ಜ.4ರಂದು ಕೂಜಳ್ಳಿಯಲ್ಲಿ ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಸಂಗೀತೋತ್ಸವ ; ಪಂ.ನಿತ್ಯಾನಂದ ಹಳದೀಪುರಗೆ ʼಷಡಕ್ಷರಿ ರಾಷ್ಟ್ರೀಯ ಪುರಸ್ಕಾರʼ ಪ್ರದಾನ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯ ಪಂ. ಷಡಕ್ಷರಿ ಗವಾಯಿ ಅಕಾಡೆಮಿಯಿಂದ ಪಂ. ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಹಾಗೂ ಷಡಕ್ಷರಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪ್ರದಾನ ಸಮಾರಂಭವು ಕೂಜಳ್ಳಿಯ ಕುಳಿಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಜನವರಿ. 4ರಂದು ನಡೆಯಲಿದೆ.
ಈ ಬಾರಿ ಖ್ಯಾತ ಕೊಳಲು ವಾದಕ ಮುಂಬೈನ ನಿತ್ಯಾನಂದ ಹಳದೀಪುರ ಅವರಿಗೆ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ. ಜತೆಗೆ ದಿನವಿಡೀ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವರ ಸಂಗಮದ ಅಧ್ಯಕ್ಷ ಕೂಜಳ್ಳಿಯ ಸುಬ್ರಾಯ .ಜಿ. ಭಟ್ಟ, ವೇ.ಮೂ. ಗಿರೀಶ ಭಟ್ಟ ಹಳದೀಪುರ, ಷಡಕ್ಷರಿ ಗವಾಯಿ ಅಕಾಡೆಮಿ ಖಜಾಂಚಿ ವಿ.ಜಿ.ಹೆಗಡೆ ಭಾಗವಹಿಸುವರು.
ಬಳಿಕ ನಡೆಯುವ ಸ್ವರ ನಮನ ಕಾರ್ಯಕ್ರಮದಲ್ಲಿ ಪಂ. ನಿತ್ಯಾನಂದ ಹಳದೀಪುರ ಅವರಿಂದ ಬಾನ್ಸುರಿ ವಾದನ, ಶ್ರೀಪಾದ ಹೆಗಡೆ ಕಂಪ್ಲಿ, ಮುಂಬೈನ ಭಾಗೇಶ ಮರಾಠೆ, ಶಿರಸಿಯ ಡಾ. ಸಂಧ್ಯಾ ಭಟ್ಟ ಹಾಗೂ ಕವಲಕ್ಕಿಯ ವಿ. ಶಾರದಾ ಹೆಗಡೆ ಅವರಿಂದ ಗಾಯನ, ಕಿಶೋರ ಹೆಗಡೆ ಕೊಂಡದಕುಳಿ ಅವರಿಂದ ಬಾನ್ಸುರಿ ವಾದನ ಕಾರ್ಯಕ್ರಮ ನಡೆಯಲಿದೆ. ಗೋಪಾಲಕೃಷ್ಣ ಹೆಗಡೆ ಕಲಭಾಗ, ಮುಂಬೈನ ಸ್ವಪ್ನಿಲ್ ಭಿಸೆ, ವಿದ್ವಾನ್ ಪರಮೇಶ್ವರ ಹೆಗಡೆ ಮೈಸೂರು, ಅಕ್ಷಯ ಭಟ್ಟ ಅಂಸಳ್ಳಿ, ಭರತ ಹೆಗಡೆ ಕವಲಕ್ಕಿ ತಬಲಾ ಸಾಥ್ ನೀಡಲಿದ್ದಾರೆ. ಗೌರೀಶ ಯಾಜಿ, ಅಜಯ ಹೆಗಡೆ ವರ್ಗಾಸರ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ರಕರ್ತ, ಸಾಹಿತಿ ಅಶೋಕ ಹಾಸ್ಯಗಾರ, ನಿವೃತ್ತ ಉಪನ್ಯಾಸಕ ಶಂಕರ ಭಟ್ಟ ಧಾರೇಶ್ವರ, ವಿಶ್ರಾಂತ ಮುಖ್ಯಾಧ್ಯಾಪಕ ಎಂ.ಟಿ.ಗೌಡ, ವೇದ ಅಧ್ಯಾಪಕ ಮನೋಜ ಕೃಷ್ಣ ಭಟ್ಟ ಪಾಲ್ಗೊಳ್ಳುವರು. ಷಡಕ್ಷರಿ ಗವಾಯಿ ಅಕಾಡೆಮಿ ಅಧ್ಯಕ್ಷ ವಸಂತ ರಾವ್ ಅಧ್ಯಕ್ಷತೆ ವಹಿಸುವರು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೊಳಲು ವಾದಕ ನಿತ್ಯಾನಂದ ಹಳದಿಪುರ ಬಗ್ಗೆ…
 ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜರಲ್ಲಿ ಒಬ್ಬರಾದ ನಿತ್ಯಾನಂದ ಹಳದಿಪುರ ಅವರು ತಮ್ಮ ವಿಶಿಷ್ಟ ಕೊಳಲು ವಾದನದ ಮೂಲಕ ವಿಶ್ವದಾದ್ಯಂತ ಗಮನ ಸೆಳೆದಿದ್ದಾರೆ.
ಸಂಗೀತ ಪರಂಪರೆಯ ಕುಟುಂಬದಲ್ಲಿ ಮುಂಬೈನಲ್ಲಿ ಜನಿಸಿದ ನಿತ್ಯಾನಂದ ಅವರು ಬಾಲ್ಯದಲ್ಲೇ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಇವರ ತಂದೆ ನಿರಂಜನ್ ಹಳದಿಪುರ ಅವರು ಖ್ಯಾತ ಕೊಳಲು ವಾದಕ ಪಂಡಿತ್‌ ಪನ್ನಾಲಾಲ್ ಘೋಷ್ ಅವರ ಶಿಷ್ಯರು. ತಂದೆಯವರೇ ಇವರಿಗೆ ಅವರು ಕೊಳಲು ವಾದನದ ಪ್ರಾಥಮಿಕ ಶಿಕ್ಷಣವನ್ನು ನೀಡಿದರು.
ತಮ್ಮ ಸಂಗೀತ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಮುಂದಿನ ಎರಡು ದಶಕಗಳ ಕಾಲ ಅವರು ದಿವಂಗತ ಪಂಡಿತ ಚಿದಾನಂದ ನಗರಕರ ಮತ್ತು ಪಂಡಿತ ದೇವೇಂದ್ರ ಮುರ್ಡೇಶ್ವರ ಅವರ ಬಳಿ ತರಬೇತಿ ಪಡೆದರು. 1986 ರಿಂದ, ಮೈಹಾರ್ ಘರಾನಾದ ಹಿರಿಯ ವಿದ್ವಾಂಸರಾದ ಪದ್ಮಭೂಷಣ ಅನ್ನಪೂರ್ಣಾ ದೇವಿ ಅವರಲ್ಲಿ ಹೆಚ್ಚಿನ ಮಾರ್ಗದರ್ಶನ ಪಡೆದು ಸಂಗೀತ ಸಾಧನೆ ಮಾಡಿದ್ದಾರೆ. ದೇಶ-ವಿದೇಶಗಳ ಪ್ರತಿಷ್ಠಿತ ಸಂಗೀತೋತ್ಸವ ಹಾಗೂ ಸಂಗೀತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ನಿತ್ಯಾನಂದ ಅವರುಕೇವಲ ವಾದಕರಾಗಿ ಮಾತ್ರವಲ್ಲದೆ, ಸಂಗೀತ ಸಂಯೋಜಕರಾಗಿಯೂ ಗುರುತಿಸಿಕೊಂಡಿದ್ದಾ. ರೇಡಿಯೋ ಮತ್ತು ಸಹಯೋಗ: ವಿವಿಧ ರೇಡಿಯೋ ಕಾರ್ಯಕ್ರಮಗಳಿಗೆ ಸಂಗೀತ ನೀಡುವ ಜೊತೆಗೆ, ರಾಬರ್ಟ್ ಜಿಯಾನೆಟ್ಟಿ ಅವರಂತಹ ಅಂತಾರಾಷ್ಟ್ರೀಯ ಕಲಾವಿದರೊಂದಿಗೆ ಕೆಲಸ ಮಾಡುವ ಮೂಲಕ ವಿಭಿನ್ನ ಪ್ರಕಾರದ ಸಂಗೀತ ಪ್ರಯೋಗಗಳನ್ನು ನಡೆಸಿದ್ದಾರೆ.
ಪ್ರಶಸ್ತಿಗಳು….
ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ,  ಡಾ. ಮಲ್ಲಿಕಾರ್ಜುನ್ ಮನ್ಸೂರ್ ಪುರಸ್ಕಾರ, ತಾನಸೇನ್‌ ಸಮ್ಮಾನ ಪುರಸ್ಕಾರ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸ್ವರ ಸಾಧನ ರತ್ನ ಪ್ರಶಸ್ತಿ, ಸಹಾರಾ ಇಂಟರ್ನ್ಯಾಷನಲ್ ಅವರಿಂದ ಜೀವಮಾನ ಸಾಧನೆ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement