ಹೈದರಾಬಾದ್: ನಗರದಲ್ಲಿ ತಡರಾತ್ರಿ ಸಂಚರಿಸುವ ಮಹಿಳೆಯರು ಎಷ್ಟು ಸುರಕ್ಷಿತವಾಗಿದ್ದಾರೆ? ಈ ಪ್ರಶ್ನೆಗೆ ಉತ್ತರ ಹುಡುಕಲು ಖುದ್ದಾಗಿ ಕಣಕ್ಕಿಳಿದ ಮಲ್ಕಾಜ್ಗಿರಿ ಪೊಲೀಸ್ ಕಮಿಷನರ್ ವಿ. ಸುಮತಿ ಅವರು ನಡೆಸಿದ ಕಾರ್ಯಾಚರಣೆಯು ಕರಾಳ ಸತ್ಯವೊಂದನ್ನು ಬಯಲು ಮಾಡಿದೆ. ಸಾಮಾನ್ಯ ಪ್ರಯಾಣಿಕಳಂತೆ ವೇಷ ಧರಿಸಿ ರಸ್ತೆಗಿಳಿದ ಅಧಿಕಾರಿಯನ್ನು ಕೇವಲ 3 ಗಂಟೆಯಲ್ಲಿ ಬರೋಬ್ಬರಿ 40 ಮಂದಿ ಪೀಡಿಸಿದ್ದಾರೆ !
ಬುಧವಾರ ಮಧ್ಯರಾತ್ರಿ 12:30 ರಿಂದ ಮುಂಜಾನೆ 3:30 ರ ಅವಧಿಯಲ್ಲಿ ದಿಲ್ಸುಖ್ ನಗರದ ಬಸ್ ನಿಲ್ದಾಣದಲ್ಲಿ ಈ ಹೈಡ್ರಾಮಾ ನಡೆಯಿತು. ಐಪಿಎಸ್ ಅಧಿಕಾರಿ ವಿ. ಸುಮತಿ ಅವರು ಯಾವುದೇ ಪೊಲೀಸ್ ಬೆಂಗಾವಲು ಇಲ್ಲದೆ, ಒಬ್ಬ ಸಾಮಾನ್ಯ ಮಹಿಳೆಯಂತೆ ಬಸ್ಸಿಗಾಗಿ ಕಾಯುವವರಂತೆ ನಟಿಸುತ್ತಾ ಏಕಾಂಗಿಯಾಗಿ ನಿಂತಿದ್ದರು. ತಡರಾತ್ರಿ ಮಹಿಳೆಯರು ಎದುರಿಸುವ ನೈಜ ಪರಿಸ್ಥಿತಿಯನ್ನು ಅರಿಯುವುದು ಅವರ ಉದ್ದೇಶವಾಗಿತ್ತು.
ಮೂರೇ ಗಂಟೆಯಲ್ಲಿ 40 ಕಾಮುಕರ ಅಸಭ್ಯ ವರ್ತನೆ
ಕಮಿಷನರ್ ರಸ್ತೆಯಲ್ಲಿ ನಿಂತ ಕೆಲವೇ ನಿಮಿಷಗಳಲ್ಲಿ ಕಿಡಿಗೇಡಿಗಳ ಕಾಟ ಶುರುವಾಯಿತು. ಮುಂಜಾನೆ 3:30ರ ಒಳಗೆ ಸುಮಾರು 40 ಪುರುಷರು ಅವರ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾರೆ. ಸೆರೆಸಿಕ್ಕವರಲ್ಲಿ ಹೆಚ್ಚಿನವರು ಮದ್ಯ ಹಾಗೂ ಗಾಂಜಾ ಅಮಲಿನಲ್ಲಿದ್ದರು ಎಂದು ತಿಳಿದುಬಂದಿದೆ. ಆಘಾತಕಾರಿ ವಿಷಯವೆಂದರೆ, ಕಿರುಕುಳ ನೀಡಿದವರಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರತಿಷ್ಠಿತ ಖಾಸಗಿ ಕಂಪನಿಗಳ ಉದ್ಯೋಗಿಗಳೇ ಹೆಚ್ಚಾಗಿದ್ದರು.
ಕ್ಷಣಮಾತ್ರದಲ್ಲಿ ಪೊಲೀಸರ ಎಂಟ್ರಿ
ಕಮಿಷನರ್ ಅವರಿಗೆ ತೊಂದರೆಯಾಗದಂತೆ ಸಾಧಾರಣ ಉಡುಪಿನಲ್ಲಿದ್ದ (Plainclothes) ವಿಶೇಷ ಪೊಲೀಸ್ ತಂಡಗಳು ಮೊದಲೇ ಸ್ಥಳದಲ್ಲಿ ಇದ್ದವು. ಕಮಿಷನರ್ ಬಳಿ ಬಂದು ಅಸಭ್ಯವಾಗಿ ವರ್ತಿಸಿದವರನ್ನು ಬೆನ್ನಟ್ಟಿ ಹಿಡಿದ ಪೊಲೀಸರು, ತಕ್ಷಣವೇ ಅವರನ್ನು ವಶಕ್ಕೆ ಪಡೆದರು. ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ಉಂಟುಮಾಡಿದ ಮತ್ತು ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದಡಿ ಇವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಬಂಧಿತ ವ್ಯಕ್ತಿಗಳಿಗೆ ಪೊಲೀಸರು ಕೌನ್ಸಿಲಿಂಗ್ ನಡೆಸುತ್ತಿದ್ದು, ಮಹಿಳೆಯರ ಸುರಕ್ಷತೆಯ ಕುರಿತು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಈ ದಿಟ್ಟ ಕಾರ್ಯಾಚರಣೆಯ ಮೂಲಕ ಕಮಿಷನರ್ ವಿ. ಸುಮತಿ ಅವರು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ