
ನವದೆಹಲಿ: ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಿ ಸಿಲ್ವಾ ಗುರುವಾರ ಪ್ರಧಾನಿ ನರೇಂದ್ರ ಮೋದಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಮಾತುಕತೆ ಸಮಯದಲ್ಲಿ ಅಮೆರಿಕದ “ಏಕಪಕ್ಷೀಯ ಸುಂಕಗಳ ಹೇರಿಕೆ”ಯ ಬಗ್ಗೆ ಚರ್ಚಿಸಿದ ಇಬ್ಬರು ನಾಯಕರು ಜಾಗತಿಕ ಆರ್ಥಿಕತೆಯನ್ನು ಅಲುಗಾಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಪರೀತ ಸುಂಕದ ಕ್ರಮದ ವಿರುದ್ಧ ಸಂಘಟಿತ ಪ್ರಯತ್ನಗಳ ಬಗ್ಗೆ ಚರ್ಚಿಸಿದ್ದಾರೆ.
ಟ್ರಂಪ್ ಎರಡು ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾದ ಭಾರತ ಹಾಗೂ ಬ್ರೇಜಿಲ್ ಮೇಲೆ ಅತ್ಯಧಿಕ 50%ರಷ್ಟು ಅತ್ಯಧಿಕ ಸುಂಕಗಳನ್ನು ಘೋಷಿಸಿದ್ದಾರೆ. ಇಬ್ಬರು ನಾಯಕರು ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಬ್ರೆಜಿಲ್ ಅಧ್ಯಕ್ಷರ ಭೇಟಿ ಬಗ್ಗೆ ಚರ್ಚಿಸಿದರು ಮತ್ತು 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು $20 ಶತಕೋಟಿಗಿಂತಲೂ ಹೆಚ್ಚಿಸುವ ಗುರಿ ಇಟ್ಟುಕೊಂಡರು ಎಂದು ಲುಲಾ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

“ಅಧ್ಯಕ್ಷ ಲುಲಾ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸಲಾಯಿತು. ಬ್ರೆಜಿಲ್‌ಗೆ ನನ್ನ ಭೇಟಿಯನ್ನು ಸ್ಮರಣೀಯ ಮತ್ತು ಅರ್ಥಪೂರ್ಣವಾಗಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದೆ” ಎಂದು ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ, ಇದು ಬ್ರಿಕ್ಸ್ (BRICS) ರಾಷ್ಟ್ರಗಳ ಶೃಂಗಸಭೆಗಾಗಿ ಬ್ರೇಜಿಲ್‌ಗೆ ಪ್ರಧಾನಿ ಮೋದಿ ಅವರ ಭೇಟಿಯನ್ನು ಉಲ್ಲೇಖಿಸುತ್ತದೆ.
ಲುಲಾ ಸುಂಕಗಳ ಬಗ್ಗೆ ನೇರವಾಗಿ ಪ್ರಸ್ತಾಪಿಸಿದ್ದರೂ, ಪ್ರಧಾನಿ ಮೋದಿಯವರ ಪೋಸ್ಟ್ ಮತ್ತು ಭಾರತದ ಕಡೆಯಿಂದ ಬಿಡುಗಡೆಯಾದ ಪತ್ರಿಕಾ ಪ್ರಕಟಣೆಯಲ್ಲಿ ಆ ಪದ ಇರಲಿಲ್ಲ.
ಆದಾಗ್ಯೂ, ಫೋನ್ ಕರೆಯಲ್ಲಿ “ಇಬ್ಬರು ನಾಯಕರು ಪರಸ್ಪರ ಆಸಕ್ತಿಯ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು” ಮತ್ತು ಸಂಪರ್ಕದಲ್ಲಿರಲು ಒಪ್ಪಿಕೊಂಡರು ಎಂದು ಹೇಳಲಾಗಿದೆ.
‘…ಭಾರತ-ಬ್ರೆಜಿಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು, ”ಎಂದು ಅದು ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ