ಶಿರಸಿ: 2025-26ನೇ ಸಾಲಿಗೆ ಶಿರಸಿ ರೋಟರಿಯ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಖ್ಯಾತ ಪೆಥಾಲಾಜಿಸ್ಟ್ ಮತ್ತು ರಕ್ತನಿಧಿ ಅಧಿಕಾರಿ ಡಾ. ಸುಮನ್ ಹೆಗಡೆಗೆ ಲಭಿಸಿದ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ ಸೇರಿದಂತೆ ಒಟ್ಟೂ 8 ಉತ್ಕೃಷ್ಟ ಪ್ರಶಸ್ತಿಗಳನ್ನು ಶಿರಸಿ ರೋಟರಿ ಬಾಚಿಕೊಂಡಿದೆ.
ಇದು ಶಿರಸಿ ರೋಟರಿಯ ಎಲ್ಲಾ ಸದಸ್ಯರ ಅಮೂಲ್ಯ ಸಹಕಾರ, ಮಾರ್ಗದರ್ಶನ ಮತ್ತು ಸೇವಾಭಾವನೆಯಿಂದ ಮಾತ್ರವೇ ಸಾಧ್ಯವಾಗಿರುವುದಾಗಿ ಪದಾಧಿಕಾರಿಗಳ ಪರವಾಗಿ ಡಾ. ಸುಮನ್ ಹೆಗಡೆ ಹೇಳಿದ್ದಾರೆ.
ಕೊಲ್ಲಾಪುರದಲ್ಲಿ ಜ. 30, 31 ಮತ್ತು ಫೆಬ್ರವರಿ 1ರಂದು 3 ದಿನಗಳ ಕಾಲ ವೈಭವದಿಂದ ನಡೆದ ಸಮ್ಮೇಳನ “ಋಣಾನುಬಂಧ”ದಲ್ಲಿ ಅಂ. ರೋ. ಜಿಲ್ಲೆ 3170ರ ಮಾದರಿ ರೋಟರಿ ಕ್ಲಬ್ಬುಗಳಲ್ಲೊಂದಾದ ಶಿರಸಿ಼ ರೋಟರಿ ಸಂಸ್ಥೆಗೆ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಉತ್ತರ ಕರ್ನಾಟಕದ ಏಳು ಕಂದಾಯ ಜಿಲ್ಲೆಗಳು, ಸಮಗ್ರ ಗೋವಾ ರಾಜ್ಯ ಮತ್ತು ದಕ್ಷಿಣ ಮಹಾರಾಷ್ಟ್ರದ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ವ್ಯಾಪಿಸಿರುವ ರೋಟರಿ ಜಿಲ್ಲೆ 3170ರಲ್ಲಿ ಒಟ್ಟೂ 147 ಕ್ಲಬ್‌ಗಳು ಮತ್ತು 6,728 ಸದಸ್ಯರಿದ್ದು, ಇದು ವಿಶ್ವದ ಅತಿದೊಡ್ಡ ರೋಟರಿ ಜಿಲ್ಲೆಯಾಗಿದೆ. ಸಮುದಾಯ ಸೇವಾ ವಿಭಾಗದಲ್ಲೂ ಪ್ರವೀಣ ಕಾಮತರಿಗೆ ಪ್ರಶಸ್ತಿ ಲಭಿಸಿದೆ.
ಇದಲ್ಲದೆ, ಗರಿಷ್ಠ ಪೋಲಿಯೋ ಲಸಿಕೀಕರಣ ಪ್ರಶಸ್ತಿ, ಅತ್ಯುತ್ತಮ ಯುವಜನ ಸೇವಾ ಪ್ರಶಸ್ತಿ, ಸಾರ್ವಜನಿಕ ಆರೋಗ್ಯ ಮತ್ತು ವೈದ್ಯಕೀಯ ನೆರವು ಕ್ಷೇತ್ರದಲ್ಲಿ ಶ್ರೇಷ್ಠತಾ ಪ್ರಶಸ್ತಿ, ಸಾರ್ವಜನಿಕ ಘನತೆ ಸಂಪಾದನೆಯಲ್ಲಿ ಶ್ರೇಷ್ಠತಾ ಪ್ರಶಸ್ತಿ, ಪಿಡಿಜಿ ಜಾರ್ಜ್ ಲೋಬೊ ಪ್ರಶಸ್ತಿ ಮತ್ತು ಅತ್ಯುತ್ತಮ ಕ್ಲಬ್ ಬುಲೆಟಿನ್ ಪ್ರಶಸ್ತಿಗಳು ಶಿರಸಿ ರೋಟರಿಗೆ ಲಭಿಸಿವೆ.
2024–25ನೆ ಸಾಲಿನಲ್ಲಿ ಬೆಳಗಾವಿಯ ಶರದ್ ಪೈ ಜಿಲ್ಲಾ ಪ್ರಾಂತಪಾಲರಾಗಿ, ಕಾರವಾರದ ರಾಘವೇಂದ್ರ ಪ್ರಭು ಸಹಾಯಕ ಪ್ರಾಂತಪಾಲರಾಗಿ, ಸರಸ್ವತಿ ಏನ್. ರವಿ ಕಾರ್ಯದರ್ಶಿಯಾಗಿ, ವಿನಾಯಕ ಜೋಷಿ ಖಜಾಂಚಿಯಾಗಿ ಹಾಗೂ ವಿನಯ ಕುಮಾರ ಹಿರೇಮಠ ಕಾ. ನಿ. ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು ಎಂಬುದನ್ನು ಸಾಂದರ್ಭಿಕವಾಗಿ ಸ್ಮರಿಸಬಹುದೆಂದು ಆ ವರ್ಷದ ಸಾರ್ವಜನಿಕ ಸಂಪರ್ಕಾಧಿಕಾರಿ ರವಿ ಹೆಗಡೆ ಗಡಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ