ಭಾರತ ಸೇರಿ ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ 500%ರವರೆಗೆ ಸುಂಕ ವಿಧಿಸುವ ಮಸೂದೆಗೆ ಟ್ರಂಪ್ ಬೆಂಬಲ ; ವರದಿ

ವಾಷಿಂಗ್ಟನ್ : ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸುವ ದೇಶಗಳ ವಿರುದ್ಧ ಶೇ.500ರವರೆಗೆ ಆಮದು ಸುಂಕ ವಿಧಿಸಲು ಅವಕಾಶ ಕಲ್ಪಿಸುವ ಪ್ರಸ್ತಾವಿತ ‘ಸ್ಯಾಂಕ್ಷನಿಂಗ್ ರಷ್ಯಾ ಆಕ್ಟ್’ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ದಿವಂಗತ ರಿಪಬ್ಲಿಕನ್ ಸೆನೆಟರ್ ಲಿಂಡ್ಸಿ ಗ್ರಹಾಂ ಹಾಗೂ ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಜಂಟಿಯಾಗಿ ಮಂಡಿಸಿದ್ದ ಈ ಮಸೂದೆ ಅಂಗೀಕಾರವಾದರೆ, ರಷ್ಯಾದ ಇಂಧನ ಕಂಪನಿಗಳ ಜೊತೆಗೆ ವ್ಯಾಪಾರ ನಡೆಸುತ್ತಿರುವ ರಾಷ್ಟ್ರಗಳಿಂದ ಅಮೆರಿಕಕ್ಕೆ ಆಮದು ಆಗುವ ವಸ್ತುಗಳ ಮೇಲೆ ಶೇ.500ರವರೆಗೆ ಸುಂಕ ವಿಧಿಸುವ ಅಧಿಕಾರ ಅಮೆರಿಕ ಅಧ್ಯಕ್ಷರಿಗೆ ಲಭ್ಯವಾಗಲಿದೆ.
ಮಸೂದೆಗೆ ಬೆಂಬಲ ಕೋರಿದ ತಮ್ಮ ಅಭಿಯಾನದ ವೇಳೆ ಲಿಂಡ್ಸಿ ಗ್ರಹಾಂ, ರಷ್ಯಾದ ಮೇಲೆ ಮಾತ್ರವಲ್ಲದೆ ಅದರ ಇಂಧನ ಆದಾಯಕ್ಕೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳ ಮೇಲೂ ಒತ್ತಡ ಹೇರಬೇಕೆಂದು ವಾದಿಸಿದ್ದರು. ಭಾರತ ಮತ್ತು ಚೀನಾ ಸೇರಿ ರಷ್ಯಾದ ತೈಲ, ಅನಿಲ ಹಾಗೂ ಪೆಟ್ರೋಲಿಯಂ ರಫ್ತಿನ ಸುಮಾರು ಶೇ.70ರಷ್ಟು ಖರೀದಿಸುತ್ತಿವೆ ಎಂದು ಅವರು ಹೇಳಿದ್ದರು. ಈ ಬೇಡಿಕೆಯನ್ನು ಕಡಿಮೆ ಮಾಡಿದರೆ ರಷ್ಯಾ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿ ಉಕ್ರೇನ್ ಯುದ್ಧ ಶೀಘ್ರ ಅಂತ್ಯಗೊಳ್ಳಲು ನೆರವಾಗಬಹುದು ಎಂಬುದು ಅವರ ಅಭಿಪ್ರಾಯವಾಗಿತ್ತು.

ಪ್ರಮುಖ ಸುದ್ದಿ :-   ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಜಾರಿ : ಯಾವ ವಸ್ತುಗಳು ಅಗ್ಗವಾಗಲಿವೆ ? ಯಾವ್ಯಾವುದು ದುಬಾರಿಯೇ ಇರಲಿವೆ ?

ಈ ಮಸೂದೆ ಅಂಗೀಕಾರವಾದರೆ, ರಷ್ಯಾದ ಇಂಧನ ಉದ್ಯಮದ ಜೊತೆ ವ್ಯವಹಾರ ನಡೆಸುವ ರಾಷ್ಟ್ರಗಳ ವಿರುದ್ಧ ದ್ವಿತೀಯ ಹಂತದ (ಸೆಕೆಂಡರಿ) ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷರಿಗೆ ಕಾಂಗ್ರೆಸ್ ಇದುವರೆಗೆ ನೀಡದಷ್ಟು ವ್ಯಾಪಕ ಅಧಿಕಾರ ದೊರೆಯಲಿದೆ.
ಇದೇ ವೇಳೆ, 2026ರ ಜೂನ್ 17ರಂದು ಅಮೆರಿಕದ ಖಜಾನೆ ಇಲಾಖೆಯ ತಾತ್ಕಾಲಿಕ ವಿನಾಯಿತಿ ಅವಧಿ ಮುಕ್ತಾಯಗೊಂಡಿರುವುದು ಭಾರತದ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಈ ವಿನಾಯಿತಿಯಡಿ ಭಾರತವು ರಷ್ಯಾದ ಕಚ್ಚಾ ತೈಲವನ್ನು ನಿರ್ಬಂಧಗಳ ಭಯವಿಲ್ಲದೆ ಖರೀದಿಸುತ್ತಿತ್ತು. ಆದರೆ ವಿನಾಯಿತಿ ಅಂತ್ಯಗೊಂಡ ಬಳಿಕ ಭಾರತದ ಖರೀದಿ ಕಾನೂನುಬದ್ಧ ಅನಿಶ್ಚಿತತೆಯ ಸ್ಥಿತಿಗೆ ತಲುಪಿದೆ.
ಶೇ.500ರ ಪೂರ್ಣ ಪ್ರಮಾಣದ ಸುಂಕ ಜಾರಿಯಾದರೆ ಭಾರತದ ಆರ್ಥಿಕತೆಗೆ ಗಂಭೀರ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ದೇಶದ ಜಿಡಿಪಿ ಶೇ.0.5ರವರೆಗೆ ಕುಸಿಯುವ ಸಾಧ್ಯತೆ ಇದ್ದು, ಔಷಧೋದ್ಯಮ, ಜವಳಿ ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ಸೇರಿದಂತೆ ರಫ್ತು ಆಧಾರಿತ ವಲಯಗಳು ಮೊದಲ ಹಂತದಲ್ಲೇ ಪರಿಣಾಮ ಎದುರಿಸಬೇಕಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುತ್ತಿರುವುದು ದೇಶದ ಆರ್ಥಿಕ ಅಗತ್ಯಗಳ ದೃಷ್ಟಿಯಿಂದ ಮಾತ್ರವೇ ಹೊರತು ಯಾವುದೇ ಭೌಗೋಳಿಕ-ರಾಜಕೀಯ ಕಾರಣಗಳಿಂದಲ್ಲ ಎಂಬ ತನ್ನ ನಿಲುವನ್ನು ಭಾರತ ಪುನರುಚ್ಚರಿಸಿದೆ.
ಲಿಂಡ್ಸಿ ಗ್ರಹಾಂ ಅವರ ನಿಧನದ ಬಳಿಕ ಈ ಮಸೂದೆಗೆ ಹೊಸ ವೇಗ ದೊರೆತಿದ್ದು, ಅವರ ಒಂದು ವರ್ಷಕ್ಕೂ ಅಧಿಕ ಅವಧಿಯ ಪ್ರಯತ್ನಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಹಲವು ಸೆನೆಟರ್‌ಗಳು ಮಸೂದೆಯನ್ನು ಶೀಘ್ರ ಅಂಗೀಕರಿಸುವ ಪರವಾಗಿ ನಿಂತಿದ್ದಾರೆ. ಆದರೆ ಡೆಮಾಕ್ರಟಿಕ್ ಪಕ್ಷದ ಕೆಲ ನಾಯಕರು, ವಿಶೇಷವಾಗಿ ಸೆನೆಟ್ ಅಲ್ಪಸಂಖ್ಯಾತರ ವಿಪ್ ಡಿಕ್ ಡರ್ಬಿನ್, ಶ್ವೇತಭವನದ ಅಧಿಕಾರಿಯ ಹೇಳಿಕೆಗೆ ಬದಲಾಗಿ ಅಧ್ಯಕ್ಷ ಟ್ರಂಪ್ ಸ್ವತಃ ಸಾರ್ವಜನಿಕವಾಗಿ ಈ ಮಸೂದೆಗೆ ಬೆಂಬಲ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ, ರಿಪಬ್ಲಿಕನ್ ಪಕ್ಷದ ಸೆನೆಟರ್ ರ್ಯಾಂಡ್ ಪಾಲ್, ಭಾರತ ಮತ್ತು ಚೀನಾದಂತಹ ರಾಷ್ಟ್ರಗಳ ಮೇಲೆ ಕಠಿಣ ನಿರ್ಬಂಧ ಹೇರಿದರೆ ಜಾಗತಿಕ ವ್ಯಾಪಾರಕ್ಕೆ ಧಕ್ಕೆಯಾಗುವುದಲ್ಲದೆ ವಿಶ್ವ ಆರ್ಥಿಕತೆಯಲ್ಲೂ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ನಿತಿನ್ ಗಡ್ಕರಿ ವಿರುದ್ಧ ಅಪಪ್ರಚಾರ ಆರೋಪ; ನಾಲ್ವರು ಇನ್‌ಫ್ಲುವೆನ್ಸರ್‌ಗಳ ವಿರುದ್ಧ ಎಫ್‌ಐಆರ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement