‘ಹಾನಿಯಾಗಿದೆ, ಚುನಾವಣೆಯಲ್ಲಿ ಗೋಚರಿಸುತ್ತದೆ…’: ರಾಮಮಂದಿರ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್‌ ಬಗ್ಗೆ ಪಕ್ಷದ ನಾಯಕ ದಿಗ್ವಿಜಯ ಸಿಂಗ್‌ ಸಹೋದರ

ಭೋಪಾಲ್‌ : ಅಯೋಧ್ಯೆ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ್ದಕ್ಕಾಗಿ ಕಾಂಗ್ರೆಸ್ ಮಾಜಿ ಶಾಸಕ ಮತ್ತು ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರ ಸಹೋದರ ಲಕ್ಷ್ಮಣ್ ಸಿಂಗ್ ತಮ್ಮದೇ ಪಕ್ಷವಾದ ‘ಕಾಂಗ್ರೆಸ್‌ ‘ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ಪಕ್ಷದ ಸಲಹೆಗಾರರನ್ನು ಪ್ರಶ್ನಿಸಿದ್ದಾರೆ.
ಮಾಜಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸಿಂಗ್ ಅವರು, “… ರಾಮ ಮಂದಿರ ಚಳವಳಿಯಲ್ಲಿ ಹೋರಾಡಿದವರು (ಪ್ರಾಣಪ್ರತಿಷ್ಠೆಯ ಬಗ್ಗೆ) ನಿಸ್ಸಂಶಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ, ಅವರೇ ನಿರ್ಧಾರ ಕೈಗೊಂಡಿದ್ದಾರೆ, ಆಹ್ವಾನಕ್ಕೆ ಸಂಬಂಧಿಸಿದಂತೆ, ನಿರಾಕರಣೆಯ ಅರ್ಥವೇನು? ನಾವು ಯಾವ ಸಂದೇಶವನ್ನು ಕಳುಹಿಸುತ್ತಿದ್ದೇವೆ? ರಾಜೀವ್ ಗಾಂಧಿಯವರು ರಾಮ ಮಂದಿರದ ಬೀಗ ತೆಗೆಸಿರುವಾಗ, ಅದನ್ನು ನಿರಾಕರಿಸಲು ನೀವು ಯಾರು? ನಮ್ಮ ನಾಯಕತ್ವವು ಅಂತಹ ಸಲಹೆಗಾರರನ್ನು ಇಟ್ಟುಕೊಂಡರೆ, ಫಲಿತಾಂಶವು ಈವರೆಗೆ ಬಂದಂತೆಯೇ ಮುಂದೆಯೂ ಇರುತ್ತದೆ. ಇದು ಚುನಾವಣೆಯಲ್ಲಿ ಗೋಚರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದಿಗ್ವಿಜಯ ಸಿಂಗ್ ಅವರ ಸಹೋದರರಾದ ಲಕ್ಷ್ಮಣ ಸಿಂಗ್‌ ಅವರು, ರಾಮಮಂದಿರದ ಉದ್ಘಾಟನೆ ಸಮಾರಂಭದ ಆಹ್ವಾನವನ್ನು ನಿರಾಕರಿಸುವ ನಿರ್ಧಾರವು ಅನುಚಿತವಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ ಕುಂದ್ರಾ ವಿರುದ್ಧ ತನಿಖೆಗೆ ಕೋರ್ಟ್ ಸೂಚನೆ

ರಾಮಮಂದಿರ ಪ್ರಾಣ ಪ್ರತಿಷ್ಠೆ ಕುರಿತು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿಕೆ ಕುರಿತು ಕೇಳಿದಾಗ, ತಮ್ಮ ಸಹೋದರನ ಬಗ್ಗೆ ಉತ್ತರಿಸಿದ ಲಕ್ಷ್ಮಣ ಸಿಂಗ್‌ ಅವರು, “ದಿಗ್ವಿಜಯ ಸಿಂಗ್ ಅವರು ‘ಜ್ಞಾನಿ ಮಹಾಪುರುಷ’ ಮತ್ತು ನನಗಿಂತ ಹೆಚ್ಚು ತಿಳಿದಿದ್ದಾರೆ, ನಾನು ಅವರ ಬಗ್ಗೆ ಮಾತನಾಡಲಾರೆ” ಎಂದು ಹೇಳಿದರು. “ಎಲ್ಲರೂ ಹೋಗಬೇಕು (ಅಯೋಧ್ಯೆಗೆ), ನಾವು ಪ್ರತಿ ವರ್ಷ ಅಲ್ಲಿಗೆ ಹೋಗುತ್ತೇವೆ. ನಮ್ಮ ಭಕ್ತಿ ಭಗವಾನ್ ರಾಮನಲ್ಲಿದೆ” ಎಂದು ಅವರು ಹೇಳಿದರು.

ಬುಧವಾರ, ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕರಿಸಿತು, ಇದನ್ನು ‘ಬಿಜೆಪಿ/ಆರ್‌ಎಸ್‌ಎಸ್ ಕಾರ್ಯಕ್ರಮ’ ಎಂದು ಅದು ಬಣ್ಣಿಸಿದೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭಗವಾನ್ ರಾಮಲಲ್ಲಾ ಅವರ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಆಹ್ವಾನವನ್ನು ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಅವರು ತಿರಸ್ಕರಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement