ಅಶೋಕ ಹಾಸ್ಯಗಾರ, ಬನಾರಿ, ಸಾಮಗ, ಸಿದ್ದಕಟ್ಟೆಗೆ ‘ಯಕ್ಷ ಮಂಗಳ ಪ್ರಶಸ್ತಿ’ ಪ್ರದಾನ

ಮಂಗಳೂರು : ಉಳ್ಳಾಲ ಯಕ್ಷಗಾನ ಕಲೆಗೆ ವಿಶೇಷ ಉತ್ತೇಜನವಿದೆ. ಯಕ್ಷಗಾನ ಸುಯೋಗವೆಂದರೆ ಎಂಜಿನಿಯರ್, ಡಾಕ್ಟರ್, ಶಿಕ್ಷಕರು ಮೊದಲಾದ ವಿವಿಧ ಕ್ಷೇತ್ರಗಳ ಆಸಕ್ತರ ಮೂಲಕ ಸಮೃದ್ಧವಾಗಿ ಬೆಳೆಯುತ್ತಿದೆ. ವಿದ್ಯಾವಂತರು ಸೃಜನಶೀಲತೆಗೆ ಒತ್ತು ಕೊಡುವಂತೆ ಪರಂಪರೆಯನ್ನೂ ಉಳಿಸಿಕೊಳ್ಳಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಮಂಗಳೂರು ವಿಶ್ವ ವಿದ್ಯಾಲಯದ ಡಾ.ಯು.ಆರ್ ರಾವ್ ಸಭಾಂಗಣದಲ್ಲಿ ಮಂಗಳೂರು ವಿವಿ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಡಾ.ಬನಾರಿ, ಪ್ರೊ.ಸಾಮಗ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ ಅವರಿಗೆ 2024-25ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಹಾಗೂ ಅಶೋಕ ಹಾಸ್ಯಗಾರ ಅವರ ಯಕ್ಷಗಾನ ಸಂಶೋಧನಾ ಪುಸ್ತಕಕ್ಕೆ ಕೃತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಭಿನಂದನ ಭಾಷಣ ಮಾಡಿದ ಪ್ರೊ.ಕೆ ಚಿನ್ನಪ್ಪ ಗೌಡ ಅವರು ಡಾ.ರಮಾನಂದ ಬನಾರಿ ಮತ್ತು ಪ್ರೊ.ಎಂ.ಎಲ್ ಸಾಮಗ ಅವರು ಯಕ್ಷಗಾನದ ಅಧ್ಯಯನ ಮತ್ತು ವಿಸ್ತರಣೆಗೆ ಕೊಡುಗೆ ನೀಡಿದ್ದಾರೆ.‌ ಬಣ್ಣದ ಮಾಲಿಂಗ ಅವರ ಬಣ್ಣದ ವೇಷದ ಸೌಂದರ್ಯವನ್ನು ವರ್ತಮಾನದಲ್ಲಿ ಸೃಜನಶೀಲತೆಯೊಂದಿಗೆ ತಂದ ಕಲಾವಿದರು ಸದಾಶಿವ ಶೆಟ್ಟಿಗಾರ ಸಿದ್ಧಕಟ್ಟೆಯವರು. ಅಶೋಕ ಹಾಸ್ಯಗಾರರ ದಶರೂಪಕಗಳ ದಶಾವತಾರ ಕೃತಿಯ ಮೂಲಕ ಯಕ್ಷಗಾನವನ್ನು ಶಾಸ್ತ್ರೀಯ ನೆಲೆಯಲ್ಲಿ ನೋಡುವ ಪ್ರಯತ್ನ ಮಾಡಿದ್ದಾರೆ ಎಂದರು. ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಮಾತನಾಡಿದರು. ವಿ.ವಿ. ಕುಲಪತಿ ಪ್ರೊ.ಪಿ.ಎಲ್ ಧರ್ಮ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ ನಾಲ್ವರಿಗೆ ಟಿಕೆಟ್‌ ಘೋಷಣೆ

ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ ಅವರು ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಯಕ್ಷಗಾನ ಗುರು ದೀವಿತ್ ಕೋಟ್ಯಾನ್ ಹಾಗೂ ಯಕ್ಷಮಂಗಳ ವಿದ್ಯಾರ್ಥಿನಿ ಕಾವ್ಯ ಹಂದೆ ಪ್ರಶಸ್ತಿ ಪತ್ರ ವಾಚಿಸಿದರು.ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ಸತೀಶ ಕೊಣಾಜೆ ವಂದಿಸಿದರು. ಯಕ್ಷಮಂಗಳ ವಿದ್ಯಾರ್ಥಿನಿ ಸಾಯಿಸುಮ ನಾವಡ ನಿರೂಪಿಸಿದರು.ಯಕ್ಷ ನಿರೂಪಣೆ ಮತ್ತು ಗಣಪತಿ ಕೌತುಕ ಇಡೀ ಕಾರ್ಯಕ್ರಮವನ್ನು ಕಲಾವಿದೆ ಸಾಯಿಸುಮ ನಾವಡ ಯಕ್ಷಗಾನದ ಅರ್ಥಗಾರಿಕೆ ಶೈಲಿಯಲ್ಲಿ ನಿರೂಪಣೆ ನಡೆಸಿದ್ದು ವಿಶೇಷ ಗಮನ ಸೆಳೆಯಿತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement