ಬೆಂಗಳೂರು: ಲೋಕಸಭೆ ಚುನಾವಣೆ ಸಮಯದಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ಚ್ಛಕ್ತಿ ನಿಯಂತ್ರಣ ಆಯೋಗ(KERC)ಎಲ್ಲ ವರ್ಗದ ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಫೆಬ್ರವರಿಯಲ್ಲಿ ಪ್ರಕಟಿಸಿದ ವಿದ್ಯುತ್ ದರ ಪರಿಷ್ಕರಣೆ ಆದೇಶ ಇಂದಿನಿಂದ ಜಾರಿಯಾಗಲಿದೆ. ಅಲ್ಲದೆ, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಬಳಕೆದಾರ ವರ್ಗದವರಿಗೆ ನಿಗದಿತ ಶುಲ್ಕದಲ್ಲೂ ಇಳಿಕೆಯಾಗಿದೆ.
ಆದೇಶದಂತೆ 100 ಯುನಿಟ್ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಪ್ರತಿ ಯುನಿಟ್ಗೆ 1.10 ರೂ. ಕಡಿಮೆ ಮಾಡಲಾಗಿದೆ.
ಈ ಮೂಲಕ 15 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಯಾಗಿದೆ. 2024-25ನೇ ಸಾಲಿಗೆ ಅನ್ವಯವಾಗುವಂತೆ ಈ ಪರಿಷ್ಕೃತ ದರ ಏಪ್ರಿಲ್ 01ರಿಂದ ಜಾರಿಗೆ ಬರಲಿದೆ. ಎಲ್ಲಾ ಎಸ್ಕಾಂಗಳಿಗೂ ಏಕರೂಪದ ಗೃಹಬಳಕೆ ವಿದ್ಯುತ್ ದರ ನಿಗದಿ ಮಾಡಲಾಗಿದೆ.
ಗೃಹ ಬಳಕೆಯಲ್ಲಿ ಮೊದಲು 100ಕ್ಕಿಂತ ಹೆಚ್ಚು ಯುನಿಟ್ ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್ಗೆ 7 ರೂ. ನಿಗದಿ ಮಾಡಲಾಗಿತ್ತು. ಇದೀಗ 7 ರೂ.ಗಳ ಬದಲಿಗೆ ಪ್ರತಿ ಯುನಿಟ್ಗೆ 5.90 ರೂ. ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಗ್ರಾಹಕರು 100ಕ್ಕಿಂತ ಹೆಚ್ಚು ಎಷ್ಟೇ ಯೂನಿಟ್ ಖರ್ಚು ಮಾಡಿದರೆ ಪ್ರತಿ ಯೂನಿಟ್ಗೆ 5.90 ರೂ. ದರ ನಿಗದಿ ಮಾಡಲಾಗಿದೆ.
ಸರ್ಕಾರ 200 ಯೂನಿಟ್ ಒಳಗೆ ಬಳಸುವವರಿಗೆ ಗೃಹಜ್ಯೋತಿ ಯೋಜನೆಯಡಿ ಈ ಯೋಜನೆಯ ಸೌಲಭ್ಯ ಪಡೆಯದವರು ಹಾಗೂ ತಿಂಗಳಿಗೆ 100 ಯೂನಿಟ್ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಇದರ ಲಾಭ ಸಿಗಲಿದೆ. ಮೇ ತಿಂಗಳಿನಲ್ಲಿ ಬರುವ ಬಿಲ್ನಲ್ಲಿ ಈ ದರ ಅನ್ವಯವಾಗಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ