ಧಾರವಾಡದಲ್ಲಿ ಐಐಐಟಿ ಸ್ಥಾಪಿಸಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿ ಸರ್ಕಾರವಲ್ಲ: ವಸಂತ ಲದವಾ

ಹುಬ್ಬಳ್ಳಿ: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ೨೦೧೫ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸ್ ಎದುರಿನ ಐಟಿ ಪಾರ್ಕ್‌ನಲ್ಲಿ ಸ್ಥಾಪನೆಯಾಗಿದ್ದು ೨೦೧೫-೧೬ರ ಶೈಕ್ಷಣಿಕ ವರ್ಷದಿಂದ ವರ್ಗಗಳೂ ಪ್ರಾರಂಭವಾಗಿವೆ. ೨೦೧೫-೧೬ ರಿಂದ ೨೦೨೧-೨೨ರ ವರೆಗೆ ನಾಲ್ಕು ಘಟಿಕೋತ್ಸವಗಳನ್ನು ಆಚರಿಸಿದೆ. ಈ ಸತ್ಯ ಸಂಗತಿಯನ್ನು ಮರೆಮಾಚಿ ಕಾಂಗ್ರೆಸ್ ಸರ್ಕಾರದ ಸಾಧನೆ ತಮ್ಮದೆಂದು ಬಿಜೆಪಿ ಹೇಳಿಕೊಳ್ಳುತ್ತಿದೆ ಎಂದು ಕಾಂಗ್ರೆಸ ವಕ್ತಾರ ವಸಂತ ಲದವಾ ಸ್ಪಷ್ಟಪಡಿಸಿದ್ದಾರೆ.
ಒಟ್ಟು ೩೦೫೮.೭೧ ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ ೨೦ ಐಐಐಟಿಗಳನ್ನು ದೇಶದಲ್ಲಿ ಸ್ಥಾಪಿಸಲು ಹಿಂದಿನ ಮನಮೋಹನಸಿಂಗ್‌ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ೨೦೧೨-೧೩ರಲ್ಲಿ ಒಪ್ಪಿಗೆ ಸೂಚಿಸಿತ್ತು. ೨೦೧೨ರಲ್ಲಿಯೇ ೧೨೮ ಕೋಟಿ ರೂ.ಗಳ ಬಂಡವಾಳದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಂಜೂರು ಮಾಡಿ ಸೂಕ್ತ ಸ್ಥಳಾವಕಾಶಕ್ಕಾಗಿ ಕೋರಲಾಗಿತ್ತು.
ಐಐಐಟಿ ಮಸೂದೆ ಸಮಿತಿ ೨೦೧೩ರ ಅಕ್ಟೋಬರ್‌ ೩ನೇ ಮತ್ತು ೧೦ನೇ ತಾರೀಖಿಗೆ ಮತ್ತು ಡಿಸೆಂಬರ್ ‌೫ಕ್ಕೆ ಪ್ರಸ್ತಾವನೆ ಪರಿಶೀಲಿಸಿ ಜನೆವರಿ ೧೩, ೨೦೧೪ರಂದು ಸಂಬಂಧಪಟ್ಟ ಇಲಾಖೆಗೆ ಶಿಫಾರಸು ಮಾಡಿತ್ತು. ರಾಜ್ಯದ ಕಾಂಗ್ರೆಸ್ ಸರ್ಕಾರ ಧಾರವಾಡದಲ್ಲಿ ನಿಗದಿಪಡಿಸಲಾಗಿದ್ದ ತಡಸಿನಕೊಪ್ಪ ಗ್ರಾಮದ ೬೧.೦೬ಎಕರೆ ಭೂಮಿ ಪುಕ್ಕಟೆಯಾಗಿ ಈ ಸಂಸ್ಥೆಗೆ ಹಂಚಿಕೆ ಮಾಡಿ ೪೫ಕೋಟಿ ರೂ.ಗಳ ವಂತಿಗೆ ನೀಡಿತ್ತು.
ಅಂದಿನ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಎಸ್. ಆರ್. ಪಾಟೀಲರು ಎಪ್ರಿಲ್೪, ೨೦೧೫ರಂದು ಸ್ಥಳಕ್ಕೆ ಭೇಟಿ ನೀಡಿ ೨೦೧೫-೧೬ರಿಂದ ಹುಬ್ಬಳ್ಳಿಯ ಐಟಿ ಪಾರ್ಕ್‌ನಲ್ಲಿ ಪ್ರಾರಂಭಿಸಿ ನಂತರ ತಡಸಿನಕೊಪ್ಪ ಗ್ರಾಮದ ಸ್ವಂತ ಕಟ್ಟಡದಲ್ಲಿ ಸ್ಥಳಾಂತರಿಸುವುದಾಗಿ ಕ್ರಮ ಕೈಗೊಂಡಿದ್ದರು. ಇದರಲ್ಲಿ ಅಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾಗಿದ್ದ ನಾನು (ವಸಂತ ಲದವಾ) ಮತ್ತು ಆಡಳಿತ ಮಂಡಳಿಯವರ ಪ್ರಯತ್ನ ವಿಶೇಷವಾಗಿತ್ತಲ್ಲದೇ ಅಂದಿನ ಸಚಿವರಾದ ಎಚ್. ಕೆ. ಪಾಟೀಲರ ನಿರಂತರ ಸಹಕಾರ ಇತ್ತು. ಇಂದಿನ ಬಿಜೆಪಿ ಸರ್ಕಾರ ಹಿಂದಿನ ಕಾಂಗ್ರೆಸ ಸರ್ಕಾರವನ್ನು ನೆನೆಯದೇ ಎಲ್ಲವೂ ತಾನೇ ಮಾಡಿರುವುದಾಗಿ ಬಿಂಬಿಸುತ್ತಿದೆ ಎಂದು ವಸಂತ ಲದವಾ ಟೀಕಿಸಿದ್ದಾರೆ.
ಹಿಂದೆ ಐಐಟಿ ಸ್ಥಾಪಿಸಲು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ ಧಾರವಾಡದಲ್ಲಿ ಸ್ಥಾಪಿಸಲು ಅವಿರತವಾಗಿ ಪ್ರಯತ್ನಿಸುತ್ತಿದ್ದಾಗ ಅಂದಿನ ಬಿಜೆಪಿ ಮುಖ್ಯಮಂತ್ರಿಗಳು ಹುಬ್ಬಳ್ಳಿಯವರೇ ಆಗಿದ್ದರು. ರಾಯಚೂರಿನಲ್ಲಿ ಸ್ಥಾಪಿಸಲು ಸಚಿವ ಸಂಪುಟದಲ್ಲಿ ನಿರ್ಣಯಿಸಿದ್ದರು. ನಂತರ ವಾಣಿಜ್ಯೋದ್ಯಮ ಸಂಸ್ಥೆಯ ನಿಯೋಗ ನಂತರ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡಿದಾಗ ಹುಬ್ಬಳ್ಳಿ-ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಸೂಕ್ತವೆಂದು ಶಿಫಾರಸು ಮಾಡಿದ್ದರು. ಪೂರಕವಾಗಿ ಅಂದು ಸಚಿವರಾಗಿದ್ದ ಎಚ್.ಕೆ. ಪಾಟೀಲರ ಕ್ರಿಯಾಶೀಲತೆಯಿಂದ ಧಾರವಾಡದಲ್ಲಿ ಕೂಡಲೇ ಕಾರ್ಯಾರಂಭ ಮಾಡಲು ವಾಲ್ಮೀ ಕಟ್ಟಡ ಒದಗಿಸುವುದರ ಜೊತೆಗೆ ಭೂಮಿಯನ್ನು ಕೂಡ ಸರ್ಕಾರ ಮಂಜೂರು ಮಾಡಿತ್ತು.
ಕಟ್ಟಡ ಉದ್ಘಾಟನಾ ಸಮಯದಲ್ಲಿ ಬಿಜೆಪಿ ಧುರಿಣರು ತಮ್ಮಿಂದಲೇ ಐಐಟಿ ಸ್ಥಾಪನೆ ಆಯಿತೆಂದು ಪ್ರಚಾರ ಗಿಟ್ಟಿಸಿಕೊಂಡರು, ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಬಿಜೆಪಿ ಸರ್ಕಾರ ತನ್ನದೆಂದು ಹೇಳಿಕೊಳ್ಳುತ್ತಿದೆ ಎಂದು ವಸಂತ ಲದವಾ ಆಕ್ಷೇಪಿಸಿದ್ದಾರೆ.
ಎ.ಐ.ಐ.ಎಂ.ಎಸ್. ಹುಬ್ಬಳ್ಳಿಯಲ್ಲಿ ಸ್ಥಾಪಿಸಲು ಗಾಮನಗಟ್ಟಿಯಲ್ಲಿ ಭೂಮಿ ಮಂಜೂರಾಗಿದೆ. ಅದನ್ನು ಸಹ ಬಿಜೆಪಿ ಧುರೀಣರು ರಾಯಚೂರಿಗೆ ಸ್ಥಳಾಂತರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಒಂದು ವೇಳೆ ಎ.ಐ.ಐ.ಎಂ.ಎಸ್. ರಾಯಚೂರಿಗೆ ಸ್ಥಳಾಂತರಿಸಿದರೆ ಹುಬ್ಬಳ್ಳಿ-ಧಾರವಾಡ ಪ್ರಜ್ಞಾವಂತರು, ಶಾಂತಿಯುತ ಸತ್ಯಾಗ್ರಹಕ್ಕೆ ಮುಂದಾಗಬೇಕಾಗಬಹುದೆಂದು ವಸಂತ ಲದವಾ ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement