ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ರೋಚಕ ಪಂದ್ಯದಲ್ಲಿ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಅದ್ಭುತ ಫೀಲ್ಡಿಂಗ್ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಮಾತ್ರವಲ್ಲದೆ, ಡಗೌಟ್‌ನಲ್ಲಿದ್ದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ ಯಾದವ್ ಕೂಡ ಅಯ್ಯರ್ ಸಾಹಸಕ್ಕೆ ದಂಗಾಗಿದ್ದಾರೆ.
ಮುಂಬೈ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಈ ವಿದ್ಯಮಾನ ನಡೆದಿದೆ. ಮಾರ್ಕೊ ಜಾನ್ಸೆನ್ ಎಸೆದ ಚೆಂಡನ್ನು ಹಾರ್ದಿಕ್ ಪಾಂಡ್ಯ ಸ್ಟ್ರೈಟ್ ಸಿಕ್ಸ್ ಬಾರಿಸಲು ಯತ್ನಿಸಿದರು. ಲಾಂಗ್-ಆನ್‌ನಲ್ಲಿ ನಿಂತಿದ್ದ ಶ್ರೇಯಸ್ ಅಯ್ಯರ್ ಎಡಕ್ಕೆ ಜಿಗಿದು ಚೆಂಡನ್ನು ಹಿಡಿತಕ್ಕೆ ಪಡೆದರು. ಆದರೆ, ತಾವು ಬೌಂಡರಿ ಗೆರೆ ದಾಟುವುದನ್ನು ಅರಿತ ಅಯ್ಯರ್, ತಕ್ಷಣವೇ ಚೆಂಡನ್ನು ಸಮೀಪದಲ್ಲಿದ್ದ ಕ್ಸೇವಿಯರ್ ಬಾರ್ಟ್ಲೆಟ್‌ಗೆ ಎಸೆದರು. ಬಾರ್ಟ್ಲೆಟ್ ಸುಲಭವಾಗಿ ಕ್ಯಾಚ್ ಪೂರ್ಣಗೊಳಿಸುವ ಮೂಲಕ ಪಾಂಡ್ಯ ಆಟಕ್ಕೆ ಬ್ರೇಕ್ ಹಾಕಿದರು.
ಈ ದೃಶ್ಯಕ್ಕೆ ಸಾಕ್ಷಿಯಾದ ಮುಂಬೈ ದಿಗ್ಗಜರಾದ ರೋಹಿತ್ ಮತ್ತು ಸೂರ್ಯಕುಮಾರ ಸಹ ಆಶ್ಚರ್ಯಚಕಿತರಾದರು. ಕ್ಯಾಚ್ ಹಿಡಿದ ನಂತರ ಅಯ್ಯರ್ ಅಭಿಮಾನಿಗಳತ್ತ ಕೈತೋರಿಸಿ ಸಂಭ್ರಮಿಸಿದರು. ಮೂಲತಃ ಮುಂಬೈ ಹುಡುಗನೇ ಆದ ಅಯ್ಯರ್ ಅವರ ಈ ಚಾಣಾಕ್ಷತನಕ್ಕೆ ಮುಂಬೈ ಪ್ರೇಕ್ಷಕರಿಂದಲೂ ಭರ್ಜರಿ ಚಪ್ಪಾಳೆ ಹರಿದುಬಂದಿತು.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ ಓವರ್‌ಗಳಲ್ಲಿ 195 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಆರಂಭದಲ್ಲೇ ರಿಯಾನ್ ರಿಕೆಲ್ಟನ್ ಮತ್ತು ಸೂರ್ಯಕುಮಾರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಮನ್ ಧೀರ್ ಮತ್ತು ಕ್ವಿಂಟನ್ ಡಿ ಕಾಕ್ ಆಸರೆಯಾದರು. ನಮನ ಧೀರ್ ಮತ್ತು ಡಿ ಕಾಕ್ ಮೂರನೇ ವಿಕೆಟ್‌ಗೆ 122 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು. 5 ವರ್ಷಗಳ ನಂತರ ಮುಂಬೈ ಪರ ಕಣಕ್ಕಿಳಿದ ಡಿ ಕಾಕ್, ಕೇವಲ 60 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸಿ ಅಬ್ಬರಿಸಿದರು. ನಮನ್ ಧೀರ್ 50 ರನ್ ಗಳಿಸಿ ಔಟಾದರು. ಪಂಜಾಬ್ ಪರ ಅರ್ಷ್‌ದೀಪ್ ಸಿಂಗ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೆ ದಿಟ್ಟ ಉತ್ತರ ನೀಡಿದ ಪಂಜಾಬ್ ಸುಪರ್ ಕಿಂಗ್ಸ್ ಪ್ರಭ್ಸಿಮ್ರಾನ್ ಸಿಂಗ್ (39 ಎಸೆತಗಳಲ್ಲಿ (80) ಮತ್ತು ಶ್ರೇಯಸ್ ಅಯ್ಯರ್ (35 ಎಸೆತಗಳಲ್ಲಿ 66) ಅರ್ಧಶತಕಗಳ ನೆರವಿನ ಮೂಲಕ ಕೇವಲ 16.3 ಓವರ್‌ಗಳಲ್ಲಿ 196 ರನ್‌ಗಳ ಗುರಿ ತಲುಪಿತು ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಅಲ್ಲದೆ, ಪಿಬಿಕೆಎಸ್ ತಂಡದ ಗೆಲುವು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರು ಐಪಿಎಲ್ ಪಂದ್ಯಗಳನ್ನು ಗೆದ್ದ ಮೊದಲ ತಂಡವಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ