
ನವದೆಹಲಿ: ಮುಂಬರುವ ಅಸ್ಸಾಂ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಭರ್ಜರಿ ಸಿದ್ಧತೆ ನಡೆಸಿದ್ದು, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮಹತ್ವದ ಜವಾಬ್ದಾರಿ ನೀಡಿದೆ.
ಎಐಸಿಸಿ (AICC) ಬುಧವಾರ ಅಸ್ಸಾಂ ಚುನಾವಣೆಗೆ ಹಿರಿಯ ವೀಕ್ಷಕರ ತಂಡವನ್ನು ಘೋಷಿಸಿದ್ದು, ಡಿ.ಕೆ. ಶಿವಕುಮಾರ ಅವರೊಂದಿಗೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೇಲ್ ಮತ್ತು ಜಾರ್ಖಂಡ್‌ನ ಮಾಜಿ ಶಾಸಕ ಬಂಧು ತಿರ್ಕಿ ಅವರನ್ನು ನೇಮಕ ಮಾಡಲಾಗಿದೆ.
ಈ ವರ್ಷದ ಮೊದಲಾರ್ಧದಲ್ಲಿ ಚುನಾವಣೆ ಎದುರಿಸಲಿರುವ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳಿಗೆ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರು ವೀಕ್ಷಕರ ತಂಡವನ್ನು ಪ್ರಕಟಿಸಿದ್ದಾರೆ. ಇತ್ತೀಚೆಗಷ್ಟೇ ಲೋಕಸಭಾ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಅಸ್ಸಾಂ ಚುನಾವಣಾ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷೆಯಾಗಿ ನೇಮಿಸಲಾಗಿತ್ತು. ಈಗ ನೇಮಕಗೊಂಡಿರುವ ಶಿವಕುಮಾರ ಮತ್ತು ಬಘೇಲ್ ಅವರು ಪ್ರಿಯಾಂಕಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಈಗಾಗಲೇ ಸಿಪಿಐ(ಎಂ), ರೈಜೋರ್ ದಳ ಸೇರಿದಂತೆ ಎಂಟು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಪ್ರಸ್ತುತ ಅಸ್ಸಾಂ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ 64 ಸ್ಥಾನಗಳನ್ನು ಹೊಂದಿದೆ. ಮಿತ್ರಪಕ್ಷಗಳಾದ ಎಜಿಪಿ (9), ಯುಪಿಪಿಎಲ್ (7) ಮತ್ತು ಬಿಪಿಎಫ್ (3) ಬೆಂಬಲದೊಂದಿಗೆ ಬಿಜೆಪಿ ಪ್ರಬಲವಾಗಿದೆ. ಪ್ರತಿಪಕ್ಷದಲ್ಲಿ ಕಾಂಗ್ರೆಸ್ 26 ಮತ್ತು ಎಐಯುಡಿಎಫ್ 15 ಸ್ಥಾನಗಳನ್ನು ಹೊಂದಿವೆ.
ಕರ್ನಾಟಕದ ‘ಟ್ರಬಲ್ ಶೂಟರ್’ ಎಂದೇ ಖ್ಯಾತರಾಗಿರುವ ಡಿ.ಕೆ. ಶಿವಕುಮಾರ್ ಅವರ ನೇಮಕವು ಅಸ್ಸಾಂನಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವ ಮತ್ತು ಮೈತ್ರಿ ಪಕ್ಷಗಳನ್ನು ಒಗ್ಗೂಡಿಸುವ ತಂತ್ರಗಾರಿಕೆಯ ಭಾಗವೆಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ಕೇರಳಕ್ಕೆ, ಪಕ್ಷವು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಕರ್ನಾಟಕದ ಸಚಿವ ಕೆ.ಜೆ. ಜಾರ್ಜ್, ರಾಜ್ಯಸಭಾ ಸದಸ್ಯ ಇಮ್ರಾನ್ ಪ್ರತಾಪ್‌ಗಢಿ ಮತ್ತು ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ ಅವರನ್ನು ವೀಕ್ಷಕರನ್ನಾಗಿ ನೇಮಿಸಿದೆ.
ಮಾಜಿ ಕೇಂದ್ರ ಸಚಿವ ಮುಕುಲ್ ವಾಸ್ನಿಕ್, ತೆಲಂಗಾಣ ಸಚಿವ ಉತ್ತಮಕುಮಾರ ರೆಡ್ಡಿ ಮತ್ತು ಉತ್ತರಾಖಂಡ ಶಾಸಕ ಖಾಜಿ ಮುಹಮ್ಮದ್ ನಿಜಾಮುದ್ದೀನ್ ಅವರನ್ನು ತಮಿಳುನಾಡು ಮತ್ತು ಪುದುಚೇರಿಗೆ ವೀಕ್ಷಕರನ್ನಾಗಿ ನೇಮಿಸಲಾಗಿದೆ.
ಏತನ್ಮಧ್ಯೆ, ತ್ರಿಪುರದ ಮಾಜಿ ಸಚಿವ ಸುದೀಪ ರಾಯ್ ಬರ್ಮನ್, ಬಿಹಾರದ ಮಾಜಿ ಶಾಸಕ ಶಕೀಲ್ ಅಹ್ಮದ್ ಖಾನ್ ಮತ್ತು ಪ್ರಕಾಶ ಜೋಶಿ ಅವರು ಪಶ್ಚಿಮ ಬಂಗಾಳದಲ್ಲಿ ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ.
ಹಿರಿಯ ನಾಯಕರನ್ನು ವೀಕ್ಷಕರನ್ನಾಗಿ ನೇಮಿಸುವುದನ್ನು ಚುನಾವಣೆಗೆ ಮುನ್ನ ಪ್ರಮುಖ ರಾಜ್ಯಗಳಲ್ಲಿ ಸಾಂಸ್ಥಿಕ ಸಮನ್ವಯ ಮತ್ತು ಚುನಾವಣಾ ಸಿದ್ಧತೆಯನ್ನು ಬಲಪಡಿಸುವ ಕಾಂಗ್ರೆಸ್ ಕಾರ್ಯತಂತ್ರದ ಭಾಗವಾಗಿ ನೋಡಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ