
ಶಿವಸೇನೆಯ ಪಂಜಾಬ್ ನಾಯಕ ಸಂದೀಪ ಥಾಪರ್ ಗೋರಾ (58) ಅವರ ಮೇಲೆ ಲೂಧಿಯಾನದಲ್ಲಿ ನಿಹಾಂಗ್ ಸಿಖ್ ವೇಷಧಾರಿ ವ್ಯಕ್ತಿಗಳು ಕತ್ತಿಗಳಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಸಂದೀಪ ಥಾಪರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪಂಜಾಬ್ ಶಿವಸೇನೆ ಮುಖಂಡ ಸಂದೀಪ ಥಾಪರ್ ಮೇಲೆ ಶುಕ್ರವಾರ ಮುಂಜಾನೆ ಸಾರ್ವಜನಿಕರ ಮುಂದೆಯೇ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಖಡ್ಗಗಳಿಂದ ದಾಳಿ ನಡೆಸಿದ್ದಾರೆ. ಈ ಪ್ರಕರಣದ ಸಂಬಂಧ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂದೀಪ ಥಾಪರ (58) ಅವರು ಸಂವೇದನಾ ಟ್ರಸ್ಟ್‌ನ ಸಂಸ್ಥಾಪಕ-ಅಧ್ಯಕ್ಷ ರವೀಂದರ ಅರೋರಾ ಅವರ ನಾಲ್ಕನೇ ಪುಣ್ಯಸ್ಮರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಸಿವಿಲ್ ಆಸ್ಪತ್ರೆ ಬಳಿಯ ಸಂವೇದನಾ ಟ್ರಸ್ಟ್‌ನ ಕಚೇರಿಯಿಂದ ಹೊರಗೆ ಬಂದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂವೇದನಾ ಟ್ರಸ್ಟ್ ರೋಗಿಗಳಿಗೆ ಮತ್ತು ಶವ ಒಯ್ಯಲು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತದೆ.

ಘಟನೆ ಕುರಿತು ಹೇಳಿಕೆ ನೀಡಿರುವ ಪಂಜಾಬ್ ಪೊಲೀಸರು, “ಇಂದು (ಶುಕ್ರವಾರ) ಶಿವಸೇನಾ ನಾಯಕ ಸಂದೀಪ ಥಾಪರ್ ಅವರ ಮೇಲೆ ಲೂಧಿಯಾನದ ಸಿವಿಲ್ ಹಾಸ್ಪಿಟಲ್ ಬಳಿ ಬೆಳಗ್ಗೆ 11:40ರ ಸುಮಾರಿಗೆ ದಾಳಿ ನಡೆಸಲಾಗಿದೆ. ಅವರು ಲೂಧಿಯಾನದ ಸಿವಿಲ್ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಬರುತ್ತಿದ್ದರು. ಸಮಾರಂಭ ಮುಗಿಸಿ ಅವರು ಸಿವಿಲ್ ಆಸ್ಪತ್ರೆಯ ಮುಖ್ಯ ಗೇಟ್ ಬಳಿ ತಲುಪಿದರು, ಕೈಯಲ್ಲಿ ಹರಿತವಾದ ಆಯುಧಗಳನ್ನು (ಖಡ್ಗ) ಹಿಡಿದಿದ್ದ ನಿಹಾಂಗ್ ಬಾನಾ ಧರಿಸಿದ್ದ ಆರೋಪಿಗಳು ತಕ್ಷಣವೇ ಸಂದೀಪ ಥಾಪರ್ ಅವರನ್ನು ತಡೆದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ತಾಪರ್ ಗನ್‌ಮ್ಯಾನ್ ಎಎಸ್‌ಐ ಸುಖವಂತ್ ಸಿಂಗ್ ಹೇಳಿಕೆಯ ಮೇರೆಗೆ ಲೂಧಿಯಾನದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮೂವರು ದಾಳಿಕೋರರನ್ನು ಲುಧಿಯಾನದ ಸರಬ್ಜಿತ್ ಸಿಂಗ್ ಸಭಾ (34), ಹರ್ಜೋತ್ ಸಿಂಗ್ ಜೋತಾ (35) ವರ್ಷ ಹಾಗೂ ಅಮೃತಸರ ನಿವಾಸಿ ತೆಹಲ್ ಸಿಂಗ್ ಲಾಡಿ ಎಂದು ಪೊಲೀಸರು ಗುರುತಿಸಿದ್ದಾರೆ. ಇವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಮೂರನೇ ಆರೋಪಿಗೆ ಹುಡುಕಾಟ ನಡೆಯುತ್ತಿದೆ.
ವೈರಲ್ ಆದ ವೀಡಿಯೊದಲ್ಲಿ, ನಿಹಾಂಗ್ಸ್ ವೇಷ ಧರಿಸಿದ ದಾಳಿಕೋರರು ಥಾಪರ್ ಅವರ ಬಳಿಗೆ ಬಂದರು, ಥಾಪರ್ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಥಾಪರ್ ಅವರು ದಾಳಿಕೋರರೊಂದಿಗೆ ಕೈ ಜೋಡಿಸಿ ಮಾತನಾಡುತ್ತಿದ್ದಾಗ ಹಾಗೂ ದಾರಿಹೋಕರು ನೋಡುತ್ತಿದ್ದಾಗ ಅವರಲ್ಲಿ ಒಬ್ಬರು ಏಕಾಏಕಿ ಖಡ್ಗದಿಂದ ದಾಳಿ ಮಾಡಿದ್ದಾನೆ. ಇನ್ನೊಬ್ಬ ಆಕ್ರಮಣಕಾರನು ಥಾಪರ್ ಅವರ ಭದ್ರತಾ ಸಿಬ್ಬಂದಿಯನ್ನು ದೂರ ತಳ್ಳುತ್ತಿರುವಂತೆ ತೋರುತ್ತಿದೆ. ನಂತರ ಥಾಪರ್ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದ ನಂತರ, ಮೂರನೇ ದಾಳಿಕೋರ ಥಾಪರ್ ಅವರನ್ನು ಖಡ್ಗದಿಂದ ಹೊಡೆಯಲು ಪ್ರಾರಂಭಿಸಿದ್ದಾನೆ. ನಂತರ ಇಬ್ಬರು ಆರೋಪಿಗಳು ಥಾಪರ್ ಅವರ ಸ್ಕೂಟರ್ ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಬಿಜೆಪಿ ದಾಳಿಯನ್ನು ಖಂಡಿಸಿದ್ದು, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ರಾಜೀನಾಮೆಗೆ ಒತ್ತಾಯಿಸಿದೆ. ಪಂಜಾಬ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ ಸರೀನ್ ಮಾತನಾಡಿ, ಮಾನ್ ಅವರು ರಾಜ್ಯದ ಮುಖ್ಯಮಂತ್ರಿ ಮಾತ್ರವಲ್ಲದೆ ಗೃಹ ಖಾತೆಯನ್ನೂ ಹೊಂದಿದ್ದಾರೆ. ಪಂಜಾಬ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ಶಿರೋಮಣಿ ಅಕಾಲಿದಳ (ಎಸ್‌ಎಡಿ) ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಅವರು ಈ ಘಟನೆಯು ರಾಜ್ಯದಲ್ಲಿ “ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸಂಪೂರ್ಣ ಕುಸಿತ” ವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
“ಜನ ನಿಬಿಡ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲಿ ಇಂತಹ ಹಿಂಸಾತ್ಮಕ ದಾಳಿಗಳನ್ನು ನಡೆಸುತ್ತಿರುವುದು ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ಕುಸಿತವನ್ನು ಸೂಚಿಸುತ್ತದೆ. ಮುಖ್ಯಮಂತ್ರಿ ಭಗವಂತ ಮಾನ್ ಅವರು ನಿದ್ರೆಯಿಂದ ಎಚ್ಚೆತ್ತುಕೊಂಡು ತಕ್ಷಣ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಬಾದಲ್ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ