ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಬಾಂಗ್ಲಾದೇಶವು ಭಾರತದ ಜೊತೆ ಉದ್ವಿಗ್ನತೆ ಹೆಚ್ಚಿಸಿಕೊಂಡರೆ ಬಾಂಗ್ಲಾದೇಶದ ಯೂನಸ್ ಸರ್ಕಾರಕ್ಕೆ ಭಾರಿ ಹೊಡೆತ ನೀಡುವ ಸಾಧ್ಯತೆಯಿದೆ. ಯಾಕೆಂದರೆ ಬಾಂಗ್ಲಾದೇಶದ ವಿದ್ಯುತ್ ಪೂರೈಕೆಯು ಭಾರತದ ಮೇಲೆ ಅವಲಂಬಿತವಾಗಿರುವ ಈ ಸಮಯದಲ್ಲಿ, ಇಂತಹ ನಡೆ ಬಾಂಗ್ಲಾದೇಶಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬಾಂಗ್ಲಾದೇಶದಲ್ಲಿ ತೀವ್ರ ಅನಿಲ ಕೊರತೆ, ಕಲ್ಲಿದ್ದಲು ವಿದ್ಯುತ್ ಸ್ಥಾವರಗಳ ನಿರ್ವಹಣಾ ಸಮಸ್ಯೆ ಮತ್ತು ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ವಿದ್ಯುತ್ ಬಿಕ್ಕಟ್ಟು ಈಗಾಗಲೇ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ವಿದ್ಯುತ್ ಬಾಂಗ್ಲಾದೇಶಕ್ಕೆ ಜೀವನಾಡಿಯಾಗಿದೆ.
ಗೌತಮ್ ಅದಾನಿ ಅವರ ಅದಾನಿ ಪವರ್ ಕಂಪನಿಯು ಬಾಂಗ್ಲಾದೇಶಕ್ಕೆ ಅತಿ ಹೆಚ್ಚು ವಿದ್ಯುತ್ ಪೂರೈಸುವ ಭಾರತದ ಕಂಪನಿಯಾಗಿದೆ. ಜಾರ್ಖಂಡ್ನ ಗೊಡ್ಡಾ ಕಲ್ಲಿದ್ದಲು ವಿದ್ಯುತ್ ಸ್ಥಾವರದಿಂದ ಈ ಕಂಪನಿಯು ಪ್ರತಿದಿನ ಸುಮಾರು 1,500 ಮೆಗಾವ್ಯಾಟ್ ವಿದ್ಯುತ್ ಅನ್ನು ಬಾಂಗ್ಲಾದೇಶಕ್ಕೆ ಪೂರೈಸುತ್ತಿದೆ
ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದಿಂದ ವಿದ್ಯುತ್ ಆಮದು ಮಾಡಿಕೊಳ್ಳುವ ಬಾಂಗ್ಲಾದೇಶದ ಪ್ರಮಾಣ ಸುಮಾರು ಶೇ. 70 ರಷ್ಟು ಹೆಚ್ಚಾಗಿದೆ. ಈ ವರ್ಷದ ಮೊದಲ ಏಳು ತಿಂಗಳಲ್ಲಿ (ಜುಲೈವರೆಗೆ), ಬಾಂಗ್ಲಾದೇಶದ ಒಟ್ಟು ವಿದ್ಯುತ್ ಪೂರೈಕೆಯಲ್ಲಿ ಭಾರತದ ಪಾಲು ಶೇ. 9.5 ರಷ್ಟು ಇದ್ದಿದ್ದು ಶೇ. 17 ಕ್ಕೆ ಏರಿಕೆಯಾಗಿದೆ .
ಅಂದರೆ ಬಾಂಗ್ಲಾದೇಶದಲ್ಲಿ ಬಳಕೆಯಾಗುವ ಪ್ರತಿ 100 ಯುನಿಟ್ ವಿದ್ಯುತ್ನಲ್ಲಿ ಸುಮಾರು 17 ಯುನಿಟ್ಗಳು ಭಾರತದಿಂದಲೇ ಪೂರೈಕೆಯಾಗುತ್ತಿವೆ. ಆದರೂ ಪ್ರಸ್ತುತ ಅದು ವಿದ್ಯುತ್ ಸಮಸ್ಯೆ ಎದುರಿಸುತ್ತಿದೆ.
ಪ್ರಸ್ತುತ ಒಪ್ಪಂದಗಳ ಪ್ರಕಾರ, ಬಾಂಗ್ಲಾದೇಶವು ಭಾರತದಿಂದ ಸುಮಾರು 2,800 ರಿಂದ 3,000 ಮೆಗಾವ್ಯಾಟ್ ವಿದ್ಯುತ್ ಆಮದು ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇತ್ತೀಚಿನ ತಿಂಗಳುಗಳಲ್ಲಿ ಪ್ರತಿದಿನ ಸರಾಸರಿ 2,200 ರಿಂದ 2,300 ಮೆಗಾವ್ಯಾಟ್ ವಿದ್ಯುತ್ ಅನ್ನು ಭಾರತದಿಂದ ಪಡೆಯಲಾಗುತ್ತಿದೆ.
ಬಾಂಗ್ಲಾದೇಶಕ್ಕೆ ವಿದ್ಯುತ್ ನೀಡುತ್ತಿರುವ ಭಾರತೀಯ ಕಂಪನಿಗಳು:
ಅದಾನಿ ಪವರ್ 1,496 ಮೆಗಾವ್ಯಾಟ್ ವಿದ್ಯುತ್
NTPC/NVVN 740 MW
PTC ಇಂಡಿಯಾ ಲಿಮಿಟೆಡ್ 250 MW ವಿದ್ಯುತ್ ಪೂರೈಸುತ್ತಿವೆ.
ಒಟ್ಟಾರೆಯಾಗಿ, ತನ್ನ ದೈನಂದಿನ ಅಗತ್ಯದ ಸುಮಾರು ಶೇ. 15 ರಿಂದ 17 ರಷ್ಟು ವಿದ್ಯುತ್ಗಾಗಿ ಭಾರತವನ್ನು ಅವಲಂಬಿಸಿರುವ ಬಾಂಗ್ಲಾದೇಶಕ್ಕೆ, ಭಾರತದ ಜೊತೆಗಿನ ರಾಜತಾಂತ್ರಿಕ ಸಂಘರ್ಷವು ಅದಕ್ಕೆ ವಿದ್ಯುತ್ ಸಮಸ್ಯೆಯಾಗಿ ಕಾಡಬಹುದು.


ನಿಮ್ಮ ಕಾಮೆಂಟ್ ಬರೆಯಿರಿ