ಕೋಲ್ಕತ್ತಾ : 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಕೇಂದ್ರ ಚುನಾವಣಾ ಆಯೋಗವು ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯದ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ‘ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರಡು ಮತದಾರರ ಪಟ್ಟಿಯಿಂದ ಸುಮಾರು 58 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ. ಈ ಕ್ರಮವು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವ ಸಾಧ್ಯತೆಯಿದೆ.
ಯಾವ ಕಾರಣಕ್ಕಾಗಿ ಹೆಸರುಗಳ ಕಡಿತ?
ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಮತ್ತು ನಕಲಿ ಹೆಸರುಗಳನ್ನು ತೆಗೆದುಹಾಕಲು ಆಯೋಗವು ಈ ಕ್ರಮ ಕೈಗೊಂಡಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಕೈಬಿಡಲಾದವರಲ್ಲಿ ಮೃತಪಟ್ಟವರು ಸುಮಾರು 24 ಲಕ್ಷ ಮತದಾರರು, ಬೇರೆ ಪ್ರದೇಶಗಳಿಗೆ ವಲಸೆ ಹೋದವರು 19 ಲಕ್ಷ ಜನ, ಪತ್ತೆಯಾಗದವರು ಸುಮಾರು 12 ಲಕ್ಷ ಮತದಾರರಿದ್ದಾರೆ. ಅಲ್ಲದೆ, ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಯಾದ 1.3 ಲಕ್ಷ ಹೆಸರುಗಳಿವೆ. ಒಟ್ಟು 58,20,898 ಮತದಾರರನ್ನು ಪಟ್ಟಯಿಂದ ಕೈಬಿಡಲಾಗಿದೆ.
ಒಂದು ವೇಳೆ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟು ಹೋಗಿದ್ದರೆ ಅಥವಾ ತಪ್ಪುಗಳಿದ್ದರೆ, ನಿಗದಿತ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸಲು ಮತ್ತು ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಚುನಾವಣಾ ಆಯೋಗವು ಅವಕಾಶ ನೀಡಿದೆ. ಭವಿಷ್ಯದ ಚುನಾವಣೆಗಳಲ್ಲಿ ಮತದಾನದ ಹಕ್ಕು ಚಲಾಯಿಸಲು ಸಾರ್ವಜನಿಕರು ತಮ್ಮ ಹೆಸರನ್ನು ಕರಡು ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ.
ರಾಜಕೀಯ ಸಂಘರ್ಷದ ಸಾಧ್ಯತೆ
ಚುನಾವಣಾ ಪಟ್ಟಿಯ ಪಾರದರ್ಶಕತೆಯನ್ನು ಹೆಚ್ಚಿಸಲು ಈ ಕ್ರಮ ಅಗತ್ಯ ಎಂದು ಆಯೋಗ ಹೇಳಿದ್ದರೂ, ಇಷ್ಟು ದೊಡ್ಡ ಮಟ್ಟದ ಹೆಸರುಗಳ ಕಡಿತವು ರಾಜಕೀಯ ಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗುವ ನಿರೀಕ್ಷೆಯಿದೆ. ವಿಶೇಷವಾಗಿ ವಿಪಕ್ಷಗಳು ಈ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.


ನಿಮ್ಮ ಕಾಮೆಂಟ್ ಬರೆಯಿರಿ