ಸೈಬರಾಬಾದ್ ಪೊಲೀಸರು ದೇಶದ 24 ರಾಜ್ಯಗಳು ಮತ್ತು 8 ಮಹಾನಗರಗಳಲ್ಲಿ 104 ವಿಭಾಗಗಳಲ್ಲಿ 66.9 ಕೋಟಿ ಜನರು ಮತ್ತು ಸಂಸ್ಥೆಗಳ ವೈಯಕ್ತಿಕ ಮತ್ತು ಗೌಪ್ಯ ಡೇಟಾವನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಆರೋಪಿಯು ಬೈಜಸ್ ಮತ್ತು ವೇದಾಂತು ಸಂಘಟನೆಗಳ ವಿದ್ಯಾರ್ಥಿಗಳ ಡೇಟಾವನ್ನು ಹೊಂದಿರುವುದು ಪತ್ತೆಯಾಗಿದೆ. ಇದಲ್ಲದೆ, ಎಂಟು ಮೆಟ್ರೋ ನಗರಗಳ 1.84 ಲಕ್ಷ ಕ್ಯಾಬ್ ಬಳಕೆದಾರರ ಡೇಟಾ ಮತ್ತು ಆರು ನಗರಗಳು ಮತ್ತು ಗುಜರಾತ್ ರಾಜ್ಯದ 4.5 ಲಕ್ಷ ಸಂಬಳ ಪಡೆಯುವ ಉದ್ಯೋಗಿಗಳ ಡೇಟಾವನ್ನು ಆತ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ವರದಿ ಪ್ರಕಾರ, ಆರೋಪಿಯು ಜಿಎಸ್‌ಟಿ (Pan India), ಆರ್‌ಟಿಒ (Pan India), ಅಮೆಜಾನ್ (Amazon), ನೆಟ್‌ಫ್ಲಿಕ್ (Netflix), ಯು ಟ್ಯೂಬ್, ಪೇ ಟಿಎಂ (Paytm), Phonepe, ಬಿಗ್ ಬಾಸ್ಕೆಟ್ (Big Basket), ಬುಕ್ ಮೈ ಶೋ (BookMyShow), ಇನ್ಸ್ಟಾಗ್ರಾಂ (Instagram), ಝೊಮಾಟೊ (Zomato), ಪಾಲಿಸಿ ಬಜಾರ್ (Policy Bazar), Upstox ಮುಂತಾದ ಪ್ರಮುಖ ಸಂಸ್ಥೆಗಳ ಗ್ರಾಹಕರ ಡೇಟಾವನ್ನು ಸಹ ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.
“ಆರೋಪಿ ಹೊಂದಿರುವ ಕೆಲವು ಪ್ರಮುಖ ದತ್ತಾಂಶಗಳು ರಕ್ಷಣಾ ಸಿಬ್ಬಂದಿ, ಸರ್ಕಾರಿ ನೌಕರರು, ಪ್ಯಾನ್ ಕಾರ್ಡ್ ಹೊಂದಿರುವವರು, 9, 10, 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು, ಹಿರಿಯ ನಾಗರಿಕರ ಡೇಟಾವನ್ನು ಒಳಗೊಂಡಿವೆ. ದೆಹಲಿಯ ವಿದ್ಯುತ್ ಗ್ರಾಹಕರು, ಡಿ-ಮ್ಯಾಟ್ ಖಾತೆದಾರರು, ವಿವಿಧ ವ್ಯಕ್ತಿಗಳ ಮೊಬೈಲ್ ಸಂಖ್ಯೆಗಳು, ನೀಟ್ (NEET) ವಿದ್ಯಾರ್ಥಿಗಳು, ವಿಮೆದಾರರು, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು ಇದರಲ್ಲಿ ಸೇರಿದ್ದಾರೆ ”ಎಂದು ಸೈಬರಾಬಾದ್ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ವಿನಯ ಭಾರದ್ವಾಜ ಎಂದು ಗುರುತಿಸಲಾಗಿದ್ದು, ಹರಿಯಾಣದ ಫರಿದಾಬಾದ್‌ನಲ್ಲಿರುವ “ಇನ್ಸ್‌ಪೈರ್ ವೆಬ್ಜ್” ವೆಬ್‌ಸೈಟ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಮತ್ತು ಕ್ಲೌಡ್ ಡ್ರೈವ್ ಲಿಂಕ್‌ಗಳ ಮೂಲಕ ಗ್ರಾಹಕರಿಗೆ ಡೇಟಾಬೇಸ್ ಮಾರಾಟ ಮಾಡುತ್ತಿದ್ದ. ಆತ ಅಮೆರ್ ಸೊಹೈಲ್ ಮತ್ತು ಮದನಗೋಪಾಲ ಎಂಬವರಿಂದ ಡೇಟಾಬೇಸ್ ಸಂಗ್ರಹಿಸಿದ್ದ ಎಂದು ತಿಳಿದುಬಂದಿದೆ.
ಈ ಆರೋಪಿಗಳ ಬಳಿ ನೀಟ್ ವಿದ್ಯಾರ್ಥಿಗಳ ಹೆಸರು, ತಂದೆಯ ಹೆಸರು, ಮೊಬೈಲ್ ಸಂಖ್ಯೆ ಮತ್ತು ಅವರ ನಿವಾಸದ ಡೇಟಾ ಕೂಡ ಪತ್ತೆಯಾಗಿದೆ. ಆದಾಯ, ಇಮೇಲ್ ಐಡಿಗಳು, ಫೋನ್ ಸಂಖ್ಯೆಗಳು, ವಿಳಾಸ ಇತ್ಯಾದಿಗಳ ಮೇಲಿನ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರುವ ಪ್ಯಾನ್ ಕಾರ್ಡ್ ಡೇಟಾಬೇಸ್ ಸಹ ಕಂಡುಬಂದಿದೆ. ಸರ್ಕಾರಿ ನೌಕರರ ಹೆಸರು, ಮೊಬೈಲ್ ಸಂಖ್ಯೆ, ವರ್ಗ, ಜನ್ಮ ದಿನಾಂಕ ಇತ್ಯಾದಿಗಳ ಮಾಹಿತಿಯನ್ನು ಒಳಗೊಂಡಿರುವ ಮಾಹಿತಿಯೂ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ ಎರಡು ಮೊಬೈಲ್ ಫೋನ್‌ಗಳು ಮತ್ತು ಎರಡು ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಐಟಿ ಕಾಯ್ದೆ ಉಲ್ಲಂಘನೆಗಾಗಿ ಸಂಬಂಧಪಟ್ಟ ಸಂಸ್ಥೆಗಳಿಗೆ ನೋಟಿಸ್ ನೀಡಲಾಗುವುದು ಎಂದು ಸೈಬರಾಬಾದ್ ಪೊಲೀಸ್ ಉಪ ಆಯುಕ್ತ (ಅಪರಾಧ) ಕಲ್ಮೇಶ್ವರ ಶಿಂಗೇನವರ್ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ