ಆಪ್ತನ ಮೂಲಕವೇ ಯಡಿಯೂರಪ್ಪ ನೆರಳಿನಿಂದ ಸರ್ಕಾರ ಹೊರತರಲು ಬಿಜೆಪಿ ಹೈಕಮಾಂಡ್‌ ಪ್ರಯತ್ನ, ಸಂಪುಟ ರಚನೆಯಲ್ಲಿ ಇನ್ನಷ್ಟು ಸ್ಪಷ್ಟ..?!

ರಘುಪತಿ ಯಾಜಿ

ಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿಯ ಕೋರ್‌ ಕಮಿಟಿ ಸಭೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೂಗುಚ್ಛನ್ನು ಬಸವರಾಜ್ ಬೊಮ್ಮಾಯಿಗೆ ನೀಡಿದಾಗಲೇ ಬೊಮ್ಮಾಯಿ ಅವರನ್ನು ಕರ್ನಾಟಕದ ನುತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಎಲ್ಲರಿಗೂ ಗೊತ್ತಾಗಿ ಹೋಗಿತ್ತು.. ಮಂಗಳವಾರ ಸಂಜೆ 5.30 ಕ್ಕೆ ಬೊಮ್ಮಾಯಿ ಅವರ ಮನೆಯ ಹೊರಗಿನ ಭದ್ರತೆಯನ್ನು ಹೆಚ್ಚಿಸಿದಾಗ, ಯಡಿಯೂರಪ್ಪನ ನಂತರ ಯಾರು ಎಂಬ ಊಹಾಪೋಹಗಳಿಗೆ ಬಹುತೇಕ ತೆರೆ ಬಿದ್ದಿತ್ತು.
ಯಡಿಯೂರಪ್ಪ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಸಂಪೂರ್ಣ ಪ್ರಕ್ರಿಯೆ ಆಗ ಸ್ಪಷ್ಟವಾಗಿ ಹೋಗಿತ್ತು.. ಹೊಸ ಮುಖ್ಯಮಂತ್ರಿ ಹೆಸರನ್ನು ಘೋಷಿಸಲು ಮಂಗಳವಾರ ಸಂಜೆ ನಡೆದ ಸಂಕ್ಷಿಪ್ತ ಬಿಜೆಪಿ ಶಾಸಕರ ಸಭೆ ಕೇವಲ ಔಪಚಾರಿವಾಯಿತು. ಆದರೆ ಹೊಸ ಮುಖ್ಯಮಂತ್ರಿ ಆಯ್ಕೆಯಲ್ಲಿ ಬಿಜೆಪಿ ಹೈಕಮಾಂಡ್‌ ಅನುಸಿರಿಸಿದ ಗೌಪ್ಯತೆಯೇ ಬಿಜೆಪಿ ಶಾಸಕರಿಗೆ ಮತ್ತು ನಾಯಕರಿಗೆ ಮೊದಲೇ ಹಲವಾರು ಸಂದೇಶಗಳನ್ನು ನೀಡಿತ್ತು.
ಕೇಂದ್ರ ಸಚಿವ ಪ್ರಧಾನ್ ಜೊತೆಗೆ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಮತ್ತು ಕೇಂದ್ರ ಸಚಿವ ಕಿಶನ್ ರೆಡ್ಡಿಕೇಂದ್ರದ ಸಂದೇಶವನ್ನು ಹೊತ್ತು ಬಂದಿದ್ದರು ಎಂದು ಹೇಳಲಾಗಿದೆ. ಲಿಂಗಾಯತರೇ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಸಂಭಾವ್ಯರು ಎಂದು ಬಹುತೇಕ ಖಚಿತವಾಗುತ್ತಿದ್ದಂತೆಯೇ ಶಾಸಕ ಅರವಿಂದ್ ಬೆಲ್ಲದ, ಸಚಿವರಾದ ಮುರುಗೇಶ್ ನಿರಾಣಿ ಮತ್ತು ಬಸವರಾಜ ಬೊಮ್ಮಾಯಿ ಮಾತ್ರವೇ ರೇಸಿನಲ್ಲಿ ಉಳಿದರು.
ದೆಹಲಿಯಿಂದ ಬಂದ ವೀಕ್ಷಕರು ಬಿಜೆಪಿ ವರಿಷ್ಠ ನಾಯಕ ಯಡಿಯೂರಪ್ಪ ಅವರ ಮನೆಗೆ ಹೋದಾಗ ತಮ್ಮ ಸಮ್ಮತದ ಆಯ್ಕೆಯನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವುದಾದರೆ ಮಾತ್ರ ತಾವು ಅವರ ಹೆಸರು ಅನುಮೋದಿಸುವುದಾಗಿ ಯಡಿಯೂರಪ್ಪ ಸ್ಪಷ್ಟಪಡಿಸುತ್ತಿದ್ದಂತೆಯೇ ಉಳಿದ ಸಂಭಾವ್ಯರ ಹೆಸರುಗಳು ಹಿಂದಕ್ಕೆ ಹೋಯಿತು ಎಂದು ಪಕ್ಷದ ಮೂಲಗಳು ಹೇಳುತ್ತವೆ.
2014ರಲ್ಲಿ ಯಡಿಯೂರಪ್ಪ ಅವರು ಮತ್ತೆ ಬಿಜೆಪಿ ಸೇರ್ಪಡೆಯಾಗಲು ಪ್ರಮುಖ ಪಾತ್ರ ವಹಿಸಿದ್ದ ಬಸವರಾಜ ಬೊಮ್ಮಾಯಿಗೆ ಅದೃಷ್ಟ ಖುಲಾಯಿಸಲು ಪ್ರಮುಖ ಕಾರಣವಾಯಿತು. ಬಸವರಾಜ ಬೊಮ್ಮಾಯಿ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರಲ್ಲ. ಆದರೆ ಅವರ ಆಯ್ಕೆಗೆ ಅದು ಸಮಸ್ಯೆಯಾಗಿಲ್ಲ. ಯಾಕೆಂದರೆ ಕಳೆದ ಮೇನಲ್ಲಿ ಅಸ್ಸಾಂನಲ್ಲಿ ಬಿಜೆಪಿ ಸತತ ಎರಡನೇ ಸಲ ಅಧಿಕಾರಕ್ಕೆ ಬಂದರೂ ಮುಖ್ಯಮಂತ್ರಿಯಾಗಿದ್ದ ಸಬರಾನಂದ ಅವರನ್ನು ಸರಿಸಿ ಕಾಂಗ್ರೆಸ್‌ನಿಂದ ಬಂದಿದ್ದ ಹಿಮಾಂಶು ಬಿಶ್ವ ಶರ್ಮಾ ಅವರನ್ನು ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಹೀಗಾಗಿ ಬಸವರಾಜ ಬೊಮ್ಮಾಯಿ ಅವರು ಜನತಾದಳದಿಂದ ಬಂದು ಯಡಿಯೂರಪ್ಪ ಅವರ ಪರಮಾಪ್ತ ಎನಿಸಿಕೊಂಡಿದ್ದರೂ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದಾಗ ಬೊಮ್ಮಾಯಿ ಬಿಜೆಪಿಯಲ್ಲಿಯೇ ಉಳಿದು ಪಕ್ಷ ನಿಷ್ಠೆ ತೋರಿದ್ದು ಅವರಿಗೆ ಸಂಘ ಪರಿವಾರದ ಒಪ್ಪಿಗೆಗೂ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

bimba pratibimbaಜನತ ಪರಿವಾರದ ವಿಭಜನೆಯ ನಂತರ ಜನತಾದಳ (ಯು) ಮುಖ್ಯಸ್ಥರಾಗಿದ್ದ ಬಸವರಾಜ ಬೊಮ್ಮಾಯಿ ಬದಲಾದ ಪರಿಸ್ಥಿತಿಯಲ್ಲಿ ಜನತಾದಳದಲ್ಲಿ ನಂತರದಲ್ಲಿ ಸಮತಾ ಪಕ್ಷ ಕಟ್ಟಿದ್ದ ಜಾರ್ಜ್ ಫೆರ್ನಾಂಡಿಸ್ ಸಂಪರ್ಕಕ್ಕೆ ಬಂದ ನಂತರದಲ್ಲಿ ಅವರಿಗೆ ಬಿಜೆಪಿ ನಾಯಕರ ಸಂಪರ್ಕ ಬೆಳೆಯುವುದಕ್ಕೆ ಕಾರಣವಾಯಿತು. ಜೆಡಿ (ಯು) ರಾಜ್ಯ ರಾಜಕೀಯದಲ್ಲಿ ತನ್ನ ಪ್ರಸ್ತುತತೆ ಕಳೆದುಕೊಳ್ಳುತ್ತಿರುವುದು ಅರಿವಿಗೆ ಬಂದ ತಕ್ಷಣವೇ ಬೊಮ್ಮಾಯಿ ಅವರು ರಾಜಕೀಯ ಭವಿಷ್ಯದ ದೃಷ್ಟಿಯಿಂದ ಬಿಜೆಪಿಗೆ ಸೇರ್ಪಡೆಯಾದರು. ಮತ್ತು 2008ರ ಚುನಾವಣೆಯಲ್ಲಿ 2008 ರಲ್ಲಿ ಅವರ ತಂದೆಯ ಜನ್ಮಸ್ಥಳವಾದ ಹಾವೇರಿಯ ಶಿಗ್ಗಾವಿಯಿಂದ ಸ್ಪರ್ಧಿಸಿ ಗೆದ್ದರು. ಅಲ್ಲಿಂದ ಮುಖ್ಯಮಂತ್ರಿಯಾಗುವ ವರೆಗೂ ಅವರು ಪಕ್ಷ ನಿಷ್ಠರಾಗಿಯೇ ಉಳಿದಿದ್ದಾರೆ..ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಸಮುದಾಯದ ಉಪಪಂಗಡವಾದ ಸಾದರ ಲಿಂಗಾಯತ ಸಮಾಜಕ್ಕೆ ಸೇರಿದವರು. ಚಿತ್ರದುರ್ಗ, ದಾವಣಗೆರೆ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾದರ ಲಿಂಗಾಯತರು ಹೆಚ್ಚಾಗಿ ಕಂಡುಬರುತ್ತಾರೆ.
ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಬಿಜೆಪಿ ಲಿಂಗಾಯತ ಸಮುದಾಯವನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದೆ, ಹೌದು. ಹಾಗೆಂದು ಬೊಮ್ಮಾಯಿ ನೇತೃತ್ವದ ಸರ್ಕಾರ ಯಡಿಯೂರಪ್ಪ ನೆರಳಿನ ಸರ್ಕಾರವಾಗುವುದನ್ನು ಅದು ಇಚ್ಛಿಸುವುದಿಲ್ಲ. ಯಡಿಯೂರಪ್ಪ ಸರ್ಕಾರ ಸ್ವಪಕ್ಷೀಯರಿಂದಲೇ ಭ್ರಷ್ಟಚಾರದ ಆರೋಪಗಳನ್ನು ಎದುರಿಸಿತ್ತು ಹಾಗೂ ಮಂತ್ರಿಗಳಲ್ಲಿ ಸಮನ್ವಯದ ಕೊರತೆಯಿಂದ ಬಳಲುತ್ತಿತ್ತು. ರಾಜ್ಯದಲ್ಲಿ  ಚುನಾವಣೆ ಒಂದೂವರೆ ವರ್ಷವಿರುವಾಗ ಅದೇ ಪುನರಾವೃತ್ತಿ ಆಗುವುದನ್ನು ಸುತಾರಾಂ ಅದು ಬಯಸುವುದಿಲ್ಲ. ಯಾಕೆಂದರೆ ಬಿಜೆಪಿಯು ಮುಂದಿನ ಕರ್ನಾಟಕದ ವಿಧಾನಸಭೆ ಚುನಾವಣೆ ಹಾಗೂ ಅದಕ್ಕಿಂತ ಮುಖ್ಯವಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ರಾಜ್ಯವೆಂದರೆ ಕರ್ನಾಟಕ ಎಂದು ಪರಿಗಣಿಸಿದೆ. ಹೀಗಾಗಿ ಅದನ್ನು ಕಳೆದುಕೊಳ್ಳಲು  ಬಿಜೆಪಿ ಹೈಕಮಾಂಡ್‌ ಸಿದ್ಧವಿಲ್ಲ. ಹೀಗಾಗಿಯೇ ಅದಕ್ಕೆ ಮುಂದಿನ ಒಂದೂವರೆ ವರ್ಷ ಅವಧಿಯಲ್ಲಿ ಯಡಿಯೂರಪ್ಪ ಹೊರತಾದ ಸರ್ಕಾರದ ಪ್ರಗತಿ ಹಾಗೂ ಪರಿಣಾಮ ಎರಡೂ ಕಾಣಬೇಕು. ಈ ನಿಟ್ಟಿನಲ್ಲಿ ಅದು ಅಳೆದು ಸುರಿದು ಯಡಿಯೂರಪ್ಪ ಅವರ ಮಾತು ಸಹ ನಡೆದಂತಿರಬೇಕು ಹಾಗೂ ಜೊತೆಯಲ್ಲಿ ಹೈಕಮಾಂಡ್‌ ಉದ್ದೇಶವೂ ಈಡೇರಬೇಕು ಎಂಬ ದೃಷ್ಟಿಯಿಂದ ಹಲವಾರು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿರುವ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿದೆ.
ಈಗ ಯಡಿಯೂರಪ್ಪ ತಮ್ಮ ಆಪ್ತನನ್ನು ಮುಖ್ಯಮಂತ್ರಿ ಯಾಗಿ ಮಾಡಲು ಯಶಸ್ವಿಯಾಗಿದ್ದಾರೆ. ಆದರೆ ಮುಂದೆ ಸಚಿವ ಸಂಪುಟ ರಚನೆಯಲ್ಲಿ ಹೈಕಮಾಂಡ್‌ ಯಾವ ಉದ್ದೇಶ ಹೊಂದಿದೆ ಹಾಗೂ ಈ ಸರ್ಕಾರವನ್ನು ಹೇಗೆ ಒಯ್ಯಲಿದೆ ಎಂಬುದು ಸ್ಪಷ್ಟವಾಗುತ್ತದೆ. ಈಗಾಗಲೇ ಇಂದು (ಬುಧವಾರ) ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಹೊಸ ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ತಾನು ಸಚಿನಾಗುವುದಿಲ್ಲ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ. ಇದು ಹೈಕಮಾಂಡ್‌ ಯಾವರೀತಿ ಹೊರಟಿದೆ ಎಂಬುದರ ಆರಂಭಿಕ ಸಂಕೇತದಂತೆ ಕಾಣುತ್ತಿದೆ. ಇನ್ನೆರಡು ದಿನಗಳಲ್ಲಿ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿಯಾದ ಹಲವರು ಹಿರಿಯ ಸಚಿವರು ಹಾಗೂ 2008ರಲ್ಲಿ ಅಂದಿನ ಬಿಜೆಪಿ ಸರ್ಕಾರದಲ್ಲಿ ಐದು ವರ್ಷಗಳ ಕಾಲ ಸಚಿವರಾದ ಕೆಲವರಿಂದಲೂ ಇದೇರೀತಿ ಹೇಳಿಕೆ ಬರಬಹುದಾಗಿದೆ. ಯಾಕೆಂದರೆ ಶೆಟ್ಟರ ಇಂದು ಹೇಳಿಕೆ ನೀಡಿದ್ದನ್ನು ಗಮನಿಸಿದರೆ ಕೆಲವೇ ದಿನಗಳ ಹಿಂದೆ ಕೇಂದ್ರ ಸರ್ಕಾರವು ಸಂಪುಟ ಪುನರ್ರಚನೆ ಹಾಗೂ ವಿಸ್ತರಣೆ ಸಂದರ್ಭದಲ್ಲಿ ಅನುಸರಿಸಿದ ನೀತಿಯನ್ನೇ (ವಲಸೆ ಶಾಸಕರರ ಹೊರತು ಪಡಿಸಿ)ಬಹುತೇಕ ಇಲ್ಲಿಯೂ ಅನುಸರಿಸುವಂತೆ ಕಾಣುತ್ತಿದೆ. ಅಂದರೆ ಇಲ್ಲಿಯೂ ಬಹಳ ವರ್ಷಗಳಿಂದ ಸಚಿವರಾಗಿದ್ದವರು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕಾಗಿ ಬರಬಹುದು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಯಾಕೆಂದರೆ ಬಿಜೆಪಿ ಈಗ ಕರ್ನಾಟಕದಲ್ಲಿ ಕೇವಲ ಅಧಿಕಾರದಲ್ಲಿರಲು ಯೋಚಿಸುತ್ತಿಲ್ಲ, ಅದು ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಹಾಗೂ ಆ ಮೂಲಕ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಸಾಧ್ಯವಾದಷ್ಟು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಉದ್ದೇಶ ಹೊಂದಿದೆ. ಹೀಗಾಗಿ ಅದು ಸರ್ಕಾರಕ್ಕೆ ಹೊಸ ದಿಕ್ಕುತೋರಲು ಪ್ರಯತ್ನಿಸದೇ ಇರದು. ಈ ಕಾರಣಕ್ಕಾಗಿಯೇ ಅರವಿಂದ ಬೆಲ್ಲದ ಹಾಗೂ ಮುರುಗೇಶ ನಿರಾಣಿ ಅವರನ್ನು ಹಿಂದಕ್ಕಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಕೂಡ್ರಿಸಲು ಬಿಜೆಪಿ ಒಪ್ಪಿದಂತೆ  ತೋರುತ್ತಿದೆ. ಯಾಕೆಂದರೆ ಬಮ್ಮಾಯಿ ಇದನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದು ಬಿಜೆಪಿ ಹೈಕಮಾಂಡ್‌ ವಿಶ್ವಾಸ. ಇದಕ್ಕೆ ಪುಷ್ಟಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ದೆಹಲಿಗೆ ತೆರಳಿ ಪ್ರದಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ವರಿಷ್ಠರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಅಲ್ಲಿಂದಲೇ ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಹೊಸತನ ಹಾಗೂ ಹೊಸದಿಕ್ಕು ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅನಿಸುತ್ತದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement