ಅಬುಧಾಬಿ : ಗುರುವಾರ ಅಬುಧಾಬಿಯ ಮೇಲೆ ಹಾರಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿದ ನಂತರ ಅದರ ಅವಶೇಷಗಳು ಬಿದ್ದ ಪರಿಣಾಮ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಪಾಕಿಸ್ತಾನ ಮೂಲದ ಮತ್ತೊಬ್ಬ ವ್ಯಕ್ತಿ ಕೂಡ ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, ಮತ್ತೊಬ್ಬ ಭಾರತೀಯ ಸೇರಿದಂತೆ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ.
ಕ್ಷಿಪಣಿಯನ್ನು ತಡೆಯಲು ವಾಯು ರಕ್ಷಣಾ ವ್ಯವಸ್ಥೆಗಳನ್ನು (Air defence protocols) ಸಕ್ರಿಯಗೊಳಿಸಿದ ನಂತರ, ಸ್ವೀಹಾನ್ ರಸ್ತೆಯಲ್ಲಿ (Sweihan Street) ಈ ಸಾವುನೋವುಗಳು ಸಂಭವಿಸಿವೆ.
ವಾಯು ರಕ್ಷಣಾ ವ್ಯವಸ್ಥೆಯು ಕ್ಷಿಪಣಿಯನ್ನು ಯಶಸ್ವಿಯಾಗಿ ನಾಶಪಡಿಸಿದೆಯಾದರೂ, ಜನನಿಬಿಡ ಪ್ರದೇಶದ ಮೇಲೆ ಬಿದ್ದ ಅದರ ತುಣುಕುಗಳು ಭಾರಿ ಹಾನಿ ಮಾಡಿದೆ. ಈ ಬಗ್ಗೆ ಅಬುಧಾಬಿ ಮಾಧ್ಯಮ ಕಚೇರಿಯು ‘X’ ನಲ್ಲಿ ಪೋಸ್ಟ್ ಮಾಡಿದ್ದು, “ವಾಯು ರಕ್ಷಣಾ ವ್ಯವಸ್ಥೆಯಿಂದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ತಡೆದ ನಂತರ ಬಿದ್ದ ಅವಶೇಷಗಳಿಂದಾಗಿ ಪಾಕಿಸ್ತಾನ ಮತ್ತು ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ,” ಎಂದು ತಿಳಿಸಿದೆ. ಇದರೊಂದಿಗೆ ಮಧ್ಯಪ್ರಾಚ್ಯ ಯುದ್ಧದಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ ಈಗ ಕನಿಷ್ಠ ಏಳಕ್ಕೆ ಏರಿದೆ.
ಯುದ್ಧ ಪ್ರಾರಂಭವಾದಾಗಿನಿಂದ, ಯುಎಇ (UAE) ವಾಯು ರಕ್ಷಣಾ ಪಡೆಗಳು 372 ಬ್ಯಾಲಿಸ್ಟಿಕ್ ಕ್ಷಿಪಣಿಗಳು, 15 ಕ್ರೂಸ್ ಕ್ಷಿಪಣಿಗಳು ಮತ್ತು 1,826 ಡ್ರೋನ್‌ಗಳನ್ನು (UAVs) ಹೊಡೆದುರುಳಿಸಿವೆ.
ಇರಾನ್ ತನ್ನ ನೆರೆಹೊರೆಯ ರಾಷ್ಟ್ರಗಳ ಮೇಲೆ ದಾಳಿ ಆರಂಭಿಸಿದಾಗಿನಿಂದ ಇದುವರೆಗೆ ಒಟ್ಟು 169 ಜನರು ಸಣ್ಣಪುಟ್ಟ ಮತ್ತು ಗಂಭೀರ ಸ್ವರೂಪದ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ. ಯಾವುದೇ ಬೆದರಿಕೆಗಳನ್ನು ಎದುರಿಸಲು ತಾವು ಸಿದ್ಧರಿರುವುದಾಗಿ ಮತ್ತು ಭದ್ರತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಮರ್ಥವಾಗಿ ಎದುರಿಸುವುದಾಗಿ ಸಚಿವಾಲಯ ಸ್ಪಷ್ಟಪಡಿಸಿದೆ.
ಹೆಚ್ಚಿನ ಎತ್ತರದಲ್ಲಿ ಕ್ಷಿಪಣಿಗಳನ್ನು ತಡೆದಾಗ, ರಕ್ಷಣಾ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡಿದರೂ ಸಹ, ಮೇಲಿಂದ ಬೀಳುವ ಚೂರುಗಳಿಂದ ಅಪಾಯ ಉಂಟಾಗಬಹುದು ಎಂಬುದನ್ನು ಈ ಘಟನೆ ಒತ್ತಿಹೇಳುತ್ತದೆ. ತನಿಖೆ ಮುಂದುವರಿದಂತೆ ಹೆಚ್ಚಿನ ಮಾಹಿತಿ ನೀಡುವುದಾಗಿ ಅಬುಧಾಬಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ವದಂತಿಗಳನ್ನು ನಂಬದೆ ಅಧಿಕೃತ ಮಾಹಿತಿಗಳನ್ನು ಮಾತ್ರ ಅವಲಂಬಿಸುವಂತೆ ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ