ಝಾನ್ಸಿ/ಲಕ್ನೋ : ಉತ್ತರ ಪ್ರದೇಶದ ಝಾನ್ಸಿಯ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 10 ನವಜಾತ ಶಿಶುಗಳು ಮೃತಪಟ್ಟಿವೆ ಹಾಗೂ ಕನಿಷ್ಠ 16 ಮಕ್ಕಳು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಶುಕ್ರವಾರ ರಾತ್ರಿ 10:45 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅವಿನಾಶಕುಮಾರ ಹೇಳಿದ್ದಾರೆ.
ಆಕ್ಸಿಜನ್ ಕಾನ್ಸೆಂಟ್ರೇಟರ್ ಒಳಗೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅನಾಹುತ ಸಂಭವಿಸಿರಬಹುದು ಎಂದು ಉಪಮುಖ್ಯಮಂತ್ರಿ ಬ್ರಜೇಶ ಪಾಠಕ್ ಹೇಳಿದ್ದಾರೆ.
ಅಧಿಕಾರಿಗಳು 44 ನವಜಾತ ಶಿಶುಗಳನ್ನು ರಕ್ಷಿಸಿದ್ದಾರೆ. 10 ನವಜಾತ ಶಿಶುಗಳಲ್ಲಿ ಏಳು ಮಂದಿಯನ್ನು ಗುರುತಿಸಲಾಗಿದೆ, ಉಳಿದ ಮೂವರನ್ನು ಗುರುತಿಸಲು ಅಗತ್ಯ ಬಿದ್ದರೆ ಡಿಎನ್ಎ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ಕುಟುಂಬಗಳಿಗೆ ಸರ್ಕಾರ ಆರ್ಥಿಕ ನೆರವು ಘೋಷಿಸಿದೆ.
ಗಾಯಗೊಂಡಿರುವ 16 ಮಕ್ಕಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರನ್ನು ಉಳಿಸಲು ವೈದ್ಯರು ಶ್ರಮಿಸುತ್ತಿದ್ದಾರೆ. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಇಲ್ಲಿ ವೈದ್ಯರು ಮಾಡುತ್ತಿದ್ದಾರೆ ಎಂದು ಹೇಳಿದರು. ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಝಾನ್ಸಿ ಸುಧಾ ಸಿಂಗ್ ಶನಿವಾರ ಮುಂಜಾನೆ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಅಗ್ನಿಶಾಮಕಸೈರನ್ಗಳು ಕಾರ್ಯನಿರ್ವಹಿಸಲಿಲ್ಲ ಎಂದು ಆರೋಪಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಂತ್ರಸ್ತರ ಕುಟುಂಬಗಳಿಗೆ ₹ 5 ಲಕ್ಷ ಆರ್ಥಿಕ ನೆರವು ಘೋಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹ 50,000 ನೀಡಲಾಗುತ್ತದೆ.
ಝಾನ್ಸಿಯ ಡಿವಿಜನಲ್ ಕಮಿಷನರ್ ಮತ್ತು ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಅವರಿಗೆ 12 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಕೂಡ ಅಗ್ನಿ ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ಶಿಶುಗಳ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ₹ 2 ಲಕ್ಷ ಮತ್ತು ಗಾಯಗೊಂಡವರಿಗೆ ₹ 50,000 ನೆರವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ