ಸಂಚಾರಿ ವಿಜಯ ವೈದ್ಯಕೀಯವಾಗಿ ಜೀವಂತ: ವೈದ್ಯ ಅರುಣ್ ನಾಯ್ಕ್ ಸ್ಪಷ್ಟನೆ..!

ಬೆಂಗಳೂರು; ಚಂದನವನದ ನಟ ಸಂಚಾರಿ ವಿಜಯ್ ಅವರ ಅಗಲಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಕಿಚ್ಚ ಸುದೀಪ್​ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯರು ಸಂಚಾರಿ ವಿಜಯ ಅವರು ವೈದ್ಯಕೀಯವಾಗಿ ಮರಣ ಹೊಂದಿಲ್ಲ, ​ ಅವರಿಗೆ ಜೀವ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ನ್ಯೂಸ್‌ 18 ಕನ್ನಡ.ಕಾಮ್‌ ವರದಿ ಮಾಡಿದೆ.
ಸಂಚಾರಿ ವಿಜಯ್​ ಅವರ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಹರಿದಾಡುತ್ತಿವೆ. ಹೀಗಾಗಿಯೇ ನಾನೇ ಬಂದು ಹೇಳುತ್ತಿದ್ದೇನೆ. ಇನ್ನೂ ಅವರು ಜೀವಂತವಾಗಿದ್ದಾರೆ. ಆದರೆ ಮಿದುಳು ಮಾತ್ರ ನಿಷ್ಕ್ರಿಯಗೊಂಡಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಮರಣ ಎಂದು ನಿರ್ಧರಿಸಲಾಗುವುದಿಲ್ಲ. ಈಗಿರುವ ಪರಿಸ್ಥಿತಿಯಲ್ಲಿ ಮಿದುಳು ಸಾಯಲು ಇನ್ನೂ 4-5 ತಾಸುಗಳು ಬೇಕಾಗುತ್ತದೆ. ಅಷ್ಟರಲ್ಲಿ ನಾವು ಕೆಲವು ಪರೀಕ್ಷೆಗಳನ್ನು ಮಾಡಬೇಕಿದೆ ಎಂದು ಅಪೋಲೋ ಆಸ್ಪತ್ರೆಯಲ್ಲಿ ವೈದ್ಯ ಅರುಣ್ ನಾಯ್ಕ್ ಸ್ಪಷ್ಟನೆ ನೀಡಿದ್ದಾರೆ.
ಬ್ರೈನ್​ ಡೆಡ್​ ಆದ ಮೇಲೂ ಮನುಷ್ಯರು ಹಲವಾರು ಗಂಟೆಗಳ ಕಾಲ ಜೀವಂತವಾಗಿರುತ್ತಾರೆ. ಹೃದಯದ ಬಡಿತ ನಿಂತ ಮೇಲೆ ಮರಣ ಎಂದು ಘೋಷಿಸಲಾಗುತ್ತದೆ. ಹೀಗಾಗಿಯೇ ಮೆದುಳು ನಿಷ್ಕ್ರಿಯಗೊಂಡಿರುವ ಸಂಚಾರಿ ವಿಜಯ ಅವರಿಗೆ ನಮ್ಮ ದೃಷ್ಟಿಯಲ್ಲಿ ಇನ್ನೂ ಜೀವವಿದೆ. ಇನ್ನೂ ಅವರಿಗೆ ಬ್ರೈನ್​ ಡೆಡ್​ ಆಗಿಲ್ಲ. ಒಮ್ಮೆ ಬ್ರೈನ್​ ಡೆಡ್​ ಆದ ನಂತರ ಮತ್ತೆ ಅವರು ಮೊದಲಿನಂತೆ ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಮನೆಯವರ ನಿರ್ಧಾರದಂತೆ ಅಂಗಾಂಗ ದಾನದ ಪ್ರಕ್ರಿಯೆಗೆ ಮುಂದಾಗುತ್ತೇವೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಜಯ್​ ಇನ್ನೂ ಉಸಿರಾಡುತ್ತಿದ್ದಾರೆ. ಮೊದಲ ಆ್ಯಪ್ನಿಯಾ ಟೆಸ್ಟ್ ಮಾಡಿದ್ದೇವೆ. ಎರಡನೇ ಆ್ಯಪ್ನಿಯಾ ಟೆಸ್ಟ್ ಮಾಡಬೇಕು. ಈ ಪರೀಕ್ಷೆಯಲ್ಲಿ ಅವರ ನಿಷ್ಕ್ರಿಯಗೊಂಡಿರುವ ಮೆದುಳು ಡೆಡ್​ ಆಗಿದೆಯಾ ಎಂದು ತಿಳಿಯುತ್ತದೆ. ಬ್ರೈನ್​ ಡೆಡ್​ ಆಗಿದ್ದರೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಅಂಗಾಂಗ ದಾನ ಪ್ರಕ್ರಿಯೆಗೆ ಮುಂದಾಗುತ್ತೇವೆ. ಜೀವನಸಾರ್ಥಕತೆ ಸಂಸ್ಥೆಯವರು ಬಂದು ಯಾವ ಅಂಗಗಳು ದಾನ ಮಾಡಲು ಯೋಗ್ಯವಿದೆ ಎಂದು ನಿರ್ಧರಿಸುತ್ತಾರೆ. ಅವರ ನಿರ್ಧಾರದಂತೆ ಮುಂದೆ ಅಂಗಾಂಗ ದಾನದ ಪ್ರಕ್ರಿಯೆ ನಡೆಯುತ್ತದೆ ಎಂದು ಅರುಣ್​ ನಾಯ್ಕ್​ ಸ್ಪಷ್ಟಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್​ ಹಾಗೂ ನಟ ಜಗ್ಗೇಶ್​ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ್ದು, ವಿಜಯ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದು, ದೇವರ ದಯೆಯಿಂದ ವಿಜಯ್​ ಅವರು ಬದುಕಿ ಬರಲೆಂದು ಪ್ರಾರ್ಥಿಸಿದ್ದಾರೆ.
​ವಿಜಯ ಅವರ ಸ್ನೇಹಿತರಾದ ನೀನಾಸಂ ಸತೀಶ​ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ವಿಜಯ್ ಇನ್ನಿಲ್ಲ ಎಂದು ಹೇಳಬಾರದು. ಅವನ ಹೃದಯ ಇನ್ನೂ‌ ಮಿಡಿಯುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement