ಮುಂಬೈ: ಮಹಾರಾಷ್ಟ್ರದಾದ್ಯಂತ ನಡೆದ ನಗರಸಭೆ ಮತ್ತು ನಗರ ಪಂಚಾಯತ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿಯ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟವು ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ತನ್ನ ಪಾರುಪತ್ಯ ಮೆರೆದಿದೆ. ಒಟ್ಟು 288 ಸ್ಥಳೀಯ ಸಂಸ್ಥೆಗಳ ಪೈಕಿ ಸಿಂಹಪಾಲು ಸ್ಥಾನಗಳನ್ನು ಗೆಲ್ಲುವ ಮೂಲಕ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯುತಿ ಮೈತ್ರಿಕೂಟವು ರಾಜ್ಯದ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ತನ್ನ ಹಿಡಿತವನ್ನು ಸಾಬೀತುಪಡಿಸಿದೆ.
ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗವು ಡಿಸೆಂಬರ್ 2 ಮತ್ತು ಡಿಸೆಂಬರ್ 20 ರಂದು ಎರಡು ಹಂತದ ಚುನಾವಣೆಯಲ್ಲಿ ಎಲ್ಲಾ ಆರು ವಿಭಾಗಗಳಲ್ಲಿ 246 ನಗರಸಭೆಗಳು ಮತ್ತು 42 ನಗರ ಪಂಚಾಯತಗಳನ್ನು ಒಳಗೊಂಡ 288 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸಿತು.
ಪ್ರಕಟವಾದ ಫಲಿತಾಂಶಗಳ ಪ್ರಕಾರ, 288 ಸ್ಥಳೀಯ ಸಂಸ್ಥೆಗಳ ಪೈಕಿ ಮಹಾಯುತಿ ಮೈತ್ರಿಕೂಟವು ಬರೊಬ್ಬರಿ 218 ಸ್ಥಳೀಯ ಸಂಸ್ಥೆಗಳಲ್ಲಿ ಜಯಭೇರಿ ಬಾರಿಸಿದೆ.
127 ಸ್ಥಳೀಯ ಸಂಸ್ಥೆಗಳಲ್ಲಿ ಮುಂದಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿವಸೇನೆ (ಏಕನಾಥ್ ಶಿಂದೆ ಬಣ)ವು 54ರಲ್ಲಿ ಮುಂದಿದೆ ಹಾಗೂ ಎನ್‍ಸಿಪಿ (ಅಜಿತ್ ಪವಾರ್ ಬಣ) 37ರಲ್ಲಿ ಮುಂದಿದೆ.
ಮಹಾಸ ವಿಕಾಸ ಅಘಾಡಿ(MVA)ಗೆ ಹಿನ್ನಡೆ
ವಿಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿ ಈ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿದೆ.
ಕಾಂಗ್ರೆಸ್ ಕೇವಲ 29 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುನ್ನಡೆ ಸಾಧಿಸಿದೆ. ಶಿವಸೇನೆ (ಯುಬಿಟಿ – ಉದ್ಧವ್ ಠಾಕ್ರೆ ಕೇವಲ 6 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಎನ್‍ಸಿಪಿ (ಶರದ್ ಪವಾರ್ ಬಣ) 8 ಸಂಸ್ಥೆಗಳಲ್ಲಿ ಮುನ್ನಡೆ ಸಾಧಿಸಿದೆ.
ಟ್ರೆಂಡ್‌ಗಳ ಪ್ರಕಾರ, ಚುನಾವಣೆ ನಡೆದ 6,859 ಸ್ಥಾನಗಳು ಅಥವಾ ವಾರ್ಡ್‌ಗಳಲ್ಲಿ ಬಿಜೆಪಿ 3,120ರಲ್ಲಿ ಮುನ್ನಡೆ ಸಾಧಿಸಿದೆ. ಶಿವಸೇನೆ (ಏಕನಾಥ ಶಿಂಧೆ) ಮತ್ತು ಎನ್‌ಸಿಪಿ (ಅಜಿತ ಪವಾರ್) ಕ್ರಮವಾಗಿ 600 ಮತ್ತು 200 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಶಿವಸೇನೆ (ಯುಬಿಟಿ), ಕಾಂಗ್ರೆಸ್ ಮತ್ತು ಎನ್‌ಸಿಪಿ (ಎಸ್‌ಪಿ) ಕ್ರಮವಾಗಿ 145, 105 ಮತ್ತು 122 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಮೇಲುಗೈ ಸಾಧಿಸಿದ ಆಡಳಿತ ಪಕ್ಷ
ಸುಮಾರು ಒಂದು ದಶಕದ ನಂತರ ನಡೆದ ಈ ಚುನಾವಣೆಗಳು ರಾಜ್ಯದ ರಾಜಕೀಯ ಬಲಾಬಲದ ಪರೀಕ್ಷೆಯಾಗಿದ್ದವು. ಕೃಷಿ ಸಂಕಷ್ಟ, ರೈತರ ಸಾಲ ಮತ್ತು ಆರ್ಥಿಕ ನೆರವಿನ ವಿಳಂಬದಂತಹ ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸರ್ಕಾರಕ್ಕೆ ಸವಾಲು ಹಾಕಬಹುದು ಎಂದು ನಿರೀಕ್ಷಿಸಲಾಗಿತ್ತು.
ಕೆಲವು ಅಚ್ಚರಿಯ ಫಲಿತಾಂಶಗಳು
ಮಹಾಯುತಿ ಅಲೆ ಇದ್ದರೂ ಕೆಲವು ಕಡೆ ವಿಪಕ್ಷಗಳು ಅಚ್ಚರಿಯ ಫಲಿತಾಂಶ ನೀಡಿವೆ. ಉದಾಹರಣೆಗೆ, ಉರಾನ್ ನಗರಸಭೆಯಲ್ಲಿ ಎಂವಿಎ ಬೆಂಬಲಿತ ಅಭ್ಯರ್ಥಿ ಭಾವನಾ ಘನೇಕರ್ ಅವರು ಅಧ್ಯಕ್ಷ ಸ್ಥಾನವನ್ನು ಗೆಲ್ಲುವ ಮೂಲಕ ಬಿಜೆಪಿಗೆ ಆಘಾತ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ