ಬಿಹಾರ ವಿಧಾನಸಭಾ ಚುನಾವಣೆ: ಓವೈಸಿ ನೇತೃತ್ವದ ಎಐಎಂಐಎಂನಿಂದ ಹೊಸ ‘ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್’ ಕಣಕ್ಕೆ; ಯಾರಿಗೆ ಹಾನಿ..?

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ, ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ರಾಜ್ಯದಲ್ಲಿ ಮೂರನೇ ರಾಜಕೀಯ ರಂಗವನ್ನು ಪ್ರಾರಂಭಿಸಿದೆ.
‘ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್’ (GDA) ಎಂದು ಹೆಸರಿಸಲಾಗಿರುವ ಈ ಮೈತ್ರಿಕೂಟದಲ್ಲಿ ಸ್ವಾಮಿ ಪ್ರಸಾದ ಮೌರ್ಯ ಅವರ ‘ಅಪ್ನಿ ಜನತಾ ಪಾರ್ಟಿ’ ಕೂಡಾ ಸೇರಿಕೊಂಡಿದೆ. ಈ ಹೊಸ ಬೆಳವಣಿಗೆಯು ರಾಜ್ಯದ ರಾಜಕೀಯ ಸಮೀಕರಣದಲ್ಲಿ ಬದಲಾವಣೆಯ ಸಂಕೇತ ಎಂದು ಹೇಳಲಾಗುತ್ತಿದೆ.
ಮಾಜಿ ಸಚಿವ ಹಾಗೂ ಈ ಹಿಂದೆ ಜೆಡಿ(ಯು)ನಲ್ಲಿದ್ದ ಮಾಜಿ ಸಂಸದ ಮೊನಾಜಿರ್ ಹಸನ್ ಸೇರಿದಂತೆ ಹಲವು ನಾಯಕರು ಜನ ಸುರಾಜ್‌ ಪಕ್ಷ ತ್ಯಜಿಸಿ ಎಐಎಂಐಎಂಗೆ ಸೇರ್ಪಡೆಗೊಂಡಿದ್ದಾರೆ. “ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್ (ಜಿಡಿಎ) ಹಲವು ಪಕ್ಷಗಳನ್ನು ಒಗ್ಗೂಡಿಸಲಿದೆ. ಅನೇಕ ಗುಂಪುಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಮೈತ್ರಿಕೂಟದ ವ್ಯಾಪ್ತಿ ವಿಸ್ತಾರಗೊಳ್ಳಲಿದೆ” ಎಂದು ಬಿಹಾರ ಎಐಎಂಐಎಂ ಬಿಹಾರ ರಾಜ್ಯಾಧ್ಯಕ್ಷ ಅಖ್ತರುಲ್ ಇಮಾನ್ ತಿಳಿಸಿದ್ದಾರೆ.

ಸುಮಾರು 100 ಸ್ಥಾನಗಳಲ್ಲಿ ಸ್ಪರ್ಧೆ 
ಎಐಎಂಐಎಂ ಬಿಹಾರದ ಸುಮಾರು 100 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಆರ್‌ಜೆಡಿ ಬಗ್ಗೆ ಬಿಹಾರದ ಮುಸ್ಲಿಂ ಸಮುದಾಯದಲ್ಲಿನ ಅಸಮಾಧಾನವನ್ನು ಎತ್ತಿ ತೋರಿಸಿರುವ ಇಮಾನ್, “ಆರ್‌ಜೆಡಿ ಪಕ್ಷವು ಬಿಹಾರದಲ್ಲಿ ಬಿಜೆಪಿಯ ‘ಬಿ-ಟೀಮ್’ನಂತೆ ಕಾರ್ಯನಿರ್ವಹಿಸುತ್ತಿದೆ. ಬಿಹಾರದ ಶೇ. 18ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಪ್ರತಿನಿಧಿಸಲು ನಾವು ಆರ್‌ಜೆಡಿ ಬಳಿ ಮೈತ್ರಿಗಾಗಿ ಮನವಿ ಮಾಡಿ, ಕೇವಲ ಆರು ಸ್ಥಾನಗಳನ್ನು ಕೇಳಿದ್ದೆವು, ಆದರೆ ಅವರು ನಿರಾಕರಿಸಿದರು. ಈ ಬಗ್ಗೆ ಸಮುದಾಯದಲ್ಲಿ ತೀವ್ರ ಕೋಪವಿದ್ದು, ಮಹಾಮೈತ್ರಿಕೂಟವು ಚುನಾವಣೆಯಲ್ಲಿ ಇದರ ಪರಿಣಾಮ ಎದುರಿಸಬೇಕಾಗಬಹುದು” ಎಂದು ಹೇಳಿದರು.
ಪಕ್ಷವು ಈಗಾಗಲೇ 32 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ತನ್ನ ಚುನಾವಣಾ ಪ್ರಚಾರವನ್ನು ಆರಂಭಿಸಿದೆ. ಈ ನಡೆಯ ಮೂಲಕ, ಎಐಎಂಐಎಂ ಪಕ್ಷವು ಪ್ರಮುಖ ಪಾತ್ರಧಾರಿಯಾಗಿ ಹೊರಹೊಮ್ಮಲು ಯತ್ನಿಸುತ್ತಿದ್ದು, ನಿರ್ದಿಷ್ಟವಾಗಿ ಗಮನಾರ್ಹ ಮುಸ್ಲಿಂ ಜನಸಂಖ್ಯೆ ಇರುವ ಕ್ಷೇತ್ರಗಳಲ್ಲಿ ಪ್ರಭಾವ ಬೀರಬಹುದು.

ಪ್ರಮುಖ ಸುದ್ದಿ :-   ದೀದಿಗೆ ಶಾಕ್‌ ಮೇಲೆ ಶಾಕ್‌ ; ಹೊರಬಿತ್ತು ಎನ್‌ಡಿಎಗೆ ಬೆಂಬಲ ಸೂಚಿಸಿದ 19 ಟಿಎಂಸಿ ಸಂಸದರ ಪಟ್ಟಿ ; ಯಾರೆಲ್ಲ ಇದ್ದಾರೆ ಗೊತ್ತೆ ?

ಬಿಹಾರ ವಿಧಾನಸಭಾ ಚುನಾವಣೆಯು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. 2020ರ ಚುನಾವಣೆಯಲ್ಲಿ, ಎಐಎಂಐಎಂ ಪಕ್ಷವು ಬಿಎಸ್‌ಪಿ ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್‌ಎಲ್‌ಎಸ್‌ಪಿ) ಮೈತ್ರಿಕೂಟದೊಂದಿಗೆ ಸ್ಪರ್ಧಿಸಿ ಐದು ಸ್ಥಾನಗಳನ್ನು ಗೆದ್ದಿತ್ತು. ಹಲವು ಕ್ಷೇತ್ರಗಳಲ್ಲಿ ಆರ್‌ಜೆಡಿ-ಕಾಂಗ್ರೆಸ್-ಎಡಪಕ್ಷಗಳ ಒಕ್ಕೂಟದ ಮತಗಳನ್ನು ಒಡೆಯುವಲ್ಲಿ ಈ ಪಕ್ಷ ಯಶಸ್ವಿಯಾಗಿತ್ತು.
ಆದಾಗ್ಯೂ, 2022ರಲ್ಲಿ, ಎಐಎಂಐಎಂನ ಐದು ಶಾಸಕರ ಪೈಕಿ ನಾಲ್ವರು ಆರ್‌ಜೆಡಿಗೆ ಪಕ್ಷಾಂತರ ಮಾಡಿದ್ದರು. ಇದರಿಂದ ಇಮಾನ್ ಅವರು ಪಕ್ಷದ ಏಕೈಕ ಪ್ರತಿನಿಧಿಯಾಗಿ ಉಳಿದಿದ್ದರು. ಇದೀಗ ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್ ರಚನೆಯೊಂದಿಗೆ, ಎಐಎಂಐಎಂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಪ್ರಭಾವವನ್ನು ವಿಸ್ತರಿಸುವ ಮತ್ತು ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮುವ ಗುರಿಯನ್ನು ಹೊಂದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement