟನೆಗೆ ; 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ 2ʼ ಮೂಲಕ ಮತ್ತೆ ಕಿರುತೆರೆಗೆ ಬಂದ ಸ್ಮೃತಿ ಇರಾನಿ

‘ಜೀವ ಉಳಿಸಿದ’ ಹಗ್ಗ
ಈ ವೇಳೆ ಸ್ಥಳೀಯರು ಸಹ ರಕ್ಷಣಾತಂಡದ ನೆರವಿಗೆ ಬಂದರು. ರಕ್ಷಣಾ ತಂಡದ ವಾಹನದಿಂದ ಹಗ್ಗವನ್ನು ಹೊರತೆಗೆದರು. ಹಾಗೂ ಬಲವಾದ ಅಲೆಗಳ ನಡುವೆ ಸ್ಥಳೀಯರು ಹಗೂ ರಕ್ಷಣಾ ತಂಡದವರು ಹತ್ತಿರದ ಕಂಬಕ್ಕೆ ಹಗ್ಗವನ್ನು ಕಟ್ಟಿ, ರಕ್ಷಣಾ ಪ್ರಯತ್ನವನ್ನು ಮುಂದುವರಿಸಿದರು ಹಾಗೂ ವೇಗವಾಗಿ ಇಳಿಜಾರಿನಲ್ಲಿ ಧುಮ್ಮಿಕ್ಕುತ್ತಿದ್ದ ನೀರಿನಲ್ಲಿ ಸಿಲುಕಿಕೊಂಡ ಕಾರಿನ ಬಳಿ ಕಷ್ಟಪಟ್ಟು ಹಗ್ಗದ ಸಹಾಯದಿಂದ ತೆರಳಿದರು.

 

ಆದರೆ ನೀರಿನ ರಭಸದಿಂದ ಕಾರಿನ ಬಾಗಿಲು ತೆರಯಲು ಸಹ ಕಷ್ಟವಾಗುತ್ತಿತ್ತು. ಮಹಿಳೆ ಕಾರಿನೊಳಗೆ ಸಿಲುಕಿಕೊಂಡಿದ್ದಳು. ಸುಮಾರು ಒಂದು ಗಂಟೆ ಹರಸಾಹಸಪಟ್ಟ ಸ್ಥಳೀಯರು ಮಹಿಳೆಯನ್ನು ಸುರಕ್ಷಿತವಾಗಿ ಕಾರಿನಿಂದ ಹೊರತರುವಲ್ಲಿ ಯಶಸ್ವಿಯಾದರು. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಗುತ್ತಿದ್ದಾಗ ಕಂಬಕ್ಕೆ ಢಿಕ್ಕಿ ಹೊಡೆದು ಸಿಲುಕಿಕೊಂಡಿದ್ದು ಮಹಿಳೆ ಅದೃಷ್ಟ ಚೆನ್ನಾಗಿತ್ತು. ಸ್ಥಳೀಯರು ಜೀವವನ್ನು ಉಳಿಸಲು ಗಮನಾರ್ಹ ಧೈರ್ಯ ಮತ್ತು ಸಾಹಸ ಮೆರೆದರು. ವರದಿಗಳ ಪ್ರಕಾರ, ರಕ್ಷಣಾ ತಂಡ ಕಾರನ್ನು ಸಹ ಹಠಾತ್ ಪ್ರವಾಹದಿಂದ ಹೊರತರುವಲ್ಲಿ ಯಶಸ್ವಿಯಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಬರಿ ಕೈಯಲ್ಲಿ 15 ಅಡಿ ಉದ್ದದ ದೈತ್ಯ ಹೆಬ್ಬಾವು ಹಿಡಿದು ಆಟದ ಗೊಂಬೆಯಂತೆ ಹೊತ್ತುಕೊಂಡು ಹೋದ ಮಕ್ಕಳು...!

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement