ಕುಮಟಾ : ಅಮೆರಿಕದ ಫ್ಲೋರಿಡಾದ ವೇದಿಕ್ ವೆಲ್ನೆಸ್ ವಿಶ್ವವಿದ್ಯಾಲಯ (ವಿಡಬ್ಲ್ಯೂಯು) ಆಯೋಜಿಸಿದ್ದ ಭಾರತೀಯ ಕಲೆ, ಸಂಗೀತದ ಟ್ಯಾಲೆಂಟ್ ಶೋ ಸ್ಪರ್ಧೆ ವೈಬ್ರನ್ಸ್ 2025 ಸ್ಪರ್ಧೆಯಲ್ಲಿ ಕುಮಟಾದ ಅದಿತಿ ಶಾನಭಾಗ ಕರ್ನಾಟಕಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಫ್ಲೋರಿಡಾದ ವೇದಿಕ್ ವೆಲ್ನೆಸ್ ವಿಶ್ವವಿದ್ಯಾಲಯ ಆಯೋಜಿಸುವ ವೈಬ್ರನ್ಸ್ ಹೆಸರಿನ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಟ್ಯಾಲೆಂಟ್ ಸ್ಪರ್ಧೆ ಆಯೋಜಿಸುತ್ತದೆ ಹಿಂದುಸ್ತಾನಿ ಹಾಗೂ ಕರ್ನಾಟಕೀ ಸಂಗೀತದ ಗಾಯನ ಹಾಗೂ ವಾದ್ಯ ಸಂಗೀತ ವಿಭಾಗದಲ್ಲಿ ಬೇರೆ ಬೇರೆ ವಯಸ್ಸಿನ ವಿಭಾಗದವರಿಗೆ ಪ್ರತಿಭಾ ಪ್ರದರ್ಶನ ಸ್ಪರ್ಧೆ ನಡೆಸುತ್ತ ಬಂದಿದೆ. ಪ್ರತಿವರ್ಷವೂ ದೇಶ ಹಾಗೂ ವಿಶ್ವದ ಬೇರೆ ಬೇರೆ ಕಡೆ ಆಡಿಶನ್ ಮಾಡಿ ಅಂತಿಮ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂತಿಮ ಸ್ಪರ್ಧೆಗೆ ಆಯ್ಕೆಯಾದವರಿಗೆ ಮತ್ತೆ ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತಿದ್ದು, ಈ ವರ್ಷ ಇದನ್ನು ಮೈಸೂರಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿತ್ತು. ಹಿಂದೂಸ್ತಾನೀ ಗಾಯನದ ಜ್ಯೂನಿಯರ್ ವಿಭಾಗದಲ್ಲಿ ಕುಮಟಾದ ವಿದ್ಯಾರ್ಥಿನಿ ಅದಿತಿ ಶಾನಭಾಗ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕುಮಟಾದ ವೈದ್ಯರಾದ ಡಾ.ಅಶ್ವಿನಿ ಶಾನಭಾಗ ಹಾಗೂ ಡಾ.ವೆಂಕಟೇಶ ಶಾನಭಾಗ ದಂಪತಿ ಪುತ್ರಿಯಾದ ಅದಿತಿ ಶಾನಭಾಗ ಕೂಜಳ್ಳಿಯ ಪಂಡಿತ ಗೌರೀಶ ಯಾಜಿ ಅವರಲ್ಲಿ ಕಳೆದು ಐದಾರು ವರ್ಷಗಳಿಂದ ಸಂಗೀತ ಕಲಿಯುತ್ತಿದ್ದಾಳೆ. ಇವಳ ಸಾಧನೆಗೆ ಪಂಡಿತ ಷಡಕ್ಷರಿ ಗವಾಯಿ ಅಕಾಡೆಮಿ ಕೂಜಳ್ಳಿ ಹಾಗೂ ಕುಮಟಾದ ಗಂಧರ್ವ ಕಲಾ ಕೇಂದ್ರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ