ನವದೆಹಲಿ : ಯೋಧರನ್ನು, ಐತಿಹಾಸಿಕ ಗೌರವಿಸುವ ಐತಿಹಾಸಿಕ ಕ್ರಮದಲ್ಲಿ, ಭಾರತ ಸರ್ಕಾರದ ಅಂಚೆ ಇಲಾಖೆಯು 16 ನೇ ಶತಮಾನದ ಕರಾವಳಿ ಕರ್ನಾಟಕದ ನಿರ್ಭೀತ ರಾಣಿ ಎಂದೇ ಖ್ಯಾತಿ ಪಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದ ರಾಣಿ ಚೆನ್ನಭೈರಾದೇವಿ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.
‘ಕಾಳು ಮೆಣಸಿನ ರಾಣಿ’ ಖ್ಯಾತರಾಗಿದ್ದ ರಾಣಿ ಚೆನ್ನಭೈರಾದೇವಿ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಗುರುವಾರ (ಜುಲೈ 24) ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಎಕ್ಸಲೆಂಟ್ ಗ್ರೂಪ್ ಆಫ್ ಎಜುಕೇಶನ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಯುವರಾಜ ಜೈನ್, ರಾಜ್ಯದ ಮಾಜಿ ಸಚಿವ ಅಭಯಚಂದ್ರ ಜೈನ್ ಮೊದಲಾದವರು ಪಾಲ್ಗೊಂಡಿದ್ದರು.
ರೈನಾ-ದ ಪಿಮೆಂಟಾ’ ಅಂದರೆ ಕಾಳುಮೆಣಸಿನ ರಾಣಿ ಎಂದೂ ಕರೆಯಲ್ಪಡುತ್ತಿದ್ದ ರಾಣಿ ಚೆನ್ನಭೈರಾದೇವಿ ಗೇರುಸೊಪ್ಪಾದ ರಾಣಿ. ಆಕ್ರಮಣಕಾರರ ವಿರುದ್ಧ 54 ವರ್ಷಗಳ ಕಾಲ ತನ್ನ ರಾಜ್ಯವನ್ನು ಯಶಸ್ವಿಯಾಗಿ ರಕ್ಷಿಸಿದ್ದರು ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ. ಓರ್ವ ರಾಣಿ, ಓರ್ವ ಯೋಧ, ದಂತಕಥೆ. ಈ ಅಂಚೆಚೀಟಿ ಅವರ ಅಪ್ರತಿಮ ಪರಂಪರೆಗೆ ಗೌರವ ಮತ್ತು ನಮ್ಮ ಇತಿಹಾಸವನ್ನು ರೂಪಿಸುವಲ್ಲಿ ಮಹಿಳೆಯರು ವಹಿಸಿದ ಪ್ರಬಲ ಪಾತ್ರವನ್ನು ನೆನಪಿಸುತ್ತದೆ ಎಂದು ಅಂಚೆ ಇಲಾಖೆ ಟ್ವೀಟ್ ಮಾಡಿದೆ.
ರಾಣಿ ಚೆನ್ನಭೈರಾದೇವಿ ಅವರು ಕ್ರಿ.ಶ. 1552 ರಿಂದ 1606 ರವರೆಗೆ, ಹೊನ್ನಾವರದ ಗೇರುಸೊಪ್ಪೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದರು. ಮೆಣಸಿನ ರಾಣಿ ಎಂದು ಕರೆಯಲ್ಪಡುವ ರಾಣಿ ಚೆನ್ನಭೈರಾದೇವಿ ನುರಿತ ಆಡಳಿತಗಾರ್ತಿ ಮತ್ತು ನಿರ್ಭೀತ ನಾಯಕಿಯಾಗಿದ್ದರು. ಅವರು ಪೋರ್ಚುಗೀಸರ ವಿರುದ್ಧ ಹೋರಾಡಿ ತಮ್ಮ ರಾಜ್ಯವನ್ನು ರಕ್ಷಣೆ ಮಾಡಿದ್ದರು. ವ್ಯಾಪಾರ, ಪರಂಪರೆ ಕಲೆ ಮತ್ತು ಸಂಸ್ಕೃತಿಗೆ ಸಾಕಷ್ಟು ಉತ್ತೇಜನ ನೀಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ