ಘಾಜಿಯಾಬಾದ್ : ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ, ಪತ್ನಿಯೇ ತನ್ನ ಗಂಡನ ನಾಲಿಗೆಯನ್ನು ಕಚ್ಚಿ ತುಂಡರಿಸಿದ ಭೀಕರ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನ ಬೇಗಮಾಬಾದ್ ಎಂಬ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯಿಂದಾಗಿ 32 ವರ್ಷದ ವಿಪಿನ್ ಎಂಬ ಯುವಕ ತನ್ನ ಮಾತು ಹಾಗೂ ನಾಲಿಗೆಯನ್ನು ಕಳೆದುಕೊಳ್ಳುವಂತಾಗಿದೆ.
ಸೋಮವಾರ ರಾತ್ರಿ ಊಟದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ವಿಪಿನ್ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ ಇಶಾ ಮೊಟ್ಟೆ ಸಾಂಬಾರ್ (Egg Curry) ತಯಾರಿಸಿದ್ದಳು. “ದಿನವೂ ಮೊಟ್ಟೆ ತಿನ್ನಲು ಸಾಧ್ಯವಿಲ್ಲ” ಎಂದು ವಿಪಿನ್ ಹೇಳಿದ್ದೇ ಜಗಳಕ್ಕೆ ಕಾರಣವಾಯಿತು. ಈ ಸಣ್ಣ ವಾಗ್ವಾದವು ಇಶಾ ಅವಳ ಮದ್ಯಪಾನ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವ ಹವ್ಯಾಸದ ಕುರಿತಾದ ವಾಗ್ವಾದದ ವರೆಗೂ ಹೋಯಿತು.
ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಇಬ್ಬರ ನಡುವೆ ಇಬ್ಬರು ಕೈಕೈ ಮಿಲಾಯಿಸುವ ಹಂತಕ್ಕೆ ಹೋದರು. ನಂತರ ಪತಿಯನ್ನು ಸಮಾಧಾನ ಪಡಿಸುವಂತೆ ನಟಿಸಿದ ಇಶಾ, ಹಠಾತ್ತನೆ ಆತನ ನಾಲಿಗೆಯನ್ನು ತನ್ನ ಹಲ್ಲುಗಳಿಂದ ಬಲವಾಗಿ ಕಚ್ಚಿದ್ದಾರೆ. ಕಚ್ಚಿದ ರಭಸಕ್ಕೆ ವಿಪಿನ್ ಅವರ ಸುಮಾರು 2.5 ಸೆಂಟಿಮೀಟರ್‌ನಷ್ಟು ನಾಲಿಗೆ ತುಂಡಾಗಿ ಕೈಗೆ ಬಂದಿದೆ ಎನ್ನಲಾಗಿದೆ.
ರಕ್ತ ಸುರಿಯುತ್ತಿರುವಾಗಲೇ ಕೆಳ ಮಹಡಿಗೆ ಓಡಿ ಬಂದ ವಿಪಿನ್, ತುಂಡಾದ ನಾಲಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಪೋಷಕರಿಗೆ ತೋರಿಸಿದ್ದಾರೆ. ಇದನ್ನು ಕಂಡ ಪೋಷಕರು ಮತ್ತು ನೆರೆಹೊರೆಯವರು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಅವರನ್ನು ಮೀರತ್‌ನ ಆಸ್ಪತ್ರೆಗೆ ದಾಖಲಿಸಲಾಯಿತು.
ವಿಪಿನ್ ಅವರ ನಾಲಿಗೆಯ ಬಹುಭಾಗ ತುಂಡಾಗಿರುವುದರಿಂದ ಶಸ್ತ್ರಚಿಕಿತ್ಸೆಯ ನಂತರವೂ ಅದನ್ನು ಮರಳಿ ಜೋಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ವಿಪಿನ್ ಭವಿಷ್ಯದಲ್ಲಿ ಸರಿಯಾಗಿ ಮಾತನಾಡಲು ಸಾಧ್ಯವಾಗದಿರಬಹುದು ಎಂದು ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಪಿನ್ ಮತ್ತು ಇಶಾ ಅವರಿಗೆ 2025ರ ಜೂನ್‌ನಲ್ಲಿ ಮದುವೆಯಾಗಿತ್ತು. ಇಶಾ ಮದುವೆಯಾದ ಒಂದು ತಿಂಗಳಿನಿಂದಲೇ ತನ್ನದೇ ಇಚ್ಛೆಯಂತೆ ಬದುಕುವುದಾಗಿ ಹೇಳುತ್ತಿದ್ದರು. ಆಕೆಗೆ ಮದ್ಯಪಾನ ಮತ್ತು ಸಿಗರೇಟ್ ಸೇದುವ ಹವ್ಯಾಸವಿತ್ತು. ಸದಾ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವುದರಲ್ಲಿ ಮುಳುಗಿರುತ್ತಿದ್ದಳು ಎಂದು ವಿಪಿನ್ ತಾಯಿ ಗೀತಾ ಆರೋಪಿಸಿದ್ದಾರೆ.
ಪೊಲೀಸ್ ವಿಚಾರಣೆಯ ವೇಳೆ ಇಶಾ, ತಾನು ಕೋಪದ ಭರದಲ್ಲಿ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆದರೆ, ಪತಿ ಸದಾ ತನ್ನನ್ನು ಮನೆಯೊಳಗೆ ನಿಂದಿಸುತ್ತಿದ್ದ ಮತ್ತು ರೀಲ್ಸ್ ಮಾಡುವುದಕ್ಕೆ ಅಡ್ಡಿಪಡಿಸುತ್ತಿದ್ದ ಎಂದು ಪ್ರತಿಯಾಗಿ ಆರೋಪಿಸಿದ್ದಾರೆ.
ಪೊಲೀಸ್ ಕ್ರಮ:
ಘಟನೆಗೆ ಸಂಬಂಧಿಸಿದಂತೆ ವಿಪಿನ್ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಇಶಾಳನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಗಂಭೀರ ಗಾಯ ಉಂಟುಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸ್ ಠಾಣೆಯಲ್ಲೂ ಇಶಾ ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ ಎಂದು ವರದಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ